ಇಸ್ರೇಲ್-ಫೆಲೆಸ್ತೀನ್ ಸಂಘರ್ಷಕ್ಕೆ ಶಾಶ್ವತ ಪರಿಹಾರ ಕಲ್ಪಿಸಿ: ವೆಲ್ಫೇರ್ ಪಾರ್ಟಿ ರಾಷ್ಟ್ರೀಯ ಅಧ್ಯಕ್ಷ SQR ಇಲ್ಯಾಸ್ ಒತ್ತಾಯ

0
480

ಫೆಲೆಸ್ತೀನ್ ಪರ ಭಾರತದ ನಿಲುವು ಶ್ಲಾಘನೀಯ

ಸನ್ಮಾರ್ಗ ವಾರ್ತೆ

ದೆಹಲಿ: ಫೆಲೆಸ್ತೀನ್ ಹಾಗೂ ಇಸ್ರೇಲ್ ನಡುವೆ ನೂರಾರು ವರ್ಷಗಳಿಂದ ನಡೆಯುತ್ತಿರುವ ಸಂಘರ್ಷಕ್ಕೆ ಶಾಶ್ವತವಾಗಿ ಪರಿಹಾರ ನೀಡಬೇಕೆಂದು ಒತ್ತಾಯಿಸಿರುವ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ (WPI) ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತ ಫೆಲೆಸ್ತೀನ್ ಪರ ತೆಗೆದುಕೊಂಡ ನಿಲುವು ಶ್ಲಾಘನೀಯ ಎಂದು ತಿಳಿಸಿದೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಷ್ಟ್ರೀಯ ಅಧ್ಯಕ್ಷರಾದ SQR ಇಲ್ಯಾಸ್, ಪವಿತ್ರ ರಮಝಾನ್ ತಿಂಗಳ ವೇಳೆಯಾಗಿದ್ದರೂ ಮುಸ್ಲಿಮರು ಮಸ್ಜಿದುಲ್ ಅಕ್ಸಾದಲ್ಲಿ ಪ್ರಾರ್ಥನೆ ಮಾಡುತ್ತಿದ್ದ ಸಂದರ್ಭದಲ್ಲಿ ಮುಗ್ಧ ಫೆಲೆಸ್ತೀನಿಯರ ಇಸ್ರೇಲ್ ಸೇನೆಯು ದಾಳಿ ನಡೆಸಿ, ದಾಂಧಲೆ ಸೃಷ್ಟಿಸಿರುವುದು ಅಕ್ಷಮ್ಯ. ಅಲ್ಲದೇ, ಪೂರ್ವ ಜೆರುಸಲೇಮ್ ನ ಪ್ಯಾಲೆಸ್ಟೀನಿಯರ ಪ್ರದೇಶವಾದ ಶೇಖ್ ಜರ್ರಾದ ನಿವಾಸಿಗಳನ್ನು ಒಕ್ಕಲೆಬ್ಬಿಸಲು ನಡೆದ ದಾಳಿಯನ್ನು ಖಂಡಿಸಿದ್ದಾರೆ.

ಗಾಝಾದಲ್ಲಿ ಇಸ್ರೇಲ್ ಸೇನೆಯು ನಾಗರಿಕರ ಮೇಲೆ ರಾಕೆಟ್ ದಾಳಿ ನಡೆಸುವ ಮೂಲಕ ಅಮಾಯಕ ಮಕ್ಕಳು, ಮಹಿಳೆಯರು ಸೇರಿದಂತೆ ಹಲವಾರು ಮುಗ್ಧ ನಾಗರಿಕರನ್ನು ಉಗ್ರವಾದದ ಹೆಸರಿನಲ್ಲಿ ಕೊಲ್ಲುತ್ತಿರುವುದನ್ನು ಜಗತ್ತು ಒಕ್ಕೊರಲಿನಿಂದ ನಿಲ್ಲಿಸಲು ಆಗ್ರಹಿಸಬೇಕೆಂದು ಇಲ್ಯಾಸ್ ರವರು ಒತ್ತಾಯಿಸಿದ್ದಾರೆ.

ಇಷ್ಟೆಲ್ಲಾ ಸಂಘರ್ಷ ನಡೆಯುತ್ತಿದ್ದರೂ
ಅರಬ್ ರಾಷ್ಟ್ರಗಳು ಸರಿಯಾದ ಕಟ್ಟುನಿಟ್ಟಾದ ನಿಯಂತ್ರಣವನ್ನು ಹೇರುವ ಬದಲಿಗೆ ಮೂಖ ಪ್ರೇಕ್ಷಕರಾಗಿರುವುದನ್ನು ಅವರು ತೀವ್ರವಾಗಿ ಖಂಡಿಸಿದರು.

ಯಾವುದೇ ಪ್ರಚೋದನೆ ಇಲ್ಲದೇ ಇಸ್ರೇಲ್ ಗಾಝಾದಲ್ಲಿ ನಿರಂತರ ಬಾಂಬ್ ದಾಳಿ ನಡೆಸುತ್ತಿದ್ದರೂ ಅರಬ್ ರಾಷ್ಟ್ರಗಳು ಅಮಾಯಕರ‌ ಸಾವು ನೋವುಗಳ ಬಗ್ಗೆ ಕಾಳಜಿಯನ್ನು ವ್ಯಕ್ತಪಡಿಸಲಿಲ್ಲ ಮತ್ತು ಇದು ಇಸ್ರೇಲೀಯರು ನಡೆಸಿದ ಭಾರೀ ದೊಡ್ಡ ಮಾನವ ಹಕ್ಕುಗಳ ಉಲ್ಲಂಘನೆ‌ ನಡೆಸುತ್ತಿರುವ ಬಗ್ಗೆ ವಿಶ್ವ ಸಮುದಾಯದ ಗಮನವನ್ನು ಸೆಳೆಯುವಲ್ಲಿ ನೆರೆಹೊರೆಯ ಮುಸ್ಲಿಂ ರಾಷ್ಟ್ರಗಳು ಸಂಪೂರ್ಣ ವಿಫಲಗೊಂಡಿದೆ ಎಂದು ಡಬ್ಲ್ಯು ಪಿ‌‌ ಐ ರಾಷ್ಟ್ರೀಯ ಅಧ್ಯಕ್ಷ ತಿಳಿಸಿದ್ದಾರೆ.

ಯುನೈಟೆಡ್ ನೇಷನ್ ಸೆಕ್ಯುರಿಟಿ ಕೌನ್ಸಿಲ್ನಲ್ಲಿ ಭಾರತವು ನ್ಯಾಯಸಮ್ಮತವಾದ ಬೇಡಿಕೆಗಳನ್ನು ಹೊಂದಿರುವ ನಿಲುವು ಸ್ವಾಗತಾರ್ಹ ಮತ್ತು ಪ್ರಶಂಸನೀಯವಾಗಿದೆ. ಆದರೆ ಇಸ್ರೇಲ್ ತಕ್ಷಣವೇ ಫೆಲೆಸ್ತೀನಿಯರ ಮೇಲೆ ದಬ್ಬಾಳಿಕೆ ನಡೆಸುವುದು, ಉದ್ವಿಗ್ನತೆಯನ್ನು ಉಲ್ಬಣಗೊಳಿಸುವ ಕ್ರಮಗಳಿಂದ ದೂರವಿರುವಂತೆ ಸೂಚಿಸಲು ಒತ್ತಾಯ ಮಾಡಲಾಗಿದೆ.

ಇಸ್ರೇಲ್ ಮತ್ತು ಫೆಲೆಸ್ತೀನ್ ನಡುವೆ ಮಾತುಕತೆಗಳನ್ನು ಪುನರಾರಂಭಿಸಲು ಅನುಕೂಲಕರ ಪರಿಸ್ಥಿತಿಗಳನ್ನು ಸೃಷ್ಟಿಸಲು ಎಲ್ಲ ಪ್ರಯತ್ನಗಳನ್ನು ಮಾಡುವುಂತೆಯೂ SQR ಇಲ್ಯಾಸ್ ಒತ್ತಾಯಿಸಿದ್ದಾರೆ.

ಎರಡು ರಾಷ್ಟ್ರಗಳ ಸಿದ್ಧಾಂತಕ್ಕೆ ಭಾರತದ ಬೆಂಬಲ ಸ್ವಾಗತಾರ್ಹ‌. ಆದರೆ ಎರಡು ರಾಷ್ಟ್ರಗಳ ನಡುವಿನ ಕಾರ್ಯತಂತ್ರದ ಮತ್ತು ಮಿಲಿಟರಿ ಸಂಬಂಧಗಳಿಂದಾಗಿ ಭಾರತವು ಇಸ್ರೇಲ್ ಮೇಲೆ ಹೆಚ್ಚಿನ ಒತ್ತಡ ಹೇರಬೇಕು ಎಂದು ಹೇಳಿದರು.

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಭ್ರಷ್ಟಾಚಾರದ ಆರೋಪದ ಮೇಲೆ ವಿಚಾರಣೆ ನಡೆಸುತ್ತಿದ್ದಾರೆ ಮತ್ತು ಇಸ್ರೇಲಿ ಮತದಾರರನ್ನು ಬೇರೆಡೆಗೆ ಸೆಳೆಯಲು ಮತ್ತು ಸ್ವತಃ ಬೆಂಬಲವನ್ನು ಪಡೆಯಲು ಫೆಲೆಸ್ತೀನ್ ನವರ ಮೇಲೆ ದಾಳಿ ನಡೆಸಲು ಸೂಚಿಸುವ ಮೂಲಕ ಅಲ್ಲಿನ ಜನರ ಬೆಂಬಲ ಗಳಿಸುವ ಹುನ್ನಾರವಾಗಿದೆ ಎಂದು ವೆಲ್ಫೇರ್ ಪಾರ್ಟಿ ರಾಷ್ಟ್ರೀಯ ಅಧ್ಯಕ್ಷರಾದ ಡಾ. ಎಸ್ ಕ್ಯೂ ಆರ್ ಇಲ್ಯಾಸ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.