✍️ ಏ.ಕೆ.ಕೆ.
ಜೂನ್ 13ರಂದು ಆಪರೇಷನ್ ರೈಸಿಂಗ್ ಲಯನ್ ಎಂಬ ಹೆಸರಲ್ಲಿ ಇರಾನ್ ಮೇಲೆ ಯುದ್ಧ ಸಾರಿದಾಗ ನೇತನ್ಯಾಹು ಹೇಗಿದ್ದರೋ ಈಗ ಹಾಗಿಲ್ಲ. ಅವರ ಲಯನ್ಗೆ ಇರಾನ್ ಮರ್ಮಾಘಾತ ನೀಡಿದೆ. ಮೊದಲ ಬಾರಿ ಇಸ್ರೇಲಿನಲ್ಲಿ ಉದ್ದಕ್ಕೂ ಮುರಿದುಬಿದ್ದ ಕಟ್ಟಡಗಳ ಚಿತ್ರಗಳು ಮತ್ತು ವಿಡಿಯೋಗಳು ಸೋಶಿಯಲ್ ಮೀಡಿಯಾಗಳಲ್ಲಿ ಕಾಣಿಸಿಕೊಂಡಿದೆ. ದಿಕ್ಕು ಕಾಣದೆ ಭಯದಿಂದ ಇಸ್ರೇಲ್ ನಾಗರಿಕರು ಸೈಪ್ರಸ್ಗೆ ಗಡಿ ದಾಟುತ್ತಿರುವ ಸಾಲು ಸಾಲು ದೃಶ್ಯಗಳನ್ನು ಜಗತ್ತು ನೋಡಿದೆ. ಇರಾನ್ ಕ್ಷಿಪಣಿಗಳು ಇಸ್ರೇಲ್ನಲ್ಲಿ ಎಂತಹ ಅನಾಹುತ ಮಾಡಿಬಿಟ್ಟಿದೆ ಎಂದರೆ ಇಸ್ರೇಲ್ ಪರ ಬ್ಯಾಟ್ ಬೀಸುತ್ತಿದ್ದ ಭಾರತದ ಗೋಧಿ ಮೀಡಿಯಾಗಳೇ ವರಸೆ ಬದಲಿಸಿವೆ.
ಇಸ್ರೇಲ್ಗೆ ಆಗಿರುವ ಭಾರೀ ಮಟ್ಟದ ಹಾನಿಯ ಬಗ್ಗೆ ಅವು ಬಾಯಿ ತೆರೆಯತೊಡಗಿವೆ. ತಾವೇ ಗಾಳಿ ಹಾಕಿ ಉಬ್ಬಿಸಿದ ಇಸ್ರೇಲ್ ಎಂಬ ಬಲೂನು ಇರಾನ್ ಎದುರು ಟುಸ್ ಪಟಾಕಿ ಎಂಬುದನ್ನು ಈ ಗೋಧಿ ಮೀಡಿಯಾಗಳೇ ಒಪ್ಪಿಕೊಳ್ಳುವ ಹಂತಕ್ಕೆ ಬಂದಿವೆ. ಒಂದುವೇಳೆ ಅಮೆರಿಕದ ಬೆಂಬಲ ಇಲ್ಲದಿದ್ದರೆ ಮೂರೇ ಮೂರು ದಿನಗಳೊಳಗೆ ಇಸ್ರೇಲನ್ನು ಇರಾನ್ ಮಂಡಿ ಊರಿಸುತ್ತಿತ್ತು ಎಂದು ಇರಾನ್ ವಿರೋಧಿಗಳೇ ಒಪ್ಪಿಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ.
ಇದೀಗ ಇಸ್ರೇಲ್ ಮತ್ತು ಇರಾನ್ಗಳು ಕದನ ವಿರಾಮಕ್ಕೆ ಒಪ್ಪಿಕೊಂಡಿರುವುದ ರಿಂದ ಈ ಇಡೀ ಯುದ್ಧದ ಅವಲೋಕನಕ್ಕೆ ಇದೊಂದು ಸೂಕ್ತ ಸಮಯ ಅನಿಸುತ್ತದೆ. ಈ ಹಿನ್ನೆಲೆಯಲ್ಲಿ ಕೆಲವು ಪ್ರಶ್ನೆಗಳಿವೆ.
- ಕೇವಲ 12 ದಿನಗಳೊಳಗೆ ಯುದ್ಧ ನಿಲ್ಲಿಸಬೇಕಾದ ಪರಿಸ್ಥಿತಿ ಎದುರಾಗ ಬಹುದು ಎಂದು ನೇತನ್ಯಾಹು ಅಂದುಕೊಂಡಿದ್ದರೇ?
- ಇರಾನಿನಲ್ಲಿ ಆಡಳಿತವನ್ನು ಬದಲಿಸುವುದು ತನ್ನ ಗುರಿ ಎಂದು ಹೇಳಿದ್ದ ನೇತ ನ್ಯಾಹು ಈಗ ಆ ಗುರಿಯನ್ನು ಸಾಧಿಸದೆಯೇ ಕದನ ವಿರಾಮಕ್ಕೆ ಒಪ್ಪಿಕೊಂಡದ್ದೇಕೆ?
- ಇರಾನಿನ ಧಾರ್ಮಿಕ ನಾಯಕ ಖಾಮಿನೈ ಅವರನ್ನು ಹತ್ಯೆ ಮಾಡದೆ ಬಿಡಲ್ಲ ಎಂದು ಘೋಷಿಸಿದ್ದ ನೆತನ್ಯಾಹು ಈಗ ಆ ಮಾತನ್ನೇ ಮರೆತವರಂತೆ ನಡಕೊಳ್ಳುತ್ತಿರುವುದೇಕೆ?
- ನಿಜಕ್ಕೂ ಈ ಯುದ್ಧವನ್ನು ಟ್ರಂಪ್ ಬಯಸಿದ್ದರೆ? ಅದಕ್ಕೆ ಅವರದೇ ಆದ ಕಾರಣಗಳು ಇದ್ದವೇ?
- ಹತ್ತು ದಿನಗಳವರೆಗೆ ಕಾದು ಆ ಬಳಿಕ ಇರಾನಿನ ಅಣು ರಿಯಾಕ್ಟರ್ಗಳ ಮೇಲೆ ಟ್ರಂಪ್ ದಾಳಿ ಮಾಡಿರುವುದರ ಹಿಂದೆ ತಂತ್ರಗಾರಿಕೆ ಇತ್ತೇ?
- ಈ ಯುದ್ಧದಲ್ಲಿ ನಿಜಕ್ಕೂ ಮೇಲುಗೈ ಪಡೆದಿರುವುದು ಯಾರು?
- ಈ ಯುದ್ಧದಲ್ಲಿ ಸೋತ ನಾಯಕ ಇದ್ದರೆ ಅದು ನೆತನ್ಯಾಹು ಮಾತ್ರ. ಗೆದ್ದ ನಾಯಕ ಇದ್ದರೆ ಅದು ಅಮೆರಿಕಾದ ಟ್ರಂಪ್. ಸೋಲು ಮತ್ತು ಗೆಲುವಿನ ನಡುವೆ ಗುರುತಿಸಿಕೊಳ್ಳುವ ನಾಯಕ ಇದ್ದರೆ ಅದು ಆಯತುಲ್ಲ ಖಾಮಿನೈ.
ಇಸ್ರೇಲ್ ಪ್ರಧಾನಿ ನೆತನ್ಯಾಹು ಜೊತೆ ಟ್ರಂಪ್ಗೆ ಭಿನ್ನಾಭಿಪ್ರಾಯ ಇತ್ತು. ಗಾಝಾ ವಿಷಯದಲ್ಲಿ ಟ್ರಂಪ್ ಮಾತನ್ನು ನೇತನ್ಯಾಹು ಹಲವು ಬಾರಿ ಮೀರಿ ನಡೆದಿದ್ದರು. ಟ್ರಂಪ್ ಅವರಲ್ಲಿರುವ ಅಹಂಕಾರದ ಗುಣ ನೆತನ್ಯಾಹು ಅವರಲ್ಲೂ ಇದೆ. ಆದ್ದರಿಂದ ಈ ಎರಡೂ ಗುಣಗಳು ಪರಸ್ಪರ ಜೊತೆಯಾಗಿ ಸಾಗಲು ಸಾಧ್ಯವೂ ಇಲ್ಲ. ಆದ್ದರಿಂದಲೇ ಕೆಲವೊಮ್ಮೆ ಬಹಿರಂಗವಾಗಿ ಮತ್ತು ಬಹುತೇಕ ಬಾರಿ ಆಂತರಿಕವಾಗಿ ಈ ಗುಣಗಳು ಸಂಘರ್ಶಿಸುತ್ತಲೇ ಇತ್ತು. ಬಹುಶಃ ನೆತನ್ಯಾಹು ಅವರ ವರ್ಚಸ್ಸನ್ನು ತಗ್ಗಿಸುವ ಮತ್ತು ಇಸ್ರೇಲ್ ನಾಗರಿಕರು ನೆತನ್ಯಾಹು ಅವರನ್ನು ದ್ವೇಷಿಸುವಂತೆ ಮಾಡುವುದಕ್ಕಾಗಿಯೇ ಇರಾನ್ ವಿರುದ್ಧ ಯುದ್ಧಕ್ಕೆ ನೆತನ್ಯಾಹು ಅವರನ್ನು ಟ್ರಂಪ್ ಪ್ರಚೋದಿಸಿದ್ದಾರೆಯೇ ಎಂಬ ಅನು ಮಾನ ಬಲವಾಗಿಯೇ ಕಾಡುತ್ತಿದೆ. ಇದಕ್ಕೆ ಇನ್ನೂ ಒಂದು ಆಧಾರ ಏನಂದರೆ, ಯುದ್ಧ ಆರಂಭವಾಗಿ 10 ದಿನಗಳವರೆಗೆ ಟ್ರಂಪ್ ಅಖಾಡಕ್ಕೆ ಇಳಿದೇ ಇರಲಿಲ್ಲ. ಈ ಹತ್ತು ದಿನಗಳು ಇರಾನ್ ಪಾಲಿಗೆ ಬಹಳ ಮುಖ್ಯವಾಗಿದ್ದವು.
ಇಸ್ರೇಲಿನ ಬಹುತೇಕ ನಗರಗಳು ಮತ್ತು ಸೈನಿಕ ನೆಲೆಗಳನ್ನು ಇರಾನ್ ಕ್ಷಿಪಣಿಗಳು ಧ್ವಂಸ ಗೊಳಿಸಿದವು. ನಾಗರಿಕರನ್ನು ಬಂಕರ್ನಲ್ಲಿಯೇ ವಾಸಿಸುವಂತೆ ಮಾಡಿದುವು. ಇರಾನ್ ಕ್ಷಿಪಣಿಗಳ ಪ್ರವಾಹದಿಂದ ನೇತನ್ಯಾಹು ಎಷ್ಟು ಕಂಗೆಟ್ಟರೆಂದರೆ ಇರಾನ್ ಟ್ರಂಪನ್ನು ಹತ್ಯೆ ಮಾಡುವ ಯೋಜನೆ ಹಾಕಿಕೊಂಡಿದೆ ಎಂದು ಹೇಳಿದರು. ಈ ಹೆಸರಲ್ಲಾದರೂ ಟ್ರಂಪ್ ಯುದ್ಧ ಕಣಕ್ಕೆ ಇಳಿಯಲಿ ಎಂಬುದು ನೇತನ್ಯಾಹು ಅವರ ಬಯಕೆ ಆಗಿತ್ತು. ಆದರೂ ಟ್ರಂಪ್ ಕಣಕ್ಕೆ ಇಳಿದೇ ಇರಲಿಲ್ಲ. ನೆತನ್ಯಾಹು ವಿರುದ್ಧ ಇಸ್ರೇಲ್ ನಲ್ಲಿಯೇ ಪ್ರತಿಭಟನೆ ಆರಂಭವಾಯಿತು. ನಾಗರಿಕರು ಸೈಪ್ರಸ್ಗೆ ಗುಂಪು ಗುಂಪಾಗಿ ವಲಸೆ ಹೊರಟರು. ಇಸ್ರೇಲ್ನ ಉದ್ದಕ್ಕೂ ನಾಶ ನಷ್ಟಗಳು ಸಂಭವಿಸಿದುವು. ಆ ಬಳಿಕ ಇರಾನಿನ 3 ಅಣು ರಿಯಾಕ್ಟರ್ಗಳ ಮೇಲೆ ಬಾಂಬ್ ಹಾಕಿ ಟಂಪ್ ಕೈ ತೊಳೆದುಕೊಂಡರು.
ಇದೇ ಸಂದರ್ಭದಲ್ಲಿ ಈ ಮೂರು ರಿಯಾಕ್ಟರ್ಗಳಿಂದ ಸಂಸ್ಕರಿತ ಯುರೇನಿಯಂ ಅನ್ನು ಬೇರೆಡೆಗೆ ಶಿಫ್ಟ್ ಮಾಡಿರುವುದಾಗಿಯೂ ಬಲವಾದ ವರದಿ ಇದೆ. ಅಂದರೆ ಈ ದಾಳಿಯಿಂದ ಅಮೆರಿಕಕ್ಕಾಗಲಿ ಇಸ್ರೇಲ್ನ ಉದ್ದೇಶಕ್ಕಾಗಲಿ ಯಾವ ಪ್ರಯೋಜನವೂ ಆಗಿಲ್ಲ ಎಂದೇ ಅರ್ಥ. ಈ ಬಾಂಬ್ ದಾಳಿ ಬಳಿಕ ಇರಾನ್ ಇನ್ನಷ್ಟು ತೀವ್ರವಾಗಿ ಇಸ್ರೇಲ್ನ ಮೇಲೆ ದಾಳಿ ನಡೆಸಿದ್ದೂ ನಡೆಯಿತು.
ಇನ್ನೊಂದು ಕಡೆ ಅಮೆರಿಕಕ್ಕೆ ತಿಳಿಸಿಯೇ ಕತರ್, ಬಹರೇನ್ ಮತ್ತು ಇರಾಕ್ ನಲ್ಲಿರುವ ಅಮೆರಿಕಾದ ಸೇನಾ ನೆಲೆಗಳ ಮೇಲೆ ಇರಾನ್ ಕ್ಷಿಪಣಿ ದಾಳಿ ನಡೆಸಿದೆ. ಆದರೆ ಇದಕ್ಕೆ ಪ್ರತಿಯಾಗಿ ಅಮೆರಿಕ ಯಾವ ಯಾವ ದಾಳಿಯನ್ನು ನಡೆಸಿಲ್ಲ. ಹೇಳಿಕೇಳಿ ಖತರ್ ಎಂಬುದು ಇರಾನಿನ ಅತ್ಯಾಪ್ತ ರಾಷ್ಟ್ರ. ಅರಬ್ ರಾಷ್ಟ್ರಗಳೆಲ್ಲ ಇರಾನಿನೊಂದಿಗೆ ಮುನಿಸಿಕೊಂಡಿರುವಾಗಲೂ ಅದರೊಂದಿಗೆ ಉತ್ತಮ ಸಂಬಂಧವನ್ನು ಇಟ್ಟುಕೊಂಡಿದ್ದರೆ ಅದು ಕತಾರ್ ಮಾತ್ರ. ಕತರ್ ಮೇಲೆ ಸೌದಿ ಅರೇಬಿಯಾ, ಯುಎಇ, ಬಹರೇನ್ ಮತ್ತು ಈಜಿಪ್ಟ್ಗಳು 43 ತಿಂಗಳ ಕಾಲ ಬಹಿಷ್ಕಾರ ಹೇರಿದಾಗಲೂ, ಕತರ್ಗೆ ನೆರವಾಗಿದ್ದು ಇರಾನ್ ಮಾತ್ರ. ಇಂಥ ರಾಷ್ಟ್ರದಲ್ಲಿರುವ ಅಮೆರಿಕದ ನೆಲೆಗಳಿಗೆ ಇರಾನ್ ದಾಳಿ ನಡೆಸಿದ್ದು ನಿಜಕ್ಕೂ ಆಚ್ಛರಿ.
ಒಂದು ಕಡೆ ಇರಾನ್ ಶಿಯಾ ರಾಷ್ಟ್ರವಾಗಿದ್ದು ಸುನ್ನಿಗಳಿಗೆ ಅಪಾಯಕಾರಿ ಎಂಬ ಪ್ರಚಾರ ಗಲ್ಫ್ ರಾಷ್ಟ್ರಗಳಲ್ಲಿದೆ. ಈ ಪ್ರಚಾರವನ್ನೇ ಜೀವಂತ ಇರಿಸಿ ಕೊಳ್ಳಲು ಇಸ್ರೇಲ್ ಸದಾ ಪ್ರಯತ್ನಿಸುತ್ತಲೂ ಇದೆ. ಇಂತಹ ಸಮಯದಲ್ಲಿ ಬಹ್ರೇನ್ ಮತ್ತು ಕತಾರ್ ಮೇಲೆ ಇಸ್ರೇಲ್ ನಡೆಸಿರುವ ಈ ದಾಳಿಯು ಮತ್ತೆ ಸುನ್ನಿ ಶಿಯಾ ಚರ್ಚೆಗೆ ಕಾರಣ ಆಗಲೂ ಬಹುದು. ಕತರ್ ಮತ್ತು ಬಹ್ರೇನ್ ನಾಗರಿಕರು ಇರಾನ್ ಅನ್ನು ದ್ವೇಷಿಸುವುದಕ್ಕೆ
ಈ ದಾಳಿ ಕಾರಣ ಆಗಲೂಬಹುದು. ಈಗಾಗಲೇ ಈ ಎರಡೂ ರಾಷ್ಟ್ರಗಳು ತಮ್ಮ ಸಾರ್ವಭೌಮತ್ವವನ್ನು ಉಲ್ಲಂಘಿಸಿದ್ದಕ್ಕಾಗಿ ಇರಾನ್ ಅನ್ನು ಪ್ರಬಲವಾಗಿ ಖಂಡಿಸಿವೆ. ಈ ನಡುವೆ ಕತರ್ ಜೊತೆ ಇರಾನ್ ಕ್ಷಮೆ ಯಾಚಿಸಿದ್ದೂ ನಡೆದಿದೆ.
ಈ ಹಿನ್ನೆಲೆಯಲ್ಲಿ ನೋಡಿದರೆ ಟ್ರಂಪ್ ಅವರ ತಂತ್ರ ಗೆದ್ದಿರುವಂತೆ ಕಾಣಿಸುತ್ತಿದೆ. ಒಂದು ಕಡೆ ನೆತನ್ಯಾಹು ಅವರ ವರ್ಚಸ್ಸನ್ನು ಸಂಪೂರ್ಣವಾಗಿ ನಾಶಪಡಿಸಲು ಅವರು ಯಶಸ್ವಿಯಾಗಿರುವಂತೆಯೇ ಇನ್ನೊಂದು ಕಡೆ ಕತರ್, ಬಹ್ರೇನ್ ಮತ್ತು ಇರಾಕ್ ನ ಲ್ಲಿರುವ ತನ್ನ ನೆಲೆಗಳಿಗೆ ದಾಳಿ ಮಾಡುವಂತೆ ಇರಾನನ್ನು ಆಹ್ವಾನಿಸುವ ಮೂಲಕ ಮತ್ತೆ ಶಿಯಾ ವಿರುದ್ಧ ಸುನ್ನಿ ಭಾವನೆಯನ್ನು ಪ್ರಚೋದಿಸುವುದರಲ್ಲೂ ಅವರು ಯಶಸ್ವಿಯಾದಂತಿದೆ. ಅಮೆರಿಕಕ್ಕೆ ತಿಳಿಸಿಯೇ ಇರಾನ್ ಈ ದಾಳಿ ನಡೆಸಿರುವುದು ಮತ್ತು ಅಮೆರಿಕ ಈ ದಾಳಿಗೆ ಒಪ್ಪಿಕೊಂಡಿರುವುದನ್ನು ನೋಡಿದರೆ ಇದು ಟ್ರಂಪ್ ಅವರ ತಂತ್ರದ ಭಾಗವೇ ಎಂಬ ಅನುಮಾನವೂ ಕಾಡುತ್ತಿದೆ. ಟ್ರಂಪ್ ಹೆಣೆದ ಬಲೆಗೆ ಆಯತುಲ್ಲ ಖಾಮನೈ ಬಿದ್ದಿದ್ದಾರೆಯೇ ಎಂಬ ಪ್ರಶ್ನೆಯೂ ಎದ್ದಿದೆ. ಹಾಗಂತ ಇರಾನಿಗೆ ಈ ದಾಳಿ ಅಗತ್ಯವಾಗಿತ್ತು. ಅಮೆರಿಕದ ಮೇಲೆ ಪ್ರತಿ ದಾಳಿ ನಡೆಸುವಷ್ಟು ಇರಾನ್ ಸಮರ್ಥವಾಗಿದೆ ಎಂದು ತನ್ನ ನಾಗರಿಕರಲ್ಲಿ ಧೈರ್ಯ ತುಂಬುವುದು ಇರಾನಿನ ಆಡಳಿತಕ್ಕೆ ಬೇಕಾಗಿತ್ತು. ಈ ದಾಳಿಯ ಬಳಿಕ ಇರಾನಿನಲ್ಲಿ ಸರಕಾರವನ್ನು ಬೆಂಬಲಿಸಿ ರ್ಯಾಲಿ ನಡೆದಿರುವುದು ಈ ವಾದವನ್ನು ಸಮರ್ಥಿಸುವಂತಿದೆ.
ಅಂದಹಾಗೆ ಈ ಯುದ್ಧದಿಂದಾಗಿ ಸಾಕಷ್ಟು ಪ್ರಮಾಣದಲ್ಲಿ ಶಸ್ತ್ರಾಸ್ತ್ರವನ್ನು ಖಾಲಿ ಮಾಡಿಕೊಂಡಿರುವ ಇಸ್ರೇಲ್ಗೆ ಮತ್ತೆ ಟ್ರಂಪ್ ಶಸ್ತಾçಸ್ತç ಮಾರಾಟ ಮಾಡಬಹುದು. ಇರಾನ್ನ ಕ್ಷಿಪಣಿ ದಾಳಿಯಿಂದ ಬೆದರಿರುವ ಗಲ್ಫ್ ರಾಷ್ಟ್ರಗಳು ಶಸ್ತ್ರಾಸ್ತ್ರಕ್ಕಾಗಿ ಟ್ರಂಪ್ಗೆ ಮುಗಿ ಬೀಳಬಹುದು. ಈ ಎರಡೂ ದೃಷ್ಟಿಕೋನದಿಂದ ನೋಡಿದರೂ ಟ್ರಂಪ್ ಯಶಸ್ವಿಯಾದಂತೆ ಕಾಣಿಸುತ್ತಿದೆ. ಆದರೆ ನೆತನ್ಯಾಹು ಸಂಪೂರ್ಣ ಸೋಲೊಪಿ ಕೊಂಡಿದ್ದಾರೆ. ಇರಾನ್ ಈ ಯುದ್ಧವನ್ನು ಆರಂಭಿಸಿಲ್ಲವಾದ್ದರಿಂದ ಮತ್ತು ಇಸ್ರೇಲಿನಲ್ಲಿ ಭಾರಿ ಪ್ರಮಾಣದಲ್ಲಿ ನಾಶನಷ್ಟ ಉಂಟು ಮಾಡಲು ಯಶಸ್ವಿಯಾಗಿರುವುದರಿಂದ ಖಾಮಿನೈಗೆ ಆಗಲಿ ಅಲ್ಲಿನ ಆಡಳಿತಕ್ಕಾಗಲಿ ಯಾವ ತೊಂದರೆಯೂ ಇಲ್ಲ. ಇರಾನ್ ನಾಗರಿಕರು ಇನ್ನಷ್ಟು ಬಲವಾಗಿ ಈ ಆಡಳಿತದ ಪರ ನಿಲ್ಲಬಹುದು.
ಅಂತೂ ಇನ್ನು ಮುಂದೆ ತನ್ನ ಮೇಲೆ ದಾಳಿ ಮಾಡುವ ಮೊದಲು ನೂರು ಬಾರಿ ಆಲೋಚಿಸುವಂತಹ ಏಟನ್ನು ಇಸ್ರೇಲ್ಗೆ ಇರಾನ್ ನೀಡಿದೆ. ಈ ಏಟನ್ನು ಇಸ್ರೇಲ್ ಬಹುಕಾಲ ನೆನಪಿನಲ್ಲಿ ಇಟ್ಟುಕೊಳ್ಳಲಿದೆ.












