ಸಂದಿಗ್ಧ ಪರಿಸ್ಥಿತಿಯಲ್ಲಿ ಐಕ್ಯತೆ

0
477

ಸನ್ಮಾರ್ಗ ವಾರ್ತೆ

ಸಂಗ್ರಹ: ಎನ್.ಎಂ. ಪಡೀಲ್

ಜಾಬಿರುಬ್ನು ಅಬ್ದುಲ್ಲಾ(ರ) ಮತ್ತು ಅಬೂ ತ್ವಲ್ಹತುಬ್ನು ಸಹ್‌ಲಿಲ್ ಅನ್ಸಾರಿ(ರ)ರು ಹೇಳುತ್ತಾರೆ, ಪ್ರವಾದಿ(ಸ)ರು ಹೀಗೆ ಹೇಳಿದರು: “ಓರ್ವ ಮುಸ್ಲಿಮನ ಸ್ವಾಭಿಮಾನಕ್ಕೆ ಧಕ್ಕೆವುಂಟು ಮಾಡಿ ಅವನ ಪಾವಿತ್ರ್ಯತೆಗೆ ಹಾನಿಯುಂಟಾಗುತ್ತಿರುವ ಒಂದು ಸ್ಥಳದಲ್ಲಿ (ಅದನ್ನು ತಡೆಯಲು ಸಾಧ್ಯವಿರುವ ವ್ಯಕ್ತಿ ಮಧ್ಯಪ್ರವೇಶಿಸದೆ) ಆತನಿಗೆ ಸಹಾಯ ಮಾಡದಿದ್ದ ವ್ಯಕ್ತಿಗೆ, ಅಲ್ಲಾಹನ ಸಹಾಯ ಅಗತ್ಯವಿರುವಂತಹ ಸಂದರ್ಭದಲ್ಲಿ ಅಲ್ಲಾಹನು ಅವನ ಕೈಬಿಡುತ್ತಾನೆ. ಓರ್ವ ಮುಸ್ಲಿಮನ ಘನತೆಗೆ ಅಡ್ಡಿಯುಂಟಾಗುವ ಸ್ಥಳದಲ್ಲಿ ಓರ್ವನು ಅವನಿಗೆ ಸಹಾಯ ಮಾಡಿದರೆ, ಸಹಾಯ ಮಾಡಿದ ವ್ಯಕ್ತಿಯು ಅಲ್ಲಾಹನ ಸಹಾಯವನ್ನು ಬಯಸುವಾಗ ಅಲ್ಲಾಹನು ಅವನಿಗೆ ಸಹಾಯ ಮಾಡದಿರಲಾರ.

ಮುಸ್ಲಿಮರು ಪರಸ್ಪರ ಆದರ್ಶ ಸಹೋದರರು ಎಂಬುದರೊಂದಿಗೆ ಆಪ್ತ ಮಿತ್ರರೂ ಆಗಿದ್ದು ಒಟ್ಟಿಗೆ ಎರಡು ಸಂಬಂಧವನ್ನು ಪ್ರಾಯೋಗಿಕವಾಗಿ ಜಾರಿಗೊಳಿಸುವಾಗ ಅಲ್ಲಾಹನ ಪ್ರೀತಿ ಕಟಾಕ್ಷ ವುಂಟಾಗುತ್ತದೆಯೆಂಬುದು ಈ ಹದೀಸ್‌ನ ಕೇಂದ್ರ ವಿಷಯ.

ಸತ್ಯವಿಶ್ವಾಸಿಗಳು ಒಂದೇ ಆದರ್ಶ ಮತ್ತು ವಿಶ್ವಾಸವನ್ನು ಹೊಂದಿರುವವರು ಆಗಿರುವುದರಿಂದ ತಮ್ಮ ಸಹೋದರರ ರಕ್ತ, ಸ್ವಾಭಿಮಾನ, ಸಂಪತ್ತು ಮೊದಲಾದವುಗಳನ್ನು ರಕ್ಷಿಸಲು ಕಟಿಬದ್ಧರಾಗಿರಬೇಕು. ಅದರ ವಿರುದ್ಧ ಏಳುವ ಎಲ್ಲಾ ಸವಾಲುಗಳ ವಿರುದ್ಧವೂ ಹೆಮ್ಮೆಯಿಂದ ಪ್ರತಿಕ್ರಿಯಿಸಬೇಕು. ಇದು ಇಸ್ಲಾಮೀ ಸಹೋದರತ್ವದ ಮೂಲಭೂತ ಅಂಶವಾಗಿದೆ. ಇಸ್ಲಾಮೀ ಸಮಾಜದೊಂದಿಗಿನ ಹಿತಾಕಾಂಕ್ಷೆಯ ಭಾಗವಾಗಿದೆ.

ಉಮರ್(ರ)ರು ಸೇನಾ ನಾಯಕರಿಗೆ ಕಳುಹಿಸಿದ ಪತ್ರಗಳಲ್ಲಿ `ನಿಮ್ಮ ಶತ್ರುಗಳಿಗಿಂತ ನಿಮ್ಮ ವಿಷಯದಲ್ಲಿ ನಿಮ್ಮ ಪಾಪಗಳ ಕುರಿತು ನಾನು ಭಯ ಪಡುತ್ತೇನೆ’ ಎಂದು ಹೇಳಿರುವುದು ಕಂಡು ಬರುತ್ತದೆ. ಪಾಪಗಳು ಪರಾಜಯಕ್ಕೂ, ಶತ್ರುಗಳ ವಿಜಯಕ್ಕೂ ಕಾರಣವಾಗಬಹುದು. ಶತ್ರುಗಳೊಂದಿಗೆ ಹೋರಾಡುತ್ತಿರುವ ಸಂದರ್ಭದಲ್ಲಿ ಬೆಂಬಲ ದೊರೆಯಬೇಕಾದ ಸೈನಿಕರಿಗೆ ಧಾರ್ಮಿಕ ಹಾಗೂ ಭೌತಿಕ ಬೆಂಬಲ ದೊರೆಯದೆ ಹೋದರೆ, ಅದು ಶತ್ರುಗಳಿಗೆ ಸಹಾಯ ಮಾಡಿದಂತೆ ಎಂದು ಉಮರ್(ರ)ರ ಪತ್ರದ ವಿವರಣೆ.

ಇಸ್ಲಾಮ್ ಮತ್ತು ಮುಸ್ಲಿಮರ ಸಂದಿಗ್ಧ ಪರಿಸ್ಥಿತಿಗಳನ್ನು ಎದುರಿಸುವ ಸಂದರ್ಭದಲ್ಲಿ ಪರಮಾವಧಿ ಐಕ್ಯತೆ ಪ್ರದರ್ಶಿಸಬೇಕು. ನಿರ್ಣಾಯಕ ಹಂತಗಳಲ್ಲಿ ವೈಯಕ್ತಿಕವಾಗಿ ಮತ್ತು ಸಾಮೂಹಿಕವಾಗಿ ಹೇಗೆ ವ್ಯವಹರಿಸಲು ಸಾಧ್ಯ ಎಂಬ ಕುರಿತು ಯೋಚಿಸಬೇಕು.
“ಹೋರಾಟ ಮಾಡದೆ ಅಥವಾ ಹೋರಾಡಬೇಕೆಂಬ ಇಚ್ಛೆ ಇಲ್ಲದೆ ಮರಣ ಹೊಂದುವವರು ಕಪಟತೆಯ ಅಂಶದೊಂದಿಗೆ ಮರಣ ಹೊಂದುತ್ತಾರೆ” (ಮುಸ್ಲಿಮ್) ಎಂಬ ಪ್ರವಾದಿ ವಚನವು ಸತ್ಯವಿಶ್ವಾಸಿಗಳು ಯಾವಾಗಲೂ ಅನ್ಯಾಯದ ವಿರುದ್ಧ ಹೋರಾಡಲು ಉತ್ಸುಕರಾಗಿರಬೇಕೆಂದು ಕಲಿಸುತ್ತದೆ. ಯುದ್ಧದ ಪರಿಸ್ಥಿತಿಯಿಲ್ಲದಿದ್ದರೂ ಎಲ್ಲಾದರೂ ತನ್ನ ಸಹಾಯ, ಬೆಂಬಲ, ಪ್ರಾರ್ಥನೆ ಅಗತ್ಯವಿದೆಯೇ ಎಂಬ ಕಾಳಜಿ ನಮ್ಮ ಸಹಜ ಗುಣವಾಗಿರಬೇಕು.

ಸಾವಿರಾರು ಮಕ್ಕಳು, ಮಹಿಳೆಯರು, ಅಮಾಯಕರು ಗಾಝಾದಲ್ಲಿ ಬಾಂಬ್ ದಾಳಿಗೆ ಬಲಿಯಾಗುತ್ತಿರುವಾಗ, ನಾವು ಅವರಿಗೆ ಯಾವುದೇ ಸಹಾಯ ಮಾಡದೆ ವಸಾಹತುಶಾಹಿ ಶಕ್ತಿಗಳಿಗೆ ಬಿಟ್ಟು ಬಿಡುವುದಲ್ಲ. ಪ್ರವಾದಿ(ಸ)ರ ವಚನದ ಪ್ರಕಾರ, ಕುದ್ಸ್ ನ ವಿಮೋಚನೆಯು ನಿರಂತರ ಪ್ರಕ್ರಿಯೆಯಾಗಿರುವ ಕಾರಣ ಭಾವೀ ತಲೆಮಾರನ್ನು ಅದರ ಕುರಿತು ಪ್ರಜ್ಞಾವಂತರಾಗಿಸುವುದು ಕೂಡ ಐಕ್ಯತೆಯ ಭಾಗವೇ ಆಗಿದೆ.

ಎಲ್ಲೆಡೆಯೂ ಮುಸಲ್ಮಾನರ ಪ್ರಾಣ, ಮಾನ, ಪಾವಿತ್ರ್ಯವು ಚಿಂದಿಯಾಗುತ್ತಿರುವ ಸಂದರ್ಭದಲ್ಲಿ ಇಸ್ಲಾಮೋಫೋಬಿಯಾದ ಹೆಸರಿನಲ್ಲಿ ಎಲ್ಲೆಡೆಯೂ ದೌರ್ಜನ್ಯಗಳು ತಾಂಡವವಾಡುತ್ತಿರುವಾಗ ಜಾತಿಯ ಹೆಸರಿನಲ್ಲಿ ಅನ್ಯಾಯಗಳು ಮೇರೆ ಮೀರಿರುವಾಗ ಅದರ ಕುರಿತು ಸ್ವಲ್ಪವೂ ಆತಂಕ ಪಡದೇ ನಾನು, ನನ್ನನ್ನು ಕಟ್ಟಿಕೊಂಡವಳು ಮತ್ತು ಮಕ್ಕಳು ಎಂಬ ಸ್ವಾರ್ಥದಿಂದ ಮುಂದೆ ಸಾಗಲು ಓರ್ವ ಸತ್ಯವಿಶ್ವಾಸಿಗೆ ಖಂಡಿತಾ ಸಾಧ್ಯವಿಲ್ಲ. ಹಾಗಾದರೆ ವೈಯಕ್ತಿಕವಾಗಿ ಹಾಗೂ ಸಾಮೂಹಿಕವಾಗಿ ನಾವು ದೌರ್ಜನ್ಯಕ್ಕೊಳಗಾಗುವಾಗ ಅಲ್ಲಾಹನು ನಮ್ಮನ್ನೂ ಕೈ ಬಿಡುವನು.
ಅವನ ಸಹಾಯ ನಮಗೆ ದೊರೆಯುವುದಿಲ್ಲ.

ಅದೇವೇಳೆ ದೌರ್ಜನ್ಯಕ್ಕೊಳಗಾದ ಸಹೋದರನ ಅಥವಾ ಸಮೂಹದ ಅಭಿಮಾನವನ್ನು ಸಂರಕ್ಷಿಸಲು, ಪಾವಿತ್ರ್ಯತೆಯನ್ನು ಕಾಪಾಡಲು ಸಾಧ್ಯವಾಗುವ ರೀತಿಯಲ್ಲಿ ಪ್ರತಿಯೊಬ್ಬರೂ ಪ್ರಯತ್ನಿಸಿದರೆ, ಅಲ್ಲಾಹನು ತಕ್ಕ ಸಮಯದಲ್ಲಿ, ತಕ್ಕುದಾದ ರೀತಿಯಲ್ಲಿ ನಮಗೂ ಸಹಾಯ ಮಾಡುವನು.

ವಿಶ್ವದ ಯಾವುದೇ ಭಾಗದಿಂದಲೂ ನಿರ್ವಹಿಸುವ ಸಾಧ್ಯವಿರುವ ನಿಷ್ಕಳಂಕವಾದ ಪ್ರಾರ್ಥನೆ ಮತ್ತು ಹಿತಾಕಾಂಕ್ಷೆಯು ನಾವು ಈಗ ಅವರಿಗೆ ನೀಡಬಹುದಾದ ಸಹಾಯ. ಗಾಝಾದ ಹೋರಾಟಗಾರರನ್ನು ಶತ್ರುಗಳಿಗೊಪ್ಪಿಸಿ, ನಿರ್ಲಿಪ್ತರಾಗಿರುವ ಎಲ್ಲರಿಗೂ ಈ ಹದೀಸ್ ಎಚ್ಚರಿಕೆಯಾಗಿದೆ.