✍️ ಎ. ರಹ್ಮತುನ್ನಿಸಾ
ವಿವಾಹವು ಅಷ್ಟು ಮುಖ್ಯವೇ? ಅದರ ಅಗತ್ಯವಿದೆಯೇ? ನಾನೇಕೆ ಮದುವೆಯಾಗಬೇಕು? ಇತರರ ಹಸ್ತಕ್ಷೇಪವಿಲ್ಲದೆ ನಾನು ನನ್ನ ಇಷ್ಟದಂತೆ ಬದುಕಲು ಸಾಧ್ಯವಿಲ್ಲವೇ? ನಾನು ಹೇಗೆ ತಂದೆ ತಾಯಂದಿರನ್ನು ಬಿಟ್ಟು ಬೇರೆ ಮನೆಗೆ ಹೋಗುವುದು? ಈ ಮದುವೆಯು ಯಶಸ್ವಿಯಾಗುತ್ತದೆ ಎಂಬುದಕ್ಕೆ ಗ್ಯಾರಂಟಿಯೇನು? ಒಂದು ಕಪ್ ಚಹಾಕ್ಕಾಗಿ ಇಡೀ ಚಹಾ ಅಂಗಡಿಯನ್ನು ಖರೀದಿಸಬೇಕೇ?
ವಿವಾಹದ ಕುರಿತು ಯೋಚಿಸುವಾಗ ನಿಮ್ಮ ಮನದಲ್ಲಿ ಇಂತಹ ಸಂಶಯಗಳು, ಪ್ರಶ್ನೆಗಳು ಉಂಟಾಗಬಹುದು. ಅದು ತಪ್ಪಲ್ಲ. ಎಲ್ಲಾ ಸಾಮಾಜಿಕ-ಸಾಂಸ್ಕೃತಿಕ ವ್ಯವಸ್ಥೆಗಳು ಹಾಗೂ ಮೌಲ್ಯಗಳ ವಿರುದ್ಧ ಪ್ರಚುರಪಡಿಸಲಾಗುತ್ತಿರುವ ವ್ಯಾಖ್ಯಾನಗಳು, ವಿವಾಹಕ್ಕೆ ಸಂಬಂಧಿಸಿ ನಮ್ಮ ಸಮಾಜ ಮಾಡಿಕೊಂಡಿರುವ ಹಲವು ಸಂಪ್ರದಾಯಗಳು ಸೃಷ್ಟಿಸುತ್ತಿರುವ ಅನಗತ್ಯ ತೊಂದರೆಗಳೂ ದಾಂಪತ್ಯ ವೈಫಲ್ಯಗಳನ್ನು ಕಂಡು ನೀವು ಈ ರೀತಿ ಯೋಚಿಸುವುದಾದರೆ ಅದು ನಿಮ್ಮ ತಪ್ಪೆಂದು ಹೇಳಲು ಸಾಧ್ಯವಿಲ್ಲ. ಆದರೆ ನೀವು ಒಂದು ತೀರ್ಮಾನಕ್ಕೆ ಬರುವುದಕ್ಕಿಂತ ಮೊದಲು ಮಾನವ ಜೀವನಕ್ಕೆ ಇದು ಅಗತ್ಯವೇ ಎಂದು ಪರಿಶೀಲಿಸೋಣ.
ದೈಹಿಕ ಅಗತ್ಯ
ವಿಜ್ಞಾನಿಗಳು ಹೇಳುವಂತೆ, ಮದುವೆ ಮತ್ತು ಲೈಂಗಿಕತೆಯು ಮಾನವ ದೇಹದ ನೈಸರ್ಗಿಕ ಅಗತ್ಯಗಳಲ್ಲಿ ಒಂದಾಗಿದೆ. ಪ್ರಣಯದ ಹಾರ್ಮೋನ್ ಎನ್ನಲಾಗುವ ಆಕ್ಸಿಟೋಸಿನ್ ಮಾನವ ದೇಹದಲ್ಲಿ ಸಂಗಾತಿಯ ಅಗತ್ಯವನ್ನು ಸೃಷ್ಟಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ವಿವಾಹವು ಈ ಶಾರೀರಿಕ ಅಗತ್ಯವನ್ನು ಪೂರೈಸಲು ಸಹಾಯ ಮಾಡುತ್ತದೆ ಮತ್ತು ದಂಪತಿಗಳ ಶಾರೀರಿಕ ಆರೋಗ್ಯವನ್ನು ಕಾಪಾಡಿಕೊಳ್ಳುತ್ತದೆ.
ಆರೋಗ್ಯ ತಜ್ಞ ಡಾ. ಜೂಲಿಯನ್ ಹೋಲ್ಟ್-ಲುನ್ಸ್ಟಾಡ್ ಹೇಳುತ್ತಾರೆ, “ಮದುವೆಯೂ ಸೇರಿದಂತೆ ಸಾಮಾಜಿಕ ಸಂಬಂಧಗಳು ದೊಡ್ಡ ಪ್ರಮಾಣದಲ್ಲಿ ಮರಣ ಸಂಖ್ಯೆ ಕಡಿಮೆಗೊಳಿಸುವುದಕ್ಕೆ ಮತ್ತು ಉತ್ತಮ ಆರೋಗ್ಯಕ್ಕೂ ಸಹಕಾರಿಯಾಗಿದೆ.”
ಡಾ. ಲಿಂಡಾ ವೆಯ್ಟ್ ಹೇಳುತ್ತಾರೆ, “ಮಾನಸಿಕ ಒತ್ತಡ ಕಡಿಮೆ ಮಾಡಲು, ರೋಗ ನಿರೋಧಕ ಶಕ್ತಿ ಹೆಚ್ಚಿಸಲು ವಿವಾಹ ಮುಖ್ಯ ಪಾತ್ರ ವಹಿಸುತ್ತದೆ. ವಿವಾಹವು ನೀಡುವ ಸಾಮಾಜಿಕ ಬೆಂಬಲ ಮತ್ತು ಸ್ಥಿರತೆಯು ಭಾಗಶಃ ಇದಕ್ಕೆ ಕಾರಣ.”
ಕೆನಡಾದಲ್ಲಿ ನಡೆದಿರುವ ಒಂದು ಅಧ್ಯಯನದ ಪ್ರಕಾರ, ವಿವಾಹಿತ ವ್ಯಕ್ತಿ ಸಾಮಾನ್ಯವಾಗಿ ಏಕಾಂತ ಜೀವನ ನಡೆಸುತ್ತಿರುವವರು, ವಿಚ್ಛೇದಿತರು ಮತ್ತು ವಿಧವೆಯರಿಗಿಂತ ಉತ್ತಮ ಆರೋಗ್ಯವನ್ನು ಹೊಂದಿದ್ದಾರೆಂದು ತಿಳಿದುಬಂದಿದೆ. ವಿವಾಹದಿಂದ ವ್ಯಕ್ತಿಗಳ ನೈಸರ್ಗಿಕ ಅಗತ್ಯಗಳು ಪೂರ್ತಿಯಾಗುವುದು ದಂಪತಿಗಳ ಶಾರೀರಿಕ ಆರೋಗ್ಯದಲ್ಲಿ ಉತ್ತಮ ಪರಿಣಾಮ ಬೀರುತ್ತದೆಯೆಂದು ಹೇಳಲಾಗಿದೆ.
ಮನುಷ್ಯರನ್ನು ಮಲಕ್ಗಳಾಗಿ ಸೃಷ್ಟಿಸಲಾಗಿಲ್ಲ. ಗಾಳಿ, ನೀರು, ಆಹಾರದಂತೆಯೇ ಲೈಂಗಿಕತೆಯೂ ಸ್ವಾಭಾವಿಕವಾಗಿ ಶಾರೀರಿಕ ಅಗತ್ಯವಾಗಿದೆ. ಅದನ್ನು ವಿವಾಹದಿಂದ ಪೂರೈಸಿದಾಗ ಮಾನವ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಯನ್ನು ಉಂಟು ಮಾಡಬಹುದು. ಅಲ್ಲಾಹನು ಪವಿತ್ರ ಕುರ್ಆನ್ನಲ್ಲಿ ಹೇಳಿರುವನು, “ಅವನು ನಿಮಗಾಗಿ ನಿಮ್ಮ ವರ್ಗದಿಂದಲೇ ಜೋಡಿಗಳನ್ನು ಸೃಷ್ಟಿಸಿ ನೀವು ಅವರ ಬಳಿ ಪ್ರಶಾಂತಿಯನ್ನು ಪಡೆಯುವಂತೆ ಮಾಡಿದುದು ಮತ್ತು ನಿಮ್ಮ ನಡುವೆ ಪ್ರೇಮ ಮತ್ತು ಅನುಕಂಪವನ್ನುಂಟು ಮಾಡಿದುದೂ ಅವನ ನಿದರ್ಶನಗಳ್ಳೊಂದಾಗಿದೆ. ನಿಶ್ಚಯವಾಗಿಯೂ ವಿವೇಚಿಸುವವರಿಗೆ ಇದರಲ್ಲಿ ಅನೇಕ ನಿದರ್ಶನಗಳಿವೆ.” (30:21)
ಈ ವಚನದಲ್ಲಿ ಮವದ್ದತುನ್ ಎಂಬ ಪದವಿದೆ. ಇದನ್ನು ಸಾಮಾನ್ಯವಾಗಿ ‘ಪ್ರೀತಿ’ ಎಂದು ಅನುವಾದಿಸಲಾಗುತ್ತದೆ. ಆದರೆ ನಿಮ್ಮ ಹೆತ್ತವರು, ಒಡಹುಟ್ಟಿದವರು ಅಥವಾ ಸ್ನೇಹಿತರಿಂದ ನೀವು ಅನುಭವಿಸುವ ಪ್ರೀತಿಯಲ್ಲ. ಇದು ವಿರುದ್ಧ ಲಿಂಗದೊಂದಿಗೆ ದೈಹಿಕ ಆಕರ್ಷಣೆಯನ್ನೂ ಒಳಗೊಂಡಿದೆ. ಅಲ್ಲಾಹನು ಇದನ್ನು ತನ್ನ ಚಿಹ್ನೆಗಳೆಂದು ವಿಶ್ಲೇಷಿಸಿದ್ದಾನೆ. (ಆಯಾತ್/ದೃಷ್ಟಾಂತ) ಅದರರ್ಥ ಮನುಷ್ಯನನ್ನು ಜನ್ಮತಃ ಈ ರೀತಿಯ ಆಕರ್ಷಣೆಯೊಂದಿಗೆ ಸೃಷ್ಟಿಸಿದ್ದಾನೆ.
ಆದ್ದರಿಂದಲೇ, ಮಾನವ ಸೃಷ್ಟಿಯ ಆರಂಭದಿಂದಲೇ ವಿವಾಹವಾಗುವುದು ಮತ್ತು ಕೌಟುಂಬಿಕ ಜೀವನ ನಡೆಸುವುದು ಒಂದು ಸಹಜ ಪ್ರಕ್ರಿಯೆಯಾಗಿದೆ. ಅಲ್ಲಾಹನು ಪ್ರಥಮ ಮಾನವನೊಂದಿಗೆ ಹೇಳಿದನು, “ನೀನು ಮತ್ತು ನಿನ್ನ ಪತ್ನಿ ಇಬ್ಬರೂ ಸ್ವರ್ಗದಲ್ಲಿರಿ ಮತ್ತು ಅಲ್ಲಿ ನೀವು ಇಚ್ಛಿಸಿದ್ದೆಲ್ಲವನ್ನೂ ಉಣ್ಣಿರಿ. ಆದರೆ ಆ ವೃಕ್ಷವನ್ನು ಸಮೀಪಿಸಬಾರದು. ಅನ್ಯಥಾ ಅಕ್ರಮಿಗಳಾಗುವಿರಿ.” (2:35)
ಇಸ್ಲಾಮಿನ ಬೋಧನೆಗಳು ಚಿಕಿತ್ಸೆಗಿಂತ ಪ್ರತಿರೋಧವೇ ಉತ್ತಮ ಎಂಬ ತತ್ವವನ್ನು ಆಧರಿಸಿದೆ. ಇಸ್ಲಾಮ್ ಮಾನವರ ಸಹಜ ಬಯಕೆಗಳನ್ನು ನ್ಯಾಯಯುತ ಮತ್ತು ನೈತಿಕ ರೀತಿಯಲ್ಲಿ ಪೂರೈಸಲು ಪ್ರೋತ್ಸಾಹಿಸುತ್ತದೆ. ಅನ್ಯಾಯ, ಅನೈತಿಕ ಲೈಂಗಿಕತೆಯು ಸಮಾಜದಲ್ಲಿ ಅರಾಜಕತೆಗೆ ಕಾರಣವಾಗುತ್ತದೆ. ಇಸ್ಲಾಮ್ ವಿವಾಹೇತರ ಲೈಂಗಿಕ ಸಂಬಂಧವನ್ನು ಸಂಪೂರ್ಣ ನಿಷೇಧಿಸಿದೆ.
ಮಾನಸಿಕ ಅಗತ್ಯ
ವ್ಯಕ್ತಿಯ ದೈಹಿಕ ಮತ್ತು ಮಾನಸಿಕ ಆರೋಗ್ಯವು ಪರಸ್ಪರ ಸಂಬಂಧ ಹೊಂದಿದೆ. ದೈಹಿಕ ಆರೋಗ್ಯವು ಮಾನಸಿಕ ಆರೋಗ್ಯವನ್ನು ಉತ್ತಮಪಡಿಸುತ್ತದೆ. ಮನಸ್ಸು ತೃಪ್ತ ಮತ್ತು ಆರೋಗ್ಯಯುತವಾಗಿದ್ದರೆ ಅದರ ಪ್ರತಿಫಲನವು ದೇಹದಲ್ಲಿ ಗೋಚರಿಸುತ್ತದೆ. ವಿವಾಹವು ವ್ಯಕ್ತಿ ಗಳ ದೈಹಿಕ ಅಗತ್ಯ ಮಾತ್ರವಲ್ಲವೆಂದೂ ಅಂದು ಮಾನಸಿಕ ಅಗತ್ಯವೆಂದೂ ಮನೋವಿಜ್ಞಾನಿಗಳು ತಿಳಿಸಿದ್ದಾರೆ. ಹೆಚ್ಚಿನ ಮಾನಸಿಕ ರೋಗಗಳಿಗೆ ಏಕಾಂತತೆ ಹಾಗೂ ಒಂಟಿ ಜೀವನ ಕಾರಣವಾಗಿದೆ. ವಿವಾಹಿತರಿಗೆ ತಮ್ಮ ಸಂಗಾತಿಯ ಪ್ರೀತಿ, ಅನುಕಂಪ, ಕಾಳಜಿಯು ದೊರೆಯುವುದರಿಂದ ತಾನು ಒಂಟಿತನದ ಒತ್ತಡವನ್ನು ಅನುಭವಿಸುವ ಸಾಧ್ಯತೆ ಕಡಿಮೆಯಾಗಿದೆ. ಸಂಗಾತಿಯ ಒಡನಾಟ ಮತ್ತು ಬೆಂಬಲವು ಮಾನಸಿಕ ಸಮಸ್ಯೆಗಳ ವಿರುದ್ಧ ರಕ್ಷಾ ಕವಚವಾಗಿ ಕಾರ್ಯನಿರ್ವಹಿಸುವುದರಿಂದ ವಿವಾಹಿತರು ಮಾನಸಿಕ ಒತ್ತಡ ಅನುಭವಿಸುವ ಸಾಧ್ಯತೆ ಕಡಿಮೆಯೆಂದು ಅಮೆರಿಕನ್ ಸೈಕಾಲಜಿಕಲ್ ಅಸೋಸಿಯೇಶನ್ ವರದಿ ಮಾಡಿದೆ.
ಪವಿತ್ರ ಕುರ್ಆನ್ ಶತಮಾನಗಳ ಹಿಂದೆಯೇ ಈ ಕುರಿತು ತಿಳಿಸಿದೆ. ಅಲ್ಲಾಹನು ಸಂಗಾತಿಗಳ ನಡುವೆ ಮವದ್ದತ್(ಪ್ರೀತಿ) ಮಾತ್ರವಲ್ಲ, ರಹಮತ್(ಕರುಣೆ)ಯನ್ನು ಉಂಟು ಮಾಡಿದ್ದಾನೆ. ದೈಹಿಕ ಆಕರ್ಷಣೆ ಮತ್ತು ಬಯಕೆಯ ಈಡೇರಿಕೆಯನ್ನು ಮೀರಿ ಪರಸ್ಪರ ಸಹಾನುಭೂತಿ ಮತ್ತು ಸುರಕ್ಷತೆಯು ಮಾನಸಿಕ ಆರೋಗ್ಯವನ್ನು ಪೋಷಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ. ಸಂಗಾತಿಗಳು ವಯಸ್ಸಾದಂತೆ ಈ ಸಂಬಂಧವು ಬಲಗೊಳ್ಳುತ್ತದೆ.
ಪವಿತ್ರ ಕುರ್ಆನ್ ಇನ್ನೊಂದೆಡೆಯಲ್ಲಿ ‘ಅವರು ಪರಸ್ಪರ ಉಡುಪಾಗಿದ್ದಾರೆ’ ಎಂದು ತಿಳಿಸುತ್ತದೆ. ಇದು ವಿವಾಹದಿಂದ ದೊರೆಯುವ ನೆಮ್ಮದಿ, ಭದ್ರತೆ ಮತ್ತು ಮಾನಸಿಕ ಬೆಂಬಲವನ್ನು ಸೂಚಿಸುತ್ತದೆ.
ಸಾಮಾಜಿಕ ಅಗತ್ಯ
ವೈಯಕ್ತಿಕ ಮತ್ತು ಸಾಮಾಜಿಕ ಜೀವನದ ಯೋಗಕ್ಷೇಮಕ್ಕೆ ಮದುವೆಯು ಅತ್ಯಗತ್ಯವೆಂದು ತಜ್ಞರು ಪದೇ ಪದೇ ತಿಳಿಸಿದ್ದಾರೆ. ವಿವಾಹವು ಸಮಾಜದ ಚಿಕ್ಕ ಘಟಕವಾದ ಕುಟುಂಬವನ್ನು ಸ್ಥಾಪಿಸುತ್ತದೆ. ಅದು ವ್ಯಕ್ತಿಗಳನ್ನು ಪೋಷಿಸುತ್ತದೆ ಮತ್ತು ಸಮಾಜಕ್ಕೆ ಒಪ್ಪಿಸುತ್ತದೆ. ಈ ಕುರಿತು ನಡೆಸಲಾದ ಅಧ್ಯಯನಗಳು ವಿವಾಹ ವ್ಯಕ್ತಿಗೆ ಮತ್ತು ಸಮಾಜಕ್ಕೆ ಹೇಗೆ ಅನಿವಾರ್ಯವೆಂದು ಸ್ಪಷ್ಟಪಡಿಸಿದೆ. ಒಂದು ಉತ್ತಮ ಸಮಾಜದ ನಿರ್ಮಾಣಕ್ಕೆ ಅದರ ಅಗತ್ಯವೇನು ಎಂದು ತಿಳಿಸಿಕೊಡುತ್ತದೆ. ಸಂತುಲಿತ ಮತ್ತು ನೆಮ್ಮದಿಯ ಜೀವನಕ್ಕೆ ದಾರಿ ಮಾಡಿಕೊಡುತ್ತದೆಂದು ಇಸ್ಲಾಮ್ ವಿವಾಹಕ್ಕೆ ಪ್ರೋತ್ಸಾಹ ನೀಡಿದೆ. ಅವಿವಾಹಿತ ಯುವಕರಿಗೆ ವಿವಾಹ ಮಾಡುವುದು ಸಾಮೂಹಿಕ ಕರ್ತವ್ಯವೆಂದು ಇಸ್ಲಾಮ್ ಹೇಳುತ್ತದೆ.
ಪವಿತ್ರ ಕುರ್ಆನ್ ಹೇಳುತ್ತದೆ, “ನಿಮ್ಮಲ್ಲಿ ಒಂಟಿಯಾಗಿರುವವರ ಮತ್ತು ನಿಮ್ಮ ದಾಸ-ದಾಸಿಯರಲ್ಲಿ ಸಜ್ಜನರಾಗಿರುವವರ ವಿವಾಹ ಮಾಡಿಬಿಡಿರಿ. ಅವರು ಬಡವರಾಗಿದ್ದರೆ ಅಲ್ಲಾಹ್ ತನ್ನ ಅನುಗ್ರಹದಿಂದ ಅವರನ್ನು ಸಂಪನ್ನಗೊಳಿಸುವನು.” (24:32)
ಆರ್ಥಿಕ ಅಗತ್ಯ
‘ಮದುವೆ’ ಎಂಬ ಶಬ್ದ ಕೇಳಿದ ಕೂಡಲೇ ನಮ್ಮ ಮನದಲ್ಲಿ ಅದಕ್ಕೆ ಸಂಬಂಧಿಸಿದ ಅಗಾಧ ಖರ್ಚು ವೆಚ್ಚಗಳಾಗಿವೆ. ಹೀಗಿರುವಾಗ ವಿವಾಹವು ಆರ್ಥಿಕ ಪ್ರಗತಿ ಮತ್ತು ಯೋಗ ಕ್ಷೇಮಕ್ಕೆ ಹೇಗೆ ಸಹಾಯಕವಾಗುತ್ತದೆಂದು ಯೋಚಿಸಲೂ ಸಾಧ್ಯವಾಗುವುದಿಲ್ಲ. ಮದುವೆಯು ಆರ್ಥಿಕ ಸಮೃದ್ಧಿಗೆ ಹೇಗೆ ಕಾರಣವಾಗುತ್ತದೆಯೆಂದು ಪರಿಶೀಲಿಸೋಣ.
ವಿವಾಹವಾಗುವುದರೊಂದಿಗೆ ಅವರು ಹೆಚ್ಚು ಜವಾಬ್ದಾರಿಯುಳ್ಳವರಾಗಿ ಮಾರ್ಪಟ್ಟು ಹೆಚ್ಚು ಹಣ ಸಂಪಾದಿಸಲು ಪರಿಶ್ರಮಿಸುತ್ತಾರೆ. ವಿವಾಹದಿಂದ ಹೆಚ್ಚಿದ ಮಾನಸಿಕ ಮತ್ತು ಶಾರೀರಿಕ ಆರೋಗ್ಯವು ಅವರ ಉತ್ಪಾದನಾ ಸಾಮರ್ಥ್ಯ ಮತ್ತು ಏಕಾಗ್ರತೆಯನ್ನು ಹೆಚ್ಚಿಸುತ್ತದೆ. ಇದನ್ನು ಆರ್ಥಿಕ ತಜ್ಞರು ಹೇಳಿದ್ದಾರೆ. ದಂಪತಿಗಳ ನಡುವೆ ಖರ್ಚು ವೆಚ್ಚಗಳ ಹೊಣೆಗಾರಿಕೆಯನ್ನು ಹಂಚಿಕೊಳ್ಳುವುದು, ಪರಸ್ಪರ ಆರ್ಥಿಕ ಸಹಕಾರ, ಪರಸ್ಪರ ಬೆಂಬಲ, ಉತ್ತಮ ಕುಟುಂಬ ಬಜೆಟ್ ಇವೆಲ್ಲಾ ಅದಕ್ಕೆ ಕಾರಣವಾಗುತ್ತದೆಯೆಂದು ಅವರ ಅಭಿಪ್ರಾಯ.
ಅಬೂಹುರೈರ(ರ)ರಿಂದ ವರದಿಯಾಗಿದೆ: ಪ್ರವಾದಿ(ಸ) ಹೇಳಿದರು, “ಮೂರು ಮಂದಿ ಅಲ್ಲಾಹನ ಸಹಾಯ ಪಡೆಯಲು ಅರ್ಹರಾಗಿರುವರು. ದೇವನ ಮಾರ್ಗದಲ್ಲಿ ಜಿಹಾದ್ ಮಾಡುವವನು, ವಿಮೋಚನಾ ಹಣ ಪಾವತಿಸಿ ಸ್ವತಂತ್ರನಾಗಬಯಸುವವನು, ವಿವಾಹವಾಗುವ ಮೂಲಕ ನೈತಿಕತೆಯನ್ನು ಕಾಪಾಡಿಕೊಳ್ಳಲು ಬಯಸುವವನು.” (ತಿರ್ಮಿದಿ 1655)
ಆಧ್ಯಾತ್ಮಿಕ ಅಗತ್ಯ
ಮದುವೆ ಮತ್ತು ಆಧ್ಯಾತ್ಮಿಕತೆಯು ಹೇಗೆ ಜೊತೆ ಜೊತೆಯಾಗಿ ಸಾಗಬಹುದು ಎಂದು ಅನೇಕರಿಗೆ ಆಶ್ಚರ್ಯವಾಗಬಹುದು. ಸಾಮಾನ್ಯವಾಗಿ ಓರ್ವ ವ್ಯಕ್ತಿ ಮಹಿಳೆಯರಿಂದ ದೂರವಾದಷ್ಟೂ ದೇವರಿಗೆ ಹತ್ತಿರವಾಗುತ್ತಾನೆ ಎಂದು ನಂಬಲಾಗುತ್ತದೆ. ಇದು ಮಹಿಳೆಯರು ಅಶುದ್ಧರೆಂದೂ ಅವರು ಪುರುಷರನ್ನು ಪ್ರಚೋದಿಸುತ್ತಾರೆಂಬ ನಂಬಿಕೆಗಳಿಂದ ಹುಟ್ಟಿಕೊಂಡಿದೆ. ಆಳವಾದ ವಿಶ್ಲೇಷಣೆಯಿಂದ ಇದು ತಪ್ಪೆಂದು ಮನವರಿಕೆಯಾಗುತ್ತದೆ. ಮಹಿಳೆಯರಲ್ಲೂ ಕೆಲವರು ತಾವು ಭೌತಿಕ ಸುಖಗಳನ್ನು ಸಂಪೂರ್ಣ ತ್ಯಜಿಸುವುದರಿಂದ ಮಾತ್ರ ದೇವ ಸಾಮಿಪ್ಯ ಸಾಧ್ಯ ಎಂದು ಭಾವಿಸುತ್ತಾರೆ. ವಾಸ್ತವದಲ್ಲಿ ವಿವಾಹವು ಪುರುಷ ಮತ್ತು ಸ್ತ್ರೀಯರನ್ನು ಅನೈತಿಕ ಕೃತ್ಯಗಳಿಂದ ರಕ್ಷಿಸುತ್ತದೆ. ಅದು ಅವರ ಪಾವಿತ್ರ್ಯವನ್ನು ಕಾಪಾಡುತ್ತದೆ.
ಅನೇಕ ಧರ್ಮಗಳು ಬ್ರಹ್ಮಚರ್ಯೆಯನ್ನು ಪಾವಿತ್ರ್ಯತೆ ಮತ್ತು ಆಧ್ಯಾತ್ಮಿಕ ಉನ್ನತಿಯ ಸಾಧನವೆಂದು ಪ್ರಚಾರಪಡಿಸುತ್ತದೆ. ಇಸ್ಲಾಮ್ ವಿವಾಹವನ್ನು ಪ್ರೋತ್ಸಾಹಿಸುವುದರೊಂದಿಗೆ ಅದು ಪವಿತ್ರ ಒಪ್ಪಂದವೆಂದು ಹೇಳಿದೆ. ಪರಲೋಕ ವ್ಯಾಪಿಸುವ ಈ ಸಂಬಂಧ ವಿಶ್ವಾಸಿಗೆ ಇಹ ಮತ್ತು ಪರದಲ್ಲಿ ಧಾರಾಳ ಅನುಗ್ರಹಗಳು ದೊರೆಯುವ ಮಾರ್ಗವೆಂದು ಕಲಿಸಿದೆ. ಇಸ್ಲಾಮ್ ಲೈಂಗಿಕ ಸಂಬಂಧವನ್ನು ಕೆಟ್ಟ ಕೆಲಸವೆಂದು ಪರಿಗಣಿಸಿಲ್ಲ. ಅದು ಮದುವೆಯ ಬಳಿಕ ನಡೆದರೆ ಪುಣ್ಯದಾಯಕ ಕರ್ಮವಾಗಿ ಬದಲಾಗುತ್ತದೆ. ರಮಝಾನ್ ರಾತ್ರಿಗಳಲ್ಲೂ ಕೂಡಾ ಅದಕ್ಕೆ ಅವಕಾಶವಿದೆಯೆಂದು ಅಲ್ಲಾಹನು ತಿಳಿಸಿದ್ದಾನೆ. (2: 187)
ಮದುವೆಯಾಗುವುದು ಒಂದು ಧಾರ್ಮಿಕ ಕಾರ್ಯವೆಂದು ಕೆಲವು ಹದೀಸ್ಗಳಿಂದಲೂ ತಿಳಿದು ಬರುತ್ತದೆ.
ಅನಸ್(ರ)ರಿಂದ ವರದಿಯಾಗಿದೆ, “ಓರ್ವ ಪುರುಷನು ವಿವಾಹವಾಗುವಾಗ ಅವನು ಧರ್ಮದ ಅರ್ಧಭಾಗ ಪೂರ್ತಿಗೊಳಿಸುತ್ತಾನೆ. ಆದ್ದರಿಂದ ಉಳಿದ ಅರ್ಧ ಭಾಗಕ್ಕೆ ಸಂಬಂಧಿಸಿ ಅವನು ಅಲ್ಲಾಹನಿಗೆ ಭಯಪಡಲಿ.” (ಬೈಹಕಿ)
ಅಬ್ದುಲ್ಲಾ ಬಿನ್ ಮಸ್ಊದ್ರಿಂದ ವರದಿಯಾಗಿದೆ: ಪ್ರವಾದಿ(ಸ) ಹೇಳಿದರು, “ಯುವಕರೇ, ನಿಮ್ಮಲ್ಲಿ ವಿವಾಹವಾಗುವ ಸಾಮರ್ಥ್ಯವುಳ್ಳವರು ವಿವಾಹವಾಗಿರಿ. ಏಕೆಂದರೆ, ಅದು ದೃಷ್ಟಿ ತಗ್ಗಿಸಲು ಮತ್ತು ಪಾವಿತ್ರ್ಯವನ್ನು ಕಾಪಾಡಲು ಹೆಚ್ಚು ಸಹಾಯಕವಾಗಿದೆ. ವಿವಾಹ ಸಾಧ್ಯವಾಗದಿದ್ದರೆ ಅವನು ಉಪವಾಸ ಆಚರಿಸಲಿ. ಏಕೆಂದರೆ ಅದು ಅವನ ಆತ್ಮ ನಿಯಂತ್ರಣಕ್ಕೆ ಉತ್ತಮವಾಗಿದೆ.” (ಬುಖಾರಿ, ಮುಸ್ಲಿಮ್)
ಲೇಖನ ಓದಿದಾಗ ನಿಮ್ಮಲ್ಲಿ ಹಲವಾರು ಪ್ರಶ್ನೆಗಳು ಮೂಡಬಹುದು. ಹೇಳಿದ್ದೆಲ್ಲವೂ ಸರಿಯೆಂದಾದರೆ ದಂಪತಿಗಳ ನಡುವೆ ಸಮಸ್ಯೆ, ಮಾನಸಿಕ ಒತ್ತಡ ಹೇಗೆ ಕಂಡು ಬರುತ್ತದೆ. ಹಲವು ವಿವಾಹಗಳು ಮುರಿದು ಬೀಳಲು ಕಾರಣವೇನು? ಹೌದು, ನಿಮ್ಮ ಸಂಶಯ ಸರಿಯಾದ್ದೇ. ನಮಗೆಲ್ಲಾ ಆಹಾರ ಅತೀ ಅಗತ್ಯ. ಅದು ನಮಗೆ ದೇಹಕ್ಕೆ ಶಕ್ತಿ, ಪೋಷಣೆಯನ್ನು ನೀಡಿ ದೇಹದ ಬೆಳವಣಿಗೆಗೆ ಮತ್ತು ರೋಗ ನಿರೋಧ ಶಕ್ತಿ ಹೆಚ್ಚಲು ಕಾರಣವಾಗುತ್ತದೆ. ಆದರೆ ಹೆಚ್ಚಾಗಿ ಆಹಾರಗಳೇ ಹೆಚ್ಚಿನ ರೋಗಕ್ಕೆ ಕಾರಣ. ಅದು ಯಾಕೆ? ಆಹಾರದಿಂದ ನಮಗೆ ಪ್ರಯೋಜನ ಲಭಿಸಬೇಕಾದರೆ ನಾವು ತಿಂದ ಆಹಾರ ಎಷ್ಟು ಶುದ್ಧವಾಗಿದೆ, ಹೇಗೆ ಪಾಕ ಮಾಡಲಾಗಿದೆ, ಅದಕ್ಕೆ ಏನೆಲ್ಲಾ ಸೇರಿಸಲಾಗಿದೆ, ಹೇಗೆ ತಿಂದಿರಿ? ಯಾವಾಗ ತಿಂದಿರಿ? ಎಷ್ಟು ತಿಂದಿರಿ? ಇವೆಲ್ಲವನ್ನೂ ಹೊಂದಿಕೊಂಡಿದೆ. ಅದೇ ರೀತಿ ವೈವಾಹಿಕ ಜೀವನದಲ್ಲೂ ಸಂಗಾತಿಯ ಆಯ್ಕೆಯಿಂದ ತೊಡಗಿ ಪ್ರತಿಯೊಂದು ವಿಷಯದಲ್ಲೂ ಅಲ್ಲಾಹ್ ಮತ್ತು ಪ್ರವಾದಿಯವರ(ಸ) ಆದೇಶಗಳನ್ನು ಕಲಿತು ಅದನ್ನು ಪಾಲಿಸಬೇಕಾಗುತ್ತದೆ.












