ಬಾಳ ಸಂಗಾತಿಯನ್ನು ಆಯ್ಕೆ ಮಾಡುವ ಮುನ್ನ

0
1437

ಖದೀಜ ನುಸ್ರತ್, ಅಬು ಧಾಬಿ

ಮದುವೆಯೆಂದರೆ ಸಮಾಜದಲ್ಲಿ ಒಂದು ಗಂಡು ಮತ್ತು ಹೆಣ್ಣಿನ ಮಧ್ಯೆ ನಡೆಯುವಂತಹ ಒಂದು ಬಲಿಷ್ಠವಾದ ಒಪ್ಪಂದವಾಗಿದೆ. ಇದು ಮಾತಾಪಿತರು ಮತ್ತು ಹತ್ತಿರದ ಸಂಬಂಧಿಕರೊಂದಿಗೆ ಸಮಾಲೋಚನೆ ನಡೆಸಿ ನಿರ್ಧರಿಸುವಂತಹ ವಿಷಯವಾಗಿದೆ. ವೈವಾಹಿಕ ಜೀವನ ಸುಮಂಗಲವಾಗಲು ಅದರ ಆರಂಭವು ಸಮೃದ್ಧಿಯಿಂದಾಗಿರಬೇಕು. ಕುಟುಂಬದಲ್ಲಿ ಶಾಂತಿ, ನೆಮ್ಮದಿ ನೀವು ಆರಿಸುವ ಬಾಳಸಂಗಾತಿಯನ್ನು ಅವಲಂಭಿಸಿರುತ್ತದೆ. ಧರ್ಮನಿಷ್ಠೆ, ವಿದ್ಯಾಭ್ಯಾಸ, ಉತ್ತಮ ಚಾರಿತ್ರ್ಯ, ನೈತಿಕತೆ, ಚುರುಕುತನ, ಅಚ್ಚುಕಟ್ಟು, ಸಭ್ಯತೆ, ಸೌಂದರ್ಯ, ವಿನಯಶೀಲತೆ, ಪರಸ್ಪರ ಹೊಂದಾಣಿಕೆ ಮತ್ತು ಸಮರ್ಪಣಾ ಭಾವವಿರುವ ಬಾಳ ಸಂಗಾತಿಯಾಗಿರಬೇಕು.

ಪ್ರವಾದಿ ಮುಹಮ್ಮದ್(ಸ) ಹೇಳಿರುವರು : “ಸ್ತ್ರೀಯರನ್ನು ನಾಲ್ಕು ವಿಷಯಗಳಿಗಾಗಿ ವಿವಾಹ ಮಾಡಲಾಗುತ್ತದೆ. ಆಕೆಯ ಸೊತ್ತಿಗಾಗಿ, ಆಕೆಯ ಕುಲ ಮಹಿಮೆಗಾಗಿ, ಆಕೆಯ ಸೌಂದರ್ಯಕ್ಕಾಗಿ ಮತ್ತು ಧರ್ಮನಿಷ್ಠೆಗಾಗಿ. ನೀವು ಧರ್ಮನಿಷ್ಠೆಯುಳ್ಳ ಸ್ತ್ರೀಯನ್ನು ವಿವಾಹವಾಗಿರಿ.”

ಇಂದು ನಮ್ಮಲ್ಲಿ ಹೆಚ್ಚಿನವರು ತಮ್ಮ ಬಾಳಸಂಗಾತಿಯನ್ನು ಆಯ್ಕೆ ಮಾಡುವಾಗ ಸಮಾಜದಲ್ಲಿ ಘನತೆ, ಗೌರವ ಹೊಂದಿದ ಹೆಸರಾಂತ ಶ್ರೀಮಂತ ಕುಟುಂಬದವರನ್ನೇ ಆರಿಸುತ್ತಾರೆ. ಹೆಚ್ಚಿನ ಬಡವರು, ಮಧ್ಯಮ ವರ್ಗದವರೂ ಬಡ ಹೆಣ್ಣು ಮಕ್ಕಳನ್ನು ವಿವಾಹವಾಗಲು ತಯಾರಿರುವುದಿಲ್ಲ. ಸ್ತ್ರೀಯರಿಗೆ ಅವರ ಮನೆಯೂ ಉತ್ತಮವಾಗಿರಬೇಕು, ಮೈ ತುಂಬಾ ಚಿನ್ನಾಭರಣವನ್ನು ಹಾಕಿಕೊಂಡು ಬರಬೇಕೆಂಬ ಹಂಬಲವಿರುತ್ತದೆ. ಇಸ್ಲಾಮ್ ನಲ್ಲಿ ಯಾವುದೇ ಜನಾಂಗ, ವಂಶ ಪಾರಂಪರ್ಯ ಅಥವಾ ಕುಲ ಗೋತ್ರದ ಮಹಿಮೆಗೆ ಯಾವುದೇ ಪ್ರಾಶಸ್ತ್ಯವಿಲ್ಲ.

ಇಂದಿನ ಯುವಕರಿಗೆ ಅವರ ಪದವಿಗೆ ತಕ್ಕಂತೆ ವಿದ್ಯಾಭ್ಯಾಸ, ಸೌಂದರ್ಯ, ಉತ್ತಮ ಮೈಬಣ್ಣದ ಯುವತಿಯರನ್ನೇ ತನ್ನ ಬಾಳಸಂಗಾತಿಯಾಗಿ ಆರಿಸಬೇಕೆಂಬ ಕನಸು ಇರುತ್ತದೆ. ತನ್ನ ಬಾಳ ಸಂಗಾತಿಯನ್ನು ಕ್ಯಾಂಪಸ್, ಓನ್ಲೈನ್ ,ಮದುವೆ , ಮಾಲ್ ಗಳಲ್ಲಿ ಅಥವಾ ಇನ್ನಾವುದೇ ಸಮಾರಂಭದಲ್ಲಿ ವಸ್ತ್ರ ವಿನ್ಯಾಸ, ಮೇಕಪ್, ಕೂದಲು ಶೈಲಿಯನ್ನು ನೋಡಿ ವೈಯಕ್ತಿಕ ಬಯಕೆಗೆ ಪ್ರಭಾವಿತರಾಗಿ ಆಯ್ಕೆ ಮಾಡುವಂತದ್ದಲ್ಲ. ಅಂತಹವರನ್ನು ವಿವಾಹವಾದರೆ ಅವರ ಸೌಂದರ್ಯ ರಕ್ಷಣೆಗಾಗಿ ಫೇಸ್ ವಾಶ್, ಶಾಂಪೂ, ಕೈಗೆ ಬೇರೆ ಮುಖಕ್ಕೆ ಬೇರೆ ಕ್ರೀಮ್, ತುಟಿಗೆ ಬೇರೆ, ಬ್ಯೂಟಿ ಪಾರ್ಲರ್ ಎಂದು ಸಂಪಾದನೆಯ ದೊಡ್ಡ ಭಾಗವನ್ನು ಮೀಸಲಿಡಬೇಕಾಗಬಹುದು. ಸಿನೆಮಾ ತಾರೆ ಅಥವಾ ಆಂಕರ್ ಗಳಂತಹ ಸೌಂದರ್ಯದಂತೆ ನಿಮ್ಮ ಬಾಳಸಂಗಾತಿಯಾಗಬೇಕೆಂದು ನಿರೀಕ್ಷಿಸಬೇಡಿರಿ.

“ದುಶ್ಶೀಲೆಯರು ದುಶ್ಶೀಲರಿಗಾಗಿ ಮತ್ತು ದುಶ್ಶೀಲರು ದುಶ್ಶೀಲೆ ಯರಿಗಾಗಿರುವರು. ಸುಶೀಲೆಯರು ಸುಶೀಲರಿಗಾಗಿ ಮತ್ತು ಸುಶೀಲರು ಸುಶೀಲೆಯರಿಗಾಗಿರುವರು.” (ಅನ್ನೂರ್ :26)

ಸುಂದರಿಯಾದ ಯುವತಿಯನ್ನು ವಿವಾಹವಾಗಿ ಸೌಂದರ್ಯ ಪ್ರದರ್ಶನಕ್ಕೆ ಹೋಗಲಿಕ್ಕೂ ಇಲ್ಲ. ಪ್ರದರ್ಶನಕ್ಕಾಗಿ ಶೋ ಕೇಸ್ ನಲ್ಲಿ ಇಡಲಿಕ್ಕೂ ಇಲ್ಲ. ಜಗತ್ತಿನಲ್ಲಿ ಯಾರಾದರೂ ಪತ್ನಿಯು ಸುಂದರಿಯಾದ ಕಾರಣದಿಂದ ಸುಖದಾಂಪತ್ಯ ಜೀವನ ಸಾಗಿಸಿದ ಉದಾಹರಣೆ ಇದೆಯೇ? ಬಾಹ್ಯ ಸೌಂದರ್ಯಕ್ಕಿಂತಲೂ ಮನಸ್ಸಿನ ಆಂತರಿಕ ಸೌಂದರ್ಯವನ್ನು ಇಚ್ಛಿಸಿದರೆ ಸಮಯ ಕಳೆದಂತೆ ಅದು ಹೂವಾಗಿ ಅರಳುವುದು.

ಸೌಂದರ್ಯವೆಂಬುದು ಕೆಲವು ಸಮಯದವರೆಗೆ ಮಾತ್ರ ಸೀಮಿತವಾಗಿರುತ್ತದೆ . ವಿವಾಹದ ನಂತರ ಹೆರಿಗೆಯಿಂದಾಗಿ ಸ್ತ್ರೀಯ ಶರೀರದಲ್ಲಿ ಬದಲಾವಣೆಯಾಗುತ್ತಿರುತ್ತದೆ. ಆಗ ಶಾರೀರಿಕ ಆಕರ್ಷಣೆಯೂ ಕಡಿಮೆಯಾಗುವುದು. ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ವರ್ಗಾವಣೆಯಾದಾಗ ಕೆಲವರ ಬಣ್ಣದಲ್ಲಿಯೂ ವ್ಯತ್ಯಾಸ ಬರುವುದು. ತನ್ನ ಸೌಂದರ್ಯ, ಆರೋಗ್ಯ, ನಿತ್ರಾಣ, ಆಯಾಸ, ಹಸಿವು ಎಲ್ಲವನ್ನೂ ಕಡೆಗಣೆಸಿ ಕುಟುಂಬದ ಲಾಲನೆ ಪಾಲನೆಗೆ ಮಹಿಳೆಯರು ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾರೆ. ನೀವು ವಿವಾಹವಾಗುವ ಹೆಣ್ಣಿನಲ್ಲಿ ತಮ್ಮ ಮಕ್ಕಳ ತಾಯಿಯಾಗುವ ಎಲ್ಲಾ ಗುಣಗಳಿವೆಯೇ ಎಂದು ನೋಡಿರಿ. ನಿಮ್ಮ ಮಕ್ಕಳ ಬಾಲ್ಯ ಕಾಲದಲ್ಲಿ ಅವರೊಂದಿಗೆ ಹೆಚ್ಚು ಸಮಯ ಕಳೆಯುವವಳೂ, ಅವರಿಗೆ ಎಲ್ಲವನ್ನು ಕಲಿಸುವವಳು ಮತ್ತು ಅವರ ಭವಿಷ್ಯ ನಿರ್ಮಾಣದಲ್ಲಿ ಪ್ರಮುಖ ಪಾತ್ರ ತಾಯಿಯದ್ದೇ ಆಗಿರುತ್ತದೆ.

ಕೈ ತುಂಬಾ ಸಂಪಾದನೆಯಿದ್ದರೂ ಅವರ ಬೇಡಿಕೆಗೆ, ಇಚ್ಛೆಗೆ ಅನುಗುಣವಾದಂತಹ ವಿಶ್ವ ಸುಂದರಿಯರಾದ ವಧುವಿಗಾಗಿ ಕಾಯುತ್ತಾ ತಮ್ಮ ಯೌವನದ ಬಹು ದೊಡ್ಡ ಭಾಗ ಕಳೆದರೂ ತಿಳಿಯುವುದಿಲ್ಲ. ಇನ್ನೊಂದೆಡೆ ಇಂದು ದುಬಾರಿಯಾಗುತ್ತಿರುವ ಮದುವೆಯ ಖರ್ಚು ವೆಚ್ಚಗಳಿಂದಾಗಿ ಹಾಗೂ ದೊಡ್ಡ ಮೊತ್ತದ ಮಹ್ರ್ ನೀಡಲಿಕ್ಕಾಗಿ ವಿವಾಹ ಪ್ರಾಯಕ್ಕೆ ತಲುಪಿದ್ದರೂ ತಮ್ಮ ಗಂಡು ಮಕ್ಕಳ ವಿವಾಹವನ್ನು ಮುಂದೂಡುವ ಹೆತ್ತವರಿದ್ದಾರೆ. ಮದುವೆಗೆ ಅದ್ದೂರಿಯಾಗಿ ಸಾವಿರಾರು ಜನರನ್ನು ಆಮಂತ್ರಿಸುವುದು ತಮ್ಮ ಘನತೆಯ ಅವಿಬಾಜ್ಯ ಭಾಗವಾಗಿದೆ ಎಂದು ಭಾವಿಸುತ್ತಾರೆ. ಹೆಣ್ಣು ಮಕ್ಕಳ ಹಾಗೆ ತಮ್ಮ ಗಂಡು ಮಕ್ಕಳ ಮದುವೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡದಿರುವುದು ಖೇದಕರವಾಗಿದೆ.

ಪ್ರವಾದಿ(ಸ) ಹೇಳಿರುವರು: “ಯುವಕರೇ! ನಿಮ್ಮಲ್ಲಿ ವಿವಾಹದ ಹೊಣೆಗಾರಿಕೆಗಳನ್ನು ಹೊರಲು ಸಾಧ್ಯವಿರುವವರು ವಿವಾಹ ಮಾಡಿಕೊಳ್ಳಬೇಕು. ಏಕೆಂದರೆ ವಿವಾಹವು ದೃಷ್ಟಿಗಳನ್ನು ಕೆಳಗಿರಿಸುತ್ತದೆ. ವಿಷಯಾಸಕ್ತಿಯನ್ನು ನಿಯಂತ್ರಿಸುತ್ತದೆ.”

ಇಂದು ಹೆಚ್ಚಿನ ತಂದೆತಾಯಂದಿರು ಅನುಭವಿಸುವ ಪರೀಕ್ಷೆ ತಮ್ಮ ಮಕ್ಕಳು ಯೌವನದಲ್ಲಿ ಇನ್ನೊಬ್ಬರೊಂದಿಗೆ ಪ್ರೀತಿ ಪ್ರೇಮದ ಜಾಲೆಯಲ್ಲಿ ಸಿಲುಕುವುದಾಗಿದೆ. ಅದು ಕುಟುಂಬದ ಸಮಾಧಾನದ ವಾತಾವರಣವನ್ನು ಕೆಡಿಸುತ್ತದೆ. ಸಿನಿಮಾ, ಧಾರವಾಹಿಗಳಲ್ಲಿ ಬರುವ ವರ್ಣರಂಜಿತ ಕೌಟುಂಬಿಕ ಕಾರ್ಯಕ್ರಮಗಳು ಕುಟುಂಬಗಳಲ್ಲಿ ಅಶಾಂತಿಯ ವಾತಾವರಣ ಉಂಟು ಮಾಡಲು ಪ್ರಮುಖ ಪಾತ್ರ ವಹಿಸುತ್ತದೆ. ಎಲ್ಲರೂ ಕುಟುಂಬ ಸಮೇತ ಇಂತಹ ಕಾರ್ಯಕ್ರಮಗಳನ್ನು ನೋಡುತ್ತಾ ನಮ್ಮ ಮಕ್ಕಳಿಗೆ ಬುದ್ದಿವಾದಗಳನ್ನು ಹೇಳಿ ಪ್ರಯೋಜನವಿಲ್ಲ. ಮಕ್ಕಳು ಯೌವನಾವಸ್ಥೆಗೆ ತಲುಪುವಾಗ ಅವರಿಗೆ ಅತ್ಯುತ್ತಮ ರೀತಿಯಲ್ಲಿ ಮಾರ್ಗದರ್ಶನ ನೀಡಿರಿ. ಬದಲಾಗಿ ಅವರಿಗೆ ಇಷ್ಟವಿಲ್ಲದವರ ಜೊತೆ ಯಾವ ಕಾರಣಕ್ಕೂ ಬಲವಂತವಾಗಿ ವಿವಾಹ ಮಾಡಬೇಡಿರಿ. ವಿವಾಹವೆಂಬುದು ವಧುವರನ ಸಂಪೂರ್ಣ ಒಪ್ಪಿಗೆಯೊಂದಿಗೆ ಮಾತ್ರ ನಡೆಯಬೇಕಾದ ಕಾರ್ಯವಾಗಿದೆ ಎಂದು ಇಸ್ಲಾಂ ಕಲಿಸುತ್ತದೆ.

ಇಂದು ವಧುವಿನ ಕಡೆಯಿಂದಲೂ ಸಂಭಳ, ಸಂಪತ್ತಿಗೆ ಪ್ರಾಶಸ್ತ್ಯ ನೀಡಲಾಗುತ್ತದೆ. ವಿವಾಹವಾದ ಕೆಲವು ದಿನಗಳಲ್ಲೇ ಬೇರೆ ಮನೆ ಮಾಡವೇಕೆಂದು, ಸ್ವಂತ ವಾಹನವಿರಬೇಕೆಂದು ಬಯಸುತ್ತಾರೆ. ಆದರೆ ಸಂಪಾದನೆ ಮಾಡಲು ಆರಂಭಿಸಿದಾಗಲೇ ಎಲ್ಲವನ್ನೂ ಮಾಡಲು ಅಸಾಧ್ಯ. ನಮ್ಮ ತಂದೆತಾಯಿಯಂದಿರು ಹತ್ತಿಪ್ಪತ್ತು ವರ್ಷದ ನಂತರವೇ ಇದನ್ನು ಮಾಡಿದ್ದರು ಎಂಬುದನ್ನು ನಾವು ಮರೆಯಬಾರದು.

ಸಂಪತ್ತು, ಉತ್ತಮ ಕುಟುಂಬ, ವಿದ್ಯಾಭ್ಯಾಸ, ಉತ್ತಮ ಚಾರಿತ್ರ್ಯ, ಸೌಂದರ್ಯ ಹೀಗೆ ಎಲ್ಲವೂ ಹೊಂದಿರುವ ವಧು ಅಥವಾ ವರ ಸಿಗುವುದು ಕಷ್ಟ. ಸಂಪತ್ತು, ಸ್ಥಾನಮಾನ, ಸೌಂದರ್ಯ ನಮ್ಮಲ್ಲಿ ಯಾವಾಗಲೂ ಇರಬಹುದೆಂಬ ಯಾವುದೇ ಭರವಸೆಯಿಲ್ಲ. ಆದರೆ ಧರ್ಮನಿಷ್ಠೆಯು ದಾಂಪತ್ಯ ಜೀವನ ಸುಖಮಯವಾಗಲು, ಇಹಪರಲೋಕದಲ್ಲಿ ವಿಜಯಿಯಾಗಲು ಪ್ರೇರೇಪಣೆಯಾಗುವುದು.

“ನಿಮ್ಮಲ್ಲಿ ಒಂಟಿಯಾಗಿರುವವರ ಮತ್ತು ನಿಮ್ಮ ದಾಸ-ದಾಸಿಯರಲ್ಲಿ ಸಜ್ಜನರಾಗಿರುವವರ ವಿವಾಹ ಮಾಡಿ ಬಿಡಿರಿ. ಅವರು ಬಡವರಾಗಿದ್ದರೆ ಅಲ್ಲಾಹ್ ತನ್ನ ಅನುಗ್ರಹದಿಂದ ಅವರನ್ನು ಸಂಪನ್ನಗೊಳಿಸುವನು. ಅಲ್ಲಾಹ್ ಅತಿ ವಿಶಾಲನೂ ಸರ್ವಜ್ಞನೂ ಆಗಿರುತ್ತಾನೆ.” (ಅನ್ನೂರ್ : 32)