ಸನ್ಮಾರ್ಗ ವಾರ್ತೆ
ಅಲಿಗಡ, ಫೆ. 17: ಡಾ. ಕಫಿಲ್ ಖಾನ್ ವಿರುದ್ಧ ದೇಶ ಸುರಕ್ಷಾ ಕಾನೂನು ಹೇರಲಾಗಿದ್ದು ಇದನ್ನು ಹಿಂಪಡೆಯಬೇಕೆಂದು ಅಲಿಗಡ ಮುಸ್ಲಿಮ್ ವಿಶ್ವವಿದ್ಯಾನಿಲಯದ ಅಧೀನದಲ್ಲಿರುವ ಜವಾಹರಲಾಲ್ ನೆಹರೂ ಆಸ್ಪತ್ರೆಯ ವೈದ್ಯರ ಸಂಘಟನೆ ಆಗ್ರಹಿಸಿದೆ. ಡಿಸೆಂಬರ್ ಹನ್ನೆರಡರಂದು ಅಲಿಗಡ ಮುಸ್ಲಿಂ ವಿಶ್ವವಿದ್ಯಾನಿಲಯದಲ್ಲಿ ಪೌರತ್ವ ತಿದ್ದುಪಡಿ ಕಾನೂನು ವಿರುದ್ಧ ನಡೆದ ಪ್ರತಿಭಟನೆಯ ರ್ಯಾಲಿಯಲ್ಲಿ ಭಾಷಣ ಮಾಡಿದ್ದಕ್ಕಾಗಿ ಜನವರಿ 29ರಂದು ಮುಂಬೈಯಿಂದ ಉತ್ತರ ಪ್ರದೇಶದ ಪೊಲೀಸರು ಬಂಧಿಸಿದ್ದರು. ಈ ಪ್ರಕರಣದಲ್ಲಿ ಅವರಿಗೆ ಕೋರ್ಟು ಜಾಮೀನು ನೀಡಿತ್ತು. ನಂತರ ಉತ್ತರ ಪ್ರದೇಶ ಪೊಲೀಸರು ಅವರ ವಿರುದ್ಧ ದೇಶ ಸುರಕ್ಷಾ ಕಾನೂನು ಹೇರಿದ್ದರು.
ಕಫಿಲ್ ಖಾನ್ ವಿರುದ್ಧ ಕ್ರಮ ಸಂವಿಧಾನ ವಿರೋಧಿಯಾಗಿದ್ದು ಭಿನ್ನ ಧ್ವನಿಯನ್ನು ದಮನಿಸುವುದಾಗಿದೆ ಎಂದು ವೈದ್ಯರ ಸಂಘ(ಆರ್ಡಿಎ) ಅಧ್ಯಕ್ಷ, ಡಾ. ಹಂಝ ಮಾಲಿಕ್ ಹೇಳಿದರು. ಇದು ವೈದ್ಯರುಗಳ ವಿರುದ್ಧ ನಡೆದಿರುವ ಅನ್ಯಾಯವಾಗಿದೆ. ಸರಕಾರದ ಕ್ರಮವನ್ನು ವಿರೋಧಿಸಿ ವೈದ್ಯರ ಸಂಘಟನೆ ಆಸ್ಪತ್ರೆ ಕ್ಯಾಂಪಸ್ನಲ್ಲಿ ಪ್ರತಿಭಟನಾ ಜಾಥ ನಡೆಸಿತು. ಕಫಿಲ್ ಖಾನ್ ವಿರುದ್ಧ ದೇಶ ಸುರಕ್ಷಾ ಕಾನೂನು ಹೇರಿಕೆಯನ್ನು ಅಲಿಗಡ ಮುಸ್ಲಿಂ ಯುನಿವರ್ಸಿಟಿಯ ವಿದ್ಯಾರ್ಥಿ ಸಮಿತಿ ಖಂಡಿಸಿದೆ. ಇದು ಸುಪ್ರೀಂಕೋರ್ಟು ತೀರ್ಪಿನ ವಿರುದ್ಧ ಕ್ರಮವಾಗಿದೆ ಎಂದು ವಿದ್ಯಾರ್ಥಿ ಯೂನಿಯನ್ ಮಾಜಿ ಅಧ್ಯಕ್ಷ ಫೈಝುಲ್ ಹಸನ್ ಹೇಳಿದರು.












