ಕಾಸರಗೋಡಿನಲ್ಲಿ ಕಟ್ಟೆಚ್ಚರ: ಸೂಚನೆ ಪಾಲಿಸದ 11 ಅಂಗಡಿಗಳ ವಿರುದ್ಧ ಕೇಸು ದಾಖಲು

0
695

ಸನ್ಮಾರ್ಗ ವಾರ್ತೆ

ಕಾಸರಗೋಡು, ಮಾ. 21: ಕಾಸರಗೋಡು ಜಿಲ್ಲೆಯಲ್ಲಿ ಆರು ಮಂದಿಗೆ ಕೊರೊನಾ ದೃಢಪಟ್ಟಿದ್ದು ಜಿಲ್ಲೆಯಲ್ಲಿ ಕಟ್ಟೆಚ್ಚರಕ್ಕೆ ಆದೇಶಿಸಲಾಗಿದೆ. ಎರಡು ವರ್ಷದ ಮಗು ಸಹಿತ ಎಂಟು ಮಂದಿಗೆ ಕೊರೊನಾ ಇದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.

ವಿದೇಶಗಳಿಂದ ಊರಿಗೆ ಬಂದು ಎಚ್ಚರಿಕೆಯ ಸೂಚನೆಗಳನ್ನು ಪಾಲಿಸದೇ ಸುತ್ತಾಡಿದ ವ್ಯಕ್ತಿಯ ವಿರುದ್ಧ ಪೊಲೀಸರು ಕೇಸು ದಾಖಲಿಸಿದ್ದಾರೆ. ಕಾಸರಗೋಡಿನಲ್ಲಿ ಬೆಳಗ್ಗೆ ತೆರೆದುಕೊಂಡ ಅಂಗಡಿಗಳನ್ನು ಮುಚ್ಚಿಸಲಾಗಿದೆ. ಹನ್ನೊಂದು ಅಂಗಡಿಯವರ ವಿರುದ್ದ ಕೇಸು ದಾಖಲಿಸಲಾಗಿದೆ. ಜಿಲ್ಲಾಧಿಕಾರಿ ಖುದ್ದು ವೀಕ್ಷಿಸಿ ತಪಾಸಣೆ ಕಾರ್ಯವನ್ನು ತೀವ್ರಗೊಳಿಸಿದರು. ಇನ್ನು ಸೂಚನೆ ನೀಡುವುದಿಲ್ಲ, ಉಲ್ಲಂಘಿಸಿದರೆ ಕಠಿಣ ಕ್ರಮ ಜರಗಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಹೇಳಿದರು. ಬೆಳಗ್ಗೆ ಹನ್ನೊಂದು ಗಂಟೆಯಿಂದ ಸಂಜೆ ಐದು ಗಂಟೆಯವರೆಗೆ ಅಂಗಡಿಗಳ ಚಟುವಟಿಕೆಗಳನ್ನು ಸೀಮಿತಗೊಳಿಸಲಾಗಿದೆ.

ಕಾಸರಗೋಡು ಜಿಲ್ಲೆಯಲ್ಲಿ ಒಂದುವಾರ ಸರಕಾರಿ ಕಚೇರಿಗಳನ್ನು ಮುಚ್ಚಿಡಲು ಸರಕಾರ ಹೇಳಿದೆ. ಎರಡು ವಾರ ಜಿಲ್ಲೆಯ ಎಲ್ಲ ಆರಾಧಾನಾಲಯಗಳು ಕ್ಲಬ್‍ಗಳು ಮುಚ್ಚಲಾಗುವುದು. ಕಳೆದ ದಿವಸ ಕೊರೊನಾ ದೃಢಪಟ್ಟ 47 ವರ್ಷದ ವ್ಯಕ್ತಿಯೊಂದಿಗೆ ಸಂಪರ್ಕ ಹೊಂದಿದವರ ಪರೀಕ್ಷೆಯ ಫಲಿತಾಂಶ ಸಿಕ್ಕಿದ ಬಳಿಕ ಕೊರೊನಾ ಬಾಧಿಸಿದವರ ಸಂಖ್ಯೆಯಲ್ಲಿ ಹೆಚ್ಚಳವಾಗಬಹುದೋ ಎಂದು ಜಿಲ್ಲೆಯಲ್ಲಿ ಆತಂಕ ಮನೆಮಾಡಿದೆ. ಕೊರೊನಾ ದೃಢಪಟ್ಟವರಲ್ಲಿ ಮಾರ್ಚ್ 17ಕ್ಕೆ ಕೊರೊನಾ ದೃಢಪಟ್ಟಿದ್ದ ಕಳನಾಡು ಎಂಬಲ್ಲಿನ ವ್ಯಕ್ತಿಯ ಮೂವರು ಸಂಬಂಧಿಕರು ಸೇರಿದ್ದಾರೆ. ಇಬ್ಬರು ಮಹಿಳೆಯರು ಎರಡು ವರ್ಷದ ಒಂದು ಮಗುವಿಗೆ ಕೊರೊನಾ ತಗಲಿದೆ. ಇವರನ್ನು ಈಗ ಪರಿಯಾರಂ ಮೆಡಿಕಲ್ ಕಾಲೇಜಿನ ಆಸ್ಪತ್ರೆಯ ಐಸೊಲೇಶನ್ ವಾರ್ಡಿನಲ್ಲಿರಿಸಲಾಗಿದೆ. ಕಳನಾಡಿನ ವ್ಯಕ್ತಿಯ ಜೊತೆಗೆ ಕಾರಲ್ಲಿ ಹೋಗಿದ್ದ ವ್ಯಕ್ತಿಗೂ ಕೊರೊನಾ ದೃಢಪಟ್ಟಿದೆ. ಈತನನ್ನು ಕಾಸರಗೋಡಿನ ಜನರಲ್ ಆಸ್ಪತ್ರೆಗೆ ಸೇರಿಸಲಾಗಿದೆ.

ಈ ತಿಂಗಳು 17ರಂದು ಶಾರ್ಜದಿಂದ ಬಂದ 52 ವರ್ಷದ ವ್ಯಕ್ತಿ, ದುಬೈಯಿಂದ ಮಂಗಳೂರಿನ ವಿಮಾನ ನಿಲ್ದಾಣದ ಮೂಲಕ ಬಂದ 27 ವರ್ಷದ ವ್ಯಕ್ತಿಗೆ ಕೊರೊನಾ ದೃಢಪಟ್ಟಿದೆ. ಇಬ್ಬರನ್ನೂ ಕಾಸರಗೋಡಿನ ಜನರಲ್ ಆಸ್ಪತ್ರೆಗೆ ಸೇರಿಸಲಾಗಿದೆ.