ಫೆಲೆಸ್ತೀನ್ ಪರ ರ‍್ಯಾಲಿಗೆ ಬಿಜೆಪಿ ವಿರೋಧ ಏಕೆ?

0
432

✍️ ಏ.ಕೆ.ಕೆ.

ಫೆಲೆಸ್ತೀನ್ ಅಂದ್ರೆ ಯಾಕಿಷ್ಟು ಅಸಹನೆ? ಈ ದೇಶಕ್ಕೆ ಅವರು ಏನು ತೊಂದರೆ ಮಾಡಿದ್ದಾರೆ? ಭಾರತ ಸರಕಾರ ಅವರ ಪರವಾಗಿದೆ. ದ್ವಿರಾಷ್ಟ್ರ ಪರಿಹಾರಕ್ಕೆ ಮೋದಿ ಸರ್ಕಾರ ಸೆ. 12 ರಂದು ವಿಶ್ವಸಂಸ್ಥೆಯಲ್ಲಿ ಮತ ಚಲಾಯಿಸಿದೆ.

ಇದರ ಹೊರತಾಗಿಯೂ ಮೋದಿ ಸರಕಾರ ಗಾಝಾದ ಪರ ವಿಶ್ವದ ಬೇರೆ ಬೇರೆ ವೇದಿಕೆಗಳಲ್ಲಿ ಬೆಂಬಲ ಸೂಚಿಸಿದೆ. ಫೆಲೆಸ್ತೀನ್ ಗೆ ಭಾರತದೊಂದಿಗೆ ಐತಿಹಾಸಿಕವಾಗಿ ಹತ್ತಿರದ ಸಂಬಂಧ ಇದೆ. ಯಾಸಿರ್ ಅರಫಾತ್ ಅವರು ಭಾರತಕ್ಕೆ ಒಂದಕ್ಕಿಂತ ಹೆಚ್ಚು ಬಾರಿ ಭೇಟಿ ಕೊಟ್ಟಿದ್ದಾರೆ. ನೆಹರು ಅವರಿಂದ ತೊಡಗಿ ವಾಜಪೇಯಿ ವರೆಗೆ ಮತ್ತು ಈಗಿನ ನರೇಂದ್ರ ಮೋದಿಯವರೆಗೆ ಫೆಲೆಸ್ತೀನ್ ಅನ್ನು ವೈರಿಯಾಗಿ ಕಂಡದ್ದೆ ಇಲ್ಲ. ಫೆಲೆಸ್ತೀನ್ ಪರ ವಾಜಪೇಯಿ ಅವರು ಅತ್ಯಂತ ಬಲವಾಗಿ ಮಾತಾಡಿದ್ದೂ ಈ ಹಿಂದೆ ನಡೆದಿದೆ.

ಇಷ್ಟೆಲ್ಲ ಇದ್ದ ಬಳಿಕವೂ ಪ್ರಧಾನಿ ನರೇಂದ್ರ ಮೋದಿಯವರ ಬೆಂಬಲಿಗರಾಗಿ ಗುರುತಿಸಿಕೊಂಡಿರುವ ಒಂದು ಗುಂಪು ಪದೇಪದೇ ಫೆಲಸ್ತೀನಿ ವಿರೋಧಿಗಳಂತೆ ನಡಕೊಳ್ಳುತ್ತಿರುವುದು ಏಕೆ? ಫೆಲೆ ಸ್ತೀನಿನ ಪರ ಪ್ರತಿಭಟನೆ ನಡೆಸಬಾರದು, ರಾಲಿ ನಡೆಸಬಾರದು, ಹೇಳಿಕೆ ನೀಡಬಾರದು, ಸೋಶಿಯಲ್ ಮೀಡಿಯಾದಲ್ಲಿ ಬರೆಯಬಾರದು ಎಂಬಂತೆ ಈ ಗುಂಪು ಬದುಕುತ್ತಿರುವುದು ಏಕೆ? ಫೆಲೆಸ್ತೀನಿ ಪರ ಪ್ರತಿಭಟನೆಯನ್ನು ದೇಶದ್ರೋಹದಂತೆ ಕಾಣುವುದು ಏಕೆ? ಅಮೆರಿಕ ಬ್ರಿಟನ್ನು ಫ್ರಾನ್ಸ್ ಸಹಿತ ಜಗತ್ತಿನ ಹೆಚ್ಚಿನ ಎಲ್ಲಾ ಕಡೆ ಫೆಲಸ್ತೀನಿ ಪರ ರಾಲಿಗಳು ನಡೆಯುತ್ತದೆ. ಪ್ರತಿಭಟನೆಗಳು ಆಗುತ್ತದೆ. ಭಾಷಣಗಳು ನಡೆಯುತ್ತದೆ. ಸ್ವತಃ ಇಸ್ರೇಲಿನಲ್ಲಿಯೇ ಯುದ್ಧವನ್ನು ವಿರೋಧಿಸಿ ಪ್ರತಿಭಟನೆಗಳು, ರ್ಯಾಲಿಗಳು ನಡೆಯುತ್ತದೆ. ಹೀಗಿರುವಾಗ ಐತಿಹಾಸಿಕವಾಗಿ ಫೆಲಸ್ತೀನ್ ಜನರ ಹಕ್ಕುಗಳ ಪರ ನಿಂತ ಭಾರತದಲ್ಲಿ ವಿರೋಧ ವ್ಯಕ್ತವಾಗುತ್ತಿರುವುದು ಏಕೆ? ಪ್ರತಿಭಟನೆಯನ್ನು ಪ್ರಭುತ್ವವೇ ದಮನಿಸುವುದಕ್ಕೆ ಹೊರಡುತ್ತಿರುವುದು ಏಕೆ?

ಪಕ್ಕದ ಕೇರಳದ ಕುಂಬಳೆ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಮೊನ್ನೆ ನಡೆದ ಶಾಲಾ ಕಲೋತ್ಸವದಲ್ಲಿ ವಿದ್ಯಾರ್ಥಿಗಳು ಫೆಲೆಸ್ತೀನ್ ಪರ ಮೂಕಾಭಿನಯ ಪ್ರಹಸನ ನಡೆಸಿದರು. ಅಕ್ಟೋಬರ್ ಮೂರರಂದು ನಡೆದ ಈ ಈ ಸ್ಕಿಟ್ ಅನ್ನು ಶಿಕ್ಷಕರು ತಡೆದರು. ಸ್ಕಿಟ್ ನಡೆಯುತ್ತಿರುವಾಗಲೇ ವೇದಿಕೆಯ ಪರದೆಯನ್ನು ಇಳಿಬಿಟ್ಟರು. ಇದರಿಂದ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ನಡುವೆ ಮಾತಿನ ಚಕಮಕಿ ನಡೆಯಿತು. ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು ಬಳಿಕ ಶಿಕ್ಷಕ ರಕ್ಷಕರ ಸಂಘದ ಸಭೆ ನಡೆಯಿತು. ಅಕ್ಟೋಬರ್ ಆರು ಸೋಮವಾರದಂದು ಕಲೋತ್ಸವವನ್ನು ಮುಂದುವರಿಸಬೇಕು ಎಂದು ಅದರಲ್ಲಿ ನಿರ್ಧರಿಸಲಾಯಿತು. ಈ ಘಟನೆಯ ಬಗ್ಗೆ ತನಿಖೆ ನಡೆಸುವುದಕ್ಕೆ ರಾಜ್ಯ ಶಿಕ್ಷಣ ಸಚಿವ ವಿ. ಶಿವನ್ ಕುಟ್ಟಿ ಆದೇಶ ನೀಡಿದರು.

ಇದೀಗ ಸೆಪ್ಟೆಂಬರ್ 6 ಸೋಮವಾರದಂದು ವಿದ್ಯಾರ್ಥಿಗಳು ಮರಳಿ ಫೆಲಸ್ತೀನ್ ಗೆ ಬೆಂಬಲ ಸಾರುವ ಮೂಕಾಭಿನಯ ಪ್ರಹಸನ ಪ್ರದರ್ಶಿಸಿದ್ದಾರೆ. ಇದಕ್ಕೆ ಅನುಕೂಲ ಮಾಡಿಕೊಡಬೇಕೆಂದು ಸ್ವತಃ ಶಿಕ್ಷಣ ಸಚಿವರೇ ಆದೇಶ ನೀಡಿದ್ದರು. ಆರಂಭದಲ್ಲಿ ಮೂಕಾಭಿನಯವನ್ನು ತಡೆದ ಪ್ರದೀಪ ಕುಮಾರ್ ಮತ್ತು ಸುಪ್ರೀತ್ ಎಂಬ ಅಧ್ಯಾಪಕರನ್ನು ಈ ಸಂದರ್ಭದಲ್ಲಿ ಹೊರಗಿಡಲಾಗಿತ್ತು.

ವಿಶೇಷ ಏನಂದ್ರೆ ಈ ಮೂಕಾಭಿನಯವನ್ನು ಮರಳಿ ಪ್ರದರ್ಶನ ಮಾಡಿರುವುದನ್ನು ವಿರೋಧಿಸಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಸೆಕೆಂಡರಿ ಶಾಲೆಗೆ ಮಾರ್ಚ್ ನಡೆಸಿದ್ದಾರೆ. ಇದನ್ನು ಶಾಲಾ ಮುಖ್ಯ ದ್ವಾರದಲ್ಲಿ ಪೊಲೀಸರು ತಡೆದಿದ್ದಾರೆ.

ಪ್ರಶ್ನೆ ಇರೋದು ಇಲ್ಲೇ. ಫೆಲೆಸ್ತೀನ್ ಪರ ರ‍್ಯಾಲಿ ನಡೆಸುವುದರಿಂದ ಮತ್ತು ಮಕ್ಕಳು ಕಲೆಯ ಮೂಲಕ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುವುದರಿಂದ ಬಿಜೆಪಿಗೆ ಏನು ತೊಂದರೆ ಇದೆ? ಯಾಕೆ ಅದು ವಿರೋಧಿಸುತ್ತಿದೆ? ಅದಕ್ಕೆ ಫೆಲೆಸ್ತೀನಿಯರ ಮೇಲೆ ದ್ವೇಷ ಏಕೆ? ಫೆಲೆಸ್ತೀನ್ ಒಂದು ರಾಷ್ಟ್ರ ಸ್ಥಾನಮಾನ ಇಲ್ಲದ ಪ್ರದೇಶ. ಇಸ್ರೆಲ್ ನಿಂದ ಅದು ಸ್ವಾತಂತ್ರ್ಯವನ್ನು ಬಯಸುತ್ತಿದೆ. ಸುಮಾರು 200 ವರ್ಷಗಳ ಕಾಲ ಬ್ರಿಟಿಷ್ ಆಳ್ವಿಕೆಯಲ್ಲಿ ನಲುಗಿ ಅನುಭವ ಹೊಂದಿರುವ ಭಾರತೀಯರ ಮಟ್ಟಿಗೆ ಫೆಲಸ್ತೀನ್ ನ ನೋವು ಬೇಗ ಅರ್ಥವಾಗಬೇಕಿತ್ತು.

ಸ್ವತಂತ್ರ ಫೆಲೆಸ್ತೀನ್ ರಾಷ್ಟ್ರಕ್ಕಾಗಿ ಆಡಳಿತ ಪಕ್ಷದವರು ಬೆಂಬಲ ಸಾರ ಬೇಕಿತ್ತು. ಆದರೆ ಬೆಂಬಲ ಸಾರುವುದು ಬಿಡಿ ಯಾರಾದರೂ ಸ್ವತಂತ್ರ ಫೆಲಸ್ತೀನ್ ರಾಷ್ಟ್ರದ ಪರ ಮಾತಾಡಿದರೆ ಅದನ್ನೇ ದೇಶದ್ರೋಹದಂತೆ ಇವರು ನೋಡತೊಡಗಿದ್ದಾರೆ. ಏನಿದರ ಅರ್ಥ? ಫೆಲೆಸ್ತೀನ್ ಸಂಕಟವನ್ನು ಬಿಂಬಿಸುವ ಮೂಕಾಭಿನಯಕ್ಕೂ ಬಿಜೆಪಿ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸುತ್ತಾರಂದರೆ ಅದಕ್ಕೆ ಕಾರಣ ಏನು? ಫೆಲಸ್ತೀನಿಯರ ಧರ್ಮದ ಹೊರತಾಗಿ ಇನ್ಯಾವುದಾದರೂ ಕಾರಣ ಇದೆಯೇ? ಇದ್ದರೆ ಅದನ್ನು ಬಹಿರಂಗವಾಗಿ ಹೇಳಬಹುದಲ್ಲ.