ದ್ವೇಷ ಭಾಷಣ ನಿಯಂತ್ರಣ ಮಸೂದೆ ಶೀಘ್ರವೇ ಅನುಷ್ಠಾನವಾಗಲಿ: ವೆಲ್ಫೇರ್ ಪಾರ್ಟಿ ಆಗ್ರಹ

0
449

ಸನ್ಮಾರ್ಗ ವಾರ್ತೆ

ಬೆಂಗಳೂರು: ದ್ವೇಷ ಭಾಷಣ ನಿಯಂತ್ರಣ ಮಸೂದೆ ಆಗಸ್ಟ್ 11ರಂದು ನಡೆಯಲಿರುವ ಮುಂಗಾರು ಅಧಿವೇಶನದಲ್ಲಿ ಅಂಗಿಕಾರವಾಗಿ ಶೀಘ್ರವೇ ಅನುಷ್ಠಾನಗೊಳ್ಳಲಿ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಜ್ಯಾಧ್ಯಕ್ಷ ವಕೀಲ್ ತಾಹಿರ್ ಹುಸೇನ್ ಆಗ್ರಹಿಸಿದರು.

ಮಸೂದೆಯಲ್ಲಿರುವ ಅಂಶಗಳು ದ್ವೇಷ ಹರಡುವಿಕೆಯನ್ನು ನಿಯಂತ್ರಿಸಲು ಸಹಾಯವಾಗಬಹುದು ಆದರೆ ಇದನ್ನು ಕೇವಲ ರಾಜಕೀಯ ಅಸ್ತ್ರವಾಗಬಾರದು ಮತ್ತು ರಾಜಕೀಯ ದುರುದ್ದೇಶಕ್ಕೆ ಬಳಕೆಯಾಗದೆ ಸಮಾಜದಲ್ಲಿ ಹರಡಿರುವ ದ್ವೇಷವನ್ನು ನಿಯಂತ್ರಿಸಲು ಬಳಕೆಯಾಗಬೇಕೆಂದು ಅವರು ಹೇಳಿದರು.

ಮಂಗಳೂರಿನಲ್ಲಿ ಇತ್ತೀಚೆಗೆ ನಡೆದ ಸರಣಿ ಕೊಲೆಗಳ ಬಳಿಕ ದ್ವೇಷ ಭಾಷಣ, ರಾಜ್ಯದ ಕೆಲವೊಂದು ಡಿಜಿಟಲ್ ಮಾಧ್ಯಮಗಳು ಸುಳ್ಳು ಸುದ್ದಿ ಹಬ್ಬಿಸುವಲ್ಲಿ ನಿರಂತರವಾಗಿ ತೊಡಗಿದ್ದು ಒಂದು ನಿರ್ದಿಷ್ಟ ಸಮುದಾಯದ ವಿರುದ್ದ ದ್ವೇಷ ಸಾರಿದ್ದಾರೆ ಎಂದು ದೂರಿದರು.

ಇತ್ತೀಚಿಗೆ ರಾಜ್ಯದ ವಿರೋಧ ಪಕ್ಷ ನಾಯಕ ಆರ್ ಅಶೋಕ್ ಧರ್ಮಸ್ಥಳ ಪ್ರಕರಣ ಸಂಬಂಧ ಒಂದು ಸಮುದಾಯವನ್ನು ಗುರಿಯಾಗಿಸಿ ಮಾಡಿರುವ ದ್ವೇಷದ ಮಾತುಗಳಿಂದ ಸಮಾಜದಲ್ಲಿ ಸಾಕಷ್ಟು ಗೊಂದಲವುಂಟಾಗಿದೆ. ಎಸ್ಐಟಿ ತನಿಖೆ ನಡೆಸುವಾಗ ಒಂದು ಜವಾಬ್ದಾರಿಯುತ ಹುದ್ದೆಯಲ್ಲಿರುವವರು ಇಂತಹ ಕೀಳುಮಟ್ಟದ ಹೇಳಿಕೆ ಅವರ ಹುದ್ದೆಗೆ ಶೋಭೆ ತರುವಂತದಲ್ಲ. ಉನ್ನತ ಸ್ಥಾನದಲ್ಲಿರುವವರೇ ಹೀಗೆ ದ್ವೇಷ ಹರಡಿಸುವ ಕೆಲಸ ಮಾಡಿದರೆ ಇನ್ನು ಇವರನ್ನು ಹಿಂಬಾಲಿಸುವವರು ಯಾವ ಮಟ್ಟಕೆ ಹೋಗಬಹುದು..? ಹಾಗಾಗಿ ಈ ಮಸೂದೆ ಆದಷ್ಟು ಬೇಗ ಜಾರಿಯಾದರೆ ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಅನುಕೂಲವಾಗಬಹುದು.

ಅದೇರೀತಿ ಮುಂಬರುವ ಮುಂಗಾರು ಅಧಿವೇಶನದಲ್ಲಿ ಗೋ ಹತ್ಯೆ ನಿಷೇಧ ಕಾಯ್ದೆ ರದ್ದು ಮತ್ತು 2B ಮೀಸಲಾತಿ ಮರು ಜಾರಿಗೆ ತಂದು ರಾಜ್ಯದ ಕಾಂಗ್ರೆಸ್ ಸರಕಾರವು ನುಡಿದಂತೆ ನಡೆಯಬೇಕೆಂದು ಅವರು ಆಗ್ರಹಿಸಿದರು.