ಆತ ಕರೆ ಮಾಡಿದ, ಆಕೆ ಅತ್ತೆಯನ್ನು ಅಪ್ಪಿಕೊಂಡಳು

0
1869

ದಿನದ ಮಿಂಚು

ಏ ಕೆ ಕುಕ್ಕಿಲ

ಆತ ಕರೆ ಮಾಡಿದ. ಆಕೆ ಸ್ವೀಕರಿಸಲಿಲ್ಲ. ಮತ್ತೆ ಮತ್ತೆ ಪ್ರಯತ್ನಿಸಿದ. ಹೂಂ ಹೂಂ, ಆಕೆ ಸ್ವೀಕರಿಸುತ್ತಿಲ್ಲ.

ಬೆಳಗ್ಗೆದ್ದು ಮೊಬೈಲ್ ಆನ್ ಮಾಡಿದ ಆಕೆ ತಣ್ಣಗೆ ಬೆವರಿದಳು. ಬೆರಳ ತುದಿಯಲ್ಲಿ ಕಂಡೂ ಕಾಣದ ನಡುಕ. ವಿದೇಶದಲ್ಲಿರುವ ತನ್ನ ಪತಿ 9 ಬಾರಿ ಕರೆ ಮಾಡಿರುವುದನ್ನು ಮೊಬೈಲು ಲೆಕ್ಕ ಹಾಕಿ ತೋರಿಸುತ್ತಿತ್ತು. ಪತಿಗೆ ಮೂಗಿನ ತುದಿಯಲ್ಲಿ ಕೋಪ. ಕರೆ ಸ್ವೀಕರಿಸದ್ದಕ್ಕೆ ವಾರಗಳ ಹಿಂದೆ ಆತ ಆಕಾಶ – ಭೂಮಿ ಒಂದು ಮಾಡಿದ್ದ. ಅಂದಿನಿಂದ ರಾತ್ರಿ ಮೊಬೈಲ್ ನ ಮೇಲೆ ಒಂದು ಕಣ್ಣಿಟ್ಟೇ ಆಕೆ ಮಲಗುತ್ತಿದ್ದಳು. ನಿನ್ನೆ ರಾತ್ರಿಯೂ ಎಲ್ಲವೂ ಸರಿ ಇತ್ತು. ಆದರೆ, ಗೆಳತಿಯ ಒಂದು ಕರೆ ಎಲ್ಲವನ್ನೂ ಹಾಳು ಮಾಡಿತು. ಮಲಗಿದ್ದ ಪುಟ್ಟ ಮಗು ಮೊಬೈಲ್ ರಿಂಗ್ ಗೆ ಎಚ್ಚರಗೊಂಡು ಅಳತೊಡಗಿತು. ಇನ್ನು, ಬೆಳಗ್ಗಿನವರೆಗೆ ಜಾಗರಣೆಯೇ ಗತಿ ಎಂದುಕೊಂಡು ಅಸಮಾಧಾನದಿಂದಲೇ ಮೊಬೈಲ್ ಎತ್ತಿಕೊಳ್ಳಲು ಮುಂದಾದಾಗ ಕರೆ ಸ್ಥಗಿತಗೊಂಡಿತ್ತು. ಮಗುವಿನ ಅಳು ಇನ್ನಷ್ಟು ಜೋರಾಯಿತು. ಆಕೆ ಸಿಟ್ಟಿನಿಂದ ಮೊಬೈಲನ್ನು ಸೈಲೆಂಟ್ ಮೋಡ್ ನಲ್ಲಿರಿಸಿ ಜೋಗುಳ ಹಾಡುತ್ತಾ ಮಗುವಿನೊಂದಿಗೆ ನಿದ್ದೆಗೆ ಜಾರಿದ್ದಳು…

ಗಂಡನಲ್ಲಿ ಸಾರಿ ಕೇಳಬೇಕು, ಹೀಗೀಗಾಯ್ತು ಎಂದು ಆತನನ್ನು ಒಪ್ಪಿಸಬೇಕು ಅಂದುಕೊಳ್ಳುತ್ತಾ ಗಡಿಬಿಡಿಯಿಂದ ವಾಟ್ಸಾಪ್ ತೆರೆದಳು. ಆದರೆ, ಅದಾಗಲೇ ಸಂದೇಶವೊಂದು ಆಕೆಯನ್ನು ಕಾಯುತ್ತಿತ್ತು.

ಲವ್ ಯೂ ಡಿಯರ್. ಮಗುವಿಗಾಗಿ ರಾತ್ರಿಯನ್ನು ಕೊಲ್ಲುತ್ತಾ ಬದುಕುತ್ತಿರುವ ನಿನ್ನ ಬಗ್ಗೆ ಅಮ್ಮ ನಿನ್ನೆ ರಾತ್ರಿ ತುಂಬಾ ಹೇಳಿದರು. ಸಾರಿ ಕಣೆ. ಮೊನ್ನೆ ನಿನ್ನೊಂದಿಗೆ ರೇಗಾಡಿದ್ದಕ್ಕೆ ನನ್ನನ್ನು ಕ್ಷಮಿಸು. ಬೆಳಗ್ಗೆ ನಾನೇ ಕರೆ ಮಾಡುವೆ. ನೀನು ಮಲಗು.

ಆಕೆ ಆನಂದ ತಡೆಯಲಾಗದೆ ಅತ್ತೆಯನ್ನು ಅಪ್ಪಿಕೊಂಡಳು…