ನಿರುದ್ಯೋಗ, ಬೆಲೆ ಏರಿಕೆ ವಿರುದ್ಧ ಜನಾಂದೋಲನ: ರೈತ, ಜನವಿರೋಧಿ ಸರ್ಕಾರವನ್ನು ಕಿತ್ತೊಗೆಯಲು ಪಣತೊಡಿ- ತಾಹೇರ್ ಹುಸೇನ್ ಕರೆ

0
331

ಸನ್ಮಾರ್ಗ ವಾರ್ತೆ

ಬೆಂಗಳೂರು: ದೇಶದಲ್ಲಿ ಬೆಲೆ ಏರಿಕೆ, ನಿರುದ್ಯೋಗ ಸಮಸ್ಯೆ ಹೆಚ್ಚಾಗಿದೆ ಎಂದು ಆರೋಪಿಸಿ ಸರ್ಕಾರ ಇದನ್ನು ನಿಯಂತ್ರಿಸುವಲ್ಲಿ ವಿಫಲವನ್ನು ಖಂಡಿಸಿ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ವತಿಯಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಇಂದು ರಾಷ್ಟ್ರೀಯ ಜನಾಂದೋಲನ ನಡೆಸಲಾಯಿತು.

ಪ್ರತಿಭಟನಾನಿರತ ಕಾರ್ಯಕರ್ತರು ಹಾಗೂ ಕಾಲೇಜಿನ ವಿದ್ಯಾರ್ಥಿಗಳು ನೋ ಜಾಬ್ ನೋ ಮನಿ, ಉದ್ಯೋಗ ಕೊಡಿ, ಮನ್ ಕಿ ಬಾತ್ ನಹಿ ಕಾಮ್ ಕಿ ಬಾತ್ ಕರೋ ಎಂಬ ಭಿತ್ತಿ ಪತ್ರ ಪ್ರದರ್ಶಿಸಿ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ವೆಲ್ಫೇರ್ ಪಾರ್ಟಿಯ ರಾಜ್ಯಾಧ್ಯಕ್ಷ ಅಡ್ವೋಕೇಟ್ ತಾಹೇರ್ ಹುಸೇನ್ ಮಾತನಾಡಿ, ರಾಜ್ಯ ಸೇರಿ ದೇಶದಾದ್ಯಂತ ನಿರುದ್ಯೋಗ, ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ಜನಸಾಮಾನ್ಯರು ತತ್ತರಿಸುತ್ತಿದ್ದಾರೆ. ನಿರುದ್ಯೋಗ ಸಮಸ್ಯೆಯುಂದ ಅನೇಕ ಯುವಕರು ಆತ್ಮಹತ್ಯೆಗೆ ಗುರಿಯಾಗಿದ್ದಾರೆ ಎಂದು ಆರೋಪಿಸಿದರು.

ನಿರುದ್ಯೋಗ ಹಾಗೂ ಬೆಲೆ ಏರಿಕೆಯನ್ನು ಖಂಡಿಸಿ ಜನರಿಗೆ ಜಾಗೃತಿ ಮೂಡಿಸಲು ವೆಲ್ ಫೇರ್ ಪಾರ್ಟಿಯಿಂದ ಕಲಬುರಗಿಯಿಂದ ಮಂಗಳೂರಿನವರೆಗೆ ಜಾಗೃತಿ ಜಾಥಾ ನಡೆಸಿದ್ದೇವೆ. ಈ ಜಾಥಾದಲ್ಲಿ ಜನರ ಸಮಸ್ಯೆ ಆಲಿಸುವ ಕೆಲಸ ಮಾಡಿದ್ದು, ಅನೇಕರು ತಮ್ಮ ಅಳಲು ತೋಡಿಕೊಂಡಿದ್ದಾರೆ. ರಾಜ್ಯದಲ್ಲಿ ರೈತರ, ಮಹಿಳೆಯರ, ಕಾರ್ಮಿಕರ, ಯುವಕರ ಸ್ಥಿತಿ ಶೋಚನೀಯವಾಗಿದೆ.
ಮನೆ ಮನೆಗೆ ಹೋಗಿ ಮೂಲಸೌಕರ್ಯದ ಕುರಿತು ಸಮೀಕ್ಷೆ ಮಾಡಿದಾಗ ಅನೇಕರಿಗೆ ಪಡಿತರ ಧಾನ್ಯ ಸರಿಯಾಗಿ ತಲುಪುತ್ತಿಲ್ಲ, ಇನ್ನೂ ಅನೇಕರು ಪಡಿತರ ಚೀಟಿಯಿಂದ ವಂಚಿತರಾಗಿದ್ದು ಕಂಡು ಬಂದಿದೆ. ಸರ್ಕಾರ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಉಜ್ವಲ ಯೋಜನೆಯಡಿ 9 ಕೋಟಿ ಜನರುಗೆ ಸಿಲಿಂಡರ್ ನೀಡಿದ್ದೇವೆ ಎಂದು ಜಾಹಿರಾತು ನೀಡಿದೆ ಆದರೆ ವಾಸ್ತವವಾಗಿ ಕರ್ನಾಟಕ ರಾಜ್ಯದಲ್ಲಿ ಅನೇಕರಿಗೆ ಗ್ಯಾಸ್ ಸಿಲಿಂಡರ್ ಇಲ್ಲ ಹಾಗೂ ಇದ್ದವರಿಗೆ ಸಿಲಿಂಡರ್ ತುಂಬಿಸಲು ಆಗುತ್ತಿಲ್ಲ ಎಂದು ದೂರಿದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರ ಕಾರ್ಪೊರೇಟ್ ಪರ ಆಡಳಿತ ನಡೆಸುತ್ತಿದೆ. ಇದರಿಂದ ಹೊರಗೆ ಬಂದು ರೈತರ, ಬಡವರ, ಮಹಿಳೆಯರ, ಯುವಕರ ಪರವಾಗಿ ಕೆಲಸ ಮಾಡಬೇಕು. ಈ ದಿಸೆಯಲ್ಲಿ ಜನರು ಜಾಗೃತರಾಗಬೇಕು. ಮುಂಬರುವ ಚುನಾವಣೆಯಲ್ಲಿ ಜನಪರ ಆಡಳಿತ ನಡೆಸುವವರಿಗೆ ಆಯ್ಕೆ ಮಾಡಬೇಕು ಎಂದು ಮನವಿ ಮಾಡಿದರು.

ಈ ವೇಳೆ ರಾಜ್ಯ ಪ್ರಧಾನ ಕಾರ್ಯದರ್ಶಿ ಹಬೀಬುಲ್ಲ ಖಾನ್ ಮಾತನಾಡಿ, ದೇಶದಲ್ಲಿ ಅನೇಕ ಸಮಸ್ಯೆಗಳಿಂದ ಜನಸಾಮಾನ್ಯರು ಜರ್ಜರಿತರಾಗಿದ್ದಾರೆ. ಇದೆಲ್ಲದರ ಜೊತೆಗೆ ಮುಖ್ಯವಾಗಿ ನಿರುದ್ಯೋಗ ಹಾಗೂ ಬೆಲೆ ಏರಿಕೆ ಹೆಚ್ಚು ಜನಸಾಮಾನ್ಯರಿಗೆ ತೊಂದರೆಯಾಗಿದೆ. ಇದರ ಬಗ್ಗೆ ದೇಶದಾದ್ಯಂತ ವೆಲ್ ಫೇರ್ ಪಾರ್ಟಿಯಿಂದ ಬೀದಿ ನಾಟಕ, ಮನೆ ಮನೆ ಸಮೀಕ್ಷೆ, ಬಸ್ ಮೂಲಕ ಜನ ಜಾಗೃತಿ ಜಾಥಾ ಹೀಗೆ ವಿವಿಧ ರೀತಿಯಲ್ಲಿ ಸರ್ಕಾರದ ನಿಲುವು ಖಂಡಿಸಿ ಜನರಲ್ಲಿ ಜಾಗೃತಿ ಮೂಡಿಸಿದ್ದೇವೆ. ರಾಜ್ಯದಲ್ಲಿ ಅಕ್ಟೋಬರ್ 15ರಿಂದ 21ರ ವರೆಗೆ ಜಾಗೃತಿ ಜಾಥಾ ಮಾಡಿದ್ದೇವೆ. ನಿರುದ್ಯೋಗಿ ಯುವಕರು, ಬಡವರು ಮಹಿಳೆಯರು ಜಾಥಾ ಗೆ ಬೆಂಬಲಿಸಿ ತಮ್ಮ ಸಮಸ್ಯೆ ಹೇಳಿಕೊಂಡಿದ್ದಾರೆ. ಇಂತಹ ಜನವಿರೋಧಿ ಸರ್ಕಾರವನ್ನು ಕಿತ್ತೊಗೆಯಲು ಒಣ ತೊಡಬೇಕು ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ತಲತ್ ಯಾಸ್ಮಿನ್ ಮಹಿಳಾ ವಿಭಾಗದ ರಾಜ್ಯಾಧ್ಯಕ್ಷ, ಸಫೀರ್ ಆಸಿಫ್ ಬೆಂಗಳೂರ್ ದಕ್ಷಿಣ ಅಧ್ಯಕ್ಷರು, ಖಾಲಿದ್ ಖಾನ್ ಸೇರಿದಂತೆ ಪಕ್ಷದ ಮುಖಂಡರು ಇದ್ದರು.