ಯಡಿಯೂರಪ್ಪರೇ, ನಾಲ್ಕು ವರ್ಷ ಪ್ರಾಯದ ಪ್ರಣಾಳಿಕೆಯ ಬಗ್ಗೆ ಒಂದೂ ಮಾತಾಡದೆ, ಒಂದು ತಿಂಗಳು ಪ್ರಾಯದ ಪ್ರಣಾಳಿಕೆಯ ವಿರುದ್ಧ ಬೀದಿಗಿಳಿದಿದ್ದೀರಲ್ಲ, ಸರಿಯೇ?

0
2352

ನ್ಯೂಸ್ ಡೆಸ್ಕ್

ಈ ಪ್ರಣಾಳಿಕೆಯನ್ನೊಮ್ಮೆ ಓದಿ.
1. ಸಂಪೂರ್ಣ ಗೌರವ ಮತ್ತು ಭದ್ರತೆಯೊಂದಿಗೆ ತಮ್ಮ ಪೂರ್ವಜರು ವಾಸಿಸಿದ ಕಾಶ್ಮೀರಕ್ಕೆ  ಕಾಶ್ಮೀರಿ ಪಂಡಿತರನ್ನು ಮರಳಿಸಲಾಗುವುದು.
2. ರಾಮಮಂದಿರ ನಿರ್ಮಾಣಕ್ಕೆ ಸರ್ವ ಪ್ರಯತ್ನಗಳನ್ನು ನಡೆಸಲಾಗುವುದು.
3. ಬೆಲೆ ನಿಯಂತ್ರಣ ನಿಧಿಯನ್ನು ಸ್ಥಾಪಿಸಲಾಗುವುದು.
4. ರೈತರ ಹಿತದೃಷ್ಟಿಯಿಂದ ರಾಷ್ಟ್ರೀಯ ಏಕ ಕೃಷಿ ಮಾರುಕಟ್ಟೆಯನ್ನು ಸ್ಥಾಪಿಸಲಾಗುವುದು.
5. ಕಾಶ್ಮೀರಕ್ಕೆ ಸಂಬಂಧಿಸಿ 370 ನೇ ವಿಧಿಯನ್ನು ರದ್ದುಪಡಿಸಲು ಕ್ರಮ ಕೈಗೊಳ್ಳಲಾಗುವುದು.
ಇವು, 2014 ರ ಲೋಕಸಭಾ ಚುನಾವಣೆಗೂ ಮೊದಲು ಬಿಜೆಪಿ ಬಿಡುಗಡೆಗೊಳಿಸಿದ 40 ಪುಟಗಳ ಪ್ರಣಾಳಿಕೆಯ ಕೆಲವು ಅಂಶಗಳು. ಏಕ್ ಭಾರತ್ ಶ್ರೇಷ್ಠ್ ಭಾರತ್ ಎಂಬ ಘೋಷಣೆಯೊಂದಿಗೆ ಬಿಡುಗಡೆಗೊಳಿಸಲಾದ ಈ ಪ್ರಣಾಳಿಕೆಗೆ ಇದೀಗ ನಾಲ್ಕು ವರ್ಷಗಳು ಸಂದಿವೆ. ಜೆಡಿಎಸ್ ಪಕ್ಷವು 2018 ರಲ್ಲಿ ಬಿಡುಗಡೆಗೊಳಿಸಿದ ಪ್ರಣಾಳಿಕೆಯನ್ನು ಎತ್ತಿಕೊಂಡು ಬಂದ್, ಪ್ರತಿಭಟನೆ, ಆರೋಪಗಳನ್ನು ಮಾಡುತ್ತಿರುವ ಯಡಿಯೂರಪ್ಪ ನೇತೃತ್ವದ ರಾಜ್ಯ ಬಿಜೆಪಿಯು ಯಾಕೆ ತನ್ನದೇ ಪಕ್ಷದ ಪ್ರಣಾಳಿಕೆಯ ಬಗ್ಗೆ ಮಾತಾಡುತ್ತಿಲ್ಲ? ಕುಮಾರಸ್ವಾಮಿಯವರ ಪ್ರಣಾಳಿಕೆಗೆ ಹೆಚ್ಚೆಂದರೆ ಒಂದೂವರೆ ತಿಂಗಳ ಪ್ರಾಯ. ಆದರೆ, ನರೇಂದ್ರ ಮೋದಿ ನೇತೃತ್ವದ ಬಿಜೆಪಿಯ ಪ್ರಣಾಳಿಕೆಗೆ ನಾಲ್ಕು ವರ್ಷಗಳೇ ತುಂಬಿತಲ್ಲ, ಯಾಕೆ ಯಡಿಯೂರಪ್ಪರು ಕಾಶ್ಮೀರಿ ಪಂಡಿತರನ್ನು ಮುಂದಿಟ್ಟುಕೊಂಡು ಬಂದ್ ಗೆ ಕರೆಕೊಡಬಾರದು? ನಾಲ್ಕು ವರ್ಷಗಳಲ್ಲಿ ಪಂಡಿತರ ಮರಳಿಕೆಗೆ ಕೈಗೊಂಡ ಕ್ರಮಗಳೇನು ಎಂದು ಪ್ರಶ್ನಿಸಿ ಪ್ರತಿಭಟನೆ ಹಮ್ಮಿಕೊಳ್ಳಬಾರದು? ರಾಮಮಂದಿರ ನಿರ್ಮಾಣದ ಬಗ್ಗೆ ಬಿಜೆಪಿ ಮಾತನ್ನೇ ಆಡುತ್ತಿಲ್ಲವಲ್ಲ, ಇದು ಜನರಿಗೆ ಮಾಡಿದ ದ್ರೋಹ ಎಂದು ಘೋಷಿಸಿ  ಯಾಕೆ ರಾಜ್ಯ ಬಿಜೆಪಿ ಬಂದ್ ಗೆ ಕರೆ ಕೊಡುತ್ತಿಲ್ಲ? ಕಾಶ್ಮೀರದ 370 ನೇ ವಿಧಿಯನ್ನು ರದ್ದುಪಡಿಸುವುದಕ್ಕೆ ನಾಲ್ಕು ವರ್ಷಗಳೂ ಸಾಲುತ್ತಿಲ್ಲವೇ ಎಂದು ಬಿಜೆಪಿಯ ಯಾವೊಬ್ಬ ನಾಯಕನೂ ಯಾಕೆ ಪ್ರಶ್ನಿಸುತ್ತಿಲ್ಲ? ರೈತರಿಗಾಗಿ ಏಕ ಕೃಷಿ ಮಾರುಕಟ್ಟೆ ಎಲ್ಲಿ ನಿರ್ಮಿಸಿದ್ದೀರಿ ಎಂದು ರೈತ ನಾಯಕರಾಗಿ ಯಡಿಯೂರಪ್ಪ ಕೇಳಲೇಕೆ ಮರೆತಿದ್ದಾರೆ? ಇದು ರೈತ ಬಂಧುಗಳಿಗೆ ಮಾಡುವ ದ್ರೋಹವಾಗಿ ಯಾಕೆ ಬಿಜೆಪಿಯ ರಾಜ್ಯ ನಾಯಕತ್ವ ಪರಿಗಣಿಸಿಲ್ಲ? ಬೆಲೆನಿಯಂತ್ರಣಕ್ಕಾಗಿ ಕೇಂದ್ರ ಸರಕಾರ ಕೈಗೊಂಡ ಕ್ರಮಗಳೇನು ಎಂದು ಪ್ರಶ್ನಿಸಿ ಯಡಿಯೂರಪ್ಪ ಯಾವಾಗ ಜನಚಳವಳಿ ಹಮ್ಮಿಕೊಳ್ಳುತ್ತಾರೆ?
ಪ್ರಣಾಳಿಕೆಯನ್ನು ಎತ್ತಿಕೊಂಡು ಪ್ರತಿಭಟನೆ ನಡೆಸುತ್ತಿರುವ ಯಡಿಯೂರಪ್ಪರು, ವಾಸ್ತವವಾಗಿ  ತಮ್ಮ ಹೋರಾಟದಲ್ಲಿ ಗಂಭೀರವಾಗಿಲ್ಲ ಮತ್ತು ಇದು ಪಕ್ಕಾ ರಾಜಕೀಯ ಅನ್ನುವುದನ್ನು ಇವೆಲ್ಲ ಸೂಚಿಸುತ್ತದೆ. ಮೋದಿಯವರಿಗೆ ನಾಲ್ಕು ವರ್ಷಗಳಲ್ಲಿ ಪೂರೈಸಲಾಗದ ಪ್ರಣಾಳಿಕೆಯ ಭರವಸೆಯನ್ನು ಕುಮಾರಸ್ವಾಮಿಯವರು 24 ಗಂಟೆಯೊಳಗೆ ಪೂರೈಸಬೇಕೆಂದು ಆಗ್ರಹಿಸುವುದು ಅತ್ಯಂತ ಹಾಸ್ಯಾಸ್ಪದ. ರೈತರ ಬಗ್ಗೆ ಯಡಿಯೂರಪ್ಪ ತೋರಿಸುತ್ತಿರುವ ಕಾಳಜಿಯು ಬರಿಯ ರಾಜಕೀಯ ಉದ್ದೇಶವನ್ನಷ್ಟೇ  ಹೊಂದಿದ್ದು ಅದರಾಚೆಗೆ ರೈತರು ಅವರ ಪಾಲಿಗೆ ಏನೇನೂ ಅಲ್ಲ ಎಂಬುದನ್ನು ಇದು ಸೂಚಿಸುತ್ತದೆ. ಯಡಿಯೂರಪ್ಪರ ಆಕ್ರೋಶ, ಪ್ರತಿಭಟನೆ, ಧಮ್ಕಿಗಳು ರೈತ ಹಿತದ್ದೇ ಆಗಿದ್ದರೆ, ಮೊದಲು ಕೇಂದ್ರದ ಪ್ರಣಾಳಿಕೆಯಲ್ಲಿ ಹೇಳಲಾಗಿರುವ ಏಕ ಕೃಷಿ ಮಾರುಕಟ್ಟೆ ಸ್ಥಾಪನೆಯಾಗುವಂತೆ ಆಗ್ರಹಿಸಲಿ. ಪಂಡಿತರ ಮರಳಿಕೆಯ ಪರವಾಗಿ ದನಿಯೆತ್ತಲಿ. 370 ನೇ ವಿಧಿ ರದ್ಧತಿಗೆ ಕೂಗೆಬ್ಬಿಸಿ ಬಂದ್ ಗೆ ಕರೆ ಕೊಡಲಿ. ಅದು ಬಿಟ್ಟು ಕೇವಲ ಕುಮಾರಸ್ವಾಮಿಯ ಪ್ರಣಾಳಿಕೆಯನ್ನು ಮುಂದುಮಾಡಿಕೊಂಡು ಬೆದರಿಕೆ ಹಾಕುವುದು ತಮಾಷೆಯಾಗುತ್ತದೆ. ನಾಲ್ಕು ವರ್ಷ ಪ್ರಾಯದ ಪ್ರಣಾಳಿಕೆಯ ಬಗ್ಗೆ ಯಾವೊಂದು ದೂರುಗಳೂ ಯಡಿಯೂರಪ್ಪರಿಗೆ ಇಲ್ಲವೆಂದಾದರೆ, ಅವರು ಕನ್ನಡಿಗರನ್ನು ಅವಮಾನಿಸುತ್ತಿದ್ದಾರೆಂದೇ ಅರ್ಥ. ಅಂದಹಾಗೆ,
ಕೇಂದ್ರದ ಪ್ರಣಾಳಿಕೆಯನ್ನು ತೋರಿಸಿ ಕುಮಾರಸ್ವಾಮಿ ತನ್ನ ಹೊಣೆಗಾರಿಕೆಯಿಂದ ಜಾರಿಕೊಳ್ಳುವಂತಿಲ್ಲ. ಈಡೇರಿಸಲಾಗದ ಭರವಸೆಯನ್ನು ಪ್ರಣಾಳಿಕೆಯಲ್ಲಿ ನೀಡುವುದಾದರೂ ಏಕೆ? ಸಾಲ ಮನ್ನಾದ ಬಗ್ಗೆ ತಯಾರಿ ನಡೆಸಲು ಕುಮಾರಸ್ವಾಮಿಯವರಿಗೆ  ಸಮಯ ಬೇಕಾದೀತು. ತೆಗೆದುಕೊಳ್ಳಲಿ. ಅಲ್ಲದೆ, ಅವರು ಸ್ವತಃ ಬಲದಲ್ಲಿ ಅಧಿಕಾರಕ್ಕೆ ಬಂದಿಲ್ಲ ಅನ್ನುವುದೂ ಇಲ್ಲಿ ಬಹುಮುಖ್ಯ. ಆದರೂ, ನುಡಿದಂತೆ ನಡೆದುಕೊಳ್ಳುವುದು ಅವರ ಜವಾಬ್ದಾರಿ.                    
ಕುಮಾರಸ್ವಾಮಿಯವರ ಇಂದಿನ ಇಕ್ಕಟ್ಟಿನ ಸ್ಥಿತಿ ಎಲ್ಲ ರಾಜಕೀಯ ಪಕ್ಷಗಳಿಗೂ ಪಾಠವಾಗಲಿ.