ಸನ್ಮಾರ್ಗ ವಾರ್ತೆ
ಹೊಸದಿಲ್ಲಿ, ಜೂ.14: ಟ್ವಿಟರ್ ನ ಮಾಜಿ ಸಿಇಒ ರೈತ ಆಂದೋಲನದ ಸಮಯದಲ್ಲಿ ಕೆಲವು ಸುದ್ದಿಗಳನ್ನು ಕೇಂದ್ರ ಸರಕಾರ ಡಿಲಿಟ್ ಮಾಡಲು ಹೇಳಿತ್ತು. ಇಲ್ಲದಿದ್ದರೆ ಟ್ವಿಟರ್ ಬಂದ್ ಮಾಡಿಸುವುದಾಗಿ ಬೆದರಿಸಿತ್ತು ಎಂದು ಸಂದರ್ಶನವೊಂದರಲ್ಲಿ ನೀಡಿದ ಹೇಳಿಕೆಗೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಬ್ರಿಟಿಷರ ಪಾದ ಸೇವಕರಾಗಿದ್ದ ಕಾಲದಿಂದ ಹಿಡಿದು ಸರ್ವಾಧಿಕಾರಿ ಟೂಲ್ ಕಿಟ್ಟನ್ನು ಆರೆಸ್ಸೆಸ್, ಬಿಜೆಪಿ ಬಳಿಯಿಟ್ಟುಕೊಂಡಿದೆ. ಸ್ವಾತಂತ್ರ್ಯ ಹೋರಾಟದ ಕಾಲದಲ್ಲಿ ಭಾರತದ ವಿರುದ್ಧ ಬ್ರಿಟಿಷರ ಜೊತೆ ನಿಂತ ಆರೆಸ್ಸೆಸ್ ಮತ್ತು ಬಿಜೆಪಿ ದೇಶಭಕ್ತರಾಗಿ ಸೋಗು ಹಾಕುತ್ತಿದ್ದಾರೆ ಎಂದು ಖರ್ಗೆ ಹೇಳಿದರು.
ರೈತ ಹೋರಾಟವನ್ನು ದಮನಿಸಲು ಮೋದಿ ಸರಕಾರ ಏನೆಲ್ಲ ಮಾಡಿಲ್ಲ ಎಂದು ಪ್ರಶ್ನಿಸಿದ ಅವರು, ದೇಶದ ಅನ್ನದಾತರಾದ ರೈತರನ್ನು ಆಂದೋಲನ ಜೀವಿಗಳೆಂದು ಕರೆದದ್ದು ಪ್ರಧಾನಿ. ರೈತರಿಗೆ ವಿದೇಶದಿಂದ ಹಣ ಬರುತ್ತಿದೆ ಎಂದು ಹೇಳಿದವರು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್. ರೈತರನ್ನು ನಕ್ಷಲರು, ಭಯೋತ್ಪಾದಕರು, ವಂಚಕರೆಂದು ಕರೆದ್ದು ಬಿಜೆಪಿಯ ಸಚಿವರು ನಾಯಕರು ಎಂದು ಖರ್ಗೆ ಹೇಳಿದರು.
ನಡು ರಸ್ತೆಯಲ್ಲಿ ಸಿಮೆಂಟಿನ ತಡೆಗೋಡೆ ಕಟ್ಟಿ ಅವರನ್ನು ತಡೆದವರು ಇವರೇ. ರೈತರ ಮೇಲೆ ಲಾಠಿ ಚಾರ್ಜು ಮಾಡಿದ್ದು ಇವರೇ. ಆಂದೋಲನದ ವೇಳೆ 750 ರೈತರು ನಿಧನರಾದರು. ಅವರಿಗೆ ಅಂತ್ಯೋಪಚಾರ ಬಿಡಿ ನಷ್ಟ ಪರಿಹಾರ ಕೊಡುವುದು ಹಾಗಿರಲಿ, ಪಾರ್ಲಿಮೆಂಟಿನಲ್ಲಿ ಒಂದು ನಿಮಿಷ ಮೌನವನ್ನು ಆಚರಿಸಿಲ್ಲ.
ಈಗಲೂ 1.48 ಲಕ್ಷ ರೈತರು ತಮ್ಮ ವಿರುದ್ಧ ಮೋದಿ ಸರಕಾರ ಹಾಕಿದ ಕೇಸಿನ ವಿರುದ್ಧ ಹೋರಾಡುತ್ತಿದ್ದಾರೆ. ಇವೆಲ್ಲ ಮಾಡಿದ ಸರಕಾರ ಪತ್ರಕರ್ತರಿಗೆ, ಬೆದರಿಕೆ ಹಾಕುವುದು ದೊಡ್ಡ ವಿಷಯ ಅಲ್ಲ. ಬಿಜೆಪಿ ಪ್ರಜಾಪ್ರಭುತ್ವದ ಅಂತ್ಯಕ್ಕೆ ಸಂಚು ಹೆಣೆಯುತ್ತಿದೆ. ಇದಕ್ಕೆ ನಾವು ಆಸ್ಪದ ನೀಡುವುದಿಲ್ಲ ಎಂದು ಖರ್ಗೆ ಹೇಳಿದರು.












