ಸನ್ಮಾರ್ಗ ವಾರ್ತೆ-
ಮುಂಬೈ, ಜ. 9: ಪೌರತ್ವ ತಿದ್ದುಪಡಿ ಕಾನೂನಿನ ವಿರುದ್ಧ ಶಾಂತಿ ಮಂತ್ರದೊಂದಿಗೆ ಮಾಜಿ ಕೇಂದ್ರ ಸಚಿವ ಯಶ್ವಂತ್ ಸಿನ್ಹಾ ಮುಂಬೈಯಿಂದ ದಿಲ್ಲಿಯವರೆಗೆ 3,000 ಕಿಲೋಮೀಟರ್ ದೂರದ ಶಾಂತ್ರಿ ಯಾತ್ರೆ ನಡೆಸಲಿದ್ದಾರೆ.
ಸಿಎಎಯನ್ನು ಹಿಂಪಡೆಯಿರಿ ಎನ್ನುವುದು ಅವರ ಯಾತ್ರೆಯ ಮುಖ್ಯ ಗುರಿಯಾಗಿದೆ. ಮಹಾರಾಷ್ಟ್ರ, ಗುಜರಾತ್, ರಾಜಸ್ಥಾನ, ಉತ್ತರಪ್ರದೇಶ, ಹರ್ಯಾಣಗಳ ಮೂಲಕ ಶಾಂತಿ ಯಾತ್ರೆ ಹಾದು ಹೋಗಲಿದೆ. ಜನವರಿ 30ಕ್ಕೆ ಗಾಂಧೀಜಿಯ ಹುತಾತ್ಮ ದಿನದಲ್ಲಿ ರಾಜ್ಘಾಟ್ನಲ್ಲಿ ಯಾತ್ರೆ ಕೊನೆಗೊಳ್ಳಲಿದೆ. ದಕ್ಷಿಣ ಮುಂಬೈಯಲ್ಲಿ ಎನ್ಸಿಪಿ ಅಧ್ಯಕ್ಷ ಶರದ್ ಪವಾರ್ ಯಾತ್ರೆಗೆ ಹಸಿರು ನಿಶಾನೆ ತೋರಿಸಲಿದ್ದಾರೆ. ಹಲವಾರು ಸಂಘಟನೆಗಳು ಯಾತ್ರೆಯಲ್ಲಿ ಭಾಗವಹಿಸಲಿವೆ ಎಂದು ಸಿನ್ಹಾ ಹೇಳಿದರು.
ಸರಕಾರದ ಮುಂದೆ ಮುಖ್ಯ ಬೇಡಿಕೆಯನ್ನು ಇರಿಸಲಾಗುವುದು ಎಂದು ಅವರು ತಿಳಿಸಿದರು. ಸಿಎಎ ಹಿಂಪಡೆಯುವುದು, ಸಿಎಎ ಪ್ರತಿಭಟನೆಗಳ ವೇಳೆ ನಡೆದ ಹಿಂಸೆಯ ಘಟನೆಯ ತನಿಖೆ ಮತ್ತು ಎನ್ಆರ್ ಸಿ ಜಾರಿಗೊಳಿಸಬಾರದು ಎನ್ನುವುದು ಅವರ ಯಾತ್ರೆಯ ಮುಖ್ಯ ಬೇಡಿಕೆಯಾಗಿದೆ. ಯಶ್ವಂತ್ ಸಿನ್ಹಾರ ಜೊತೆಗೆ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಪೃಥ್ವಿರಾಜ್ ಚವ್ಹಾಣ್, ಮಾಜಿ ಸಂಸದ ಶತ್ರುಘ್ನ ಸಿನ್ಹಾ, ವಿದರ್ಭ ಕಾಂಗ್ರೆಸ್ ನಾಯಕ ಆಶಿಷ್ ದೇಶ್ಮುಖ್ ಪತ್ರಿಕಾಗೋಷ್ಠಿಯಲ್ಲಿದ್ದರು.












