ಎನ್‌ಆರ್‌ಸಿಯಿಂದ ಹಿಂದೆ ಸರಿದ ಕರ್ನಾಟಕ: ವಿವರ ಸಂಗ್ರಹಕ್ಕೆ ನಿರ್ಧಾರ

0
732

ಸನ್ಮಾರ್ಗ ವಾರ್ತೆ

ಬೆಂಗಳೂರು,ಅ.22: ಅಸ್ಸಾಮಿನ ಮಾದರಿಯಲ್ಲಿ ರಾಷ್ಟ್ರೀಯ ಪೌರತ್ವ ಪಟ್ಟಿ ತಯಾರಿಸುವ ಪ್ರಕ್ರಿಯೆಯಿಂದ ಕರ್ನಾಟಕ ಸರಕಾರ ಸದ್ಯಕ್ಕೆ ಹಿಂದೆ ಸರಿದಿದೆ. ದಾಖಲೆಗಳಿಲ್ಲದೆ, ವೀಸಾ ಅವಧಿ ಮುಗಿದು ಕರ್ನಾಟಕದಲ್ಲಿ ಉಳಿದವರ ವಿವರ ಸಂಗ್ರಹಿಸಲು ತೀರ್ಮಾನಿಸಲಾಗಿದ್ದು, ರಾಷ್ಟ್ರೀಯ ಪೌರತ್ವ ಪಟ್ಟಿ ತಯಾರಿಸುವ ಪ್ರಾಯೋಗಿಕ ಕಷ್ಟಗಳನ್ನು ಗಣನೆಗೆ ತೆಗೆದುಕೊಂಡು ಹಿಂದೆ ಸರಿಯಲಾಗಿದೆ.

ಅನಧಿಕೃತವಾಗಿ ವಾಸಿಸುವ ವಿದೇಶಿ ಪ್ರಜೆಗಳಿಗೆ ಬೆಂಗಳೂರಿನ ನೆಲಮಂಗಲದಲ್ಲಿ ಬಂದಿಖಾನೆ ಸಜ್ಜಾಗಿದೆ. ಸಾಮಾಜಿಕ ಕಲ್ಯಾಣ ಇಲಾಖೆಯ ಅಧೀನದಲ್ಲಿದ್ದ ಒಂದು ಹಾಸ್ಟೆಲನ್ನು ಬಂದಿಖಾನೆ ಮಾಡಲಾಗಿದೆ.

ದಕ್ಷಿಣ ಭಾರತದಲ್ಲಿ ಪ್ರಥಮವಾಗಿ ಸ್ಥಾಪನೆಯಾದ ಕೇಂದ್ರ ಶೀಘ್ರದಲ್ಲಿ ಕಾರ್ಯಾರಂಭಿಸಲಿದೆ. ಅಸ್ಸಾಮಿನಂತೆ ಕರ್ನಾಟಕದಲ್ಲಿ ಬಾಂಗ್ಲಾದೇಶಿ ವಲಸೆಗಾರರು ಇದ್ದಾರೆ. ಇವರ ಕುರಿತು ವಿವರಗಳನ್ನು ಸಂಗ್ರಹಿಸಲಾಗುತ್ತಿದೆ. ಕೇಂದ್ರ ಸರಕಾರದ ರಾಷ್ಟ್ರೀಯ ಪೌರತ್ವ ಪಟ್ಟಿಯನ್ನು ಕರ್ನಾಟಕದಲ್ಲಿ ಜಾರಿಗೆ ತರಲಾಗುವುದು ಎಂದು ರಾಜ್ಯದ ಗೃಹ ಸಚಿವ ಬಸವರಾಜ ಬೊಮ್ಮಾಯಿ ಈ ಹಿಂದೆ ಹೇಳಿದ್ದರು.

ಆದರೆ, ಕರ್ನಾಟಕ ಗೃಹ ಇಲಾಖೆ ನಿರ್ಧಾರದಿಂದ ಹಿಂದೆ ಸರಿದಿರುವುದು ಪ್ರತಿಭಟನೆಯನ್ನು ತಪ್ಪಿಸುವುದಕ್ಕಾಗಿ ಎನ್ನಲಾಗುತ್ತಿದೆ.

ಅಸ್ಸಾಂ ಮಾದರಿಯಲ್ಲಿ ಅಧಿಕೃತ ಪಟ್ಟಿ ತಯಾರಿಸುವುದಿಲ್ಲ ಎಂದು ಹೇಳುವಾಗ ಅನಧೀಕೃತ ಪಟ್ಟಿಯನ್ನು ತಯಾರಿಸುವ ಯತ್ನ ನಡೆಯಬಹುದು ಎಂದು ಮಾನವಹಕ್ಕು ಕಾರ್ಯಕರ್ತರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಅನಧೀಕೃತ ವಾಸವಿರುವವರ ಪತ್ತೆಗೆ ಸಹಾಯಕವಾಗುವ ಪೌರತ್ವ ವಿವರ ಸಂಗ್ರಹ ನಡೆಸಿ ಸರಕಾರ ಅದನ್ನು ತನ್ನ ಬಳಿ ಇಟ್ಟುಕೊಳ್ಳುವುದೆಂದು ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದ್ದರು.