ವಾಟ್ಸ್ಆಪ್, ಇನ್‌ಸ್ಟಾಗ್ರಾಮ್ ಮಕ್ಕಳನ್ನು ಅನಾಥರನ್ನಾಗಿಸಿದೆಯೇ?

0
279

✍️ ಜಾಸಿಮುಲ್ ಮುತವ್ವ

ಕೆಲ ಕಾಲಗಳಿಂದ ಮನಸ್ಸನ್ನು ಕಾಡುತ್ತಿದ್ದ ಒಂದು ವಿಚಾರವನ್ನು ಪ್ರಸ್ತುತಪಡಿಸುತ್ತಿದ್ದೇನೆ. ಹೆಚ್ಚಿನ ಸಮಯವನ್ನು ವಾಟ್ಸ್ಆಪ್, ಫೇಸ್‌ಬುಕ್, ಟ್ವಿಟ್ಟರ್, ಇನ್‌ಸ್ಟಾಗ್ರಾಮ್ ಮುಂತಾದ ಸಾಮಾಜಿಕ ಜಾಲತಾಣಗಳಿಗೆ ವ್ಯಯಿಸುವುದರಿಂದಾಗಿ ಮಕ್ಕಳ ಮತ್ತು ಕುಟುಂಬದ ಬಗ್ಗೆ ಗಮನ ಹರಿಸಲು, ಬೆಳೆಸಲು, ಸಲಹಲು ಸಾಧ್ಯವಾಗದೆ ಇರುವ ಮಾತಾಪಿತರ ಬಗ್ಗೆ ಪ್ರಸ್ತಾಪಿಸುತ್ತೇನೆ.

ಸ್ಮಾರ್ಟ್ ಫೋನ್‌ನಲ್ಲಿ ಫೇಸ್‌ಬುಕ್, ಮತ್ತು ವಾಟ್ಸ್ಆಪ್ ಮುಂದೆ ಅಂಗಾತ ಬಿದ್ದು ಕಾಲ ಕಳೆಯುವ ಈ ತಲೆಮಾರಿನ ಬಗ್ಗೆ “ನಮ್ರತೆಯ ಶಿರಸ್ಸಿನ ತಲೆಮಾರು” ಎಂದು ಕರೆಯಬಯಸುತ್ತೇನೆ. ಈಗ ನಮ್ಮ ಸಮಯ,
ಕಾರ್ಯಕ್ರಮವನ್ನೆಲ್ಲಾ ರೂಪಿಸಲು ವಾಟ್ಸ್ಆಪ್, ಫೇಸ್‌ಬುಕ್‌ಗೆ ಹೊಂದಿಕೊಂಡು ರೂಪಿಸುತ್ತಿದ್ದೇವೆ. ಬದುಕಿನ ಸೌಂದರ್ಯವನ್ನು, ಮಾಧುರ್ಯವನ್ನು ಆಸ್ವಾದಿಸಲು, ಸುತ್ತಮುತ್ತಲಿನ ಸಮಸ್ಯೆಗಳ ಕುರಿತು ಅರಿಯಲು ಸಮಯ ಸಿಗುತ್ತಿಲ್ಲ. ಮಕ್ಕಳು, ಕುಟುಂಬದವರ ಜೊತೆ ಕುಳಿತು ಕೊಂಡು ಮಾತನಾಡಲೂ ಸಮಯ ಸಿಗುತ್ತಿಲ್ಲ. ಯಾವ ವೇಳೆ ನೋಡಿ ದರೂ ಸ್ಮಾರ್ಟ್ ಫೋನಲ್ಲಿ ಕಣ್ಣು ನೆಟ್ಟಿರುವ ವ್ಯಕ್ತಿಗೆ ತಾನು ಸಾಧಿಸ ಬೇಕಾದ ಗುರಿಯ ಪ್ರಜ್ಞೆ ಇರುವುದಿಲ್ಲ. ಈ ಸೋಶಿಯಲ್ ನೆಟ್‌ವರ್ಕ್ ಭವಿಷ್ಯವನ್ನು ಭದ್ರ ಪಡಿಸಬೇಕಾದ ನಿರಂತರ ಪರಿಶ್ರಮಗಳಿಗೆ ಕೂಡಾ ತಡೆಯಾಗಿದೆ. ಇದು ಬಹಳ ಅಪಾಯಕಾರಿ ಪ್ರವೃತ್ತಿಯಾಗಿದೆ. ಮಕ್ಕಳ ಮತ್ತು ಕುಟುಂಬ ಭದ್ರತೆಯ ಅಡಿಪಾಯವನ್ನೇ ಇದು ಅಲುಗಾಡಿಸುತ್ತದೆ.

ಈ ಹುಚ್ಚು ಭ್ರಮೆಯು ಮತ್ತು ಅಂಧಾಭಿಮಾನವು ಕುಟುಂಬಕ್ಕೆ ಕಂಟಕವಾಗಲಿದೆ ಎಂದು ಹೇಳದೆ ವಿಧಿಯಿಲ್ಲ. ವಾಹನಗಳಲ್ಲಿ ಅಪಘಾತ ಸಂಭವಿಸಿದರೆ ಸಾಕು. ಗಾಯಾಳುಗಳಿಗೆ ಪ್ರಥಮ ಚಿಕಿತ್ಸೆ ನೀಡಿ ಆಸ್ಪತ್ರೆಗೆ ದಾಖಲಿಸುವುದು ಬಿಟ್ಟು ಅದನ್ನು ಕ್ಲಿಕ್ಕಿಸಿ ಕೊಂಡು ಎಲ್ಲೆಡೆ ಪ್ರಸಾರ ಮಾಡಲು ಹಾತೊರೆಯುತ್ತಾರೆ. ಐಸಿಯು(ತುರ್ತು ನಿಗಾ ಘಟಕ)ದಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿರುವ ಮಾತಾಪಿತರ ಬಳಿ ನಿಂತು ಕುಟುಂಬದವರ ಜೊತೆ ಪ್ರಾರ್ಥಿಸುತ್ತಾ ಅವರ ಶುಶ್ರೂಷೆಗೈಯುವುದು ಬಿಟ್ಟು, ಗಡಿಬಿಡಿಯಲ್ಲಿ ಫೋಟೋ ತೆಗೆದು ಊರಿಡೀ ಪಸರಿಸಲು ನೋಡುತ್ತಾರೆ. ಮನೆಯಲ್ಲಿ ಮಕ್ಕಳು ಜಗಳಾಡುತ್ತಿರುವಾಗ ತಾಯಿಯಾದವಳು ಕೋಣೆಯಲ್ಲಿ ಚಿಲಕ ಹಾಕಿ ವಿಡಿಯೋ ಚಾಟ್‌ಗಳಲ್ಲಿ ನಿರತರಾಗಿರುತ್ತಾರೆ. ತಂದೆ ಮತ್ತೊಂದು ಕೋಣೆಯಲ್ಲಿ ಕೂತು ಸಂದೇಶಗಳನ್ನು, ಫೋಟೋಗಳನ್ನು ತನ್ನ ಮಿತ್ರರಿಗೆ ಕಳುಹಿಸುವಲ್ಲಿ ನಿರತರಾಗಿರುತ್ತಾಳೆ.

ಮಕ್ಕಳು ವ್ಯಾಟ್ಸ್ಆಪ್, ಫೇಸ್‌ಬುಕ್‌ಗೆ ನುಸುಳಿ ಫೋಟೋ, ವೀಡಿಯೊ ಚಾಟಿಂಗ್ ಮಾಡುತ್ತಾ ಕಾಲ ಹರಣ ಮಾಡುತ್ತಿರುತ್ತಾರೆ. ಕಲಿಕೆಗೆ ಅವರು ಗಮನಹರಿಸುತ್ತಿಲ್ಲ. ಇನ್ನು ಅವರಿಗೆ ಕಲಿಯಲು ಆಸಕ್ತಿಯಿದ್ದರೂ ಸಮಯ ವಿಲ್ಲ. ಟೆಕ್ನಾಲಜಿ ನಮ್ಮ ಮಕ್ಕಳನ್ನು ಅನಾಥರನ್ನಾಗಿಸಿದೆ ಎಂದು ಕೆಲವು ಹೆತ್ತವರು ಖೇದಿಸುತ್ತಾರೆ. ಸ್ಮಾರ್ಟ್ ಫೋನ್ ಸಂಬಂಧ ಆಧುನಿಕ ಕಾಲ ಘಟ್ಟದ ಮುಖ್ಯಧಾರೆಯಾಗಿದೆ. ಒಮ್ಮೆ ಓರ್ವ ಮಹಿಳೆ ಕಚೇರಿಗೆ ಬಂದು “ಬದುಕಲ್ಲಿ ನನ್ನ ಮುಖ್ಯ ಬಯಕೆ ಏನೆಂದರೆ ನಾನು ಒಂದು ಸ್ಮಾರ್ಟ್ ಫೋನ್ ಆಗಿದ್ದಿದ್ದರೆ ಚೆನ್ನಾಗಿತ್ತು ಎಂದಾಗಿದೆ. ಪ್ರತಿದಿನ ಪ್ರತಿಕ್ಷಣ ನನ್ನ ಪತಿ ಮಕ್ಕಳು ನನ್ನನ್ನು ಎತ್ತಿಕೊಂಡು ಮುದ್ದಿಸುತ್ತ ನಡೆದಾಡುತ್ತಿದ್ದರಲ್ಲಾ!” ಎಂದು ಹೇಳಿದರು. ಈ ಮಾತುಗಳಲ್ಲಿ ಆಕೆಯ ಮನದ ನೋವು ಪ್ರತಿ ಫಲಿಸುತ್ತದೆ. ಓರ್ವ ಪತಿ ತನ್ನ ದುಃಖವನ್ನು ತೋಡಿಕೊಳ್ಳುತ್ತಾ “ತನ್ನ ಪತ್ನಿ ಯಾವಾಗಲೂ ತನ್ನ ಗೆಳತಿಯರೊಂದಿಗೆ ಹರಟುತ್ತಾ ವಾಟ್ಸ್ಅಪ್ ನಲ್ಲಿ ಮುಳುಗಿ ಸಂದೇಶ, ವೀಡಿಯೊಗಳನ್ನು ರವಾನಿಸುತ್ತಾ ಮನೆ ಕೆಲಸ ಹಾಗೂ ತನ್ನ ಕಡೆ ಯಾವುದೇ ಗಮನ ಕೊಡುತ್ತಿಲ್ಲ” ಎಂದು ಹೇಳಿದನು. ಮಕ್ಕಳನ್ನು ಸಾಕಿ ಸಲಹಿ ಶಿಕ್ಷಣ ನೀಡಿ ಉತ್ತಮ ತರಬೇತಿಯನ್ನು ನೀಡ ಬೇಕಾದ ತಂದೆ ತಾಯಂದಿರ ಕತೆಯಿದು.

ಟೆಕ್ನಾಲಜಿಯ ನಾಗಾಲೋಟಕ್ಕೆ ಸ್ಮಾರ್ಟ್ ಫೋನ್ ಚಟಕ್ಕೆ ಅಂಟಿ ಕೊಂಡ ಮಾತಾಪಿತರು ತಮ್ಮ ಮಕ್ಕಳ ಶಿಕ್ಷಣ ಮತ್ತು ತರಬೇತಿ ಬಗ್ಗೆಯೂ ಈ ನಾಗಾಲೋಟದ ನಿಲುವಿಗೆ ಅಂಟಿಕೊಂಡಿರುತ್ತಾರೆ. ಮೈಕ್ರೋವೇವ್‌ನಲ್ಲಿ ಆಹಾರ ಪದಾರ್ಥಗಳು ಬಿಸಿ ಮಾಡಿದ ವೇಗದಲ್ಲಿ ಮಕ್ಕಳಿಗೆ ಸಂಬಂಧಿಸಿದ ಸಮಸ್ಯೆಗಳ ಪರಿಹಾರ ಮಾಡಬೇಕೆಂಬುದು ಅವರ ವ್ಯಾಮೋಹವಾಗಿದೆ. ಮಕ್ಕಳ ಅಭ್ಯಾಸ, ವರ್ತನೆ, ವ್ಯವಹಾರಗಳ ಬಗ್ಗೆ ಗಮನಹರಿಸಿ ಅದನ್ನು ಉತ್ತಮಪಡಿಸಲು ತೀವ್ರ ಎಚ್ಚರಿಕೆಯ ಹೆಜ್ಜೆಯನ್ನಿಡಬೇಕಾಗಿದೆ ಎಂಬ ವಾಸ್ತವ ವನ್ನು ಅವರು ಮರೆಯುತ್ತಾರೆ. ಮಕ್ಕಳ ಮೇಲಿನ ಅಧಿಕಾರವನ್ನು ಮಾತಾಪಿತರು ಕಳೆದುಕೊಳ್ಳುತ್ತಿದ್ದಾರೆ. ಮಕ್ಕಳ ಆಹಾರ ಸೇವಿಸುವ ರೀತಿ, ವಸ್ತ್ರ ಧರಿಸುವ ಶೈಲಿ, ಗುಣ ಸ್ವಭಾವಗಳು, ನೈಪುಣ್ಯತೆ ಇವು ಯಾವುದರ ಕುರಿತೂ ಮಾತಾಪಿತರು ಅಭಿಪ್ರಾಯ ಹೇಳಲಾರದಂಥ ಸ್ಥಿತಿ ಬಂದೆರಗಿದೆ.

ಫೇಸ್‌ಬುಕ್ ಮತ್ತು ವ್ಯಾಟ್ಸ್ಆಪ್ ಮೂಲಕ ಅವರಿಗಿರುವ ಹೊಸ ಗೆಳೆಯರು ಮತ್ತು ಪೋಷಕರು ಮಕ್ಕಳ ಇಷ್ಟಾನಿಷ್ಟಗಳನ್ನೆಲ್ಲವನ್ನು ನಿರ್ಧರಿಸುತ್ತಾರೆ. ಒಂದು ಅಧ್ಯಯನದನು ಸಾರ ಒಂದು ದಿನದಲ್ಲಿ ವಾಟ್ಸ್ಆಪ್ ಮೂಲಕ ನಾಲ್ಕು ಬಿಲಿಯನ್ ಸಂದೇಶಗಳು ಹರಿಯುತ್ತಿರುತ್ತದೆ. ಅದರಲ್ಲಿ ಹೆಚ್ಚಿನ ಪಾಲು ಕುಟುಂಬದ ರಹಸ್ಯ, ವೈಯಕ್ತಿಕ ರಹಸ್ಯ, ಅಶ್ಲೀಲ ಚಿತ್ರಗಳು, ಸಂಬಂಧಗಳನ್ನು ಒಡೆಯುವ ಸಂದೇಶಗಳದ್ದಾಗಿವೆ ಎಂಬುದು ಸತ್ಯ. ಫಲಪ್ರದವಾದ ಸಂದೇಶಗಳು ಕಡಿಮೆ. ಹೆಚ್ಚಿನವರು ಅನಗತ್ಯ ಕಾಲ ಹರಣದಲ್ಲಿಯೇ ನಿರತರಾಗಿರುತ್ತಾರೆ.
ಕೆಲವು ದಿನಗಳ ಹಿಂದೆ ನಾನು ಟ್ವಿಟರ್‌ನಲ್ಲಿ ಸಾವಿರಾರು ಜನರೊಂದಿಗೆ ಸಂವಾದ ನಡೆಸಿದೆ. ಅದರ ಮುಖ್ಯ ವಿಷಯ “ನನ್ನ ತಂದೆ-ತಾಯಂದಿರು ಆನ್ ಲೈನ್‌ನಲ್ಲಿ” ಎಂದಾಗಿತ್ತು.

ಆಗ ನನ್ನನ್ನು ಸಂವಾದಿಸಿದವರಲ್ಲಿ ಹೆಚ್ಚಿನವರು ಯುವಕ ಯುವತಿಯರಾಗಿದ್ದರು. ಒಂದು ಗಂಟೆಯೊಳಗೆ ನಾಲ್ಕು ಸಾವಿರ ಲೈಕ್‌ಗಳು ನೂರಕ್ಕಿಂತ ಹೆಚ್ಚು ಕಮೆಂಟ್‌ಗಳು ಬಂದವು. ಅದರಲ್ಲಿ ಕೆಲವು ಕಮೆಂಟ್‌ಗಳು ಗಮನಾರ್ಹವಾಗಿತ್ತು. “ಮಾತಾಪಿತರು ನಮ್ಮೊಂದಿಗೆ ಸ್ಮಾರ್ಟ್ ಫೋನ್ ತ್ಯಜಿಸಬೇಕೆಂದು ಹೇಳುತ್ತಿದ್ದಾರೆ. ಈಗ ಅವರೇ ನಮ್ಮೊಂದಿಗೆ ಅದರ ದಾಸರಾಗಿದ್ದಾರೆ. ಆದರೂ ಅವರಿಗಿಂತ ನಾವು ಪರವಾಗಿಲ್ಲ.” ಇನ್ನೋರ್ವಳ ಪ್ರತಿಕ್ರಿಯೆ ಹೀಗಿತ್ತು, “ನಮ್ಮ ತಾಯಿಗೆ ಈಗ ನಮ್ಮೊಂದಿಗೆ ಬೆರೆಯಲು, ಟಿವಿ ನೋಡಲು ಸಮಯವಿಲ್ಲ. ಯಾವಾಗಲೂ ವಾಟ್ಸ್ಅಪ್‌ನಲ್ಲಿ ಮುಳುಗಿರುತ್ತಾಳೆ.” ಮೂರನೇ ವ್ಯಕ್ತಿಯ ಪ್ರತಿಕ್ರಿಯೆ ಹೀಗಿತ್ತು, “ನನ್ನ ತಂದೆಗೆ ಅನೇಕ ಗೆಳತಿಯರಿದ್ದಾರೆ. ಅವರೊಂದಿಗೆ ಅನೈತಿಕ ಸಂಬಂಧವಿದೆ. ಯಾವಾಗಲೂ ವಾಟ್ಸ್ಆಪ್‌ನಲ್ಲಿರುತ್ತಾರೆ.”

ನಾಲ್ಕನೇಯವಳ ಪ್ರತಿಕ್ರಿಯೆ “ನನ್ನ ತಾಯಿಗೆ ವಾಟ್ಸ್ಆಪ್ ಚಟ, ನನ್ನ ತಂದೆಗೆ ಪ್ರವಾಸದ ಚಟ.” ಐದನೆಯವಳ ಪ್ರತಿಕ್ರಿಯೆ “ತಂದೆ ನನ್ನ ಎಲ್ಲಾ ಅಗತ್ಯಗಳನ್ನು ಪೂರೈಸುತ್ತಿದ್ದರೂ ಅವೆಲ್ಲವೂ ವಾಟ್ಸ್ಆಪ್ ಮೂಲಕ ತಿಳಿಸುವೆನು. ಒಂದು ಗಂಟೆಯ ಬಳಿಕ ಉತ್ತರ ಬರುತ್ತದೆ. ಅವರ ಸ್ನೇಹಿತ ರದ್ದು ಎಂದಾದರೆ ನಿಮಿಷಾಂತರದಲ್ಲಿ ಪ್ರತಿಕ್ರಿಯಿಸುತ್ತಾರೆ.” ಓರ್ವ ತಾಯಿ ಬರೆದರು, “ನನ್ನ ಮಗು ನಾನು ಸ್ಮಾರ್ಟ್ ಫೋನ್ ಕೈಯಲ್ಲಿ ಎತ್ತಿ ಹಿಡಿದ ಕೂಡಲೇ ಅದರ ಸ್ಕ್ರೀನ್‌ ಮೇಲೆ ಕೈಇಟ್ಟು ಮುಚ್ಚುತ್ತದೆ. “ಅಮ್ಮಾ! ನಿಮಗೆ ನಾನಲ್ಲವೇ ಮುಖ್ಯ!” ಎಂದು ಆ ಮಗುವಿನ ಕಣ್ಣುಗಳು ಹೇಳುವಂತಿತ್ತು ಆ ನೋಟ.

ಇವು ಕುಟುಂಬದಲ್ಲಿ ವಾಟ್ಸ್ಆಪ್ ಮತ್ತು ಫೇಸ್‌ಬುಕ್ ಬೀರಿದ ಪ್ರಭಾವಗಳ ಉದಾಹರಣೆಗಳು. ಸೋಶಿಯಲ್ ಮೀಡಿಯಾದ ದಾಸರಾಗಿರುವ ಮಾತಾ ಪಿತರು ತಮ್ಮ ಕುಟುಂಬವನ್ನು ನಾಶಪಡಿಸುತ್ತಿದ್ದಾರೆ ಎಂಬ ವಾಸ್ತವವನ್ನು ಮರೆಯುತ್ತಿದ್ದಾರೆ. ತಂದೆ ತಾಯಂದಿರು ಒಂದೆಡೆ, ಮಕ್ಕಳು ಇನ್ನೊಂದೆಡೆ ಕೂತು ವಾಟ್ಸ್ಆಪ್‌ನಲ್ಲಿ ಸಮಯ ವ್ಯಯಿಸುವ ಮೂಲಕ ಪರ ಸ್ಪರ ಆಶಯ ವಿನಿಮಯ, ಆಗುಹೋಗುಗಳ ಬಗ್ಗೆ ಚರ್ಚಿಸಿ ಕುಟುಂಬ ಸಂಬಂಧ ಸುದೃಢಗೊಳಿಸುವ ಅಮೂಲ್ಯ ಸಂದರ್ಭವನ್ನು ವ್ಯರ್ಥಗೊಳಿಸುತ್ತಿದ್ದಾರೆ.

ಇದೇ ರೀತಿ ಇನ್ನೊಂದು ವಿಚಾರವೂ ನನ್ನ ಗಮನದಲ್ಲಿದೆ. ಕುಟುಂಬದ ಸದಸ್ಯರು, ಅತಿಥಿಗಳು ಸ್ವಾಗತ ಕೋಣೆಯಲ್ಲಿ ಅಥವಾ ಇನ್ಯಾವುದೋ ಕಡೆಯಲ್ಲಿ ಒಂದಾಗಿ ಕುಳಿತು ಮಾತನಾಡುತ್ತಿರುವಾಗ ಅಥವಾ ಪ್ರಸಕ್ತ ವಿಷಯಗಳ ಬಗ್ಗೆ ಚರ್ಚಾ ನಿರತರಾಗಿರುವಾಗ ಕೆಲವರು ಅವರಿಂದ ಸ್ವಲ್ಪ ದೂರ ನಿಂತು ಅವರ ಮಾತುಕತೆಯ ಕಡೆಗೆ ಗಮನ ಕೊಡದೆ ತನ್ನ ಸ್ಮಾರ್ಟ್ ಫೋನ್ ಮೂಲಕ ಇತರರ ಜೊತೆ ಹೊರ ಜಗತ್ತಿನವರ ಜೊತೆ ಚಾಟಿಂಗ್ ನಡೆಸುತ್ತಿರುವುದನ್ನು ಕಾಣಬಹುದು! ಇದು ಸಭ್ಯತೆಗೆ ತಕ್ಕ ವರ್ತನೆಯಲ್ಲ ಎಂಬ ಅರಿವು ಅವರಿಗಿರುವುದಿಲ್ಲ. “ಪಕ್ಕದಲ್ಲಿರುವ ನೀವ್ಯಾರೂ ನನಗೆ ಲೆಕ್ಕಕ್ಕಿಲ್ಲ. ಸಾವಿರಾರು ಅಡಿ ದೂರವಿದ್ದು ಫೋನ್‌ನಲ್ಲಿ ಮಾತನಾಡುವವರು ನನಗೆ ಮುಖ್ಯ” ಎಂದು ಹೇಳದೆ ಹೇಳುವ ವಿಧಾನವಲ್ಲವೇ ಇದು? ಈ ವರ್ತನೆಗಳು ನೀಡುವ ಸಂದೇಶಗಳು ಸಂಬAಧಗಳನ್ನು ಬಲ ಪಡಿಸುವಂತಹದ್ದಲ್ಲ.

ನಾವು ಸ್ಮಾರ್ಟ್ ಫೋನ್‌ಗಳಿಗೆ ಸೋಶಿಯಲ್ ನೆಟ್ವರ್ಕ್ಗಳಿಗೆ ವಿರುದ್ಧ ಅಲ್ಲ. ಅವೆಲ್ಲವನ್ನೂ ನಾವು ಸರಿಯಾದ ರೀತಿಯಲ್ಲಿ ಪ್ರಯೋಜನಕ್ಕೊಳಪಡಿಸಬೇಕು. ಆದರೆ, ಅದರ ಚಟಕ್ಕೆ ಅಂಟಿಕೊಂಡು ನಮ್ಮ ಮಕ್ಕಳನ್ನು, ಕುಟುಂಬವನ್ನೂ ಮರೆಯುವ ಹಂತಕ್ಕೆ ಹೋಗಿದ್ದಿದ್ದರೆ ಅದರಿಂದ ಮರಳಿ ಬರುವ ವಿವೇಕ ಬೆಳೆಸಿಕೊಳ್ಳಬೇಕು. ಪತಿಯ ವ್ಯಾಟ್ಸ್ ಅಪ್ ಚಟದಿಂದ ಭ್ರಮನಿರಸನಗೊಂಡು ನನಗಿನ್ನು ಇಲ್ಲೇನು ಕೆಲಸ ಎನ್ನುತ್ತಾ ಮಕ್ಕಳನ್ನು ಜೊತೆಗೆ ಕರೆದುಕೊಂಡು ತವರು ಮನೆಗೆ ಕಣ್ಣೀರಿನೊಂದಿಗೆ ಮರಳಿದ ಪತ್ನಿಯ ಬಗ್ಗೆ ನನಗೆ ಗೊತ್ತು. ಅವರು ಕಳೆದುಕೊಂಡದ್ದು ಸ್ವಂತ ತನ್ನ ಮಕ್ಕಳನ್ನಾಗಿದೆ. ಮಕ್ಕಳು ತನ್ನ ಮಾತಾಪಿತರನ್ನು ಕಳೆದುಕೊಳ್ಳುತ್ತಿದ್ದಾರೆ. ಇದು ವಾಟ್ಸ್ಅಪ್ ಮತ್ತು ಫೇಸ್‌ಬುಕ್ ಕುಟುಂಬಕ್ಕೆ ತಂದ ಕಂಟಕವಾಗಿದೆ. ಎಲ್ಲದಕ್ಕೂ ಒಂದು ಮಿತಿ ಬೇಕು.