ಮಗು ಅಚ್ಚರಿಯಿಂದ ನೋಡುತ್ತಿತ್ತು, ಅಪ್ಪ ಅಳುತ್ತಿದ್ದ..

0
1839

ಏ. ಕೆ. ಕುಕ್ಕಿಲ

ಇಳಿಸಂಜೆಯ ಹೊತ್ತು. ಉಪವಾಸ ತೊರೆಯಲು ಇನ್ನೇನು ಐದಾರು ನಿಮಿಷಗಳು ಇವೆ ಅನ್ನುವಾಗ ಆಕೆ ಹಣ್ಣು- ಹಂಪಲು ಮತ್ತು ಸಮೋಸ- ಕಟ್ಲೇಟನ್ನು ತಂದಿಟ್ಟಳು. ಆತ ಕುಳಿತುಕೊಂಡ. ಆಕೆಯೂ ಜೊತೆಸೇರಿದಳು. ಮಕ್ಕಳನ್ನೂ ಜೊತೆ ಕೂರಿಸಿಕೊಂಡ. ಆತನ ಐದರ ಹರೆಯದ ಬಾಲೆಗೆ ಕಟ್ಲೇಟ್ ಅಂದರೆ ತುಂಬಾ ಇಷ್ಟ. ಮಗು ಒಂದನ್ನು ಎತ್ತಿಕೊಂಡಿತು. ಆತನ ಸಿಟ್ಟು ಎಲ್ಲಿತ್ತೋ, ಮಗುವಿಗೆರಡು ಬಾರಿಸಿದ. “ಎರಡು ನಿಮಿಷ ಕಾಯುವುದಕ್ಕೇನು ಧಾಡಿ ನಿನಗೆ” ಎಂದು ಕಣ್ಣು ಕೆಂಪಾಗಿಸಿದ. ಮಗು ಕಟ್ಲೇಟನ್ನು ತಟ್ಟೆಗೆ ಹಾಕಿ ಅಮ್ಮನ ಮಡಿಲಲ್ಲಿ ಮುದುಡಿಕೊಂಡಿತು. ಅಪ್ಪನಲ್ಲಿ ಅಷ್ಟೊಂದು ಸಿಟ್ಟನ್ನು ಮಗು ನೋಡಿದ್ದು ಅದೇ ಮೊದಲು.

ನಮಾಜ್ ಮುಗಿದು ಮಸೀದಿಯಲ್ಲಿ ಪ್ರವಚನ ಪ್ರಾರಂಭವಾಯಿತು.
“ಉಪವಾಸವೆಂಬುದು ಒಂದು ಪರೀಕ್ಷೆ. ಕೋಪವೂ ಈ ಪರೀಕ್ಷೆಯ ಭಾಗ. ಅದನ್ನು ನಿಯಂತ್ರಿಸಲಾಗದವ ಈ ಪರೀಕ್ಷೆಯಲ್ಲಿ ಅನುತ್ತೀರ್ಣನಾಗುತ್ತಾನೆ. ಅಸೂಯೆ, ಅಹಂಕಾರ, ಸುಳ್ಳು…” ಪ್ರವಚನ ಮುಂದುವರಿದಿತ್ತು. ಅಪರಾಧಿಯಂತೆ ಅತ್ತಿತ್ತ ನೋಡಿದ ಆತ ಮಸೀದಿಯಿಂದ ಎದ್ದು ಬೀಸುನಡಿಗೆಯಲ್ಲಿ ಮನೆ ಸೇರಿದ. ಮಗಳನ್ನು ಎತ್ತಿ ಮುತ್ತಿಕ್ಕಿದ. ಅಪ್ಪಿಕೊಂಡ. ಸ್ಸಾರಿ ಮಗಳೇ ಅಂದ. ಮಗು ಅಚ್ಚರಿಯಿಂದ ಅಪ್ಪನನ್ನೇ ನೋಡುತ್ತಿತ್ತು. ಅಪ್ಪ ಅಳುತ್ತಿದ್ದ.