ಬೆಂಗಳೂರು: ಯುವತಿಯ ಮೇಲೆ ಹಲ್ಲೆ ಎಸಗಿದ ಆರೋಪವನ್ನು ನಿರಾಕರಿಸಿದ ಜೊಮ್ಯಾಟೊ ಡೆಲಿವರಿ ಬಾಯ್

0
812

ಸನ್ಮಾರ್ಗ ವಾರ್ತೆ

ಬೆಂಗಳೂರು: ಝೊಮ್ಯಾಟೊ ಡೆಲಿವರಿ ಬಾಯ್ ಹೊಡೆದನೆಂದು ಯುವತಿ ಆರೋಪಿಸಿದ ಪ್ರಕರಣವು ಇದೀಗ ತಿರುವು ಪಡೆದುಕೊಂಡಿದ್ದು, ಯುವತಿ ಮೊದಲು ತನಗೆ ಹೊಡೆದಳು ಹಾಗೂ ಬೈದಳೆಂದು ಘಟನೆಯಲ್ಲಿ ಒಳಗೊಂಡ ಡೆಲಿವರಿ ಬಾಯ್ ಕಾಮರಾಜ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಆನ್‍ಲೈನ್ ಆರ್ಡರ್ ಮಾಡಿದ ಆಹಾರ ತಲುಪಿಸಲು ತಡವಾದ ವಿವಾದದಲ್ಲಿ ಕಾಮರಾಜು ತನ್ನ ಮೂಗಿಗೆ ಹೊಡೆದು ರಕ್ತ ಬರುವಂತೆ ಮಾಡಿದ ಎಂದು ಕಂಟೆಂಟ್ ಕ್ರಿಯೇಟರ್ ಮೇಕಪ್ ಆರ್ಟಿಸ್ಟ್ ಹಿತೇಶ್ ಚಂದ್ರ ಎಂಬ ಯುವತಿಯು ದೂರಿದ್ದಳು.

ಮೂಗಿನಿಂದ ರಕ್ತ ಸುರಿಯುತ್ತಿರುವ ವೀಡಿಯೊವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಯುವತಿ ಪೋಸ್ಟ್ ಮಾಡಿದ್ದಳು. ಇದಾದ ನಂತರ ಘಟನೆ ವೈರಲ್ ಆಗಿತ್ತು. ಈಗ ಡೆಲಿವರಿ ಬಾಯ್ ಯುವತಿ ತನಗೆ ಹೊಡೆದಿದ್ದಾಳೆ. ಚಪ್ಪಲಿಯಿಂದ ಹೊಡೆದಳು ಅವರದೇ ಉಂಗುರ ಮೂಗಿಗೆ ತಾಗಿ ಗಾಯವಾಗಿದ್ದೆಂದು ಹೇಳಿದ್ದಾನೆ.

ರಸ್ತೆ ಕೆಲಸ ನಡೆಯುತ್ತಿರುವ ಕಾರಣ ದಾರಿಯಲ್ಲಿ ಭಾರೀ ಬ್ಲಾಕ್ ಆಗಿತ್ತು. ಅವರ ಅಪಾರ್ಟ್‍ಮೆಂಟ್ ಬಾಗಿಲಿಗೆ ತಲುಪಿದ ನಂತರ ತಡವಾಗಿದ್ದಕ್ಕೆ ತಾನು ಮೊದಲೇ ಕ್ಷಮೆಯಾಚಿಸಿದೆ. ನಂತರ ಆಹಾರ ಕೊಟ್ಟೆ. ಕ್ಯಾಶ್ ಆನ್ ಡೆಲಿವರಿ ಅವರು ಆಯ್ಕೆ ಮಾಡಿದ್ದರು. ಆದ್ದರಿಂದ ಹಣಕ್ಕೆ ಕಾದು ಕೂತೆ. ಆದರೆ ಅವರು ಕೊಡಲು ಸಿದ್ಧರಾಗಲಿಲ್ಲ. ಮಾತ್ರವಲ್ಲ ನನ್ನೊಂದಿಗೆ ಒರಟಾಗಿ ಮಾತಾಡಿದರು ಎಂದು ಕಾಮರಾಜ್ ನ್ಯೂಸ್ ಮಿನಿಟ್‍ಗೆ ತಿಳಿಸಿದ್ದಾರೆ.

ಅವರು ಹಣ ಕೊಡದಿದ್ದರೆ ನನ್ನ ಖಾತೆಯಿಂದ ಹಣ ಹೋಗುತ್ತದೆ ಎಂದು ಹೇಳಿದೆ. ಈ ಸಂದರ್ಭದಲ್ಲಿ ನನ್ನನ್ನು ಗುಲಾಮ ಎಂದು ಕರೆದರು. ನಿನಗೆ ಏನು ಮಾಡಲು ಸಾಧ್ಯ ಎಂದು ಕೇಳಿದರು. ಇದರೊಂದಿಗೆ ಅವರ ಮನವಿಯಂತೆ ಆರ್ಡರ್ ರದ್ದುಪಡಿಸಲಾಗಿದೆ ಎಂದು ಝೊಮೆಟೊದಿಂದ ನನಗೆ ಮಾಹಿತಿ ಸಿಕ್ಕಿತ್ತು. ನಂತರ ಆಹಾರ ಕೊಟ್ಟು ಬಿಡಿ ಎಂದು ಹೇಳಿದರೂ ಅವರು ಸಹಕರಿಸಲಿಲ್ಲ. ಕೊನೆಗೆ ಸಹನೆಗೆಟ್ಟು ಹೊರಟಾಗ ಹಿತೇಶ್ ಹಿಂದಿಯಲ್ಲಿ ಬೈದರು. ನಂತರ ಅನಿರೀಕ್ಷಿತವಾಗಿ ಚಪ್ಪಲಿ ತೆಗೆದು ಹೊಡೆಯಲು ತೊಡಗಿದರು. ತಡೆಯಲು ಶ್ರಮಿಸುವ ವೇಳೆ ಅವರ ಉಂಗುರ ಅವರದೇ ಮೂಗಿಗೆ ತಾಗಿ ಗಾಯವಾಗಿ ರಕ್ತ ಸುರಿಯಿತು ಎಂದು ಕಾಮರಾಜು ಹೇಳಿದರು. ಎರಡು ವರ್ಷಕ್ಕೂ ಹೆಚ್ಚು ಸಮಯದಲ್ಲಿ ಈ ಕೆಲಸ ಮಾಡುವ ನನಗೆ ಇಂತಹ ಒಂದು ಅನುಭವ ಮೊದಲ ಬಾರಿ ಆಗಿದೆ ಎಂದು ಕಾಮರಾಜ್ ಹೇಳಿದರು.

ಮಂಗಳವಾರ ನಡೆದ ಘಟನೆಯಲ್ಲಿ ಬುಧವಾರ ಹಿತೇಶ್ ಸಾಮಾಜಿಕ ಮಾಧ್ಯಮದಲ್ಲಿ ಘಟನೆ ಹೊರ ಜಗತ್ತಿಗೆ ಅರಿಯುವಂತೆ ಮಾಡಿದ್ದಾರೆ. ಝೊಮ್ಯಾಟೊ ಡೆಲಿವರಿ ಬಾಯ್ ತನ್ನ ಮನೆಗೆ ನುಗ್ಗಿ ಹಲ್ಲೆ ಮಾಡಿದ್ದಾನೆ ಎಂದು ಹಿತೇಶ್ ಚಂದ್ರ ಆರೋಪಿಸಿದ್ದರು ಮತ್ತು ಸಂಜೆ 3:30ಕ್ಕೆ ಝೊಮ್ಯಾಟೊದಿಂದ ಆಹಾರ ಆರ್ಡರ್ ಮಾಡಿದ್ದರು. ಸಂಜೆ 4:30 ಆಗಿಯೂ ಬಂದಿರಲಿಲ್ಲ. ಇದರೊಂದಿಗೆ ಝೊಮ್ಯಾಟೋ ಕಸ್ಟಮರ್ ಕೇರ್‌ಗೆ ಸಂಬಂಧಿಸಿ ಆರ್ಡರ್ ಕ್ಯಾನ್ಸಲ್ ಮಾಡಲು ಮತ್ತು ಅಲ್ಲದಿದ್ದರೆ ಹಣ ಮರಳಿ ಕೊಡಲು ಹೇಳಿದ್ದರು. ಇದರ ನಡುವೆ ಆಹಾರದೊಂದಿಗೆ ಡೆಲಿವರಿ ಬಾಯ್ ಬಂದಿದ್ದರು. ತಡವಾಗಿದ್ದಕ್ಕೆ ಆರ್ಡರ್ ಬೇಡ ಕಸ್ಟಮರ್ ಕೇರಿನೊಂದಿಗೆ ಮಾತಾಡುವೆ ಎಂದು ಹೇಳಿದರು. ಮರಳಿ ಹೋಗದೆ ಬಲವಾಗಿ ಬಾಗಿಲು ತೆರೆದು ಒಳಗೆ ಬರಲು ಯತ್ನಿಸಿದಾಗ ತಾನು ಚಪ್ಪಲಿಯಿಂದ ಹೊಡೆಯಲು ಮುಂದಾದೆ ಆಗ ಯುವಕ ಮುಖಕ್ಕೆ ಹೊಡೆದ ಎಂದು ಹಿತೇಶ್ ಹೇಳಿದ್ದರು.

ಘಟನೆಯಲ್ಲಿ ಕಾಮರಾಜುರವರನ್ನು ಕೆಲಸದಿಂದ ತೆಗೆದುಹಾಕುತ್ತೇವೆಂದು ಜೋಮ್ಯಾಟೊ ತಿಳಿಸಿತ್ತು. ಯುವತಿಯ ದೂರಿನಲ್ಲಿ ಇಲೆಕ್ಟ್ರಾನಿಕ್ ಸಿಟಿ ಪೊಲೀಸರು ಕೇಸು ದಾಖಲಿಸಿ ಕಾಮರಾಜುರವರನ್ನು ಬಂಧಿಸಿದ್ದರು.