ಕರ್ನಾಟಕ ಕಾಂಗ್ರೆಸ್‌ ಭವಿಷ್ಯ ಯಾವ ದಿಕ್ಕಿನಲ್ಲಿ?

0
439

✍️ ಎಂ.ಆರ್. ಮಾನ್ವಿ

ಕರ್ನಾಟಕದಲ್ಲಿ ರಾಜ್ಯ ರಾಜಕೀಯ ಮತ್ತೊಮ್ಮೆ ಶಕ್ತಿ ಕೇಂದ್ರದ ಸುತ್ತ ಗಿರಕಿ ಹೊಡೆಯುತ್ತಿದೆ. ಸಿದ್ದರಾಮಯ್ಯ–ಡಿ.ಕೆ. ಶಿವಕುಮಾರ್ ನಡುವಿನ ನಾಯಕತ್ವದ ಸೆಳೆತ ಈಗ ಅತಿ ತೀವ್ರ ಹಂತ ಪ್ರವೇಶಿಸಿದೆ. ಪಕ್ಷದ ಶಾಸಕರ ಗುಂಪುಗಳು ದೆಹಲಿಯತ್ತ ಧಾವಿಸಿ ಹೈಕಮಾಂಡ್‌ ಮುಂದೆ ಒತ್ತಾಯವಿಡುತ್ತಿರುವುದು ಬಿಕ್ಕಟ್ಟು ಎಷ್ಟರ ಮಟ್ಟಿಗೆ ಗಂಭೀರವಾಗಿದೆ ಎನ್ನುವುದನ್ನು ತೋರಿಸುತ್ತದೆ.

ಬೆಂಗಳೂರು–ದೆಹಲಿಯ ನಡುವೆ ನಡೆದಾಡುತ್ತಿರುವ ಈ ರಾಜಕೀಯ ಸಂಚಾರದ ಮಧ್ಯೆ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಬೆಂಗಳೂರಿನಲ್ಲಿ ತುರ್ತು ಸಭೆ ನಡೆಸಿದರೂ, ಅವರ ಮಾತು ಪರಿಸ್ಥಿತಿಯನ್ನು ಶಾಂತಗೊಳಿಸದೇ… ಇನ್ನಷ್ಟು ಗೊಂದಲಕ್ಕೆ ಕಾರಣವಾಯಿತು. “ನಿರ್ಧಾರ ಹೈಕಮಾಂಡ್ ಮಾಡುತ್ತದೆ” (ಆಲಾ ಕಾಮಾನ್) ಎಂದು ಹೇಳಿದ ಖರ್ಗೆಯವರ ಮಾತು “ಪಕ್ಷದ ಅಧ್ಯಕ್ಷರೇ ಆಗಿರುವ ನೀವು ಹೇಳುವ ಹೈಕಮಾಂಡ್ ಯಾರು?” ಎಂಬ ಪ್ರಶ್ನೆಯನ್ನು ಈಗ ರಾಜಕೀಯ ವಲಯವೇ ಕೇಳುವಂತೆ ಮಾಡಿದೆ.

ಈಗಿನ ಬಿಕ್ಕಟ್ಟನ್ನು ಸರಳವಾಗಿ ಹೇಳುವುದಾದರೆ, ಒಬ್ಬ ‘ಮಾಸ್ ಲೀಡರ್’ ಮತ್ತು ಒಬ್ಬ ‘ಸಂಘಟಕ’ನ ನಡುವಿನ ಸಂಘರ್ಷ. ಸಿದ್ದರಾಮಯ್ಯನವರಿಗೆ ರಾಜ್ಯವ್ಯಾಪಿ ಜನಬೆಂಬಲವಿದೆ. ಸಿದ್ದರಾಮಯ್ಯನವರು ಇಂದು ಕರ್ನಾಟಕ ಕಾಂಗ್ರೆಸ್‌ನ ರಾಜಕೀಯ ಪಿಲ್ಲರ್. ಅಹಿಂದ ಸಮಾಜದ ರಾಜಕೀಯ ಜಾಡ್ಯವನ್ನು ಒಂದೆಡೆ ತರಲು ಸಾಧ್ಯವಾದ ನಾಯಕರು. ವಯಸ್ಸಾದರೂ ಸಹ ಜನಪ್ರಿಯತೆ ಕಡಿಮೆಯಾಗಿಲ್ಲ. ಅವರನ್ನು ಮಧ್ಯಾವಧಿಯಲ್ಲಿ ತೆಗೆದುಹಾಕುವುದು ಕಾಂಗ್ರೆಸ್‌ಗೆ ನಿಖರವಾಗಿ ಸ್ವಯಂವಿನಾಶ ಮಾಡಿಕೊಂಡಂತೆ.

ಸಿದ್ದರಾಮಯ್ಯನವರ ರಾಜಕೀಯ ಪ್ರಯಾಣದಲ್ಲಿ ಒಂದು ವಿಶೇಷ ಸಂಗತಿ: ಒಮ್ಮೆ ಅವರು ಎಚ್.ಡಿ. ದೇವೇಗೌಡರ ಬಲಗೈ. ಆದರೆ ದೇವೇಗೌಡರು ತಮ್ಮ ಪುತ್ರ ರೇವಣ್ಣ ಅವರನ್ನು ಮುಂದಕ್ಕೆ ತರುವ ಪ್ರಯತ್ನ ಆರಂಭಿಸಿದಾಗ, ಸಿದ್ದರಾಮಯ್ಯ ನಿರಾಶರಾಗಿ ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರಿದ್ದರು. ಇದೇ ಭಯ ಕಾಂಗ್ರೇಸ್ ಗೆ ಮತ್ತೇ ಎದುರಾಗಿದೆ.

ಡಿ.ಕೆ. ಶಿವಕುಮಾರ್ – ಸಂಘಟನೆಯ ಬೆನ್ನೆಲುಬು ಇದ್ದಂತೆ. ಡಿ.ಕೆ. ಶಿವಕುಮಾರ್ ಯಾರಾದರೂ ಇರಬಹುದು, ಆದರೆ ಒಂದು ಸಂಗತಿ ಸ್ಪಷ್ಟ: ಅವರು ಕಾಂಗ್ರೆಸ್‌ ಗಾಗಿ ಎಂದಿಗೂ ಹಿಂತಿರುಗಿ ನೋಡದ ನಾಯಕ. ಸಂಘಟನೆಗೆ ಹಣ–ಬಲ–ಮಾನವ ಬಲ—ಎಲ್ಲವನ್ನು ಒದಗಿಸಿದವರು ಪಕ್ಷಕ್ಕೆ ಸಮಯ–ಸ್ಥಳ–ಸ್ಥಿತಿ ನೋಡದೆ ನಿಂತವರು, ಸೋನಿಯಾ ಗಾಂಧಿ ಅವರಿಗೆ ವಿಶೇಷ ನಿಷ್ಠೆ ಇರುವವರು. ಪಕ್ಷ ಸಂಕಷ್ಟದಲ್ಲಿದ್ದಾಗ ನೆರಳಾಗಿ ನಿಂತವರು. ಆದರೆ ಅವರ ನಾಯಕತ್ವದ ವ್ಯಾಪ್ತಿ ರಾಜ್ಯವ್ಯಾಪಿಯಾಗಿಲ್ಲ, ಕೇವಲ ಬೆಂಗಳೂರು–ಮಂಡ್ಯ–ರಾಮನಗರ–ಮೈಸೂರು ವಲಯಕ್ಕೆ ಸೀಮಿತ. ಆದರೂ ಇನ್ನೊಂದು ಕಡೆ ಅವರು ಬಲಿಷ್ಠ ಸಂಘಟಕ, ಪಕ್ಷದ ಸಂಕಟ ವಿಮೋಚಕ.

ಕಾಂಗ್ರೆಸ್‌ನ ಆತ್ಮಹುತಿ ಪ್ರವೃತ್ತಿಗೆ ಬ್ರೇಕ್ ಸಾಧ್ಯವೇ? ಕಾಂಗ್ರೆಸ್ ಪಕ್ಷದೊಳಗಿನ ಗುಂಪು ರಾಜಕಾರಣ ಹೊಸದಲ್ಲ.

ಮಧ್ಯಪ್ರದೇಶದಲ್ಲಿ ಸರ್ಕಾರ ಬಿದ್ದುದು, ಪಂಜಾಬ್‌ನಲ್ಲಿ ನಾಯಕತ್ವ ಬದಲಾವಣೆಯಿಂದ ಪಕ್ಷ ಸುಟ್ಟು ಹೋದುದು- ಛತ್ತೀಸ್‌ಗಢದಲ್ಲಿ ಅಧಿಕಾರ ಹಂಚಿಕೆ ವಿವಾದ. ಎಲ್ಲವೂ ಒಂದೇ ಹೇಳುತ್ತವೆ: ಕಾಂಗ್ರೆಸ್ ಪಕ್ಷವು ಎದುರಾಳಿಯ ಕಾರಣದಿಂದ ಅಲ್ಲ. ತಮ್ಮದೇ ಒಳಗಿನ ಜಗಳದಿಂದ ಸೋಲುತ್ತದೆ. ಕರ್ನಾಟಕದಲ್ಲೂ ಅದೇ ತಪ್ಪು ಪುನರಾವರ್ತನೆ ಆಗುತ್ತಿದೆಯೋ ಎಂಬ ಗಂಭೀರ ಸಾವಲು ಇಂದು ಎದುರಾಗಿದೆ.

ಬಿಜೆಪಿಯಲ್ಲಿ ಸಹ ಗೊಂದಲ ಇದ್ದರೂ, ಅವರಿಗೆ ಕೇಂದ್ರದ ಬಲ ಒಂದು ದೊಡ್ಡ ಆಯುಧ ಇದ್ದಂತೆ. ಕರ್ನಾಟಕದಲ್ಲಿ ಬಿಜೆಪಿ ಕೂಡ ಗುಂಪುಗಾರಿಕೆ ಸಮಸ್ಯೆಗೆ ಹೊರತಲ್ಲ. ರಾಜ್ಯಾಧ್ಯಕ್ಷ ವಿಜಯೇಂದ್ರ ವಿರುದ್ಧ ಗಂಭೀರ ಗುಂಪು ಅಸಮಾಧಾನದಲ್ಲಿದೆ.

ಆದರೂ ಬಿಜೆಪಿ ಸದ್ದು–ಮದ್ದು–ಹಣ–ವ್ಯವಸ್ಥೆ ಈ ಎಲ್ಲದರಿಂದ ಕಲಹವನ್ನು ನಿರ್ವಹಿಸಬಹುದು. ಕಾಂಗ್ರೆಸ್‌ಗೆ ಆ ಬಲ ಇಲ್ಲ.

ಸೋನಿಯಾ ಗಾಂಧಿ- ಬಿಕ್ಕಟ್ಟಿನ ಮಾಸ್ಟರ್ ಕೀ: ಈ ಬಿಕ್ಕಟ್ಟನ್ನು ಪರಿಹರಿಸುವ ನಿಜವಾದ ಕೀಲಿಯು ಸೋನಿಯಾ ಗಾಂಧಿಯವರ ಕೈಯಲ್ಲಿದೆ. ಡಿ.ಕೆ. ಶಿವಕುಮಾರ್ ಅವರ ನಿಷ್ಠೆ ರಾಹುಲ್‌ಗಿಂತಲೂ ಸೋನಿಯಾ ಗಾಂಧಿಗೆ ಹೆಚ್ಚು. ರಾಹುಲ್ ಗಾಂಧಿಯವರು ಕೂಡ ನಾಯಕತ್ವ ಬದಲಾವಣೆ ಪಕ್ಷಕ್ಕೆ ಹಾನಿ ತರಬಹುದು ಎಂದು ಹೇಳುತ್ತಿದ್ದಾರೆ. ಆದ್ದರಿಂದ, ಸಿದ್ದರಾಮಯ್ಯ ಅವರನ್ನು ಈಗ ಕದಲಿಸುವ ಪ್ರಶ್ನೆಯೇ ಇಲ್ಲ. ಆದರೆ ಡಿ.ಕೆ. ಶಿವಕುಮಾರ್ ಅವರನ್ನು ತೃಪ್ತಿ ಪಡಿಸುವುದು ಮಾತ್ರ ಹೈಕಮಾಂಡ್ ಮಾಡಬೇಕಾದ ಕೆಲಸ.

ಪರಿಹಾರ: 2028ರ ‘ಮುಂದಿನ ಮುಖ್ಯಮಂತ್ರಿ ನೀವೇ’ ಎಂಬ ಭರವಸೆ ಡಿ.ಕೆ. ಶಿವಕುಮಾರ್ ಅವರನ್ನು ಸಮಾಧಾನಪಡಿಸಲು “ಮುಂದಿನ ಮುಖ್ಯಮಂತ್ರಿ ನೀವೇ” ಎಂಬ ಭರವಸೆ ಸಮಯೋಚಿತ ರಾಜಕೀಯ ಪರಿಹಾರವಾಗಬಹುದು.

ಕರ್ನಾಟಕ ಕಾಂಗ್ರೆಸ್ ಈ ಕ್ಷಣ ನಿರ್ಣಾಯಕ ತಿರುವಿನಲ್ಲಿ ಬಂದು ನಿಂತಿದೆ. ಒಂದೆಡೆ ರಾಜ್ಯದ ದೊಡ್ಡ ಮಾಸ್ ಲೀಡರ್ (ಸಾಮೂಹಿಕ ಮುಖಂಡ) ಸಿದ್ದರಾಮಯ್ಯ, ಇನ್ನೊಂದೆಡೆ ಪಕ್ಷದ ಬೆನ್ನಲುಬು (backbone) ಡಿ.ಕೆ. ಶಿವಕುಮಾರ್. ಈ ಇಬ್ಬರನ್ನು ಒಗ್ಗೂಡಿಸುವಲ್ಲಿ ಯಶಸ್ವಿಯಾದರೆ, ಕಾಂಗ್ರೆಸ್ 2028ರ ಚುನಾವಣೆಯತ್ತ ಬಲಿಷ್ಠವಾಗಿ ಸಾಗಬಹುದು. ಒಂದು ವೇಳೆ ವಿಫಲವಾದರೆ, ಪಂಜಾಬ್‌ನಲ್ಲಿ ನಡೆದ ‘ಸ್ವಯಂ ನಾಶ’ ಕಥೆ ಕರ್ನಾಟಕದಲ್ಲಿ ಮರುಕಳಿಸಬಹುದು. ಕಾಂಗ್ರೆಸ್ ಗೆಲ್ಲಬೇಕಾದ ಯುದ್ಧ ಬಿಜೆಪಿಯ ವಿರುದ್ಧವಲ್ಲ. ತಮ್ಮದೇ ಒಳಗಿನ ಯುದ್ಧದ ವಿರುದ್ಧ.