ಕೊರೋನಾ ಕಾಲದ ಇನ್ನೊಂದು ವೈರಿ, ಸೈಟೋಕೈನ್: ಇದು ಚಂಡಮಾರುತವಲ್ಲ

0
349

ಸನ್ಮಾರ್ಗ ವಾರ್ತೆ

ದಿನೇಶ್ ಕುಮಾರ್ ದಿನೂ

ಒಂದು ಪುಟ್ಟ ಕಥೆ: ಒಂದು ದೇಶ, ಅದಕ್ಕೊಬ್ಬ ರಾಜ. ದೇಶದ ಒಂದು ಗಡಿಯಲ್ಲಿ ಶತ್ರುದೇಶದ ಸುಮಾರು ಐನೂರು ಸೈನಿಕರು ದಾಳಿ ಮಾಡುತ್ತಾರೆ. ರಾಜ ಯುದ್ಧ ಘೋಷಿಸಿ ಶತ್ರುಗಳನ್ನು ಮುಗಿಸಲು ಸೈನ್ಯಕ್ಕೆ ಕರೆ ನೀಡುತ್ತಾನೆ. ದೇಶದ ಎಲ್ಲ ಭಾಗಗಳಿಂದ ಲಕ್ಷಾಂತರ ಸೈನಿಕರು ಯುದ್ಧಕ್ಕಾಗಿ ಅಣಿನೆರೆಯುತ್ತಾರೆ. ಅವರಿಗೆ ಈಗ ಯಾರನ್ನಾದರೂ ಕೊಲ್ಲಲೇಬೇಕೆಂಬ ಯುದ್ಧೋನ್ಮಾದ. ಹುಚ್ಚು ಹಿಡಿಸಿದ ವೀರಾವೇಶ. ಆದರೆ ಬಂದವರು ಬೆರಳೆಣಿಕೆಯ ಶತ್ರುಗಳು. ಸೈನಿಕರು ಗೊಂದಲಕ್ಕೆ ಒಳಗಾಗಿ ದೇಶದ ಪ್ರಜೆಗಳನ್ನೇ ಕತ್ತರಿಸಿಕೊಂಡು ಬರುತ್ತಾರೆ. ದೇಶ ಸರ್ವನಾಶವಾಗುತ್ತದೆ, ಕೊನೆಗೆ ಆ ಸೈನಿಕರು ರಾಜನನ್ನೂ ಕೊಂದುಹಾಕುತ್ತಾರೆ.

ಈ ಕಥೆಯಂಥದ್ದು ನಮ್ಮ ದೇಹದಲ್ಲೂ ಆಗಿಬಿಟ್ಟರೆ? ಯಾವುದು ನಮ್ಮ ದೇಹ, ಜೀವವನ್ನು ಕಾಪಾಡಬೇಕೋ ಅದೇ ಕೊಲೆಗಡುಕನಾಗಿಬಿಟ್ಟರೆ? ಕೋವಿಡ್-19 ಸಾವುಗಳ ಕುರಿತು ಅಧ್ಯಯನ ನಡೆಸುತ್ತಿರುವ ಜಗತ್ತಿನ ನಾನಾ ಭಾಗಗಳ ವಿಜ್ಞಾನಿಗಳು ಇಂಥ ಆತ್ಮಘಾತಕ ಸೈನಿಕರ ಕುರಿತು ಅಧ್ಯಯನ ನಡೆಸುತ್ತಿದ್ದಾರೆ. ಇದನ್ನು ‘ಸೈಟೋಕೈನ್ ಚಂಡಮಾರುತ’ (cytokine storm) ಎಂದು ಕರೆಯುತ್ತಾರೆ.

ಏನಿವು ಸೈಟೋಕೈನ್ ಗಳು? ಅವು ಯಾಕೆ ಹೀಗೆ ವರ್ತಿಸುತ್ತವೆ? ಅವುಗಳ ಕರ್ತವ್ಯವಾದರೂ ಏನು? ಕೋವಿಡ್-19 ಸಾವುಗಳಲ್ಲಿ ಅವುಗಳ ಪಾತ್ರವೇನು? ಇದೆಲ್ಲ ನಿಜಕ್ಕೂ ಕುತೂಹಲಕಾರಿ ಮಾಹಿತಿಗಳು.

ನಾವು ಕರೋನಾ ಆರಂಭವಾದಾಗಿನಿಂದಲೂ ಅತಿ ಹೆಚ್ಚು ಕೇಳಿಸಿಕೊಳ್ಳುತ್ತಿರುವ ಶಬ್ದ, ಇಮ್ಯೂನಿಟಿ. ಅಂದರೆ ರೋಗ ನಿರೋಧಕ ಶಕ್ತಿ. ದೇಹಕ್ಕೆ ಘಾತಕವಾಗುವ ಯಾವುದೇ ವೈರಸ್, ಬ್ಯಾಕ್ಟೀರಿಯಾ ಒಳಗೆ ಪ್ರವೇಶ ಪಡೆದರೆ ಅದನ್ನು ಸಮರ್ಥವಾಗಿ ಎದುರಿಸುವ ಶಕ್ತಿ ನಮ್ಮ ದೇಹಕ್ಕೆ ಇರುತ್ತದೆ. ಸೈಟೋಕೈನ್ ಈ ಬಗೆಯ ಹೊರಗಿನ ಶಕ್ತಿಗಳ ವಿರುದ್ಧ ಹೋರಾಡುವ ಸಣ್ಣ ಪ್ರೋಟೀನ್ ಗಳು, ಇವುಗಳನ್ನು ದೇಹದ ನಾನಾ ಬಗೆಯ ಕಣಗಳು ಉತ್ಪತ್ತಿ ಮಾಡಿ ರಕ್ತದೊಳಗೆ ತೂರಿಸುತ್ತವೆ. ಇವು ತಮ್ಮ ಪಾಲಿಗೆ ಕೊಟ್ಟ ಕೆಲಸವನ್ನಷ್ಟೆ ಮಾಡಿದರೆ ಅದು ನಿಜಕ್ಕೂ ಜೀವರಕ್ಷಕ. ಬಹುತೇಕರ ವಿಷಯದಲ್ಲಿ ಅದು ಜೀವರಕ್ಷಕವೇ ಹೌದು. ಆದರೆ ಒಂದಷ್ಟು ಮಂದಿಗೆ ಈ ಅವಕಾಶ ಇಲ್ಲ. ಸೈಟೋಕೈನ್ ಗಳು ಹುಚ್ಚುಹುಚ್ಚಾಗಿ ವರ್ತಿಸುತ್ತವೆ. ರಣೋತ್ಸಾಹದಲ್ಲಿ ಅದು ಮಾಡಬಾರದ್ದನ್ನೇ ಮಾಡತೊಡಗುತ್ತವೆ, ಅದು ಯಾರ ನಿಯಂತ್ರಣಕ್ಕೂ ಸಿಗುವುದಿಲ್ಲ.

ಸೈಟೋಕೈನ್ ಗಳು ಹೀಗೆ ತಿಕ್ಕಲು ತಿಕ್ಕಲಾಗಿ ವರ್ತಿಸತೊಡಗಿದರೆ ದೇಹದ ರೋಗನಿರೋಧಕ ಶಕ್ತಿಯೂ ಮಂಡಿಯೂರಿ ಶರಣಾಗತಿಯಾಗುತ್ತದೆ, ಯಾಕೆಂದರೆ ಸೈಟೋಕೈನ್ ಗಳು ದೇಹದ ಇಮ್ಯೂನ್ ವ್ಯವಸ್ಥೆಯದ್ದೇ ಸೃಷ್ಟಿ. ಬೇಲಿಯೇ ಎದ್ದು ಹೊಲ ಮೇಯ್ದರೆ ಯಾರಾದರೂ ಏನು ಮಾಡಲು ಸಾಧ್ಯ? ಈ ಸೈಟೋಕೈನ್ ಗಳು ಎಲ್ಲಿ ವೈರಲ್ ಇನ್ಫೆಕ್ಷನ್ ಆಗಿದೆಯೋ ಅಲ್ಲಿ ಮಾತ್ರ ಹೋಗುವುದಿಲ್ಲ, ದೇಹದ ಆರೋಗ್ಯವಂತ ಅವಯವಗಳ ಮೇಲೂ ದಾಳಿ ನಡೆಸಿ, ಜೀವಕೋಶಗಳನ್ನು ನಾಶಪಡಿಸುತ್ತ ಸಾಗುತ್ತದೆ. ರಕ್ತನಾಳಗಳು ಇವುಗಳ ಹುಚ್ಚಾಟದಿಂದ ಕಂಗಾಲಾಗುತ್ತವೆ, ಶ್ವಾಸಕೋಶಗಳು ಬ್ಲಾಕ್ ಆಗುವ ಪರಿಣಾಮದಿಂದಾಗಿ ರಕ್ತನಾಳಗಳು ಅಲ್ಲಲ್ಲಿ ಒಡೆದುಕೊಳ್ಳುತ್ತವೆ, ರಕ್ತದೊತ್ತಡ (ಬಿಪಿ) ದಿಢೀರನೆ ಕುಸಿದುಹೋಗುತ್ತದೆ. ದೇಹದ ಎಲ್ಲ ಭಾಗಗಳಿಗೂ ರಕ್ತ ಸರಿಯಾಗಿ ಸರಬರಾಜು ಆಗದ ಪರಿಣಾಮ ಒಂದೊಂದೇ ಅಂಗಾಂಗಗಳು ನಿಸ್ತೇಜವಾಗುತ್ತವೆ. ಕೊನೆಗೆ ವ್ಯಕ್ತಿ ಸಾಯುವ ಸಾಧ್ಯತೆಯೇ ಹೆಚ್ಚು. ವೈದ್ಯರು ಆತನ ಸಾವಿನ‌ ವರದಿಯಲ್ಲಿ Multiple Organ Failure ಎಂದು ಷರಾ ಬರೆಯುತ್ತಾರೆ.

ಅಟ್ಲಾಂಟಾದ ಜಾರ್ಜಿಯಾ ಸ್ಟೇಟ್ ಯೂನಿವರ್ಸಿಟಿಯ ವೈರಾಲಾಜಿಸ್ಟ್ ಮತ್ತು ಇಮ್ಯುನೋಲಾಜಿಸ್ಟ್ ಮುಖೇಶ್ ಕುಮಾರ್ ಕೋವಿಡ್-19 ಪ್ರಕರಣಗಳಲ್ಲಿ ಆದ ಸೈಟೋಕೈನ್ ಚಂಡಮಾರುತದ ಸಾವುಗಳ ಕುರಿತು ಸಂಶೋಧನೆ ನಡೆಸುತ್ತಿದ್ದಾರೆ. ಅವರ ಸಂಶೋಧನಾ ವರದಿಗಳ ಪ್ರಕಾರ ಕೋವಿಡ್-19 ವೈರಸ್ ಮನುಷ್ಯನ ದೇಹದ ಒಳಗೆ ಸೇರಿಕೊಂಡು ಜೀವಕಣಕ್ಕೆ ಸೋಂಕು ಹಬ್ಬಿಸಿದರೆ ಅದು ಬಹುಬೇಗನೇ ದುಪ್ಪಟ್ಟಾಗತೊಡಗುತ್ತದೆ. ದೇಹದ ಕಣಗಳಿಗೆ ಸಣ್ಣ ಅವಧಿಯಲ್ಲಿ ಅತಿಹೆಚ್ಚಿನ ಒತ್ತಡ ನಿರ್ಮಾಣವಾಗುತ್ತದೆ. ಆಗ ಅವು ಅನಿವಾರ್ಯವಾಗಿ ತನ್ನನ್ನು ತಾನು ಕೊಂದುಕೊಂಡು ಇತರ ಕಣಗಳಿಗೆ ಹರಡದಂತೆ ತಡೆಯಲು ಪ್ರಯತ್ನಿಸುತ್ತವೆ. ಇದೊಂದು ಬಗೆಯ ಸಾಮೂಹಿಕ ಆತ್ಮಹತ್ಯೆಗಳು. ಹೀಗೆ ಸತ್ತ ಕಣಗಳೆಲ್ಲ ಶ್ವಾಸಕೋಶದಲ್ಲಿ ಸೇರಿಹೋಗಿ ಸತ್ತಕಣಗಳ ಶವಗಳ ರಾಶಿಯ ದ್ರವರೂಪವೇ ತುಂಬಿಹೋಗುತ್ತವೆ. ಇಂಥ ಸಂದರ್ಭದಲ್ಲಿ ಕೆಲವು ಸೈಟೋಕೈನ್ ಗಳು ಹೀಗೆ ಆತ್ಮಹತ್ಯೆ ಮಾಡಿಕೊಳ್ಳುವ ಪ್ರೊಟೀನ್‌ ಕಣಗಳಿಗೆ ಇನ್ನಷ್ಟು ಹುರಿದುಂಬಿಸುತ್ತವೆ. ಶ್ವಾಸಕೋಶದಲ್ಲಿ ಈ ಸತ್ತಕಣಗಳ ದೊಡ್ಡ ಪ್ರಮಾಣದ ದ್ರವ ಪದಾರ್ಥ ಸೇರಿಕೊಂಡು ಕೊನೆಗೆ ಉಸಿರನ್ನೇ ನಿಲ್ಲಿಸಿಬಿಡುತ್ತವೆ.

ಈ ಸೈಟೋಕೈನ್ ಚಂಡಮಾರುತ ಕೋವಿಡ್- 19 ಗೆ ಮಾತ್ರ ಸಂಬಂಧಿಸಿದ್ದಲ್ಲ. H5N1 ಇನ್ ಫ್ಲೂಯೆಂಜಾ, ಸಾರ್ಸ್ ಕೋವಿಡ್-1ಗಳಲ್ಲೂ ಭರ್ಜರಿ ಆಟವಾಡಿದೆ. 1918ರಲ್ಲಿ ಇನ್ ಫ್ಲೂಯೆಂಜಾ ಜಗತ್ತಿನ ಮೇಲೆ ಎರಗಿದಾಗ ನಮ್ಮ ವೈದ್ಯಕೀಯ ವ್ಯವಸ್ಥೆ ಇನ್ನೂ ಬೆಳೆದಿರಲಿಲ್ಲ. ಹೆಚ್ಚು ಕಡಿಮೆ ಐದರಿಂದ ಹತ್ತು ಕೋಟಿ ಜನರು ಇದಕ್ಕೆ ಬಲಿಯಾಗಿದ್ದರು. ಅವರ ಪೈಕಿ ಬಹುತೇಕರು ಈ ಚಂಡಮಾರುತದಿಂದಲೇ ಸತ್ತಿರಬಹುದು ಎಂಬ ಊಹೆ ಈಗಿನ ವಿಜ್ಞಾನಿಗಳದ್ದು. 2003ರ ಸಾರ್ಸ್ ಸಾಂಕ್ರಾಮಿಕ ರೋಗದಿಂದ ಸತ್ತ ಬಹುತೇಕರು ಈ ಸೈಟೋಕೈನ್ ಚಂಡಮಾರುತದಿಂದಲೇ ಸತ್ತರು ಎಂದು ತೈವಾನ್ ನ ಅಧ್ಯಯನವೊಂದು ಹೇಳುತ್ತದೆ.‌ ಆದರೆ ಸೈಟೋಕೈನ್ ಚಂಡಮಾರುತ ಎಂಬ ಪದಪುಂಜವು ವಿಜ್ಞಾನ ಸಾಹಿತ್ಯದಲ್ಲಿ ಮೊದಲು ಕಾಣಿಸಿಕೊಂಡಿದ್ದು 1993ರಲ್ಲಿ. ನಂತರ ಅದು ಪದೇ ಪದೇ ಸಂಶೋಧನೆ ಮತ್ತು ಚರ್ಚೆಗಳಿಗೆ ಒಳಗಾಯಿತು.

ಜಗತ್ತು ಈಗ ಕರೋನಾಗೆ ಔಷಧಿ ಮತ್ತು ವ್ಯಾಕ್ಸಿನ್ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿದೆ. ಇದರ ನಡುವೆ ಸೈಟೋಕೈನ್ ಚಂಡಮಾರುತದ ಕುರಿತೂ ಒಂದಷ್ಟು ಗಮನ ಹರಿಸಬೇಕಿದೆ ಎಂದು ಹೇಳುತ್ತಾರೆ ಪೂಜಾ ಮೆಹ್ತಾ, ಡೇನಿಯಲ್ ಮೆಕಾಲೆ ಮತ್ತು ಮೈಕೆಲ್ ಬ್ರೌನ್. Covid-19: consider cytokine storm syndromes and immunosuppression ಎಂಬ ಲೇಖನವೊಂದು ದಿ ಲಾನ್ಸೆಟ್ ವೈದ್ಯ ವಿಜ್ಞಾನ ಪತ್ರಿಕೆಯಲ್ಲಿ ಪ್ರಕಟವಾಗಿದೆ. H1N1 ನಮ್ಮಲ್ಲಿ ಬಂದು ಸಾವಿರಾರು ಜನರನ್ನು ಬಲಿ ತೆಗೆದುಕೊಂಡಿತಲ್ಲ. ಆ ಸಾವುಗಳ ಪೈಕಿ ಶೇ. 81ರಷ್ಟು ಮಂದಿ ಈ ಸೈಟೋಕೈನ್ ಚಂಡಮಾರುತಕ್ಕೇ ಬಲಿಯಾದರು ಎಂಬ ವರದಿಗಳನ್ನು ಉಲ್ಲೇಖಿಸಿ ಇದರ ಭಯಾನಕತೆಯನ್ನು ವಿವರಿಸುತ್ತದೆ ಈ ಲೇಖನ.

ಸೈಟೋಕೈನ್ ಚಂಡಮಾರುತದ ಸಮಸ್ಯೆ ವೈರಲ್ ಖಾಯಿಲೆಗಳಲ್ಲಿ ಮಾತ್ರವಲ್ಲ, ಬೇರೆ ರೀತಿಯ ಸಮಸ್ಯೆಗಳಿಂದಲೂ ಉದ್ಭವಿಸಬಹುದು. ಉದಾಹರಣೆಗೆ, ಕ್ಯಾನ್ಸರ್ ಗೆ ನೀಡುವ ಕೀಮೋಥೆರಪಿ ಚಿಕಿತ್ಸೆ. ಕೀಮೋಥೆರಪಿಯ ಪ್ರೋಟೋಕಾಲ್‌ ನಲ್ಲಿ ಹೆಚ್ಚುಕಡಿಮೆಯಾದರೆ ಈ ಬಗೆಯ ಸೈಟೋಕೈನ್ ಚಂಡಮಾರುತ‌ ಸೃಷ್ಟಿಯಾಗಬಹುದು.

ಕೋವಿಡ್-19 ರ ಸಂದರ್ಭದಲ್ಲಿ ಸೈಟೋಕೈನ್ ಚಂಡಮಾರುತದ ಚರ್ಚೆ ಶುರುವಾಗಿದ್ದು‌ ಚೀನಾದ ಅಧ್ಯಯನಗಳಿಂದಾಗಿ. ಚೀನಾದ ವುಹಾನ್ ನ ಫಿಜಿಷಿಯನ್ ಒಬ್ಬರು ತಾನು ಚಿಕಿತ್ಸೆ ನೀಡಿದ 29 ರೋಗಿಗಳ ಪೈಕಿ, ಅತಿ ಹೆಚ್ಚು ಚಿಂತಾಜನಕ ಸ್ಥಿತಿಯಲ್ಲಿದ್ದ ರೋಗಿಗಳಲ್ಲಿ ಸೈಟೋಕೈನ್ ಗಳು ಅತಿಹೆಚ್ಚಿನ ಪ್ರಮಾಣದಲ್ಲಿ ಇದ್ದಿದ್ದನ್ನು ಗಮನಿಸಿದ್ದರು. ವುಹಾನ್ ನ ಗಾಂಗ್ ಡಾಂಗ್ ಎಂಬಲ್ಲಿ ಇನ್ನೊಂದು ವೈದ್ಯರ ತಂಡ ನೂರೈವತ್ತು ರೋಗಿಗಳ ಕುರಿತು ಅಧ್ಯಯನ ನಡೆಸಿತು. ಈ ತಂಡದ ಗಮನಕ್ಕೆ ಬಂದ ಮುಖ್ಯ ವಿಷಯವೇನೆಂದರೆ ಈ ಅಧ್ಯಯನದಲ್ಲೂ ಸೈಟೋಕೈನ್ ಚಂಡಮಾರುತದಿಂದಾಗಿ ಹಲವಾರು ಮಂದಿ ಜೀವ ಕಳೆದುಕೊಂಡಿದ್ದರು. ಕೋವಿಡ್ ನಿಂದ ಬದುಕುಳಿದವರಿಗಿಂತ ಹೆಚ್ಚು ಸತ್ತವರಲ್ಲೇ ಈ ಚಂಡಮಾರುತ ಕಾಣಿಸಿಕೊಂಡಿತ್ತು. ಹೆಫಾಯ್ ಪ್ರಾಂತ್ಯದಲ್ಲೂ ಕೋವಿಡ್ ನಿಂದಾಗಿ ಅತಿಹೆಚ್ಚು ಸಮಸ್ಯೆಗೆ ಈಡಾದವರಲ್ಲಿ ಈ ಚಂಡಮಾರುತವೇ ಕಾಣಿಸಿಕೊಂಡಿತ್ತು ಎಂದು ಹೇಳುತ್ತದೆ ಅಲ್ಲಿನ ತಜ್ಞ ವೈದ್ಯರ ತಂಡ. ಚೀನಾ ಮಾತ್ರವಲ್ಲ, ಅಮೆರಿಕದ ಫಿಲಾಡೆಲ್ಫಿಯಾದ ಟೆಂಪಲ್ ವಿಶ್ವವಿದ್ಯಾಲಯದ ಡಾ.ರಾಬರ್ಟೋ ಕೆರಿಶಿಯೋ ಸಹ ಅಮೆರಿಕದ ಸಾಕಷ್ಟು ಕರೋನಾ ರೋಗಿಗಳಲ್ಲಿ ಸೈಟೋಕೈನ್ ಚಂಡಮಾರುತವನ್ನು ಗಮನಿಸಿದ್ದಾಗಿ ಹೇಳುತ್ತಾರೆ.

‘ಬೆಳಿಗ್ಗೆ ಚೆನ್ನಾಗೇ ಮಾತಾಡಿಕೊಂಡೇ ಇದ್ರು, ಸ್ಯಾಚುರೇಷನ್ ಕೂಡ 90% ಮೇಲೇ ಇತ್ತು. ಇದಕ್ಕಿದ್ದಂತೆ ಬ್ಲಡ್ ಆಕ್ಸಿಜನ್ ಇಳಿದುಹೋಯಿಯಂತೆ, ಸತ್ತೇ ಹೋದರು.’ ಎಂಬ ಮಾತುಗಳನ್ನು ನೀವು ಈಗ ಅಲ್ಲಲ್ಲಿ ಕೇಳಿರುತ್ತೀರಿ, ಮುಂದೆಯೂ ಕೇಳಲಿದ್ದೀರಿ. ಹೇಗೆ ಸತ್ತರು ಎಂಬುದಕ್ಕೆ ಎರಡು ಕಾರಣಗಳಿರಬಹುದು. ಮೊದಲನೆಯದು ಕೋವಿಡ್ ವಿರುದ್ಧ ನಮ್ಮ ದೇಹದ ರೋಗ‌ನಿರೋಧಕ ಶಕ್ತಿಯ ಸೇನಾನಿಗಳು ಕಾದಾಡಿ ಸೋತು ವ್ಯಕ್ತಿ ಸತ್ತಿರಬಹುದು. ಅಥವಾ ಯಾವ ಸೈನಿಕರು ದೇಹದ ರಕ್ಷಣೆ ಮಾಡಬೇಕಿತ್ತೋ ಅವೇ ದಿಢೀರನೆ ಉದ್ಭವವಾದ ಅರಾಜಕ ವ್ಯವಸ್ಥೆಯಲ್ಲಿ ಹುಚ್ಚುಹುಚ್ಚಾಗಿ ವರ್ತಿಸಿ ಆತನನ್ನು ಕೊಂದುಹಾಕಿರಬಹುದು.

ಬೇರೆ ದೇಶಗಳಿಗೆ ಹೋಲಿಸಿದರೆ ಇಂಡಿಯಾದಲ್ಲಿ ಕೇವಲ ಹಿರಿಯ ವಯಸ್ಕರು ಮಾತ್ರ ಸಾಯುತ್ತಿಲ್ಲ, ಯುವಜನರು, ಮಧ್ಯವಯಸ್ಕರೂ ಕರೋನಾಗೆ ಶಿಕಾರಿಯಾಗುತ್ತಿದ್ದಾರೆ. ಇದನ್ನು ಎರಡು ವಿಧದಲ್ಲಿ ಅರ್ಥೈಸಬಹುದು, ಇಂಡಿಯಾದಲ್ಲಿ ಸಾಮಾನ್ಯ ಜನರಿಗೆ ರೋಗನಿರೋಧಕ ಶಕ್ತಿ ಕಡಿಮೆ ಇರುವುದರಿಂದ ಅವರು ಸತ್ತಿರಬಹುದು ಎಂದು ಹೇಳಬಹುದು. ಇನ್ನೊಂದು ವಾದ ಮುಂದಿಡುವುದಾದರೆ ರೋಗ ನಿರೋಧಕ ಶಕ್ತಿ ಹೆಚ್ಚಾಗಿರುವುದರಿಂದಲೇ ಅವರು ಸೈಟೋಕೈನ್ ಚಂಡಮಾರುತಕ್ಕೆ ಬಲಿಯಾಗಿರಬಹುದು ಎಂದೂ ಹೇಳಬಹುದು. ಇಂಡಿಯಾದಲ್ಲಿಯೂ ಈ ಕುರಿತ ಅಧ್ಯಯನ ಗಳು ನಡೆಯುತ್ತಿರಬಹುದು. ನಂತರವಷ್ಟೇ ಏನನ್ನಾದರೂ ಖಚಿತವಾಗಿ ಹೇಳಲು ಸಾಧ್ಯ.

ಈ ‘ಸೈಟೋಕೈನ್ ಚಂಡಮಾರುತ’ ದ ಕಥೆಯನ್ನು ನಾವು ನಮ್ಮ ಸದ್ಯದ ರಾಜಕೀಯ ವಿದ್ಯಮಾನಗಳಿಗೆ ಹೋಲಿಸಿ ಮಾತನಾಡಬಹುದು. ಒಂದು ಪ್ರಭುತ್ವ ತನ್ನದೇ ದೇಶದ ನಾಗರಿಕರನ್ನು ಶತ್ರುಗಳೆಂದು ಭ್ರಮಿಸಿ ಕೊಲ್ಲುತ್ತ ಹೋಗುವುದು… ಕೊನೆಗೆ ದೇಶವನ್ನೇ ವಿನಾಶದ ಅಂಚಿಗೆ ತಂದು ನಿಲ್ಲಿಸುವುದು… ಅದು ಇನ್ನೊಂದು ಚರ್ಚೆಯ ವಿಷಯ. ಜೀವರಕ್ಷಕರೇ ಜೀವಘಾತಕರಾಗುವ ದುರಂತಗಳಿಂದ ನಾವು ಪಾರಾಗಿಬರಬೇಕು, ಅದು ಸದ್ಯದ ತುರ್ತು.

ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.