ಬಂದರ್ ಪೊಲೀಸರ ವಶದಲ್ಲಿದ್ದ ಯುವಕ ಹೃದಯಾಘಾತದಿಂದ ಮೃತ್ಯು: ಪಾರದರ್ಶಕ ತನಿಖೆಯ ಭರವಸೆ ನೀಡಿದ ಪೊಲೀಸ್ ಕಮಿಷನರ್

0
470

ಸನ್ಮಾರ್ಗ ವಾರ್ತೆ

ಮಂಗಳೂರು: ಕಳ್ಳತನಕ್ಕೆ ಸಂಬಂಧಿಸಿ ನಗರದ‌ ಬಂದರ್ ಪೊಲೀಸರ ವಶದಲ್ಲಿದ್ದ ಯುವಕನೋರ್ವನಿಗೆ ಠಾಣೆಯಲ್ಲಿ ಹೃದಯಾಘಾತವಾಗಿ ಆಸ್ಪತ್ರೆಗೆ ಕರೆದುಕೊಂಡು ಬಂದಾಗಲೇ ಮೃತಪಟ್ಟಿರುವ ಘಟನೆ ನಡೆದಿದ್ದು, ಈ ಸಂಬಂಧ ಪಾರದರ್ಶಕ ತನಿಖೆ ನಡೆಸುವುದಾಗಿ ಮಂಗಳೂರು ನಗರ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ತಿಳಿಸಿದ್ದಾರೆ.

ಮಂಗಳೂರು ನಗರದಲ್ಲಿ ಇಂದು(ಫೆ. 18) ಬೆಳಗಿನ ಜಾವ 3.30ರ ಸಮಯದಲ್ಲಿ ಜ್ಯೋತಿ ಸರ್ಕಲ್ ಬಳಿಯಿರುವ  ಸ್ಮಾರ್ಟ್ ಸಿಟಿಗೆ ಸೇರಿದ ಕಬ್ಬಿಣದ ಸರಳುಗಳನ್ನು ಕದ್ದುಕೊಂಡು ಹೋಗುತ್ತಿರುವ ಬಗ್ಗೆ ರಾತ್ರಿ ಗಸ್ತಿನಲ್ಲಿದ್ದ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿತ್ತು. ಮಾಹಿತಿಯರಿತು ಸ್ಥಳಕ್ಕೆ ಬಂದು ಬಂದರ್ ಠಾಣಾಧಿಕಾರಿಗಳು ಕಳವು ‌ಮಾಡಿದ್ದ ಸೊತ್ತಿನೊಂದಿಗೆ ನಗರದ ಸುರತ್ಕಲ್ ರೈಲ್ವೆ ಕ್ವಾಟ್ರಸ್ ಸಮೀಪದ ನಿವಾಸಿ ಸತೀಶ್ (35) ಹಾಗೂ ನಗರದ ಉರ್ವ ಮಾರ್ಕೆಟ್ ಮಾರಿಯಮ್ಮ ದೇವಸ್ಥಾನದ ಹತ್ತಿರದ ನಿವಾಸಿ ರಾಜೇಶ್(30) ಎಂಬಿಬ್ಬರನ್ನು ಠಾಣೆಗೆ ಕರೆದೊಯ್ಯಲಾಗಿತ್ತು.

ಠಾಣೆಗೆ ಕರೆದುಕೊಂಡು ಹೋಗಿ ವಿಚಾರಣೆ ನಡೆಸಿದಾಗ ಕುಡಿತದ ಅಭ್ಯಾಸವಿರುವುದರಿಂದ ಹಣದ ಅವಶ್ಯಕತೆಗಾಗಿ ಕಳವು ಮಾಡಿದ್ದಾಗಿ ಹೇಳಿದ್ದರು.

ಇಂದು ಮಧ್ಯಾಹ್ನ ಊಟ ಮಾಡಿದ ಬಳಿಕ ಸುಮಾರು 3.20 ರ ಸುಮಾರಿಗೆ ರಾಜೇಶ್ ರವರಿಗೆ ಎದೆಯಲ್ಲಿ ನೋವು ಕಾಣಿಸಿ ಬೆವರುತ್ತಿದ್ದನ್ನು ತಿಳಿಸಿದಾಗ ಕೂಡಲೇ ಠಾಣೆಯಿಂದ ನೇರವಾಗಿ ಪೊಲೀಸ್ ವಾಹನದ ಮೂಲಕ ವೆನ್ಲಾಕ್ ಆಸ್ಪತ್ರೆಗೆ ಕರೆದುಕೊಂಡು ಬಂದಾಗ ಮೃತ ಹೊಂದಿದ್ದಾನೆಂದು ವೈದ್ಯರು ಹೇಳಿರುವುದಾಗಿ ಮಂಗಳೂರು ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಘಟನೆ ಪೊಲೀಸ್ ಠಾಣೆಯಲ್ಲಿ ನಡೆದಿರುವುದರಿಂದ ಮೃತಪಟ್ಟ ರಾಜೇಶ್ ಕುಟುಂಬ ಸದಸ್ಯರು ಹಾಗೂ ಯುವಕನ ಸಮುದಾಯದ ಮುಖಂಡರು ದೂರು ನೀಡಿದ್ದಾರೆ. ಯುವಕನ ಮೃತದೇಹದ ಮರಣೋತ್ತರ ಪರೀಕ್ಷೆ ಮಾಡಲಾಗುವುದು. ಅಲ್ಲದೇ, ಈ ಸಂಬಂಧ ಪಾರದರ್ಶಕ ತನಿಖೆಗಾಗಿ ತನಿಖಾಧಿಕಾರಿಯಾಗಿ ಉತ್ತರ ವಿಭಾಗದ ಎಸಿಪಿ ಮಹೇಶ್ ಕುಮಾರ್ ಅವರನ್ನು ನೇಮಿಸಲಾಗಿದೆ ಎಂದು ಪೊಲೀಸ್ ಕಮಿಷನರ್ ಹೇಳಿದ್ದಾರೆ.