ಸೌದಿ ಅರೇಬಿಯಾ: 30 ಮಹಿಳಾ ಟ್ರೈನ್ ಡ್ರೈವರ್ ನೇಮಕಾತಿಗೆ ಬಂದ ಅರ್ಜಿಗಳ ಸಂಖ್ಯೆ 28,000…!

0
220

ಸನ್ಮಾರ್ಗ ವಾರ್ತೆ

ರಿಯಾದ್: ಮಹಿಳೆಯರಿಗೆ ಉದ್ಯೋಗ ಕ್ಷೇತ್ರಗಳಲ್ಲಿ ಇರುವ ನಿರ್ಬಂಧವನ್ನು ಸೌದಿ ಅರೇಬಿಯಾ ತೆಗೆದು ಹಾಕಲಾದ ಬಳಿಕ ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗ ಅವಕಾಶಗಳು ಲಭ್ಯವಾಗುತ್ತಿವೆ. ಈ ಮಧ್ಯೆ ಸ್ಪೇನ್ ನ ಕಂಪನಿಯೊಂದು ಸೌದಿಯಲ್ಲಿ ಕೇವಲ 30 ಮಹಿಳಾ ಟ್ರೈನ್ ಡ್ರೈವರ್ ಬೇಕು ಎಂಬ ಜಾಹೀರಾತಿಗೆ ಬಂದಿರುವ ಅರ್ಜಿಗಳ ಸಂಖ್ಯೆ ನೋಡಿದರೆ ನಿಮಗೆ ಆಶ್ಚರ್ಯವಾಗಬಹುದು.

ಕೇವಲ 30 ಮಹಿಳಾ ಟ್ರೈನ್ ಡ್ರೈವರ್ ಗಳ ನೇಮಕಾತಿಗಾಗಿ ಬಂದಿರುವ ಅರ್ಜಿಗಳ ಸಂಖ್ಯೆ 28000 ಎಂದು ವರದಿಯಾಗಿದೆ. ಮಹಿಳೆಯರಿಗೆ ವಾಹನವನ್ನು ಓಡಿಸುವ ಅನುಮತಿ ಲಭ್ಯವಾದ ಬಳಿಕ ಸಾಕಷ್ಟು ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಉದ್ಯೋಗ ಅವಕಾಶಗಳು ಲಭ್ಯವಾಗುತ್ತಿವೆ

ಒಂದು ಕಾಲದಲ್ಲಿ ಪುರುಷರಿಗೆ ಮಾತ್ರ ಸೀಮಿತವಾಗಿದ್ದ ಹೆಚ್ಚಿನ ಉದ್ಯೋಗಗಳು ಈಗ ಮಹಿಳೆಯರಿಗೂ ತೆರೆದುಕೊಂಡಿರುವುದರ ಪರಿಣಾಮವು ಸೌದಿಯಲ್ಲಿ ಭಾರೀ ದೊಡ್ಡ ಮಟ್ಟದಲ್ಲಿ ಕಾಣಿಸಿಕೊಂಡಿದೆ. ಆಯ್ಕೆಗೊಂಡ 30 ಮಹಿಳಾ ಟ್ರೈನ್ ಡ್ರೈವರ್ ಗಳಿಗೆ ಸಂಬಳ ಸಹಿತ ಒಂದು ವರ್ಷದ ತರಬೇತಿ ಇದ್ದು ಆ ಬಳಿಕ ಅವರು ಮಕ್ಕಾ ಮತ್ತು ಮದೀನಾ ದ ನಡುವೆ ಬುಲೆಟ್ ಟ್ರೈನ್ ಓಡಿಸಲಿದ್ದಾರೆ. ಈಗಾಗಲೇ 80 ಪುರುಷರನ್ನು ಟ್ರೈನ್ ಡ್ರೈವರ್ ಆಗಿ ಆಯ್ಕೆ ಮಾಡಲಾಗಿದೆ ಎಂದು ರೇಂಫೆ ಎಂಬ ಸ್ಪ್ಯಾನಿಷ್ ರೈಲು ಕಂಪನಿ ಮಾಹಿತಿ ನೀಡಿದೆ.

ಇತ್ತೀಚಿನವರೆಗೆ ಸೌದಿಯಲ್ಲಿ ಮಹಿಳೆಯರಿಗೆ ಶಿಕ್ಷಣ ಆರೋಗ್ಯ ಮುಂತಾದ ಕ್ಷೇತ್ರಗಳಲ್ಲಿ ಮಾತ್ರ ಉದ್ಯೋಗ ಲಭ್ಯವಾಗುತ್ತಿತ್ತು. ಸೌದಿ ದೊರೆ ಮೊಹಮ್ಮದ್ ಬಿನ್ ಸಲ್ಮಾನ್ ಅವರು ಮಹಿಳೆಯರಿಗೆ ಉದ್ಯೋಗ ಕ್ಷೇತ್ರಗಳಲ್ಲಿ ಇರುವ ನಿರ್ಬಂಧವನ್ನು ತೆಗೆದು ಹಾಕಿದ ಬಳಿಕ ಕಳೆದ ಐದು ವರ್ಷಗಳಲ್ಲಿ ಉದ್ಯೋಗ ಕ್ಷೇತ್ರದಲ್ಲಿ ಮಹಿಳಾ ಪ್ರಾತಿನಿಧ್ಯ ಶೇ. 33ಕ್ಕೆ ಏರಿದೆ. ಮಹಿಳೆಯರು ಈ ಮೊದಲು ಲಿಂಗ ಪ್ರತ್ಯೇಕತೆಯ ಕಾನೂನುಗಳಿಂದಾಗಿ ಶಿಕ್ಷಕಿಯರಾಗಿ ಹಾಗೂ ನರ್ಸ್, ವೈದ್ಯ ಹುದ್ದೆಗಳಿಗೆ ಮಾತ್ರ ಸೀಮಿತವಾಗಿದ್ದರು.