ಮಂಗಳೂರು ಮಹಾನಗರ ಪಾಲಿಕೆ ವಾರ್ಡ್ ಗಳಿಗೆ ಇನ್ನೂ ವಾರ್ಡ್ ಸಮಿತಿ ರಚಿಸದಿರುವುದನ್ನು ಪ್ರಶ್ನಿಸಿ ಎಂಸಿಸಿ ಸಿವಿಕ್ ಗ್ರೂಪ್ ಹೈಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಸಿತ್ತು. ಇದನ್ನು ಪರಿಶೀಲಿಸಿದ ಕರ್ನಾಟಕ ಹೈಕೋರ್ಟ್, ವಾರ್ಡ್ ಸಮಿತಿ ರಚಿಸಲು ಆದೇಶಿಸಿ ತೀರ್ಪು ನೀಡಿದೆ. ಈ ಆದೇಶವನ್ನು ವೆಲ್ಫೇರ್ ಪಾರ್ಟಿ. ದ.ಕ. ಜಿಲ್ಲಾ ಘಟಕವು ಸ್ವಾಗತಿಸಿದೆ.
ಈ ಸಂದರ್ಭ ಪಕ್ಷದ ಮಂಗಳೂರು ವಲಯಾಧ್ಯಕ್ಷ S.M.. ಮುತ್ತಲಿಬ್ರವರು ಮಾತನಾಡಿ “ವಾರ್ಡ್ ಸಮಿತಿಯನ್ನು ರಚಿಸಬೇಕೆಂದು ವೆಲ್ಫೇರ್ ಪಾರ್ಟಿಯು ತನ್ನ ಆರಂಭ ದಿನದಿಂದಲೇ ಸರಕಾರಕ್ಕೆ ಒತ್ತಾಯಿಸುತ್ತಿದ್ದು, ತನ್ನ ನಗರ ಪಾಲಿಕಾ ಚುನಾವಣಾ ಪ್ರಣಾಳಿಕೆಯಲ್ಲಿ ಇದನ್ನು ನಮೂದಿಸಿದೆ ಕೂಡಾ. ಅದರೊಂದಿಗೆ ಕಳೆದ ನಗರಸಭೆ ಚುನಾವಣೆಯಲ್ಲಿ ಆಯಾಯ ವಾರ್ಡ್ಗಳ ಜನರಲ್ಲಿ ಮತ ಕೇಳುವಾಗ, ನಾವು ಈ ಭರವಸೆಯನ್ನು ಮತದಾರರಿಗೆ ನೀಡಿದ್ದೆವು. ಇದೀಗ ಹೈಕೋರ್ಟ್ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಆದೇಶ ನೀಡಿರುವುದು ಸ್ವಾಗತಾರ್ಹ” ಎಂದರು.
ಈ ಸಂದರ್ಭದಲ್ಲಿ, 10 ಸದಸ್ಯರಿರುವ ವಾರ್ಡ್ ಸಮತಿಗೆ ಇಬ್ಬರು ಸ್ಥಳೀಯರಿರಬೇಕು ಎಂಬುದರ ಬದಲು ಕನಿಷ್ಠ 5 ಸ್ಥಳೀಯರಿರಲೇಬೇಕೆಂದು ಪಕ್ಷವು ಒತ್ತಾಯಿಸಿದೆ.
ಈ ಆದೇಶ ಬರಲು ಶ್ರಮಿಸಿದ ಸಿವಿಕ್ ಗ್ರೂಪ್ನ ಸದಸ್ಯರಾದ ಪದ್ಮನಾಭ ಉಳ್ಳಾಲ್ರನ್ನು ಪಕ್ಷವು ಈಗಾಗಲೇ ಅಭಿನಂದಿಸಿದೆ ಎಂದು ಪಕ್ಷದ ಜಿಲ್ಲಾ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಲಾಗಿದೆ.












