ಕಳೆದ 75 ವರ್ಷಗಳಲ್ಲಿ ಇಸ್ರೇಲ್ ನಡೆಸುತ್ತಾ ಬಂದಿರುವುದು ಏನನ್ನು?

0
2162

✍️ ಅರಫಾ ಮಂಚಿ

ಭಯೋತ್ಪಾದನೆ ಎಲ್ಲಿ ನಡೆದರೂ ಅದರ ಕಾರಣ ಏನೇ ಇದ್ದರೂ ಅದು ಅಮಾನವೀಯವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ  ಹೇಳಿದ್ದಾರೆ. ಇಸ್ರೇಲ್-ಫೆಲಸ್ತೀನ್ ಯುದ್ಧದ ಹಿನ್ನೆಲೆಯಲ್ಲಿ  ಪ್ರಧಾನಿ ಆಡಿದ ಮಾತಿದು.

ಅಮೆರಿಕ, ಇಂಗ್ಲೆಂಡ್ ಸಹಿತ ಪಾಶ್ಚಾತ್ಯ ಶಕ್ತಿಗಳು ಹಮಾಸ್ ಅನ್ನು ಟೆರರಿಸ್ಟ್ ಎಂದು ಕರೆಯುತ್ತವೆ. ಆದರೆ ವಿಶ್ವಸಂಸ್ಥೆ, ಭಾರತ ಮತ್ತು ನೆರೆಯ ಅರಬರಾಗಲಿ ಚೀನ, ರಷ್ಯವಾಗಲಿ ಹಮಾಸನ್ನು ಇನ್ನೂ ಟೆರರಿಸ್ಟ್ ಸಂಘಟನೆ ಎಂದು ಘೋಷಿಸಿಲ್ಲ.

ಯಾವುದೇ ಒಂದು ಸಂಘಟನೆ ಇನ್ನೊಂದು ದೇಶದ ಗಡಿ ದಾಟಿ  ನಾಗರಿಕರ ಹತ್ಯೆ ಮಾಡಿದರೆ ಅದನ್ನು ಟೆರರಿಸಂ ಎಂದು  ಹೇಳಲಾಗುತ್ತದೆ. ಹೀಗಾಗಿ ಹಮಾಸ್‌ನ ಕೃತ್ಯವನ್ನು ಸಮರ್ಥಿಸುವಂತಿಲ್ಲ. ಈಗ ಹಮಾಸ್ ಇಸ್ರೇಲಿನೊಳಗೆ ನುಗ್ಗಿ ಯುದ್ಧ ಆರಂಭಿಸಿದೆ. 1300ಕ್ಕೂ ಹೆಚ್ಚು ಮಂದಿ ಕೊಲ್ಲಲ್ಪಟ್ಟಿದ್ದಾರೆ. ಹಮಾಸ್‌ನ ಆ ಕೃತ್ಯದಂತೆ ಇಸ್ರೇಲ್ ನಡೆಸಿದ ಬಾಂಬಿಂಗನ್ನು ಕೂಡ ಸಮರ್ಥಿಸುವಂತಿಲ್ಲ. ಅದು ನಾಗರಿಕರ ಮೇಲೆ, ವಿಶ್ವಸಂಸ್ಥೆಯ ಆಶ್ರಯ ಕೇಂದ್ರಗಳ ಮೇಲೆ ದಾಳಿ ನಡೆಸುತ್ತಿದೆ ಎಂದು ವಿಶ್ವಸಂಸ್ಥೆಯ ಫೆಲಸ್ತೀನ್ ನಿರಾಶ್ರಿತರ ವಿಭಾಗ ತಿಳಿಸಿದೆ. ಹಾಗಾಗಿ ಇದೂ ಟೆರರಿಸ್ಟ್ ಕೃತ್ಯವೇ ಆಗಿಬಿಡುತ್ತದೆ. ಹೀಗಾಗಿಯೇ ವಿಶ್ವಸಂಸ್ಥೆಗೆ ಈ ವರೆಗೆ ಹಮಾಸ್ ಅನ್ನು ಟೆರರಿಸ್ಟ್  ಪಟ್ಟಿಗೆ ಸೇರಿಸಲು ಸಾಧ್ಯವಾಗದೇ ಹೋಗಿದೆ.

ಗಾಝವನ್ನು ನಿರ್ಜನ ಮಾಡುತ್ತೇವೆ ಎಂದು ನೆತನ್ಯಾಹು ಹೇಳಿದ್ದಾರೆ. ಗಾಝವನ್ನು ನಿರ್ಜನ ಮಾಡುತ್ತೇವೆ ಎನ್ನುವಾಗ ಅಲ್ಲಿರುವ  ಸುಮಾರು 50 ಲಕ್ಷ ಮಂದಿಯನ್ನು ಇಸ್ರೇಲ್ ನಾಶಪಡಿಸುತ್ತದೆ ಎಂದರ್ಥ. ಈಗಾಗಲೇ ನೀರು, ವಿದ್ಯುತ್, ಇಂಧನ, ಆಹಾರ ಎಲ್ಲ ಮೂಲ ಸೌರ‍್ಯಗಳನ್ನು ಇಸ್ರೇಲ್ ಸ್ಥಗಿತಗೊಳಿಸಿದೆ. ಆದರೆ ಮಾಧ್ಯಮಗಳು ಈ ಅಂಶವನ್ನು ಪರಿಗಣಿಸುತ್ತಿಲ್ಲ. ನಮ್ಮ ಮಾಧ್ಯಮ ಮಂದಿ ವಿಕೃತ ಸಂಭ್ರಮಾಚರಣೆಯಲ್ಲಿದ್ದಾರೆ.

ಹೀಗಾಗಿ ಪ್ರಧಾನಿ ಮೋದಿಯ ಮಾತಿನ ಅರ್ಥದಲ್ಲಿ ಹೇಳುವುದಾದರೆ ಇದು ಕೂಡ ಮನುಷ್ಯತ್ವ ರಹಿತವಾದದ್ದು. ಆದರೆ ಹಮಾಸ್ ಮಾಡುವುದೂ ಈ ಹಿಂದೆ ಫೆಲಸ್ತೀನ್ ಲಿಬರೇಷನ್ ಫ್ರಂಟ್ ಮಾಡಿದ್ದೂ ಅವರ ನಾಡಿನ  ಸ್ವಾತಂತ್ರ್ಯಕ್ಕೆ ಎಂಬುದು ಹಗಲಿನಷ್ಟೇ ಸ್ಪಷ್ಟ. ಆದ್ದರಿಂದ ಇಲ್ಲಿ ಧರ್ಮಕ್ಕೆ ಸ್ಥಾನ ಇಲ್ಲ. ಆದರೆ ಇಸ್ರೇಲ್? ಫೆಲಸ್ತೀನ್ ಭೂಭಾಗದಲ್ಲಿ 1948ರಲ್ಲಿ ಅಕ್ರಮವಾಗಿ ಸ್ಥಾಪಿಸಿದ ದೇಶ ಅದು. ನಿಜಕ್ಕಾದರೆ ಅದು ಹುಟ್ಟಿಕೊಂಡದ್ದೆ ಫೆಲಸ್ತೀನಿಯರ ವಿರೋಧದ ನಡುವೆ. ಪಾಶ್ಚಾತ್ಯ  ಶಕ್ತಿಗಳು ಬಲವಂತದಿಂದ ಹುಟ್ಟು ಹಾಕಿದ ದೇಶ ಅದು. ಇಂದು ಹಮಾಸ್ ಅನ್ನು ಇವರೇ ಟೆರರಿಸ್ಟ್ ಎಂದು ಘೋಷಿಸಿದ್ದಾರೆ. ನಮ್ಮ  ದೇಶಕ್ಕೂ ಇದು ಗೊತ್ತಿದೆ. ಹೀಗಾಗಿ ಫೆಲಸ್ತೀನ್ ಸ್ವತಂತ್ರ ದೇಶ ಎಂಬ ಸಂಕಲ್ಪವನ್ನು ಭಾರತ ಬೆಂಬಲಿಸುತ್ತಾ ಬಂದಿದೆ.

ವಿಷಯ ಬದಲಿಸೋಣ:
ಚುನಾವಣಾ ಆಯೋಗವು ಛತ್ತೀಸ್‌ಗಢ, ಮಧ್ಯಪ್ರದೇಶ, ರಾಜಸ್ತಾನ, ತೆಲಂಗಾಣ, ಮಿಝೊರಂಗಳ ಚುನಾವಣಾ ದಿನಾಂಕ ಪ್ರಕಟಿಸಿದ  ನಂತರ ಪಕ್ಷಾವಾರು ಮೇಲಾಟಗಳು ಶುರುವಾಗಿವೆ. ಇದೇ ವೇಳೆ ರಾಜಸ್ತಾನದಲ್ಲಿ ಬಿಜೆಪಿ ಹಾಕಿದ ಪೋಸ್ಟರ್‌ವೊಂದು ಭಾರೀ ವಿವಾದಕ್ಕೆ ಮತ್ತು ಕಾನೂನು ಕ್ರಮಕ್ಕೆ ತುತ್ತಾಗುವಂತೆ ಮಾಡಿದೆ. ಗೆಲ್ಲಲೇಬೇಕಾದ ಅನಿವಾರ‍್ಯತೆಯಲ್ಲಿ ಬಿಜೆಪಿ ಇಲ್ಲಿ ಸುಳ್ಳಿನ ಮೊರೆ ಹೋಗಿದೆ.

ಬಿಜೆಪಿ ರೈತರ ವಿಷಯವನ್ನು ಎತ್ತಿಕೊಂಡು ಗೆಹ್ಲೋಟ್ ಸರಕಾರವನ್ನು ರಾಜಸ್ತಾನ ಸಹಿಸುವುದಿಲ್ಲ ಎಂಬ ಅಭಿಯಾನವನ್ನು ನಡೆಸಿತು. ಇದರಲ್ಲಿ ಅಂಟಿಸಿದ ಪೋಸ್ಟರ್‌ನಲ್ಲಿ ಮಾಧೇರಾಂ ಎಂಬ ರೈತನ ಫೋಟೊ ಇತ್ತು. 19 ಸಾವಿರಕ್ಕೂ ಹೆಚ್ಚು ರೈತರ ಜಮೀನು ಏಲಂ ಆಗಿದೆ ಎಂದು ಅದರಲ್ಲಿ ಬರೆಯಲಾಗಿತ್ತು.

ಫೋಟೊದಲ್ಲಿದ್ದ ಮಾಧೇರಾಂರ 200 ಬಿಗಾ ಜಮೀನನ್ನು ಆತ ಪಡೆದ ಸಾಲಕ್ಕೆ ಗೆಹ್ಲೋಟ್  ಸರಕಾರ ಏಲಂ ಮಾಡಿಸಿದೆ ಎಂದು ಆರೋಪ ಹೊರಿಸಲಾಗಿತ್ತು. ಆದರೆ, ತನ್ನ 200 ಬಿಗಾ ಜಮೀನು ತನ್ನ ಬಳಿಯೇ ಇದೆ, ಯಾರೂ ಏಲಂ ಮಾಡಿಲ್ಲ, ಬಿಜೆಪಿ ಫೋಟೊ ಹಾಕಿ ಅಪಮಾನ ಮಾಡಿದೆ ಎಂದು ರೈತ ರಾಧೇರಾಂ ಪೊಲೀಸ್ ಠಾಣೆಯಲ್ಲಿ ಮಾನಹಾನಿ ಪ್ರಕರಣ ದಾಖಲಿಸಿದ್ದಾರೆ. ಸುಳ್ಳು ಪ್ರಚಾರಕ್ಕೆ ಹೋಗಿ ರಾಜಸ್ತಾನ ಬಿಜೆಪಿ ಸಿಕ್ಕಿಬಿದ್ದಿದೆ. ಮಾಧೇರಾಂರನ್ನು ಸ್ವತಃ ಮುಖ್ಯಮಂತ್ರಿ ಗೆಹ್ಲೋಟ್  ಭೇಟಿಯಾಗಿ ಪೋಸ್ಟರ್ ತೆಗೆಸುವ ಭರವಸೆ ಕೊಟ್ಟರು.

ಬಿಜೆಪಿಯ ಸ್ಥಿತಿ ಉತ್ತಮ ಆಗಿಲ್ಲ ಎಂಬುದನ್ನೆ ಈ ಸುಳ್ಳು ಪ್ರಚಾರ ತೋರಿಸುತ್ತಿದೆ.  ಈ ಪ್ರಕಾರ ಹೇಳುವುದಾದರೆ ಚುನಾವಣೆ  ಘೋಷಣೆಯಾದ ಐದು ರಾಜ್ಯಗಳಲ್ಲಿ ನಾಲ್ಕರಲ್ಲಿ ಬಿಜೆಪಿ ಗೆಲ್ಲುವುದಿಲ್ಲ. ಚುನಾವಣಾ ಪರ‍್ವ ಸಮೀಕ್ಷೆಗಳನ್ನು ಗಮನಿಸುವುದಾದರೆ,  ಮಿಝೊರಂ ಹೊರತುಪಡಿಸಿ ಉಳಿದೆಲ್ಲ ಕಡೆ ಬಿಜೆಪಿಯ ಪರಿಸ್ಥಿತಿ ನೆಟ್ಟಗಿಲ್ಲ.

ಉಳಿದ ನಾಲ್ಕು ರಾಜ್ಯಗಳಲ್ಲಿ ಬಿಜೆಪಿ ಗೆಲ್ಲುವುದಿಲ್ಲ ಎಂದೇ ಚುನಾವಣಾ ಪರ‍್ವ ಸಮೀಕ್ಷೆಗಳು ಹೇಳುತ್ತಿವೆ. ಮಧ್ಯಪ್ರದೇಶದ ಬಗ್ಗೆ  ಟೈಮ್ಸ್ ನೌ- ನವಭಾರತ್ ಸಮೀಕ್ಷೆಯಲ್ಲಿ ಬಿಜೆಪಿಗೆ 110 ಸೀಟು, ಕಾಂಗ್ರೆಸ್‌ಗೆ 119 ಸೀಟುಗಳು,  ಟೈಮ್ಸ್- ಎಬಿಪಿ, ಸಿ ವೋಟರ್ ಸಮೀಕ್ಷೆಯಲ್ಲಿ ಬಿಜೆಪಿಗೆ 113 ರಿಂದ 125 ಸೀಟು ಸಿಗಬಹುದು. ಒಟ್ಟು 230 ಸೀಟುಗಳಲ್ಲಿ ಈ ಫಲಿತಾಂಶ. ಇಲ್ಲಿಯೂ ಬಿಜೆಪಿ ಗೆಲ್ಲುವುದು ಕಷ್ಟ. ಛತ್ತೀಸ್‌ಗಢದಲ್ಲಿ ಎಬಿಪಿ ಸಮೀಕ್ಷೆ ಪ್ರಕಾರ, ಬಿಜೆಪಿಗೆ 39 ರಿಂದ 45 ಸೀಟು ಸಿಗಬಹುದು. ಅದೇ ವೇಳೆ ಕಾಂಗ್ರೆಸ್‌ಗೆ  45 ರಿಂದ 51 ಸೀಟು ಸಿಗುವ ಸಾಧ್ಯತೆ ಇದೆ. ಇಲ್ಲಿಯೂ ಬಿಜೆಪಿ ಗೆಲ್ಲುವುದಿಲ್ಲ. ತೆಲಂಗಾಣದಲ್ಲಿ ಚಂದ್ರಶೇಖರ ರಾವ್‌ರ ಬಿಆರ್ ಎಸ್‌ಗೆ  43ರಿಂದ 55 ಸೀಟುಗಳು ಸಿಗಲಿದೆ. ಕಾಂಗ್ರೆಸ್‌ಗೆ 48ರಿಂದ 69 ಸೀಟುಗಳ ವರೆಗೆ ಸಿಗಲಿದೆ. ಇಲ್ಲಿ ಬಿಜೆಪಿ ಚಿತ್ರದಲ್ಲೇ ಇಲ್ಲ. ಸಿಕ್ಕರೆ  5ರಿಂದ 11 ಸೀಟುಗಳು ಸಿಗಬಹುದು.

ರೈತ ಮಾಧೇರಾಂರನ್ನು ಅಪಮಾನಿಸಿದ ರಾಜಸ್ಥಾನವನ್ನೇ ಎತ್ತಿ ಕೊಳ್ಳುವುದಾದರೆ ಇಲ್ಲಿಯೂ ಬಿಜೆಪಿಯ ಪರಿಸ್ಥಿತಿ ಚಿಂತಾಜನಕವಾಗಿದೆ. ಅದಕ್ಕೆ ಮುಖ್ಯ ಕಾರಣ ಬಿಜೆಪಿಯ ಮಾಜಿ ಮುಖ್ಯಮಂತ್ರಿ ವಸುಂದರಾ ರಾಜೇ ಸಿಂಧಿಯಾರ ಮುನಿಸು. ಈಗ ವಸುಂಧರಾ ರಾಜೆ ಸಿಂಧಿಯಾ ನೇರವಾಗಿ ಪ್ರಧಾನಿ ಮೋದಿ ವಿರುದ್ಧ ಅಸಮಾಧಾನ ಪ್ರಕಟಿಸಿದ್ದಾರೆ. ಅವರು ಎಲ್ಲಾದರೂ ಬಂಡಾಯ ಎದ್ದರೆ  ರಾಜಸ್ತಾನದಲ್ಲಿ ಬಿಜೆಪಿ ಕಾಣೆಯಾಗಬಹುದು. ವಸುಂಧರಾ ರಾಜೆ ಸಿಂಧಿಯರ ಬೆಂಬಲಿಗರಿಗೆ ಬಿಜೆಪಿ ಟಿಕೆಟು ನಿರಾಕರಿಸಿದೆ. ಇವರಲ್ಲಿ  ಮುಖೇಶ್ ಗೋಯಲ್ ತನ್ನ ಬೆಂಬಲಿಗರ ಸಭೆಯಲ್ಲಿ ಅತ್ತು ಬಿಟ್ಟಿದ್ದಾರೆ. ಮಾತ್ರವಲ್ಲ ಸಂಸತ್ಸದಸ್ಯ ರಾಜ್ಯ ವರ್ಧನ ಸಿಂಗ್ ರಾಠೋಡ್,  ದಿವ್ಯ ಕುಮಾರಿಗೆ ಟಿಕೆಟ್ ಕೊಟ್ಟಿರುವುದು ರಾಜಸ್ತಾನದಲ್ಲಿ ಬಿಜೆಪಿಯ ದುಸ್ಥಿತಿಯನ್ನು ಓದಿ ಹೇಳುತ್ತಿದೆ.

ಇವೆಲ್ಲಕ್ಕೆ ವಸುಂಧರಾರ ಬಂಡಾಯವನ್ನೇ ಕಾರಣ ಎಂದು ಹೇಳಬಹುದಾದರೂ ಜಾಟ್ ವಿಭಾಗ ಬಿಜೆಪಿ ವಿರೋಧಿಯಾಗಿದ್ದೂ ಒಂದು ಕಾರಣವಾಗಿದೆ ಎಂದು ಹೊರಬರುತ್ತಿರುವ ವಿಶ್ಲೇಷಣೆಗಳು ಹೇಳುತ್ತಿವೆ. ಇನ್ನೊಂದು ಕಡೆ ಜಾತಿ ಜನಗಣತಿ ನಡೆಸುವ ಕಾಂಗ್ರೆಸ್ಸಿನ ಘೋಷಣೆಯು ಸರ್ವರಿಗೂ ಸಮಬಾಳು ಸಮಪಾಲು ಎಂಬ ತತ್ವವು ಬಿಜೆಪಿ ಹಿಂದುತ್ವ ತತ್ವಕ್ಕೆ ಪ್ರತಿಯಾಗಿ ಎದ್ದು ನಿಂತದ್ದೂ ಕಾರಣವಾಗಿದೆ. ದಿಲ್ಲಿಯಲ್ಲಿ ರಾಹುಲ್ ಗಾಂಧಿ ಪ್ರದರ್ಶಿಸಿದ ನಾಲ್ವರು ಮುಖ್ಯಮಂತ್ರಿಗಳಲ್ಲಿ ಮೂವರು ಒಬಿಸಿ ವಿಭಾಗದವರಿದ್ದರು. ಕಾಂಗ್ರೆಸ್ ರಾಜ್ಯಗಳಲ್ಲಿ ಜಾತಿ ಜನಗಣತಿ ಮಾಡಿ ಒಬಿಸಿ ವಿಭಾಗಗಳಿಗೆ ಅರ್ಹ ಸರಕಾರಿ ಕೆಲಸ, ಶಿಕ್ಷಣ ಇತ್ಯಾದಿ ಕ್ಷೇತ್ರಗಳಲ್ಲಿ ಮೀಸಲಾತಿ ತರುತ್ತೇವೆ ಎಂದಿದ್ದಾರೆ. ಇದೂ ಜಾಟ್ ಮತದಾರರನ್ನು ರಾಜಸ್ತಾನದಲ್ಲಿ ಒಲಿಸಿಕೊಳ್ಳುವುದು ಖಚಿತವಾಗಿದೆ. ಬಿಜೆಪಿಯ ದುಸ್ಥಿತಿಗೆ ಇದೂ ಒಂದು ಕಾರಣವಾಗಬಹುದು.

ಇನ್ನು ಮಧ್ಯಪ್ರದೇಶದಲ್ಲಿ ಯಾವ ಕಾರಣಕ್ಕೂ ಶಿವರಾಜ ಸಿಂಗ್ ಸರಕಾರ ಅಧಿಕಾರಕ್ಕೆ ಬರುವುದಿಲ್ಲ ಎಂದು ಸಮೀಕ್ಷೆಗಳಿಂದಲೂ ಗೊತ್ತಾಗುತ್ತದೆ. ಬಹುತೇಕ ಬಿಜೆಪಿಯವರು ಕಾಂಗ್ರೆಸ್ಸಿಗೆ ಬರುತ್ತಿದ್ದಾರೆ. ಜೊತೆಗೆ ಕಾಂಗ್ರೆಸ್ ನಿಂದ ಬಿಜೆಪಿಗೆ ಹೋದ ಜ್ಯೋತಿರಾದಿತ್ಯ ಸಿಂಧಿಯಾರ ವಿರುದ್ಧ ಬಹಳ ಅಸಮಾಧಾನ ಬಿಜೆಪಿಯವರಲ್ಲಿದೆ. ಸಿಂಧಿಯಾ ಬೆಂಬಲಿಗರೇ ಕಾಂಗ್ರೆಸ್ ಮರು ಸೇರ್ಪಡೆಯಾಗುತ್ತಿದ್ದು ಇತ್ತ ಛತ್ತೀಸ್‌ಗಢದಲ್ಲಿ ಮತ್ತೊಮ್ಮೆ ಭೂಪೇಶ್ ಬಗೇಲ್ ಸರಕಾರ ರಚಿಸುವ ಸಾಧ್ಯತೆಯನ್ನು ಸಮೀಕ್ಷೆ ತಿಳಿಸುತ್ತಿದೆ. ಮಧ್ಯಪ್ರದೇಶ, ಛತ್ತೀಸ್‌ಗಢದ ಆದಿವಾಸಿ ಪ್ರದೇಶದಲ್ಲಿ ಆದಿವಾಸಿ ಸಮುದಾಯ ಬಿಜೆಪಿಯನ್ನು ಈ ಸಲ ದೂರ ಇಡುವ ಸಾಧ್ಯತೆ ಗೊಚರಿಸುತ್ತಿದೆ. ಒಟ್ಟು ನಾಲ್ಕು ರಾಜ್ಯಗಳು ಕಾಂಗ್ರೆಸ್ ತೆಕ್ಕೆಗಾಗಬಹುದು.

ಪಾರ್ಲಿಮೆಂಟ್ ಚುನಾವಣೆಗೆ ಸೆಮಿಫೈನಲ್ ಎನ್ನಲಾಗುವ ಐದು ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಗಯಾ ಎಂದಾದರೆ 2024ರ ಪಾರ್ಲಿಮೆಂಟ್ ಚುನಾವಣೆ ಗೆಲ್ಲುವುದು ಕಷ್ಟ.

ಇರಲಿ ವಿಷಯಕ್ಕೆ ಬರೋಣ:

ಹಮಾಸ್, ಇಸ್ರೇಲ್ ಘರ್ಷಣೆ ಮಾನವತೆಯ ದುರಂತದತ್ತ ಸಾಗುತ್ತಿದೆ ಎಂಬುದು ಸತ್ಯ. ಚುನಾವಣೆಯ ವೇಳೆ ಫೇಕ್ ನ್ಯೂಸ್‌ಗಳು  ಹಬ್ಬಿಸಲಾಗುವಂತೆ ಹಮಾಸ್-ಇಸ್ರೇಲ್ ಯುದ್ಧದ ಕುರಿತ ಸುಳ್ಳು ಸುದ್ದಿಗಳೂ ಬಿರುಸಿನಿಂದ ಹರಿದಾಡುತ್ತಿವೆ. ಅಮೆರಿಕದ ಅಧ್ಯಕ್ಷ ಬೈಡನ್‌ರೇ ಈ ಫೇಕ್ ನ್ಯೂಸ್ ವಾಹಕರಾದದ್ದು  ಒಂದು ವಿಚಿತ್ರ.

ಅಮೆರಿಕದ ಯಹೂದಿ ಸಮುದಾಯವನ್ನು ಉದ್ದೇಶಿಸಿ ಮಾತಾಡುವಾಗ ಟೆರರಿಸ್ಟ್ ಗಳು ಶಿಶುಗಳ ತಲೆ ಕತ್ತರಿಸುವ ದೃಶ್ಯವನ್ನು ನಾನು ನೋಡಬೇಕಾದೀತೆಂದು ಭಾವಿಸಿಲ್ಲ ಎಂದು ಹೇಳಿ ಬಿಟ್ಟಿದ್ದರು. ಅದನ್ನು ಎತ್ತಿಕೊಂಡು ಸಿಎನ್‌ಎನ್ ಮುಂತಾದ ವಿದೇಶಿ ಪ್ರತಿಷ್ಠಿತ ಮಾಧ್ಯಮಗಳು ವರದಿ ಮಾಡಿದವು. ಭಾರತದಲ್ಲಿಯೂ ಇದು ದೊಡ್ಡ ಸುದ್ದಿಯಾಗಿ ಟಿವಿ, ಪತ್ರಿಕೆಗಳಲ್ಲಿ ಬಂತು. ಬೈಡನ್ ಅಂದ ಬೆನ್ನಿಗೆ  ವೈಟ್ ಹೌಸ್ ಸ್ಪಷ್ಟನೆ ಕೊಟ್ಟು ಬೈಡನ್ ಅಂತಹ ಚಿತ್ರ-ದೃಶ್ಯಗಳನ್ನು ನೋಡಿಲ್ಲ ಎಂದು ಸ್ಪಷ್ಟೀಕರಣ ನೀಡಿತು. ತಮ್ಮ ಅಧ್ಯಕ್ಷರ ಮಾತನ್ನೇ  ಅಲ್ಲಗಳೆಯುವ ವೈಟ್ ಹೌಸ್‌ನ ಶಕ್ತಿಯನ್ನು ಪ್ರಶಂಸಿತಕ್ಕದ್ದೇ ಅನ್ನಬಹುದು.

ಇತ್ತೀಚೆಗೆ ಗಾಝದಲ್ಲಿ ನಡೆಸಲಾದ ಸಮೀಕ್ಷೆಯಲ್ಲಿ ಶೇ. 58 ಮಂದಿ ಹಮಾಸನ್ನು ಬೆಂಬಲಿಸಿದ್ದಾರೆ. ಈ ಮೂಲಕ ಫತಹ್ ಪಾರ್ಟಿಯನ್ನು  ತಿರಸ್ಕರಿಸಿದ್ದಾರೆ. ಹಮಾಸ್ ಗಾಝದಲ್ಲಿ ಜನ ಬೆಂಬಲ ಇರುವ ಒಂದು ಪಾರ್ಟಿಯಾಗಿದೆ. ಅಮೆರಿಕ ಹೇಳಿದ್ದನ್ನು ಕೇಳ್ಕೊಂಡು ತೆಪ್ಪಗಿರುವ  ಸ್ವಭಾವ ಅದಕ್ಕಿಲ್ಲ. ಅದಕ್ಕೆ ಅಜೆಂಡ ಇದೆ, ಅದರಂತೆ ಅದು ಕಾರ್ಯ ನಿರ್ವಹಿಸುತ್ತಿದೆ.

ಹೇಳಿ, ಇಲ್ಲಿ ಸತ್ಯ ಯಾವುದು? ಭೂಪಟದಲ್ಲಿಯೇ ಇಲ್ಲದ ಒಂದು ದೇಶ ಫೆಲಸ್ತೀನಿನಲ್ಲಿ 1948ರಲ್ಲಿ ಪಾಶ್ಚಾತ್ಯರ ಬಲವಂತದಲ್ಲಿ ಸ್ಥಾಪನೆ  ಯಾದದ್ದಾ? ಅಥವಾ ಆಗಾಗ ನಡೆಯುವ ಆಕ್ರಮಣಕ್ಕೆ ಪ್ರತಿರೋಧವಾಗಿ ಹುಟ್ಟಿಕೊಂಡ ಹಮಾಸ್ ಗತ್ಯಂತರವಿಲ್ಲದೆ ಶಸ್ತ್ರಾಸ್ತ್ರ ದಾಳಿಯನ್ನು ನೆಚ್ಚಿಕೊಂಡದ್ದಾ? ಪ್ರಧಾನಿ ಮೋದಿ ಹೇಳುವಂತೆ ಎಲ್ಲಿಯೇ ಆಗಿರಲಿ ಯಾವುದೇ ಕಾರಣಕ್ಕಾಗಿಯೇ ಆಗಿರಲಿ ಟೆರರಿಸಂ ಮನುಷ್ಯತ್ವ ವಿರುದ್ಧದ್ದು. ಹಾಗಿದ್ದರೆ ಇಸ್ರೇಲ್ ಫೆಲಸ್ತೀನಿನಲ್ಲಿ ಕಳೆದ 75 ವರ್ಷಗಳಿಂದ ನಡೆಸುತ್ತಾ ಬಂದದ್ದು ಏನನ್ನು?