ಇನ್ನೊಬ್ಬರ ಬೆನ್ನ ಹಿಂದೆ ಯಾಕೆ ಬೀಳುತ್ತೀರಿ?

0
179

ಸನ್ಮಾರ್ಗ ವಾರ್ತೆ

✍️ಕೆ.ಪಿ. ಪ್ರಸನ್ನನ್

ನಾನು ಮುನಾಫಿಕ್ (ಕಪಟ ವಿಶ್ವಾಸಿ) ಆದೆ ಎಂದು ಕೊರಗುವ ಹ. ಹಂಝಲ(ರ)ರ ಘಟನೆಯನ್ನು ಕೇಳಿಲ್ಲವೇ? ಹೌದು, ಆತ್ಮಾವಲೋಕನದ ಸಂದರ್ಭದಲ್ಲಿ ಪ್ರವಾದಿಯವರ(ಸ) ಜೊತೆ ಇರುವಾಗ ಇದ್ದಂತಹ ವಿಶ್ವಾಸದಾರ್ಢ್ಯತೆಯು, ಶಾಂತಿ ಸಮಾಧಾನದ ಸುಗಂಧವು ಮನೆಗೆ ಬಂದಾಗ ಇಲ್ಲದಂತಾಗುತ್ತದೆ ಎಂಬ ಕೊರಗು ಹಂಝಲ(ರ)ರನ್ನು ಆತಂಕಗೊಳಿಸಿತ್ತು.

ಆ ಚರಿತ್ರೆಯನ್ನು ಕೇಳುವ ನಮಗೆ ತಿಳಿದಿದೆ, ನರಕದ ಅತ್ಯಂತ ಕೆಳಸ್ತರದಲ್ಲಿ ಇರುವವರು ಕಪಟವಿಶ್ವಾಸಿಗಳು ಎಂಬ ಕಾರಣದಿಂದ ಅವರು ಈ ಆತಂಕ ವ್ಯಕ್ತ ಪಡಿಸಿದ್ದರು. ಆದರೆ ಅಂತಹ ಆತ್ಮಾವಲೋಕನವು ವಿಶ್ವಾಸಿಯ ಹವ್ಯಾಸವೆಂದೂ, ಆ ಹವ್ಯಾಸ ಇರುವವರೆಗೆ ನೀವು ನೇರ ಮಾರ್ಗದಲ್ಲಿರುತ್ತೀರೆಂದೂ ಪ್ರವಾದಿ(ಸ)ರು ಹಂಝಲ(ರ)ರಿಗೆ ಸಾಂತ್ವನ ಪಡಿಸುವುದನ್ನು ನಾವು ಕಾಣಬಹುದು. ಅದೇ ಸಂಶಯದೊಂದಿಗೆ ಆಗ ಹಾಜರಿದ್ದ ಅಬೂಬಕರ್(ರ) ಮತ್ತು ಉಮರ್(ರ)ರು ಅದಕ್ಕೆ ಸಾಕ್ಷಿಗಳಾಗಿದ್ದಾರೆ.

ವಿಶ್ವಾಸ ಮತ್ತು ಅವಿಶ್ವಾಸ ಹಾಗೂ ಕಪಟ ವಿಶ್ವಾಸದ ಗಡಿರೇಖೆಗಳು ಆತ್ಮವಿಚಾರಣೆಯ ವೇಳೆ ಒಬ್ಬೊಬ್ಬರಿಗೆ ವಿಭಿನ್ನವಾಗಿರುತ್ತದೆ. ಧಾರ್ಮಿಕ ವಿಷಯಗಳೊಂದಿಗೆ ವ್ಯವಹರಿಸುವ ವಿದ್ವಾಂಸರಲ್ಲಿ ಅದರ ಕುರಿತು ಕಟ್ಟುನಿಟ್ಟಾದ ವ್ಯಾಖ್ಯಾನಗಳು ಮತ್ತು ನಿಲುವುಗಳಿರುತ್ತವೆ. ನಾನು ಒಮ್ಮೆಯೂ ಆ ಕ್ಷೇತ್ರವನ್ನು ನಿರ್ವಹಿಸಲು ಪ್ರಯತ್ನಿಸುವುದಿಲ್ಲ. ಅದಕ್ಕೆ ಬೇಕಾದ ಅರ್ಹತೆ ನನಗಿದೆಯೆಂದು ಭಾವಿಸುವುದಿಲ್ಲ. ಇದು ಸಾಮಾಜಿಕ ಮಾಧ್ಯಮದಲ್ಲಿ ತೊಡಗಿಸಿಕೊಂಡಿರುವ ವ್ಯಕ್ತಿಗಳು ತೆಗೆದುಕೊಳ್ಳುವ ನಿಲುವಿನ ಕುರಿತು ಚಿಂತನೆ ಮಾತ್ರ.

ನಾನು ಅರ್ಥಮಾಡಿಕೊಂಡಂತೆ ಇಸ್ಲಾಮಿನ ವ್ಯಾಪ್ತಿ ವಿಶಾಲವಾಗಿದೆ. ಭೂಮಿಯ ಮೇಲಿನ ಪ್ರತಿಯೊಬ್ಬ ಮನುಷ್ಯನು ಮುಸ್ಲಿಮನಾಗಿ ಹುಟ್ಟುತ್ತಾನೆ ಎಂದು ಹೇಳಲಾಗಿದೆ. ಅವನು ಮುಸ್ಲಿಮನಾಗಿಯೇ ಸಾಯುತ್ತಾನೆ. ನಮ್ಮ ಜನನ ಮತ್ತು ಮರಣವು ಸೃಷ್ಟಿಕರ್ತನ ಹಿತಾಸಕ್ತಿಯ ಪ್ರಕಾರ ಸಂಭವಿಸುತ್ತದೆ ಮತ್ತು ಅದು ನಮ್ಮ ನಿಯಂತ್ರಣದಲ್ಲಿಲ್ಲ. ಈ ಎಲ್ಲಾ ಸಂದರ್ಭಗಳಲ್ಲಿ ನಾವು ಮುಸ್ಲಿಮರೇ ಆಗಿದ್ದೇವೆ. ದೇವನಿಗೆ ವಿಧೇಯರಾಗಿ ಅವನ ಪ್ರಕೃತಿಯ ರಚನೆಯ ಪ್ರಕಾರ ಚಲಿಸುವ ಮುಸ್ಲಿಮರು. ಆ ಅರ್ಥದಲ್ಲಿ ಸೂರ್ಯ ಮತ್ತು ಚಂದ್ರ ಎಲ್ಲವೂ ಮುಸ್ಲಿಮ್ ಆಗುತ್ತವೆ.

ಪ್ರತಿ ಮಗುವೂ ಮುಸ್ಲಿಮ್ ಆಗಿ ಜನಿಸುತ್ತದೆ. ಅವರು ಪೋಷಕರು, ಪರಿಸ್ಥಿತಿಗಳು ಅವರನ್ನು ಯಹೂದಿ ಕ್ರಿಶ್ಚಿಯನ್, ಮುಸ್ಲಿಮ್, ಯುಕ್ತಿವಾದಿಗಳೋ, ಕಮ್ಯೂನಿಸ್ಟ್ ಗಳೋ ಆಗಿ ಮಾರ್ಪಡಿಸುತ್ತವೆ ಎಂದು ತಿಳಿದುಕೊಳ್ಳಬಹುದು. ಹುಟ್ಟು ಸಾವಿನ ನಡುವಿನ ನಮ್ಮ ಕರ್ಮಗಳಿಗೆ ನಾವೇ ಜವಾಬ್ದಾರರಾಗಿರುತ್ತೇವೆ ಮತ್ತು ಪರಲೋಕದಲ್ಲಿ ಇಲ್ಲಿನ ಎಲ್ಲಾ ಕರ್ಮಗಳ ಕುರಿತು ಪ್ರಶ್ನಿಸಲಾಗುತ್ತದೆಯೆಂಬ ನಿರೀಕ್ಷೆಯಲ್ಲಿ ಇಲ್ಲಿ ಬದುಕಬೇಕೆಂದು ಹೇಳುವ ಒಂದು ದಾರ್ಶನಿಕತೆಯಾಗಿದೆ ಇಸ್ಲಾಮ್. ಹುಟ್ಟು-ಸಾವಿನ ನಡುವೆ ಮುಸ್ಲಿಮನಾಗಿ ಬದುಕಲು ಸಾಧ್ಯವಾಗುವುದಕ್ಕೆ ಅಲ್ಲಾಹನು ಹೀಗೆ ಆದೇಶಿಸಿರಬಹುದು! “ಸತ್ಯವಿಶ್ವಾಸಿಗಳೇ, ನೀವು ಅಲ್ಲಾಹನನ್ನು ಭಯಪಡಬೇಕಾದ ರೀತಿಯಲ್ಲಿ ಭಯಪಡಿರಿ. ನೀವು ಮುಸ್ಲಿಮರಾಗಿಯಲ್ಲದೆ ಮರಣ ಹೊಂದಬಾರದು.” (3: 102)

ಮುಸ್ಲಿಮ್ ಎಂದರೆ ಯಾರು? ಎಂಬ ಪ್ರಶ್ನೆಗೆ ಹಲವಾರು ಉತ್ತರಗಳು ಲಭಿಸಬಹುದು. ಒಬ್ಬ ಮುಸಲ್ಮಾನನು ಒಳಿತುಗಳು ತುಂಬಿರುವ ಅನೇಕ ಶಾಖೆಗಳನ್ನು ಹೊಂದಿರುವ ಮಹಾ ವೃಕ್ಷವಾಗಿ ಬೆಳೆಯಬೇಕು. ಇದು ಜನರಿಗೆ ನೆರಳಾಗಿ ಮತ್ತು ಉತ್ತಮ ಫಲವಾಗಿ ಉಪಕಾರ ನೀಡುತ್ತದೆ ಎಂದು ಪವಿತ್ರ ಕುರ್‌ಆನ್ ಸಾಕ್ಷಿ ಹೇಳುತ್ತದೆ.

ಯಾವುದಾದರೂ ಒಂದು ಗೆಲ್ಲು ಒಣಗಿ ಹೋಯಿತೆಂದು ನಾವು ಅದನ್ನು ಪರಿಗಣಿಸದಿರುವುದಿಲ್ಲ. ಒಂದು ವೇಳೆ ತಾಯಿ ಬೇರು ಕೊಳೆತು ಹೋದರೂ, ಮರಕ್ಕೇ ಹಾನಿಯಾದರೂ ನಾವು ಆ ವ್ಯಕ್ತಿಯ ಧಾರ್ಮಿಕತೆಯ ಕುರಿತು ತಲೆಕೆಡಿಸಿಕೊಳ್ಳಬೇಕಾಗಿಲ್ಲ. ಮುಸ್ಲಿಮ್ ಕುಟುಂಬದಲ್ಲಿ ಜನಿಸಿದ ಹಲವರು, ತಾವು ಮುಸ್ಲಿಮ್ ಎಂದು ಘೋಷಿಸುವವರೂ ಈ ಸಮುದಾಯದ ಸತ್ವವನ್ನು ತಿಳಿದೋ ತಿಳಿಯದೆಯೋ ಹೊತ್ತು ಕೊಂಡು ಸಾಗುತ್ತಾರೆ. ಅವರ ಬೇಡದ ಕಾರ್ಯಗಳನ್ನು ಧರ್ಮದ ಖರ್ಚಿನಲ್ಲಿ ಬರೆದಿಡಲು ಸಮಾಜವು ಬರೆದಿಡುವಂತೆ ಒಳಿತುಗಳನ್ನು ಅಲ್ಲಾಹನೂ ಬರೆದಿಡುತ್ತಾನೆ.

ಅದರಲ್ಲಿ ಓರ್ವ ಮುಸ್ಲಿಮನಾ ಎಂದು ಯಾರಾದರೂ ಕೇಳಿದರೆ ನಿಮಗೆ ಫರೋವನ ಪ್ರಶ್ನೆ ನೆನಪಿಗೆ ಬರಬೇಕು. ನೀನು ಹೇಳುವ ಈ ಅಲ್ಲಾಹನಲ್ಲಿ ವಿಶ್ವಾಸವಿರಿಸದ ನಮ್ಮ ಪೂರ್ವಜರ ಗತಿಯೇನೆಂದು ಫರೋವ ಕೇಳಿದಾಗ ಪ್ರವಾದಿ ಮೂಸಾ(ಅ)ರು ತೋರಿಸಿದ ವಿವೇಕವು ನಮಗೆ ದಾರಿ ದೀಪವಾಗಬೇಕು, “ಅದರ ಕುರಿತು ಜ್ಞಾನ ನನ್ನ ಸೃಷ್ಟಿಕರ್ತನ ಬಳಿಯಿದೆ” ಎಂದು ಅವರು ಉತ್ತರಿಸಿದ್ದರು.

ಇತರರ ರಕ್ಷೆ- ಶಿಕ್ಷೆಗಳ ಕುರಿತು ಆಲೋಚಿಸಿ ನಾವೇಕೆ ಬೇಸರಪಟ್ಟುಕೊಳ್ಳಬೇಕು ಎಂಬ ಯುಕ್ತಿಯೂ ಇದರಲ್ಲಿದೆ. ಅಂತಹ ಚರ್ಚೆಗಳಿಂದ ದೂರವುಳಿಯುವ ದೃಷ್ಟಾಂತವಾಗಿ ಪವಿತ್ರ ಕುರ್‌ಆನ್ ನಮ್ಮ ಮುಂದಿದೆ.

“ಯಾರ ನಾಲಗೆಯಿಂದಲೂ, ಕೈಗಳಿಂದಲೂ ಜನರು ಸುರಕ್ಷಿತರಾಗಿರುವರೋ ಅವರೇ ನಿಜವಾದ ಮುಸ್ಲಿಮ್.”
“ನೀನು ಆಹಾರ ಸೇವಿಸು. ನಿನಗೆ ಪರಿಚಿತರಿಗೂ, ಇಲ್ಲದವರಿಗೂ ಸಲಾಂ ಹೇಳು. ತನಗೆ ಇಷ್ಟಪಡುವುದನ್ನು ತನ್ನ ಸಹೋದರನಿಗೂ ಇಷ್ಟಪಡುವವರೆಗೆ ಓರ್ವನು ಮುಸ್ಲಿಮನಾಗಲಾರ.”

ಇದು ಪ್ರವಾದಿಯ ವಚನಗಳು. ಮುಸ್ಲಿಮರಾದ ಕೆಲವರಿಗೆ ಸಲಾಮ್ ಹೇಳಬಾರದೆಂದು ಕಲಿಸುವ ಮದ್ರಸಾಗಳು ಇವೆ. ಲಾ ಇಲಾಹ ಇಲ್ಲಲ್ಲಾಹ್ ಮುಹಮ್ಮದ್ ರಸೂಲುಲ್ಲಾ ಎಂದು ಹೇಳುವವರೊಂದಿಗೂ ಇಂಥ ನಿಲುವನ್ನು ಹೊಂದಿದ್ದವರು ಪ್ರವಾದಿವರ್ಯರ(ಸ) ಉಪದೇಶಗಳಿಂದ ಎಷ್ಟು ದೂರ ಸರಿದಿದ್ದಾರೆಂದು ಊಹಿಸಬಹುದು.

“ತನ್ನ ನೆರೆಮನೆಯವನು ಹಸಿದಿರು ವಾಗ ಹೊಟ್ಟೆ ತುಂಬಾ ಉಣ್ಣುವವನು ನನ್ನಲ್ಲಿ ಸೇರಿದವನಲ್ಲ.”
“ನಾವು ನಮಾಝ್ ಮಾಡಿದಂತೆ ನಮಾಝ್ ಮಾಡಿ, ನಮ್ಮ ಕಿಬ್ಲಾವನ್ನು ಒಪ್ಪಿಕೊಂಡು ಮತ್ತು ನಾವು ದಿಬ್ಹ ಮಾಡಿದ್ದನ್ನು ಸೇವಿಸುವವನೇ ಮುಸ್ಲಿಮ್.”
“ನೀವು ನಿಮ್ಮ ಮುಖಗಳನ್ನು ಪೂರ್ವ ಅಥವಾ ಪಶ್ಚಿಮ ದಿಕ್ಕಿಗೆ ಮಾಡಿಕೊಳ್ಳುವುದು ಧರ್ಮಶೀಲತೆಯಲ್ಲ. ನಿಜವಾಗಿ ಒಬ್ಬರು ಅಲ್ಲಾಹನನ್ನು, ನಿರ್ಣಾಯಕ ದಿನವನ್ನು, ದೇವಚರರನ್ನೂ ಅಲ್ಲಾಹನು ಅವತೀರ್ಣಗೊಳಿಸಿದ ಗ್ರಂಥವನ್ನು, ಅವನ ಸಂದೇಶವಾಹಕರನ್ನು ಹೃತ್ಫೂರ್ವಕವಾಗಿ ಒಪ್ಪಿಕೊಳ್ಳುವುದು, ಅಲ್ಲಾಹನ ಸಂಪ್ರೀತಿಗಾಗಿ ತನ್ನ ಮನಮೆಚ್ಚುಗೆಯ ಸಂಪತ್ತನ್ನು ಬಂಧುಗಳಿಗೂ ಅನಾಥರಿಗೂ ನಿರ್ಗತಿಕರಿಗೂ ಪ್ರಯಾಣಿಕರಿಗೂ ಸಹಾಯಾರ್ಥಿಗಳಿಗೂ ದಾಸ್ಯ ವಿಮೋಚನೆಗಾಗಿಯೂ ವ್ಯಯಿಸುವುದು, ನಮಾಝನ್ನು ಸಂಸ್ಥಾಪಿಸುವುದು, ಝಕಾತ್ ನೀಡುವುದು, ವಾಗ್ದಾನ ಮಾಡಿದರೆ ಪೂರೈಸುವುದೂ, ಕಷ್ಟ ಕಾರ್ಪಣ್ಯಗಳಲ್ಲಿ ಸಹನೆಯಿಂದಿರುವುದು ಧರ್ಮಶೀಲತೆಯಾಗಿರುತ್ತದೆ. ಇವರೇ ಸತ್ಯಸಂಧರು ಮತ್ತು ಧರ್ಮನಿಷ್ಠರು.” (2: 177)

ಒಂದಲ್ಲ ಒಂದು ಒಳ್ಳೆಯದನ್ನು ಹೀರಿಕೊಳ್ಳುವ ವಿಶ್ವಾಸಿಗಳಿಂದ ನೀವು ಯಾರನ್ನು ಬಿಡುತ್ತೀರಿ? ಆ ಕೆಲಸವನ್ನು ಅಲ್ಲಾಹನು ನಮಗೆ ವಹಿಸಿಕೊಟ್ಟಿಲ್ಲ. ಸ್ವತಃ ತಾನು ಮುಸ್ಲಿಮನಲ್ಲವೆಂದು ಘೋಷಿಸಿದರೆ ಅದು ಆತನ ಇಷ್ಟ. ನಾವು ಹಸ್ತಕ್ಷೇಪ ಮಾಡುವ ಅಗತ್ಯವಿಲ್ಲ.

ಇಸ್ಲಾಮ್ ಧರ್ಮವು ಹೆತ್ತವರೊಂದಿಗಿನ ಸದ್ವರ್ತನೆ, ಸಾಮಾಜಿಕ ಮರ್ಯಾದೆಗಳಂತಹ ವಿಷಯಗಳನ್ನು ಅಳವಡಿಸಿಕೊಳ್ಳಲು ಕರೆ ನೀಡುತ್ತದೆ. ಸ್ವರ್ಗದ ಕುರಿತು ಪವಿತ್ರ ಕುರ್‌ಆನ್ ಪರಿಚಯ ಪಡಿಸುವ ವಿಷಯಗಳಲ್ಲಿ ನನಗೆ ಅತ್ಯಾಕರ್ಷಕವಾದದ್ದು ಅಲ್ಲಿ ಶಾಂತಿಯ ಕುರಿತಾಗಿದೆ.
“ಅಲ್ಲಿ ಅವರು ಯಾವುದೇ ನಿರರ್ಥಕ ಅಥವಾ ಪಾಪದ ಮಾತುಗಳನ್ನು ಕೇಳಲಾರರು.” (56: 25-26)

ನ್ಯಾಯವನ್ನು ಅನುಭವಿಸಲು ಸಾಧ್ಯವಾಗುವುದೇ ಶಾಂತಿ ದೊರೆಯುವ ಮಾರ್ಗ ಎಂದು ನಾನು ಅರ್ಥಮಾಡಿ ಕೊಂಡಿದ್ದೇನೆ. ಹೀಗಾಗಿ, ಸಂಪೂರ್ಣ ನ್ಯಾಯ ಮತ್ತು ಶಾಂತಿ ಸಮಾಧಾನದ ಕನಸು ಕಾಣುವ ಮುಸ್ಲಿಮ್ ಸೃಷ್ಟಿಕರ್ತನ ಸೂಚನೆಗಳನ್ನು ಸಂತೋಷದಿಂದ ಪಾಲಿಸುವ ಮೂಲಕ ಈ ಜಗತ್ತಿನಲ್ಲಿ ತೃಪ್ತಿಯನ್ನು ಕಂಡುಕೊಳ್ಳುತ್ತಾನೆ.

ಈ ಲೇಖನದ ಆರಂಭದಲ್ಲಿ ಉಲ್ಲೇಖಿಸಲಾದ ಹಂಝಲಾರ ಕರುಳು ಹಿಂಡುವ ಕಿರುಚಾಟವು ಈ ಸ್ಥಿತಿಯಿಂದ ಸ್ವಲ್ಪ ಹಿಂದೆ ಸರಿಯುವ ಆತಂಕದಿಂದ ಉಂಟಾಗಿದೆ. ಈ ತೃಪ್ತಿಯ ಮಟ್ಟವು ಮುಸ್ಲಿಮರ ನಡುವೆ ವಿಭಿನ್ನವಾಗಿರುತ್ತದೆ. ಆದ್ದರಿಂದಲೇ ಮುಅï‌ಮಿನ್, ಮುಹ್ಸಿನ್, ಮುಸ್ಲಿಮ್ ಹೀಗೆ ಹಲವು ವಿಶೇಷಣಗಳ ಮೂಲಕ ಮುಸ್ಲಿಮರನ್ನು ಕುರ್‌ಆನ್ ಹೇಳುತ್ತದೆ.
“(ಎದುರೆದುರೆ) ಜನರನ್ನು ಮೂದಲಿಸುವ ಮತ್ತು (ಬೆನ್ನ ಹಿಂದೆ) ದೂಷಿಸುವ ಅಭ್ಯಾಸವಿರುವ ಪ್ರತಿಯೊಬ್ಬನಿಗೂ ವಿನಾಶವಿದೆ.” (104: 1)

“ಸತ್ಯವಿಶ್ವಾಸಿಗಳೇ, ಪುರುಷರು ಇತರ ಪುರುಷರನ್ನು ಅಪಹಾಸ್ಯ ಮಾಡಬಾರದು. ಅವರು ಇವರಿಗಿಂತ ಉತ್ತಮರಿರಲೂ ಬಹುದು ಮತ್ತು ಸ್ತ್ರೀಯರು ಇತರ ಸ್ತ್ರೀಯರನ್ನೂ ಅಪಹಾಸ್ಯ ಮಾಡಬಾರದು. ಅವರು ಇವರಿಗಿಂತ ಉತ್ತಮರಿರಲೂಬಹುದು. ಪರಸ್ಪರ ನಿಂದಿಸಬೇಡಿರಿ ಮತ್ತು ಒಬ್ಬರು ಇನ್ನೊಬ್ಬರನ್ನು ಅಡ್ಡ ಹೆಸರಿನಿಂದ ಕರೆಯಬೇಡಿರಿ. ಸತ್ಯವಿಶ್ವಾಸ ಸ್ವೀಕರಿಸಿದ ಬಳಿಕ ಕರ್ಮಭ್ರಷ್ಟತೆಯಲ್ಲಿ ಹೆಸರುಗಳಿಸುವುದು ಬಹಳ ಕೆಟ್ಟರು. (ಪವಿತ್ರ ಕುರ್‌ಆನ್: 49: 11-12)

“ಅವರು ಖರ್ಚು ಮಾಡುವಾಗ ದುಂದುವೆಚ್ಚವನ್ನು ಮಾಡುವುದಿಲ್ಲ. ಜಿಪುಣತೆ ತೋರಿಸುವುದಿಲ್ಲ. ಅವರ ಖರ್ಚು ಇವೆರಡರ ನಡುವೆ ಸಮತೂಕ ದಲ್ಲಿ ನಿಂತಿರುತ್ತದೆ.” (25: 67)

“ರಹ್ಮಾನನ ದಾಸರು ಭೂಮಿಯ ಮೇಲೆ ಸೌಮ್ಯನಡಿಗೆ ನಡೆಯುತ್ತಾರೆ. ತಿಳಿಗೇಡಿಗಳು ವ್ಯರ್ಥ ತಕರಾರಿಗೆ ಬಂದಾಗ ನಿಮಗೆ ಸಲಾಂ ಎನ್ನುತ್ತಾರೆ.” (25: 67)

ನೋಡಿ, ಇಸ್ಲಾಮಿನ ಮೌಲ್ಯಗಳು ಅದೆಷ್ಟು ಉದಾತ್ತವಾಗಿದೆ. ನೀವು ಓರ್ವರ ವೇಷ, ರೂಪ, ಭಾಷಣ, ಬರಹವನ್ನು ನೋಡಿ ಅವರಿಗೆ ಅಂಕ ನೀಡುವ ಬದಲು ಮೇಲೆ ಹೇಳಿರುವ ಹಲವಾರು ಒಳಿತುಗಳಲ್ಲಿ ಅವರು ನಮಗಿಂತಲೂ ಮೇಲೆ ಇರುವ ಸಾಧ್ಯತೆಯಿದೆ. ಆದ್ದರಿಂದ ನಾವು ಕಾಫಿರ್, ಮುನಾಫಿಕ್ ಎಂಬ ಪದದೊಂದಿಗೆ ಅವರ ಹಿಂದೆ ಏಕೆ ನಡೆಯಬೇಕು? ಇಸ್ಲಾಮ್ ಧರ್ಮದ ಶಾಂತಿ ಸಮಾಧಾನ ಹಾಗೂ ಪರಿಮಳವನ್ನು ವರ್ಧಿಸುವಂತಹ ತ್ಯಾಗ ಪರಿಶ್ರಮಗಳಿಗೆ ಪರಸ್ಪರ ಕ್ಷಮೆ ಹಾಗೂ ಸಹನೆಯಿಂದ ಮುಸ್ಲಿಮರು ಪರಸ್ಪರ ಉಪದೇಶಿಸು ವವರಾಗಬೇಕು.

ಪ್ರವಾದಿ(ಸ) ಹೇಳಿದರು: “ಓರ್ವ ವ್ಯಭಿಚಾರಿಯು ಅವನು ವಿಶ್ವಾಸಿಯಾಗಿರುವಾಗ ವ್ಯಭಿಚರಿಸಲಾರ. ಓರ್ವ ಕಳ್ಳನೂ ವಿಶ್ವಾಸಿಯಾಗಿರುವಾಗ ಕಳ್ಳತನ ಮಾಡಲಾರ. ಓರ್ವ ಮದ್ಯಪಾನಿಯೂ ಅವನು ವಿಶ್ವಾಸಿಯಾಗಿರುವಾಗ ಮದ್ಯಪಾನ ಮಾಡಲಾರ.” (ಬುಖಾರಿ, ಮುಸ್ಲಿಮ್)

ವಿವಿಧ ದೃಷ್ಟಿಕೋನದವರೊಂದಿಗೆ ಚರ್ಚಿಸುವಾಗ ನಾವು ನಿರೀಕ್ಷಿಸಿರುವ ಇಸ್ಲಾಮೀ ಪರಿಸ್ಥಿತಿಯಲ್ಲಿ ಇನ್ನೊಬ್ಬರಿಲ್ಲ ಎಂದು ಅನಿಸಿದರೆ ಆ ವೃತ್ತದಿಂದ ಆತ ಹೊರಗೆ ನಿಂತಿದ್ದಾನೆ ಎಂದೇ ಓರ್ವನು ಭಾವಿಸಬೇಕು. ನಮಗೆ ನಮ್ಮ ಈಮಾನ್, ಇಖ್ಲಾಸ್, ಅನ್ನು ಉತ್ತಮಪಡಿಸಿ ಮೌಲ್ಯಯುತವಾದ, ಸುಂದರವಾದ ಇಸ್ಲಾಮಿನೆಡೆಗೆ ಪ್ರವೇಶಿಸಲು ಜಿಹಾದ್ ಮಾಡಬೇಕಾಗಿರುವಾಗ, ಇತರರೂ ಅದನ್ನು ಮಾಡಲು ಕಾದಿದ್ದಾರೆಂದೇ ಇಟ್ಟುಕೊಳ್ಳಿ. ಇಸ್ಲಾಮ್ ಎಂಬ ಮೌಲ್ಯಯುತ ವ್ಯವಸ್ಥೆಯ ವಿವಿಧ ಹಂತಗಳಲ್ಲಿರುವವರು ಪರಸ್ಪರ ವಿನಯದಿಂದ ಸಂವಾದ ಮಾಡಿದರೆ ಅದೇ ಒಂದು ಉತ್ತಮ ಮಾದರಿಯಾಗಿರುತ್ತದೆ.
“ಮಾನವ ಸಮುದಾಯಕ್ಕಾಗಿ ಎದ್ದೇಳಿಸಲ್ಪಟ್ಟ ಉತ್ತಮ ಸಮುದಾಯವಾಗಿದೆ.” (3: 110)