ಎನ್‌ಆರ್‌ಸಿ ಕುರಿತ ಅಮಿತ್ ಶಾ ಹೇಳಿಕೆ ಖಂಡನಾರ್ಹ: ವೆಲ್ಫೇರ್ ಪಾರ್ಟಿ ರಾಜ್ಯಾಧ್ಯಕ್ಷ ತಾಹೆರ್ ಹುಸೇನ್

0
603

ಸನ್ಮಾರ್ಗ ವಾರ್ತೆ

ಬೆಂಗಳೂರು,ಅ,2: ಕೊಲ್ಕತ್ತಾದಲ್ಲಿ ಗೃಹಮಂತ್ರಿ ಅಮಿತ್ ಶಾ ಎನ್‌ಆರ್‌ಸಿಯ ಪ್ರಸ್ತಾಪ ಮಾಡುವ ಮೂಲಕ ಮುಸ್ಲಿಮರನ್ನು ಬೆದರಿಸುವ ಪ್ರಯತ್ನ ನಡೆಸಿದ್ದು ಇದು ಖಂಡನಾರ್ಹ. ಇಂತಹ ಬೆದರಿಕೆಗಳಿಗೆ ಪ್ರಜೆಗಳು ಬಗ್ಗುವವರಲ್ಲ ಎಂದು ವೆಲ್ಫೇರ್ ಪಾರ್ಟಿಯ ರಾಜ್ಯಾಧ್ಯಕ್ಷರಾದ ಅಡ್ವಕೇಟ್ ತಾಹೆರ್ ಹುಸೇನ್ ನುಡಿದರು‌.

ಅವರು, ಬೆಂಗಳೂರು ದಕ್ಷಿಣದ ವತಿಯಿಂದ ಮಹಾತ್ಮ ಗಾಂಧಿ ಜಂಯತಿಯ 150 ನೇ ವರ್ಷದ ಆಚರಣೆ ಪ್ರಯುಕ್ತ “ಎನ್‌ಆರ್‌ಸಿ: ಪ್ರಜೆಗಳ ಮೇಲೆ ಪ್ರಭಾವ” ಎಂಬ ವಿಚಾರ ಸಂಕಿರಣವನ್ನುದ್ದೇಶಿಸಿ ಮಾತನಾಡುತ್ತಿದ್ದರು. ಎನ್‌ಆರ್‌ಸಿಯನ್ನು ರಾಷ್ಟ್ರೀಯ ಮಟ್ಟದಲ್ಲಿ ಅಳವಡಿಸುವ ಬಗ್ಗೆ ಜನರು ಕಳವಳ ಪಡುತ್ತಿದ್ದು, ಇದರ ಬಗ್ಗೆ ಜನರು ಹೆದರುವ ಅಗತ್ಯವಿಲ್ಲ. ಇಂತಹ ದುಸ್ಸಾಹಸಕ್ಕೆ ಕೆಂದ್ರವು ಎಂದಿಗೂ ಕೈಹಾಕಲಾರದು. ಈಗಾಗಲೇ ಅಸ್ಸಾಮಿನಲ್ಲಿ ನಡೆದ ಎನ್‌ಆರ್‌ಸಿ ಪ್ರಕ್ರಿಯೆಯು ಬಿಜೆಪಿಗೆ ತಿರುಗುಬಾಣವಾಗುತ್ತಿದ್ದು ಇದರ ಬಗ್ಗೆ ಸ್ವತಃ ಅಸ್ಸಾಮಿನ ಬಿಜೆಪಿ ನಾಯಕರೇ ಅಪಸ್ವರ ಎತ್ತಿದ್ದಾರೆ ಎಂದು ಅವರು ಹೇಳಿದರು.

ಇನ್ನೋರ್ವ ಅತಿಥಿ ವೆಲ್ಫೇರ್ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಹಬೀಬುಲ್ಲಾಹ್ ಖಾನ್ ಮಾತನಾಡುತ್ತಾ, ಸಜ್ಜನರ ಮೌನವೇ ಇಂದಿನ ಸಮಸ್ಯೆಗಳಿಗೆ ಮೂಲ ಕಾರಣ, ತಾನು, ತನ್ನ ಕುಟುಂಬ ಎಂದು ಜೀವಿಸುವವರು ‘ಜೀವಂತ ಮೃತ ದೇಹ’ (ಝಿಂದಾ ಲಾಶ್) ದಂತೆ, ದೇಶದ ಪರಿಸ್ಥಿತಿ ಇಷ್ಟೊಂದು ಕಳವಳಕಾರಿಯಾಗಿರುವಾಗಲೂ ಜನರು ಬೀದಿಗಿಳಿಯದೇ ಇರುವುದು ದುರದೃಷ್ಟಕರ ಎಂದು ವಿಷಾದ ವ್ಯಕ್ತಪಡಿಸಿದರು. ವೇದಿಕೆಯಲ್ಲಿ ಬೆಂಗಳೂರು ದಕ್ಷಿಣದ ನೂತನ ಅಧ್ಯಕ್ಷರಾದ ಅಬ್ದುಲ್ ಮಲಿಕ್ ಮತ್ತು ಪ್ರಧಾನ ಕಾರ್ಯದರ್ಶಿಗಳಾದ ದಾವೂದ್ ಅಂಬರ್ ಉಪಸ್ಥಿತರಿದ್ದರು.