ಸನ್ಮಾರ್ಗ ವಾರ್ತೆ
ಜನೀವ, ಮಾ. 21: ವಿಶ್ವಾದ್ಯಂತ ಕೊರೊನ ಹರಡುತ್ತಿದ್ದು ವೈರಸ್ ಪೀಡಿತ ಯುವಕರೂ ಸಾವಿಗೆ ಅತೀತರಲ್ಲ ಎಂದು ವಿಶ್ವ ಆರೋಗ್ಯ ಸಂಘಟನೆ ಡಬ್ಲ್ಯು ಎಚ್ ಒ ತಿಳಿಸಿದೆ. ವಯಸ್ಸಾದ ಮಂದಿಯಲ್ಲಿ ಸಾವಿನ ಪ್ರಮಾಣ ಹೆಚ್ಚಿದೆ. ಆದರೆ ಯುವಕರಲ್ಲಿ ಇದು ಹೆಚ್ಚಳವಾಗುವುದಿಲ್ಲ ಎಂದು ಹೇಳಲು ಆಗುವುದಿಲ್ಲ ಎಂದು ವಿಶ್ವ ಆರೋಗ್ಯ ಸಂಘಟನೆ ನಿರ್ದೇಶಕ ಜನರಲ್ ಟೆಡ್ರಸ್ ಅಡೋನಾಮ ಗಬ್ರಿಯೊಸೋಸ್ ತಿಳಿಸಿದ್ದಾರೆ.
ಕೊರೊನಾ ವಿರುದ್ಧ ಯುವಕರೂ ಜಾಗ್ರತೆ ವಹಿಸಬೇಕು. ವಯಸ್ಸಾದವರಲ್ಲಿ ವೈರಸ್ ಬಾಧೆ ಮತ್ತು ಸಾವಿನ ಸಂಖ್ಯೆ ಹೆಚ್ಚಿದೆ. ಆದರೆ ಯುವಕರೂ ವೈರಸ್ನಿಂದ ಅತೀತರಲ್ಲ. ಒಂದು ವೇಳೆ ಇದು ನಿಮ್ಮನ್ನು ವಾರಗಳ ಕಾಲ ಆಸ್ಪತ್ರೆಯಲ್ಲಿರುವಂತೆ ಮಾಡಬಹುದು. ಅಥವಾ ಸಾವಿನವರೆಗೂ ಮುಂದುವರಿಯಲೂ ಬಹುದು ಎಂದು ಟೆಡ್ರಸ್ ಮುನ್ನೆಚ್ಚರಿಕೆ ನೀಡಿದರು.
ಯುವಕರು ಅನಾರೋಗ್ಯವಾಗದಂತೆ ನೋಡಿಕೊಳ್ಳಬೇಕು. ಸಾಮಾಜಿಕ ಬೆರೆಯುವಿಕೆಯಿಂದ ದೂರ ಇರಬೇಕು. ತಮಗೆ ಕೊರೊನಾ ಬರುವುದಿಲ್ಲ ಎಂದು ಮತ್ತು ಯಾರಿಗೂ ಅದು ಹರಡುವುದಿಲ್ಲ ಎಂಬ ಮನಸ್ಥಿತಿಯನ್ನು ಯುವಕರು ತಿದ್ದಿಕೊಳ್ಳಬೇಕು. ಕೊರೊನಾ ಹರಡಿದ ಚೀನದ, ಇಟಲಿಯಲ್ಲಿ ಯುವಕರು ಸಾವಿಗೀಡಾಗಿದ್ದಾರೆ. ಗುರುವಾರದಿಂದ ಚೀನದ ವುಹಾನದಲ್ಲಿ ಹೊಸ ಕೊರೊನಾ ಪ್ರಕರಣ ವರದಿಯಾಗಿಲ್ಲ. ಇದು ಜಗತ್ತಿನಲ್ಲಿ ಆಶಾವಾದ ಮತ್ತು ಸಮಾಧಾನದ ವಿಷಯ ಎಂದು ಅವರು ಹೇಳಿದರು. ನೇಸರ್ ಫಾರ್ ಡೀಸೀಸ್ ಕಂಟ್ರೋಲ್ ಆಂಡ್ ಪ್ರಿವಿನ್ಶನ್ ಹೊರಡಿಸಿದ ಲೆಕ್ಕಗಳ ಪ್ರಕಾರ ಅಮೆರಿಕದಲ್ಲಿ ಕೊರೊನಾ ಇರುವವರಲ್ಲಿ ಶೇ. 30ರಷ್ಟು ಮಂದಿ 20ರಿಂದ 44ವರ್ಷದೊಳಗಿನವರೂ ಇದ್ದಾರೆ. ಇವರಲ್ಲಿ ಶೇ. 20ರಷ್ಟು ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ. ಶೇ.12ರಷ್ಟು ಮಂದಿ ಐಸಿಯುನಲ್ಲಿದ್ದಾರೆ. ಶೇ. 50ರಷ್ಟು ಮಂದಿ 60 ವರ್ಷಕ್ಕಿಂತ ಕೆಳ ವಯೋಮಾನದವರು ಕೊರೊನಾ ಪೀಡಿತರು ಎಂದು ಅವರು ಹೇಳಿದರು.
ಜಗತ್ತಿನಲ್ಲಿ ಈವರೆಗೆ 11,406 ಸಾವುಗಳು ವರದಿಯಾಗಿದೆ. 2,76,179 ಸೋಂಕು ಪೀಡಿತರಿದ್ದಾರೆ. ಚೀನದಲ್ಲಿ 3262 ಮಂದಿ ಮೃತಪಟ್ಟಿದ್ದಾರೆ. ಇಟಲಿಯಲ್ಲಿ ಸಾವಿನ ಸಂಖ್ಯೆ 4000 ದಾಟಿದೆ.












