ಸನ್ಮಾರ್ಗ ವಾರ್ತೆ
ಸಂಪಾದಕೀಯ
ಇತ್ತೀಚೆಗೆ ಸುಪ್ರೀಂಕೋರ್ಟು ಗಂಭೀರವಾದ ತಪ್ಪೊಂದನ್ನು ತಿದ್ದಿಕೊಂಡಿದೆ. ಒಬ್ಬ ಆರೋಪಿಗೆ ಶಿಕ್ಷೆ ನೀಡಿದ್ದು ಮತ್ತು ಅವನ ಅರ್ಜಿ ತಿರಸ್ಕರಿಸಿದ ವಿಚಾರದಲ್ಲಿ ತಪ್ಪು ಸಂಭವಿಸಿದೆ ಎಂದು ಒಪ್ಪಿಕೊಂಡಿರುವ ಸುಪ್ರೀಮ್ ಕೋರ್ಟು ಆರೋಪಿಯನ್ನು ಬಿಡುಗಡೆಗೊಳಿಸಲು ಆದೇಶ ನೀಡಿತು.
ನ್ಯಾಯಾಲಯವು ತನ್ನಿಂದಾದ ತಪ್ಪನ್ನು ಕಂಡು ಹಿಡಿದು ಸರಿಪಡಿಸಿದಾಗ ಆ ಯುವಕ ಜೈಲಿನಲ್ಲಿ ತನ್ನ ಜೀವಮಾನದ 25 ವರ್ಷಗಳನ್ನು ಸವೆಸಬೇಕಾಗಿ ಬಂದಿತ್ತು.
1994ರಲ್ಲಿ ಡೆಹ್ರಾಡೂನ್ನಲ್ಲಿ ಒಬ್ಬ ಸೇನಾಧಿಕಾರಿ ಮತ್ತು ಕುಟುಂಬದ ಇಬ್ಬರನ್ನು ಕೊಂದ ಆರೋಪದಲ್ಲಿ ಉತ್ತರಾಖಂಡದ ವಿಚಾರಣಾ ಕೋರ್ಟು ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಿತ್ತು. ಘಟನೆ ನಡೆದಾಗ ತಾನು ಅಪ್ರಾಪ್ತ ವಯಸ್ಕನಾಗಿದ್ದೆ ಎಂದು ಆರೋಪಿ ವಾದಿಸಿದ್ದ. ಆದರೆ ಹೈಕೋರ್ಟು ಮತ್ತು ಸುಪ್ರೀಂಕೋರ್ಟು ಕೂಡ ಅವನ ಮಾತಿಗೆ ಅಂದು ಬೆಲೆ ಕೊಡಲಿಲ್ಲ. ಅವನ ಅರ್ಜಿಗಳು ಒಂದೊಂದಾಗಿ ತಿರಸ್ಕೃತಗೊಂಡಿದ್ದವು. ಸಾವಿನ ತುದಿಯಲ್ಲಿ ನಿಂತಿದ್ದಾಗ ಉತ್ತರಾಖಂಡದ ರಾಜ್ಯಪಾಲರ ಮುಂದೆ ದಯಾ ಅರ್ಜಿ ಸಲ್ಲಿಸಿದರೂ ಪ್ರಯೋಜನವಾಗಿರಲಿಲ್ಲ. ಅಂತಿಮವಾಗಿ 2012ರಲ್ಲಿ ರಾಷ್ಟ್ರಪತಿ ಪ್ರತಿಭಾ ಪಾಟಿಲ್ ಸ್ವಲ್ಪ ಮನುಷ್ಯತ್ವ ತೋರಿಸಿದ್ದರಿಂದ ಗಲ್ಲು ಶಿಕ್ಷೆ ಬದಲಾಯಿತು. 60 ವರ್ಷದ ವರೆಗೆ ಬಿಡುಗಡೆಯೇ ಇಲ್ಲ ಎಂಬ ಜೀವಾವಧಿ ಶಿಕ್ಷೆಗೆ ಇಳಿಸಲಾಯಿತು. ಆದ್ದರಿಂದಲೇ ಕೋರ್ಟಿನಿಂದಾದ ತಪ್ಪಿನ ವಿರುದ್ಧ ಆರೋಪಿಯ ತಾಯಿ ಹೋರಾಟ ನಡೆಸುವ ಅವಕಾಶ ಉಳಿಯಿತು. ಅಂತಿಮವಾಗಿ ಈ ತಾಯಿಯ ಹೋರಾಟ ಯಶ್ವಸಿಯೂ ಆಗಿದೆ.
ಆರೋಪಿಯನ್ನು ಖುಲಾಸೆಗೊಳಿಸಿ ಜಸ್ಟಿಸ್ ಎಂಎ ಸುಂದರೇಶ್ ಮತ್ತು ಅರವಿಂದ್ ಕುಮಾರ್ರು ನೀಡಿದ ತೀರ್ಪು ಒಂದು ತಪ್ಪೊಪ್ಪಿಗೆಯಂತೆಯೇ ಇದೆ. ಆರೋಪಿಯ ಅರ್ಜಿ ತಿರಸ್ಕರಿಸುವ ಮೂಲಕ ಎಲ್ಲ ಕೋರ್ಟುಗಳು ಅನ್ಯಾಯವಾಗಿ ವರ್ತಿಸಿದೆ. ದಾಖಲೆಗಳನ್ನು ಕಡೆಗಣಿಸಲಾಯಿತು ಎಂದು ಆರೋಪಿಯ ಖುಲಾಸೆಗೆ ನೀಡಿದ ಆದೇಶದಲ್ಲಿ ಸುಪ್ರೀಂಕೋರ್ಟು ಬಹಿರಂಗವಾಗಿ ತಪ್ಪೊಪ್ಪಿಗೆ ಪ್ರಕಟಿಸಿದೆ.
ಒಂದು ವೇಳೆ ನಿರೀಕ್ಷೆಯ ಕೊನೆಯ ಬಿಂದುವರೆಗೂ ನ್ಯಾಯವನ್ನು ಹುಡುಕಿ ಹೋಗಲು ಆರೋಪಿಯ ತಾಯಿ ಪ್ರಯತ್ನಿಸದಿರುತ್ತಿದ್ದರೆ, ಪ್ರತಿಭಾ ಪಾಟೀಲ್ ದಯಾ ಅರ್ಜಿಯನ್ನು ವಿಲೇವಾರಿ ಮಾಡದಿರುತ್ತಿದ್ದರೆ, ಆರೋಪಿಯ ದಯಾ ಅರ್ಜಿ ನಂತರದ ರಾಷ್ಟ್ರಪತಿಯ ಬಳಿಗೆ ಬಂದಿರುತ್ತಿದ್ದರೆ ತುಂಬ ತಡವಾಗಿಯಾದರೂ ಕೋರ್ಟಿನ ಈ ತಪ್ಪೊಪ್ಪಿಗೆಯನ್ನು ನಮಗೆ ಕೇಳಿಸಿಕೊಳ್ಳಲು ಸಾಧ್ಯವಿತ್ತೇ ಇರಲಿಲ್ಲ. ಪ್ರತಿಭಾ ಪಾಟೀಲ್ರ ಘನ ಕಾರ್ಯ ಒಂದು ಜೀವವನ್ನು ಉಳಿಸಿತು ಮತ್ತು ಕೋರ್ಟಿನ ತಪ್ಪನ್ನು ಜಗತ್ತಿಗೆ ಜಾಹೀರುಗೊಳಿಸಿದೆ.
ಇದನ್ನು ಗಲ್ಲು ಶಿಕ್ಷೆಯ ವಿರೋಧಿಸಿ ಎತ್ತಲಾಗುವ ವಾದಗಳನ್ನು ಬಲಪಡಿಸಿದ ಘಟನೆ ಎನ್ನಬಹುದು. ಘಟನೆ ನಡೆದಾಗ ತಾನು ಹುಡುಗನಾಗಿದ್ದೆ ಎಂಬ ಆರೋಪಿಯ ವಾದವನ್ನು ಕೋರ್ಟು ಕಿವಿಗೆ ಹಾಕಿಕೊಳ್ಳಲಿಲ್ಲ. ಆದರೆ ವಯಸ್ಸನ್ನು ನಿರ್ಧರಿಸುವ ತಪಾಸಣೆ(ಬೋನ್ ಆಸಿಫಿಕೇಶನ್ ಟೆಸ್ಟ್) ಆರೋಪಿಗೆ ಅನುಕೂಲಕರವಾಗಿತ್ತು. ಹಿಂದುಳಿದ-ದುರ್ಬಲ ಸಮುದಾಯದ ವ್ಯಕ್ತಿಗಳೇ ಇಂದು ದೇಶದಲ್ಲಿ ಗಲ್ಲು ಶಿಕ್ಷೆಗೆ ತುತ್ತಾಗುವವರಲ್ಲಿ ಶೇ. 90ಕ್ಕಿಂತ ಹೆಚ್ಚಿದ್ದಾರೆ ಎಂಬ ಸಿದ್ಧಾಂತ ಈ ಪ್ರಕರಣದಲ್ಲಿಯೂ ಸರಿಯೇ ಆಗಿದೆ. ಆರೋಪಿಯು ಕೊಲೆಯಾದ ಅಧಿಕಾರಿಯ ಮನೆಯ ಉದ್ಯಾನ ಪಾಲಕ ಆಗಿದ್ದ. ಯಾವುದಾದರೊಂದು ಮನೆಯಲ್ಲೋ ಸಂಸ್ಥೆಗಳಲ್ಲೋ ಏನಾದರೂ ಅಪರಾಧಕೃತ್ಯ ನಡೆದರೆ ಮೊದಲ ಸಂದೇಹವು ಅಲ್ಲಿನ ಕೆಳಜಾತಿಯವರ ಮೇಲೆ ಹೋಗುತ್ತದೆ. ಈ ಪ್ರಕರಣದ ವಿಚಾರಣೆಯ ಎಲ್ಲ ಹಂತದಲ್ಲಿಯೂ ತನಿಖಾಧಿಕಾರಿಗಳ ತಲೆಯೊಳಗೆ ಇದೇ ಪೂರ್ವಗ್ರಹ ಹೊಕ್ಕಿತ್ತು ಎನ್ನಬಹುದು. ಅಪರಾಧಿ ಎಂದು ಸಂದೇಹವೇ ಇಲ್ಲದಂತೆ ಸಾಬೀತು ಆಗಿರಲಿಲ್ಲ. ಆದರೆ ದೇಶದ ಬಹುಸಂಖ್ಯಾತರ ಆತ್ಮಸಾಕ್ಷಿಯನ್ನು ತೃಪ್ತಿಪಡಿಸಲು ಗಲ್ಲು ಶಿಕ್ಷೆ ನೀಡಬಹುದಾದ ಜಡ್ಜ್ ಗಳಿದ್ದಾರೆ.
ಆರೋಪಿಯು ಜೈಲಿನಲ್ಲಿ ಕಳೆದ ಅಷ್ಟೂ ಆಯುಷ್ಯದ ಕುರಿತು ಕೋರ್ಟು ಬೇಸರ ವ್ಯಕ್ತಪಡಿಸಿತು. ಆದರೆ ಈ ಬೇಸರ ಕೇವಲ ಮಾತಿಗೆ ಸೀಮಿತವಾಗಬಾರದು. ಈ ಪ್ರಕರಣದಲ್ಲಿ ಆರೋಪಿ ಎನ್ನಲಾದ ವ್ಯಕ್ತಿ ನ್ಯಾಯ ಪೀಠದ ಪೂರ್ವಗ್ರಹ, ಕಡೆಗಣನೆ ಮತ್ತು ಅಕ್ಷರ ತಪ್ಪುಗಳಿಗೆ ತುತ್ತಾದ ಮೊದಲ ವ್ಯಕ್ತಿಯಂತೂ ಅಲ್ಲವೇ ಅಲ್ಲ. ಕೊನೆಯ ವ್ಯಕ್ತಿಯಾಗಲಿ ಎಂಬ ನಿರೀಕ್ಷೆ ವ್ಯಕ್ತಪಡಿಸುವ ಸ್ಥಿತಿಯೂ ಇಂದಿನ ಭಾರತದಲ್ಲಿಲ್ಲ. ಕಟ್ಟುಕತೆ ಕಟ್ಟಿ ಭಯೋತ್ಪಾದಕ ದಾಳಿ ಪ್ರಕರಣಗಳಲ್ಲಿ ಆರೋಪಿ ಮಾಡಿ, ಮಾಧ್ಯಮ ವಿಚಾರಣೆ ಇತ್ಯಾದಿಗಳಿಂದ ನಾಡಿಗೆ ನಾಡೇ ಶಾಪ ಹಾಕಿದ ದಶಕಗಳ ಕಾಲ ಜೈಲಿನೊಳಗೆ ಕೊಳೆತ ನಿರಪರಾಧಿಗಳ ಉದ್ಧವಾದ ಪಟ್ಟಿಯೇ ಇಂದು ನಮ್ಮ ಮುಂದೆ ಇದೆ.
ಭಾರತೀಯ ಸಂವಿಧಾನವು ಗೌರವದೊಂದಿಗೆ ಬದುಕುವ ಭರವಸೆ ನೀಡುತ್ತದೆ. ಮನುಷ್ಯನ ಈ ಮೂಲಭೂತ ಹಕ್ಕುಗಳನ್ನು ಅನ್ಯಾಯವಾಗಿ ಕಿತ್ತುಕೊಂಡ ಸ್ಯಾಡಿಸ್ಟ್ ಮನೋಸ್ಥಿತಿಯ ಅಧಿಕಾರಿಗಳು ನ್ಯಾಯ ನೀಡುವವರಿಂದ ಈ ತಪ್ಪಿಗೆ ಉತ್ತರ ಕೇಳುವ ವ್ಯವಸ್ಥೆ ಇಲ್ಲದಿರುವವರೆಗೆ ಈ ಪಟ್ಟಿಗಳು ಇನ್ನೂ ಉದ್ದವಾಗುತ್ತಾ ಹೋಗಬಹುದು.
ಭೀಮ ಕೊರೆಗಾವ್ ಪ್ರಕರಣದಲ್ಲಿ ಆರೋಪಿಯಾಗಿ ಮಾಡಲಾದ ಇಬ್ಬರು ಮಾನವಹಕ್ಕು ಕಾರ್ಯಕರ್ತರಿಗೆ ಇತ್ತೀಚೆಗಷ್ಟೆ ಬಾಂಬೇ ಹೈಕೋರ್ಟು ಜಾಮೀನು ನೀಡಿತು. ಈ ಸುದ್ದಿಯನ್ನು ಇದರೊಂದಿಗೆ ಸೇರಿಸಿ ನೋಡಿ. ಆರೂವರೆ ವರ್ಷದ ವರೆಗೆ ಜೈಲಿನಲ್ಲಿದ್ದು ರೋಣ ವಿಲ್ಸನ್,ಮಹಾರಾಷ್ದ್ರದ ಸಾಮಾಜಿಕ ಕಾರ್ಯಕರ್ತನಾದ ಸುಧೀರ್ ಧಾವ್ಲೆಗೆ ಜಾಮೀನು ಸಿಕ್ಕಿತ್ತು. ಇವರು ಯಾವುದಾದರೂ ಅಪರಾಧ ಮಾಡಿರುವುದಾಗಿ ಯಾವುದೇ ಕೋರ್ಟು ಗುರುತಿಸಿಲ್ಲ. 2018ರಲ್ಲಿ ದಾಖಲಾದ ಕೇಸಿನಲ್ಲಿ ಇನ್ನೂ ಆರೋಪ ಪಟ್ಟಿಯೇ ಸಲ್ಲಿಸದ ಪ್ರಕರಣದಲ್ಲಿ ವಿಚಾಣೆ ಕಾಯುತ್ತಾ ಇವರು ಜೈಲಿನೊಳಗೆ ಆರೂವರೆ ವರ್ಷ ಇರಬೇಕಾಯಿತು. ಡಾ. ಹಾನಿ ಬಾಬು ಸಹಿತ ಇನ್ನೂ ಅನೇಕ ಪೌರ ಹಕ್ಕು ಕಾರ್ಯಕತರು, ಅಕಾಡಮೆಕಿಸ್ಟ್ ಗಳು, ಟ್ರೇಡ್ ಯೂನಿಯನ್ ನಾಯಕರು ಈ ಪ್ರಕರಣದಲ್ಲಿ ಸಿಲುಕಿದ್ದಾರೆ. ಕಟ್ಟುಕತೆಯ ಇತರ ಪ್ರಕರಣದಲ್ಲಿ ಕೂಡಾ ಹಲವಾರು ಜನರು ಈಗಲೂ ಜೈಲಿನೊಳಗಿದ್ದಾರೆ. ತಮ್ಮ ಜ್ಞಾನ, ಕೆಲಸಗಳಿಂದ ಸಮಾಜಕ್ಕೆ ಬಹಳಷ್ಟು ಕೊಡುಗೆಯನ್ನು ನೀಡಿದ ವ್ಯಕ್ತಿಗಳನ್ನು ಅನ್ಯಾಯವಾಗಿ ಜೈಲಿನಲ್ಲಿಡುವುದು- ಇದು ವ್ಯಕ್ತಿಗಳಿಗೆ ಮಾತ್ರವಲ್ಲ ಈ ದೇಶಕ್ಕೆ ತುಂಬಲಾರದ ನಷ್ಟವಾಗಿದೆ. ಇದಕ್ಕೆ ಪರಿಹಾರ ಮತ್ತು ಪ್ರಾಯಶ್ಚಿತ ಎರಡೂ ಆಗಬೇಕು.












