ದುರಂತ ಭೂಮಿಯ ದುಃಖಗಳು: ಪ್ರವಾಹ ಪೀಡಿತರ ಸೇವೆಗಾಗಿ ತೆರಳಿದ ಕರ್ನಾಟಕ ಹೆಚ್.ಆರ್.ಎಸ್. ತಂಡದ ಅನುಭವ

0
1201

ಸನ್ಮಾರ್ಗ ಪ್ರತ್ಯಕ್ಷ ವರದಿ
-ಸಲೀಮ್ ಬೋಳಂಗಡಿ
ಆಗಸ್ಟ್ 15ರಂದು ಫಜ್ರ್ ನಮಾಝ್ ಮುಗಿಸಿ ಮನೆಯಿಂದ ಹೊರಬಂದಾಗ ಮನೆಯ ಸುತ್ತಲೂ ನೀರು ತುಂಬಿತ್ತು. ಕಾಲಿಗೆ ಮೂರು ಶಸ್ತ್ರಕ್ರಿಯೆ ನಡೆಸಿದ್ದರಿಂದ ನನ್ನ ತಾಯಿ ನಡೆಯುತ್ತಿರಲಿಲ್ಲ. ಅವರನ್ನು ಎತ್ತಿಕೊಂಡೇ ಹೊರಬಂದೆ. ಮೂವರು ಮಕ್ಕಳು ಮತ್ತು ಹೆಂಡತಿಯನ್ನು ಕರೆದುಕೊಂಡು ಹೆಂಡತಿಯ ಮನೆಯಲ್ಲಿರಿಸಿದೆ. ಆಗ ನಾನು ತೊಟ್ಟ ಶರ್ಟ್ ಮತ್ತು ಲುಂಗಿಯನ್ನು ಹೊರತುಪಡಿಸಿ ನಮ್ಮಲ್ಲಿ ಬೇರೇನೂ ಇರಲಿಲ್ಲ. ಸ್ವಲ್ಪ ಕಳೆಯುವಷ್ಟರಲ್ಲಿ ಹೆಂಡತಿಯ ಮನೆಯೊಳಗೂ ಪ್ರವಾಹ ನುಗ್ಗಿತು. ಅಲ್ಲಿಯೂ ಪ್ರವಾಹ ಉಕ್ಕಿ ಹರಿಯ ತೊಡಗಿದಾಗ ವಿಧಿಯಿಲ್ಲದೆ ಕುನ್ನಂಪುರದ ಅಂಗನವಾಡಿಯ ಹೆಲ್ತ್ ಸೆಂಟರ್‍ನ ಶಿಬಿರದಲ್ಲಿ ಎಲ್ಲರೂ ಸೇರಿದೆವು. ಬಳಿಕ ಉಪ್ಪಿನ ಕಾಯಿ ಗಂಜಿಯಲ್ಲಿ ಐದು ದಿನಗಳ ಕಾಲ ಕಳೆದೆವು. ಮನೆಯಲ್ಲಿ ಐದು ದಿನಗಳ ಕಾಲ 9 ಅಡಿಯವರೆಗೆ ನೀರು ನಿಂತಿತ್ತು. ವಸ್ತುಗಳೆ ಲ್ಲವೂ ಹಾಳಾಗಿ ಕಂಗಾಲಾದಂತಹ ಪರಿಸ್ಥಿತಿ. ನಾನು ವಿವಿಧ ಸಂಘಟನೆಗಳೊಂದಿಗೆ ನೆರವು ಯಾಚಿಸಿದೆ. ಆದರೆ ಯಾರಿಂದಲೂ ಸಹಾಯ ದೊರೆಯಲಿಲ್ಲ. ಕೊನೆಗೆ ಜಮಾಅತೆ ಇಸ್ಲಾಮಿಯ ಅಧೀನದ `ತನಲ್’ ಎಂಬ ಸೇವಾಸಂಸ್ಥೆಯೊಡನೆ ಇಕ್ಬಾಲ್ ಎಂಬವರ ಮುಖಾಂತರ ವಿಷಯ ತಿಳಿಸಿದಾಗ ನನಗೆ ತುಂಬು ಹೃದಯದ ಸಹಕಾರ ದೊರೆಯಿತು. ಅಲ್ಲಾಹನು ಈ ತಂಡಕ್ಕೆ ಎಲ್ಲ ರೀತಿಯ ಅನುಗ್ರಹಗಳನ್ನು ವರ್ಷಿಸಲಿ ಎಂದು ಎರ್ನಾಕುಳಮ್ ಜಿಲ್ಲೆಯ ಮಾಟಪುರಮ್‍ನ ಸಾಜಿದ್ ಎಂಬ ತಲೆಹೊರೆ ಕಾರ್ಮಿಕ ಅನುಭವ ವಿವರಿಸುವಾಗ ಉಮ್ಮಳಿಸಿ ಬರುವ ದುಃಖವನ್ನು ತಡೆಯಲು ಶ್ರಮಿಸುತ್ತಿದ್ದರು. ಪ್ರವಾಹ ಇಳಿದ ಬಳಿಕ ಹಸಿವಿನಿಂದಲೇ ಈ ಕುಟುಂಬ ದಿನದೂಡಿತ್ತು. ಕೆಸರಿನಿಂದಾವೃತ ಮನೆಯನ್ನು ಸಂಪೂರ್ಣವಾಗಿ ಶುಚಿಗೊಳಿಸಿ ಅವರಿಗೆ ಆಹಾರದ ವ್ಯವಸ್ಥೆಯನ್ನು ಮಾಡಿದ ಕರ್ನಾಟಕ ಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕ ಸೇವಾ ಸಂಸ್ಥೆಯಾದ ಹೆಚ್.ಆರ್.ಎಸ್. ತಂಡ ಧನ ಸಹಾಯವನ್ನು ನೀಡಿ ಮರಳಿತು. ಹೆಚ್.ಆರ್.ಎಸ್. ತಂಡದ ಈ ಸಹಕಾರವನ್ನು ಕಣ್ತುಂಬ ಸ್ಮರಿಸಿಕೊಂಡರು.

ಪಿನಾಯಿಲ್ ಸಂಗ್ರಹಿಸಿ ಮಾರಿ ಜೀವನ ನಡೆಸುತ್ತಿದ್ದ ವೃದ್ಧ ದಂಪತಿಗಳು ತಾವು ಸಂಗ್ರಹಿಸಿಟ್ಟಿದ್ದ ಪಿನಾಯಿಲ್‍ಗಳು ಪ್ರವಾಹದ ರಭಸಕ್ಕೆ ಸಿಲುಕಿ ಕೊಚ್ಚಿ ಹೋಗಿ ಅವರು ದಿಗ್ಭ್ರಂತರಾಗಿದ್ದ ದೃಶ್ಯವದು. ಅವರು ಸ್ವತಃ ತಮ್ಮ ಬಟ್ಟೆಯನ್ನು ಮನೆಯನ್ನು ಶುಚಿ ಗೊಳಿಸಲು ಅಸಮರ್ಥರಾಗಿದ್ದರು. ಮನೆ ತುಂಬಾ ಕೆಸರಿನಿಂದಾವೃತ ವಾಗಿತ್ತು. ಅತ್ತ ಇತ್ತ ನಡೆಯಲಾಗದಂತಹ ದುಃಸ್ಥಿತಿ. ಅಸಹಾಯಕರಾಗಿ ಕುಳಿತಿದ್ದ ಈ ವೃದ್ಧ ದಂಪತಿಗಳ ಸೇವೆ ಮಾಡಿ ಅವರ ಮನೆ ಯನ್ನು ಸಂಪೂರ್ಣ ಶುಚಿಗೊಳಿಸಿ ಕೊಡಲಾಯಿತು. ಅವರ ಮನೆಯ ಪಾತ್ರೆ, ಅವರು ಧರಿಸಿದ ವಸ್ತುಗಳನ್ನು ಕೂಡಾ ತೊಳೆದು ಅವರಿಗೆ ಮಾನಸಿಕ ಸ್ಥೈರ್ಯವನ್ನು ನೀಡಲಾಯಿತು. ಅವರ ಬಟ್ಟೆ ತೊಳೆದ ಆ ಹೆಚ್‍ಆರ್‍ಎಸ್ ಕಾರ್ಯಕರ್ತ ಹೇಳುತ್ತಾರೆ. ‘ನಾನು ಇದುವರೆಗೂ ನನ್ನ ಬಟ್ಟೆಯನ್ನೇ ತೊಳೆದವನಲ್ಲ.’ ಅವರು ಧರಿಸಿದ ಒಳ ಉಡುಪು ಸೇರಿ ಎಲ್ಲವೂ ಅದರಲ್ಲಿತ್ತು.

ಇದು ಪ್ರವಾಹ ಪೀಡಿತ ಕೇರಳದ ಎರ್ನಾಕುಳಮ್ ಜಿಲ್ಲೆಯಲ್ಲಿನ ಸಣ್ಣ ಒಂದೆರಡು ಘಟನೆಗಳು ಮಾತ್ರ. ಇಂತಹ ಹತ್ತು ಹಲವು ಘಟನೆಗಳು ಇಲ್ಲಿ ಘಟಿಸಿವೆ.
ಬಹಳ ಕುತೂಹಲದಿಂದ ಅಲ್ಲಿಗೆ ತೆರಳಿದಾಗ ದಾರಿಯುದ್ದಕ್ಕೂ ಅಲ್ಲಿನ ದೃಶ್ಯ ಕಂಡು ಚಕಿತ ನಾಗಿದ್ದೆ. ನಮ್ಮ ಊರಿನಂತೆ ಸ್ವಲ್ಪ ನೀರು ಬಂದು ಇಳಿದು ಹೋಗಿರಬಹುದು ಎಂದು ಭಾವಿಸಿದ್ದೆ. ಆದರೆ ಅಲ್ಲಿ ಕಂಡದ್ದೇ ಬೇರೆ. ಆಲುವಾದಿಂದ 35 ಕಿ.ಮೀ. ದೂರವಿರುವ ಪರ್‍ವೂರ್, ಮಾಟಪುರ ಮತ್ತು ಮನ್ನಮ್ ಗ್ರಾಮಕ್ಕೆ ಬಸ್ಸಲ್ಲಿ ತೆರಳುವಾಗ ರಸ್ತೆಯ ಇಕ್ಕಲಗಳಲ್ಲೂ ಕಂಪೌಂಡ್‍ಗಳು ಸಾಲಾಗಿ ಕುಸಿದ ದೃಶ್ಯ ಸಾಮಾನ್ಯವಾಗಿತ್ತು. ಪ್ರತಿಯೊಂದು ಮನೆಯ ಮುಂದೆ ಟಿ.ವಿ., ಕಂಪ್ಯೂಟರ್, ಭಾರೀ ಬೆಲೆಯ ಹಾಸಿಗೆ ಮತ್ತಿತರ ವಸ್ತು ಏನೂ ಉಪಯೋಗವಿಲ್ಲ ದಂತೆ ಬಿದ್ದುಕೊಂಡಿತ್ತು. ಇದು ಒಂದೆರಡು ಮನೆಯಲ್ಲ ಶೇಕಡಾ 95ರಷ್ಟು ಮನೆಯ ಅಂಗಳದಲ್ಲಿ ಇದೇ ದೃಶ್ಯ. ಮಕ್ಕಳ ಶಾಲಾ ಪುಸ್ತಕಗಳು, ತಿಂಡಿ ತಿನಿಸುಗಳು, ಫರ್ನಿಚರ್‍ಗಳು, ಮೋಟಾರು ವಾಹನಗಳು ಕೆಸರಿನಿಂದ ಆವೃತವಾಗಿ ರಾಶಿ ಬಿದ್ದಂತಿತ್ತು. ಪ್ರವಾಹದ ನೀರಿನ ಹೊಡೆತಕ್ಕೆ ಸಿಲುಕಿದ ಬಹುತೇಕ ಅಂಗಡಿಗಳ ಶಟರುಗಳ ಒಂದು ಭಾಗ ಸಂಪೂರ್ಣ ಒಡೆದು ತೆರೆದಿತ್ತು. ಮತ್ತೊಂದೆಡೆ ಈ ಸಮಯ ಬಾಳೆಯ ಫಸಲಿನ ಸಮಯವಾಗಿದ್ದು ಅದೆಷ್ಟೋ ತೋಟಗಳು ಸಂಪೂರ್ಣ ನಾಶವಾಗಿದ್ದುವು. ಸಾಮಾನ್ಯವಾಗಿ ಹೆಚ್ಚಿನ ಎಲ್ಲ ಮನೆಯಲ್ಲೂ ನೀರು ಹಾಯಿಸಿ ವಸ್ತುಗಳನ್ನು ಶುಚಿಗೊಳಿಸುವ ದೃಶ್ಯವು ಸಾಮಾನ್ಯ ವಾಗಿತ್ತು. ವಾಷಿಂಗ್ ಪೌಡರ್ ಮತ್ತು ಬ್ರೆಷ್‍ಗಳ ಅನೇಕ ಅಂಗಡಿಗಳು ತೆರೆದಿದ್ದವು. ಎಲ್ಲೆಡೆ ಕೆಸರುಮಯವಾದ ವಾತಾವರಣವಾಗಿತ್ತು. ಪ್ರತೀ ಮನೆಯಲ್ಲಿಯೂ ಅರ್ಧ ಅಡಿಯಷ್ಟು ಆಳದಲ್ಲಿ ಕೆಸರು ತುಂಬಿತ್ತು. ಕೆಲವೆಡೆ ಅದು ಗಟ್ಟಿಯಾಗಿತ್ತು.

ಇಲ್ಲಿನ ಜನರಿಗೆ ಕೆಸರಿನಿಂದ ತುಂಬಿದ ಮನೆ ಯನ್ನು, ಮನೆಯ ಪೀಠೋಪಕರಣ, ಪಾತ್ರೆ ಮುಂತಾದ ವಸ್ತುಗಳನ್ನು ಶುಚಿಗೊಳಿಸಿಡುವುದು ತ್ರಾಸದಾಯಕವಾಗಿತ್ತು. ಇದಕ್ಕಾಗಿ ಅವರಿಗೆ ನೆರವು ಬೇಕಾಗಿತ್ತು. ಅನೇಕ ಸಾಮಾಜಿಕ ಸೇವಾ ಸಂಸ್ಥೆ ಗಳು ಬಟ್ಟೆ ಬರೆ ಹಣ ಕೊಟ್ಟಿರಬ ಹುದು. ವಾಸ್ತವದಲ್ಲಿ ಆ ಜನರಿಗೆ ಬೇಕಾಗಿರುವುದು ಮನೆಯಲ್ಲಿ ತುಂಬಿದ ಕೆಸರನ್ನು ಶುಚಿಗೊಳಿಸಿ ಮರಳಿ ವಾಸಕ್ಕೆ ಯೋಗ್ಯವಾಗುವಂತೆ ಮಾಡುವು ದಾಗಿದೆ. ಈ ಜಲ ಪ್ರಳಯದ ಅಘಾತದಿಂದ ಜನರು ಇನ್ನೂ ಚೇತರಿಸಿಕೊಂಡಿಲ್ಲ. ಆತಂಕ ಕಳವಳದಿಂದಲೇ ದಿನ ದೂಡುತ್ತಿದ್ದಾರೆ. ಅಡುಗೆ ಪಾತ್ರೆಯಿಂದ ಹಿಡಿದು, ಮನೆಯ ಪೀಠೋ ಪಕರಣದವರೆಗಿನ ಎಲ್ಲ ವಸ್ತುಗಳು ಕೆಸರಿನಿಂದ ಕಲುಷಿತಗೊಂಡಿದೆ. ಹಗಲಿನಲ್ಲಿ ಮನೆಯ ಕೆಸರನ್ನು ಶುಚಿಗೊಳಿಸಿ ರಾತ್ರಿ ಪುನರ್ವಸತಿ ಕೇಂದ್ರಗಳತ್ತ ಸಾಗುತ್ತಾರೆ. ಹೌದು ಮನೆಯಲ್ಲಿ ಎಲ್ಲಿಯೂ ನಿಲ್ಲಲಾಗದ ಸ್ಥಿತಿ. ಈ ಕೆಸರನ್ನು ನೀಗಿಸಲು ಕೂಲಿ ಕಾರ್ಮಿಕರು ಸಿಗುತ್ತಿಲ್ಲ. ಸಿಕ್ಕರೂ ಒಂದು ದಿನದಲ್ಲಿ ಮುಗಿಯುವಂತಹದ್ದಲ್ಲ. ಅನೇಕ ಮನೆಗಳಲ್ಲಿ ಒಂದೆರಡು ಮಹಿಳೆಯರು ಅಥವಾ ಅಶಕ್ತರು, ವೃದ್ಧರು ಮಾತ್ರ ಇದ್ದಾರೆ. ಇಂತಹ ಮನೆಯವರ ಪಾಡು ಹೇಳತೀರದು. ಹೇಳಲಾಗದೆ ಸ್ವಾಭಿಮಾನದಿಂದ ಹಸಿವೆಯಿಂದಲೇ ದಿನ ಸಾಗಿಸು ವವರೂ ಇದ್ದಾರೆ. ಒಂದು ವೇಳೆ ಜನರಿದ್ದರೂ ಶುಚಿಗೊಳಿಸಲಾಗದ ಸ್ಥಿತಿ. ಮನೆಯ ವಿದ್ಯುತ್ ಸಂಪರ್ಕ ಸಂಪೂರ್ಣ ಕೆಟ್ಟಿರುವುದರಿಂದ ನೀರಿನ ಮೋಟಾರು ಕೂಡಾ ಕೆಲಸ ಮಾಡುತ್ತಿಲ್ಲ. ಬಾವಿ ಯಿಂದ ಸೇದಿ ಮಾಡಿದರೆ ಮುಗಿಯುವಂತಹದ್ದಲ್ಲ. ಹಲವೆಡೆ ಬಾವಿಯೂ ಕಲುಷಿತಗೊಂಡಿದೆ. ಸ್ಟೀಲ್ ಪಾತ್ರೆಗಳು ಕೂಡಾ ಉಪಯೋಗಕ್ಕೆ ಬಾರದ ಸ್ಥಿತಿಯಲ್ಲಿವೆ. ಅಡಿಗೆ ಕೋಣೆಯಲ್ಲಿ ಎಲ್ಲವೂ ಕೆಸರುಮಯ. ಶೌಚಾಲಯವೂ ಬಳಸಲಾಗದಂತಹ ದುಃಸ್ಥಿತಿ. ಒಂದು ಸ್ಥಳದ ಸುಮಾರು ಇಪ್ಪತ್ತೈದರಷ್ಟು ಮನೆಯ ಶೌಚಾಲಯವು ಸಂಪೂರ್ಣ ಹಾಳಾ ಗಿದ್ದರೆ ಅಲ್ಲಿಯ ಪರಿಸ್ಥಿತಿಗೆ ಹೇಗಿರಬಹುದೆಂಬುದ ನ್ನೊಮ್ಮೆ ಊಹಿಸಿ. ಎಲ್ಲಾ ಮನೆಗಳು ದುರ್ಗಂಧಮಯವಾಗಿದೆ. ಕೆಲವರಂತೂ ಇದು ಅಲ್ಲಾಹನ ಅದಾಬ್ ಆಗಿರಬಹುದೇ ಎಂದು ಅನಿಸಿಕೆ ವ್ಯಕ್ತಪಡಿಸಿದ್ದೂ ಇದೆ. ಅಲ್ಲಿ ತುಂಬಿದ ಆ ಗಟ್ಟಿಯಾದ ಕೆಸರುಗಳು ಅದನ್ನು ಸಾರಿ ಹೇಳುತ್ತಿವೆ. ನೀರು ಹಾಯಿಸಿದರೂ ಸುಲಭದಲ್ಲಿ ಆ ಕೆಸರು ಜಾರುತ್ತಿಲ್ಲ. ಶಾಲಾ, ಮದ್ರಸಗಳ ಪಠ್ಯ ಪುಸ್ತಕಗಳು, ದಾಖಲೆ ಪತ್ರ ನೀರಿಗೆ ಹಾಳಾಗಿದೆ. ಇಂತಹ ಬಹಳ ಸಂಕಷ್ಟಮಯ ಪರಿಸ್ಥಿತಿಯ ಕೆಲ ಪ್ರದೇಶಗಳಿಗೆ ಕರ್ನಾಟಕ ಜಮಾಅತೆ ಇಸ್ಲಾಮೀಯ ಪ್ರಕೃತಿ ವಿಕೋಪ ನಿರ್ವಹಣೆಯ ವಿಭಾಗವಾದ ಹೆಚ್.ಆರ್.ಎಸ್. (ಹ್ಯೂಮಾನಿಟೆ ರಿಯನ್ ರಿಲೀಫ್ ಸೊಸೈಟಿಯ) 60 ಜನರ ತಂಡ ತೆರಳಿಯಿತು. ಹಣ, ನೀರು, ವಸ್ತ್ರ ಮುಂತಾದುವುಗಳ ನೆರವಿನ ಮೂಲಕ ಕೆಲ ಸಂಘ ಸಂಸ್ಥೆಗಳು ರಂಗಕ್ಕಿಳಿ ದರೂ ಹೆಚ್.ಆರ್. ಎಸ್. ಸ್ವಲ್ಪ ಭಿನ್ನವಾಗಿ ನೊಂದವರ ಶುಚಿಗೊಳಿ ಸುವ ಕೆಲಸಕ್ಕಿಳಿಯಿತು. ಸುಮಾರು ಏಳೆಂಟು ವಿವಿಧ ತಂಡಗಳನ್ನು ರಚಿಸಿ ಕಾರ್ಯಾಚರಣೆ ಗಿಳಿಯಿತು. ಮನೆಯನ್ನು ಶುಚಿಗೊಳಿಸಲು ಸಮಾರೋಪಾದಿಯಲ್ಲಿ ರಂಗಕ್ಕಿಳಿಯಿತು. ನಿಜವಾಗಿ ಜನರಿಗೆ ಇದರ ಅಗತ್ಯವಿದೆಯೆಂಬುದು ಆನಂತರ ನೊಂದವರ, ಪೀಡಿತರು ಆಡಿದ ಮಾತುಗಳೇ ಸಾಕ್ಷಿಯಾಗಿದೆ.

ಹೆಚ್.ಆರ್.ಎಸ್.ನ ಕಾರ್ಯ ಚಟುವಟಿಕೆಗಳು ಅದೆಷ್ಟು ಪ್ರಭಾವಪೂರ್ಣವಾಗಿತ್ತು ಎಂದರೆ ಸಂತ್ರಸ್ತರೋರ್ವರು ಪುನರ್ವಸತಿ ಕೇಂದ್ರ ದಿಂದ ಮರಳಿ ಬರುವಾಗ ಹೆಚ್.ಆರ್.ಎಸ್. ಕಾರ್ಯಕರ್ತರು ಎದುರಾದರು. ನನ್ನ ಒಂದು ಮನೆಯಿದೆ. ಶುಚಿಗೊಳಿಸಲು ಸಹಾಯ ಮಾಡುತ್ತೀರಾ ಎಂದು ಕೇಳಿದರು. ಸರಿ, ನಿಮ್ಮ ಮನೆ ಯಾವುದು ಎಂದು ಕೇಳಿದೆವು. ಅದೋ ಕಾಣುತ್ತಿದೆಯಲ್ಲಾ ಅದೇ ಮನೆಯೆಂದು ತನ್ನ ಮನೆಯತ್ತ ಬೆರಳು ತೋರಿಸಿದರು. ಅದು ಈಗ ತಾನೇ ತೊಳೆದು ಶುಚಿಗೊಳಿಸಿ ಬರುತ್ತಿ ದ್ದೇವೆ ಎಂದಾಗ ಅವರ ಮುಖದಲ್ಲಾದ ಸಂತೃಪ್ತಿಯ ನಗು ನಿಜಕ್ಕೂ ಪರಲೋಕದ ಮಹಾ ಆದಾಯವಾಗಿದೆ. ಮನೆಯೊಳಗೆ ಪ್ರವೇಶಿಸಿದಾಗ ಅವರು ಮೂಕವಿಸ್ಮಿತರಾಗಿ ಬೆರಗಾದರು.

ಪರವೂರಿನ ಮನ್ನಮ್ ಎಂಬಲ್ಲಿನ 80ರ ಆಸುಪಾಸಿನಲ್ಲಿರುವ ಸುಬಾಶಿಣಿ ಎಂಬ ವಯೋವೃದ್ಧೆಯ ಅಳಲು ಹೇಳ ತೀರದ್ದು. ಪ್ರವಾಹದ ರಭಸಕ್ಕೆ ಆಕೆಯ ಮನೆ ಸಂಪೂರ್ಣ ಕುಸಿದು ಹೋಗಿತ್ತು. ಇದ್ದ ನಾಲ್ಕು ಮಕ್ಕಳು ಅವರನ್ನು ತೊರೆದು ದೂರದಲ್ಲೆಲ್ಲೋ ಪ್ರತ್ಯೇಕ ಸಂಸಾರ ನಡೆಸುತ್ತಿದ್ದಾರೆ. ಸ್ಥಳೀಯ ಜಮಾಅತ್ ಹೊಣೆಗಾರ ರಶೀದ್‍ರವರ ಗಮನಕ್ಕೆ ಈ ವಿಚಾರ ಬಂದು ಕೂಡಲೇ ಹೆಚ್.ಆರ್.ಎಸ್. ಕಾರ್ಯಕರ್ತರಿಗೆ ವಿಷಯ ತಲುಪಿಸಿ ಹೆಚ್‍ಆರ್‍ಎಸ್ ಕಾರ್ಯಕರ್ತರು ಸೇರಿ ಕೊಂಡು ಹೊಸ ಸಣ್ಣ ಮನೆಯೊಂದನ್ನು ನಿರ್ಮಿಸಿದರು. ಅದಕ್ಕೆ ಬೇಕಾದ ಹಾಸಿಗೆ ಅಡಿಗೆ ಪಾತ್ರೆ ಎಲ್ಲವನ್ನೂ ಜೋಡಿಸಿ ಕೊಟ್ಟಾಗ ಆ ವಯೋವೃದ್ಧೆಗೆ ಅಳು ತಡೆಯಲಾಗಲಿಲ್ಲ. ಸಂತೋಷದಿಂದ ಆಕೆಯ ಕಣ್ಣು ತೇವ ಗೊಂಡವು. ಇವರೆಲ್ಲರೂ ನನ್ನ ಮಕ್ಕಳು ಎಂದು ಕಾರ್ಯಕರ್ತರಿಗೆ ಹುಮ್ಮಸ್ಸು ಮೂಡಿಸುವಂತೆ ನುಡಿದರು. ಆದರೆ ಹೆಚ್.ಆರ್.ಎಸ್. ಕಾರ್ಯಕರ್ತರು ಅಲ್ಲಿಂದ ತೆರಳುವ ವರೆಗೂ ಅವರು ಅಳುತ್ತಲೇ ಇದ್ದರು.
ಈ ಪ್ರವಾಹ ಪೀಡಿತರಿಗೆ ನೆರ ವಾಗಲು ಕರ್ನಾಟಕದಿಂದ ತೆರಳಿದ ಹೆಚ್.ಆರ್.ಎಸ್. ತಂಡದ 60 ಕಾರ್ಯಕರ್ತರು 5 ದಿನಗಳ ಕಾಲ ಸಕ್ರಿಯವಾಗಿ ಕಾರ್ಯರಂಗಕ್ಕಿಳಿದಿದ್ದರು. ಎರ್ನಾಕುಳಮ್ ಜಿಲ್ಲೆಯ ಮಾಟ ಪುರಮ್, ಕನ್ನಮ್, ಪರವೂರು ಮುಂತಾದ ಪ್ರದೇಶದಲ್ಲಿ ಕೆಸರಿನಿ ಂದಾ ವೃತ ಮನೆಗಳ ಶುಚೀಕರಣ ಕಾರ್ಯ ದಲ್ಲಿ ತೊಡಗಿಸಿಕೊಂಡರು. 74 ಮನೆ, 3 ಅಂಗಡಿ, 3 ಮಸೀದಿ, ಎರಡು ಕಾಲೇಜು, 2 ಹಾಸ್ಟೆಲ್, ಒಂದು ಮದ್ರಸ, ಒಂದು ಪಂಚಾಯತ್ ಕಚೇರಿ, ಒಂದು ಅಂಗನವಾಡಿ, ಜಮಾಅತೆ ಇಸ್ಲಾಮಿಯ ಒಂದು ಕಚೇರಿ, ಒಂದು ಸಣ್ಣ ಮನೆ ನಿರ್ಮಾಣ, ಎರಡು ರಸ್ತೆ, ಒಂದು ಸಾ ಮಿಲ್‍ಗಳನ್ನು ಶುಚಿಗೊಳಿಸ ಲಾಯಿತು ಮತ್ತು ಒಂದು ಮನೆಯ ವಿದ್ಯುತ್ ಸಂಪರ್ಕ ಸರಿಪಡಿಸಲಾಯಿತು. ಹೆಚ್.ಆರ್.ಎಸ್. ಕರ್ನಾಟಕ ಕಾಪ್ಟನ್ ಅಮೀರ್ ಸಿದ್ದೀಕ್‍ರ ನೇತೃತ್ವದಲ್ಲಿ ತೆರಳಿದ ತಂಡದಲ್ಲಿ ಅಬ್ರಾರ್ ಅಹ್ಮದ್, ಹುಸೇನ್ ಕೋಡಿ ಬೆಂಗ್ರೆ, ಕಾಸಿಮ್ ಮಂಗಳೂರು, ಅಬ್ದುಲ್ ಗಫೂರ್ ಕುಳಾೈಯವರ ವಿವಿಧ ತಂಡಗಳು ವಿವಿಧ ಕಡೆಗಳಿಗೆ ಹೋಗಿ ಶುಚಿಗೊಳಿ ಸುವ ಕಾರ್ಯದಲ್ಲಿ ನಿರತವಾಯಿತು. ಸ್ವಯಂ ಸೇವಕರಿಗೆ ಕೇರಳದ ಜ.ಇ. ಹಿಂದ್ ಬೇಕಾದ ಎಲ್ಲ ವ್ಯವಸ್ಥೆಗಳನ್ನು ಮಾಡಿತು. ಕ್ಲೀನಿಂಗ್‍ಗೆ ಬೇಕಾದ ಬ್ರಶ್, ಬ್ಲೀಚಿಂಗ್ ಪೌಡರ್, ಸಾಬೂನು ಸಹಿತ ಎಲ್ಲ ವಸ್ತುಗಳನ್ನು ಕೇರಳದ ಜಮಾಅತೆ ಇಸ್ಲಾಮೀ ಕಾರ್ಯಕರ್ತರು ಸರಬ ರಾಜು ಮಾಡಿದ್ದರು. ಮದ್ರಸ, ಮಸೀದಿ ಮತ್ತು ಜಮಾಅತ್ ಕಚೇರಿಯಲ್ಲಿ ಈ ಕಾರ್ಯಕರ್ತರು ರಾತ್ರಿ ವಾಸ್ತವ್ಯ ಹೂಡಿ ದ್ದರು. ಮುಂಜಾನೆ ಬೇಗ ಎದ್ದು ಕೆಲಸ ಮಾಡುವ ಸ್ಥಿತಿಯಲ್ಲಿರಲಿಲ್ಲ. ಯಾಕೆಂದರೆ ಸಂತ್ರಸ್ತರು ಬೆಳಗಿನ ಉಪ ಹಾರವನ್ನು ಪುನರ್ವಸತಿ ಕೇಂದ್ರದಲ್ಲಿ ಮುಗಿಸಿ ಮನೆಯತ್ತ ಬರುತ್ತಿದ್ದರು. ಹಾಗೆಯೇ ಕತ್ತಲಾಗುವಾಗ ಪುನರ್ವಸತಿ ಕೇಂದ್ರಕ್ಕೆ ಮತ್ತೆ ತೆರಳುತ್ತಿದ್ದರು. ಹೆಚ್.ಆರ್.ಎಸ್. ತಂಡದಲ್ಲಿ ವೈದ್ಯರು, ಎಲೆಕ್ಟ್ರಿಕ್ ಕೆಲಸಗಾರರು, ಇಂಜಿನಿಯರ್ಸ್, ಆಟೋ ಚಾಲಕರು, ವಿದ್ಯಾರ್ಥಿಗಳು, ಆಲಿಮ್ ಹಾಫಿಝ್‍ಗಳೂ ಇದ್ದರು.

ಮಾಟಿಪುರಮ್‍ನ ಜಮಾಅತ್‍ನ ಹೊಣೆಗಾರ ರೋರ್ವರ ಮನೆಯು ಸಂಪೂರ್ಣವಾಗಿ ಮುಳು ಗಿತ್ತು. ಹೆಂಡತಿಯ ಲಕ್ವ ಪೀಡಿತರಾಗಿದ್ದರು. ಮಕ್ಕಳು ಇಲ್ಲದ ಅವರ ಪಾಡು ಹೇಳ ತೀರದ್ದು. ದೂರದ ಬೆಂಗಳೂರಲ್ಲಿ ವಾಸವಾಗಿರುವ ಓರ್ವ ಉದ್ಯಮಿ ಅವರಿಗಾಗಿ ತನ್ನ ಕಾರನ್ನು ಉಪಯೋಗಿ ಸಲು ನೀಡಿದ್ದರು. ಅವರ ಕಾರು ಕೂಡಾ ನೀರಿನಲ್ಲಿ ಮುಳುಗಿ ಹಾಳಾಗಿ ಈಗ ಉಪಯೋಗ ಶೂನ್ಯವಾಗಿದೆ. ತನ್ನ ಮನೆಯ ಬಗ್ಗೆ ಯೋಚಿಸದೆ ಈ ವ್ಯಕ್ತಿ ಕೂಡಾ ಇತರರ ಮನೆಯ ವಸ್ತುಗಳ ಸಂರಕ್ಷಣೆಯಲ್ಲಿ ನಿರತಾಗಿದ್ದರು. ತನ್ನ ಮನೆಯ ಪಕ್ಕದ ಮನೆಗಳಲ್ಲಿ ಹೆಚ್.ಆರ್.ಎಸ್. ಕಾರ್ಯ ಕರ್ತರು ಸೇವಾ ನಿರತರಾಗಿದ್ದರೂ ಅವರಿಗೆ ಈ ವಿಷಯ ತಿಳಿಸದೆ ತಾನೇ ಸ್ವತಃ ತನ್ನ ಮನೆಯನ್ನು ಏಕಾಂಗಿಯಾಗಿ ಶುಚಿಗೊಳಿಸುತ್ತಿದ್ದರು.

ಸುಭಾಶಿಣಿ ಎಂಬ ವೃದ್ಧೆಗೆ ಮನೆಯೊಂದನ್ನು ನಿರ್ಮಿಸಿದ ಬಳಿಕ ಅವರನ್ನು ಮಾತನಾಡಿಸಿದಾಗ ನನಗೆ ನಾಲ್ಕು ಗಂಡು ಎರಡು ಹೆಣ್ಮಕ್ಕಳು ಇದ್ದಾರೆ, ನನಗೆ ಸ್ವಲ್ಪ ಜಮೀನು ಇತ್ತು. ಅದನ್ನು ಮಾರಿ ಸಣ್ಣ ಮಗಳ ಮದುವೆ ಮಾಡಿಸಲಾಯಿತು. ನಂತರ ಈ ಸ್ಥಳ ಖರೀದಿಸಿ ನನ್ನನ್ನು ತೊರೆದು ಹೋದರು ಎಂದು ತನ್ನ ಅಳಲನ್ನು ತೋಡಿ ಕೊಂಡರು. ಈ ಮಧ್ಯೆ ಅರ್ಚಕರೋರ್ವರ ಮನೆ ಯನ್ನು ಸಂಪೂರ್ಣವಾಗಿ ಶುಚಿಗೊಳಿಸಲಾಯಿತು.
ನಂತರ ಭವಾನಿ, ಜಯ ಎಂಬ ಎರಡು ವಿಧವೆಯರು ಮಾತ್ರವಿರುವ ಮನೆಯ ಸ್ಥಿತಿಯೂ ಭಿನ್ನವಾಗಿರಲಿಲ್ಲ. ಮನೆಯಲ್ಲಿ ತುಂಬಿದ್ದ ಕೆಸರನ್ನು ತೊಳೆಯಲು ಹರಸಾಹಸ ಪಡುತ್ತಿದ್ದರು. ಕಡು ಬಡವರಾದ್ದದರಿಂದ ಒಂದೊತ್ತಿನ ಊಟಕ್ಕೂ ಪರ ದಾಡಬೇಕಾದಂತಹ ಸ್ಥಿತಿ ಇತ್ತು. ಅವರ ಮನೆಯನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಲಾಯಿತು.
ಸ್ಥಳೀಯ ಜಮಾಅತ್ ಹೊಣೆಗಾರರಾದ ರಶೀದ್ ಮತ್ತು ಸಂಗಡಿಗರು ಊರಲ್ಲಿ ಸರ್ವೇ ನಡೆಸಿ ಅತೀ ಸಂಕಷ್ಟದಲ್ಲಿರುವ ಕಡು ಬಡವರನ್ನು ಗುರುತಿಸಿ ಮಾಹಿತಿ ನೀಡಿ ತಂಡವನ್ನು ಕಳುಹಿಸಿ ಕೊಡುತ್ತಿದ್ದರು. ಸ್ಥಳೀಯ ಜಮಾಅತ್ ಹೊಣೆಗಾರ ರಾದ ಅಬ್ದುಲ್ಲಾರವರ ಹೃದಯವಂತಿಕೆ ಸ್ಮರಿಸಲೇ ಬೇಕು. ತನ್ನ ಬೃಹತ್ ಅಂಗಡಿ ಮಳಿಗೆ ಜಲಾ ವೃತಗೊಂಡಿದ್ದರೂ ಅತ್ತ ತಲೆ ಹಾಕದೆ ನೆರೆಮನೆ ಯವರ ನೆರವಿಗೆ ಧಾವಿಸಿದ್ದರು. ಅವರ ಫರ್ನಿಚರ್ ಅಂಗಡಿಯ ಸುಮಾರು ಐದು ಲಕ್ಷದಷ್ಟು ಸೊತ್ತು ನಷ್ಟ ಸಂಭವಿಸಿದೆ ಎಂದವರು ಹೇಳಿದ್ದಾರೆ. ಅವರ ಸೇವೆಯನ್ನು ಊರಿನ ಜನರು ಕೃತಜ್ಞತೆ ಯಿಂದ ಸ್ಮರಿಸುತ್ತಾರೆ. ಎಲ್ಲವೂ ಅಲ್ಲಾಹನ ವಿಧಿ ಎಂದು ಅವರು ಸುಮ್ಮನಾಗುತ್ತಾರೆ.

ಆಲುವಾದ ರೈಲು ನಿಲ್ದಾಣದ ಸಮೀಪವಿರುವ ಜಮಾಅತೆ ಇಸ್ಲಾಮೀ ಹಿಂದ್‍ನ ಕಚೇರಿಯಾದ ಹಿರಾ ಸೆಂಟರ್ ಸೇವಾ ಕಾರ್ಯಕರ್ತರ ಕೇಂದ್ರ ವಾಗಿ ಮಾರ್ಪಟ್ಟಿತ್ತು. ಇಲ್ಲಿ ಪ್ರತಿದಿನವೂ ಸುಮಾರು ನಾಲ್ಕುನೂರು ಐನೂರರಷ್ಟು ಮಂದಿ ಕಾರ್ಯ ಕರ್ತರು ಹೆಸರು ನೋಂದಾಯಿಸಿ ಒಂದೆರಡು ದಿನಗಳ ಕಾಲ ಸೇವೆ ಮಾಡಿ ಹಿಂದಿರುಗುತ್ತಿದ್ದರು. ಅಲ್ಲಿಂದ ಪ್ರವಾಹ ಪೀಡಿತ ಸ್ಥಳಗಳಿಗೆ ಕಾರ್ಯ ಕರ್ತರನ್ನು ರವಾನಿಸಲಾಗುತ್ತಿತ್ತು. ಕಾರ್ಯಕರ್ತರಿಗೆ ಬೇಕಾದ ಎಲ್ಲ ವಸ್ತುಗಳು ಗ್ಲೌಸ್, ಶೂ, ಬ್ರಷ್, ಬ್ಲೀಚಿಂಗ್ ಪೌಡರ್, ವಾಷಿಂಗ್ ಪೌಡರ್ ಮುಂತಾದ ಎಲ್ಲವನ್ನು ಅಲ್ಲಿ ಬಹಳ ವ್ಯವಸ್ಥಿತವಾಗಿ ನೀಡಲಾಗುತ್ತಿತ್ತು. ಅಲ್ಲಿನ ಜಮಾಅತ್‍ನ ಹೊಣೆ ಗಾರರ ಆ ಸೇವಾ ಮನೋಭಾವ ನಿಜಕ್ಕೂ ಸ್ಮರಣೀಯ. ಇಷ್ಟೆಲ್ಲಾ ಕಾರ್ಯರ್ತರ ಊಟ ಆಹಾರ ವಸತಿಯ ವ್ಯವಸ್ಥೆಯನ್ನು ಅವರೇ ಮಾಡಿದ್ದರು. ಆದ್ದರಿಂದ ಈ ಪ್ರಳಯಬಾಧಿತ ಪ್ರದೇಶದ ಸೇವೆಯು ಎಂತಹ ಸಂದಿಗ್ಧ ಪರಿಸ್ಥಿತಿ ಯಲ್ಲಿ ಯಾವ ರೀತಿ ಕಾರ್ಯಾಚರಿಸಬೇಕು ಎಂಬ ಆತ್ಮವಿಶ್ವಾಸವು ಕಾರ್ಯಕರ್ತರಲ್ಲಿ ಪುಟಿದೆ ದ್ದಿತ್ತು. ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಯಾವ ರೀತಿಯಲ್ಲಿ ಕಾರ್ಯಾಚರಿಸಬಹುದು ಎಂಬ ಮಹತ್ತರವಾದ ಸಂದೇಶವನ್ನು ಕೂಡಾ ಈ ಸ್ವಯಂ ಸೇವಾ ವಿಭಾಗದ ಕಾರ್ಯ ಚಟುವಟಿಕೆಗಳು ನೀಡಿದೆ.

ಪ್ರಳಯ ಬಾಧಿತರಿಂದ ಬಂದ ಪ್ರತಿಕ್ರಿಯೆಯು ಅವರ ಉತ್ಸಾಹವನ್ನು ಇಮ್ಮಡಿಗೊಳಿಸಿದೆ. ಕಾರ್ಯ ಕರ್ತರ ಸೇವಾ ಮನೋಭಾವವನ್ನು ಮುಕ್ತ ಕಂಠದಿಂದ ಶ್ಲಾಘಿಸಿ ಪ್ರಾರ್ಥಿಸಿದ ಉದಾಹರಣೆ ಧಾರಾಳ ಇವೆ. ಕೆಲವೆಡೆ ಹೊರಡುವಾಗ ಆಹಾರ ಪದಾರ್ಥಗಳನ್ನು ತಯಾರಿಸಿ ಮಹಿಳೆ ಯರು ಸಾಲಾಗಿ ನಿಂತು ನೀಡಿ ಬೀಳ್ಕೊಟ್ಟ ಘಟ ನೆಯೂ ನಡೆದಿದೆ. ಇದಕ್ಕೆ ಪ್ರತಿಯಾಗಿ ಏನು ಕೊಡಲಿ ಎಂದು ಕೇಳಿದವರೂ ಇದ್ದಾರೆ. ಅವ ರಿಗೆ ಕಾರ್ಯಕರ್ತರ ನಗು ಮುಖವೇ ಉತ್ತರ ವಾಗಿತ್ತು. ಪ್ರಳಯ ಬಾಧಿತ ಪ್ರದೇಶದಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ತನ್ನ ಸೇವಾ ಚಟುವಟಿಕೆಯ ಮೂಲಕ ಜನಮಾನಸ ಗೆದ್ದಿದೆ ಎಂದರೆ ಅಚ್ಚರಿ ಯೆನಿಸದು. ಅಂತಹ ಒಂದು ಪ್ರಭಾವ ಸಮಾಜ ದಲ್ಲಿ ಮೂಡಿಸಿದೆ. ಜಾತಿ, ಧರ್ಮದ ನಡುವಿನ ಗೋಡೆ ಕೆಡವಲು ಈ ಪ್ರಳಯದಿಂದ ಸಾಧ್ಯ ವಾಗಿದೆ. ಹಣ ಅಹಂಕಾರದಿಂದ ಏನನ್ನೂ ಸಾಧಿಸಬಹುದೆಂದು ಭಾವಿಸಿದವರಿಗೆ ಜಗತ್ತು ನಶ್ವರವೆಂಬ ಭಾವನೆ ಮೂಡುವಂತಾಗಿದೆ.

ಈ ವಿಶ್ವಕ್ಕೂ ಒಬ್ಬ ನಿಯಂತ್ರಕನಿದ್ದಾನೆ. ಅವನ ಆದೇಶದಂತೆ ಜೀವಿಸಿ ಅವನನ್ನು ಆರಾಧಿಸಿ ಅವನು ಅನುಗ್ರಹಿಸಿದ್ದನ್ನು ಸಹ ಸೃಷ್ಟಿಗಳಿಗೆ ಹಂಚಿ ಅನ್ಯೋನ್ಯತೆಯಿಂದ ಜೀವಿಸಬೇಕೆಂಬ ಸಂದೇಶವೂ ನೀಡಿದೆ. ದೇವ ಯಾತನೆ ಬರುವುದ ಕ್ಕಿಂತ ಮುಂಚೆ ಆತನನ್ನು ಅರಿತು ಆತನ ಆದೇಶದಂತೆ ಬಾಳಿ ಬದುಕಬೇಕಾಗಿದೆ.
ಮಾಟಿಪುರಮ್‍ನ ಜಮಾಅತೆ ಇಸ್ಲಾಮೀ ಹಿಂದ್‍ನ ಹೊಣೆಗಾರರ ಜಮಾಲುದ್ದೀನ್‍ರವರನ್ನು ಸಂಪರ್ಕಿಸಿದಾಗ
ಎರ್ನಾಕುಳಮ್ ಜಿಲ್ಲೆಯಲ್ಲಿ ಸುಮಾರು 150 ಸ್ವಯಂ ಸೇವಾ ಕಾರ್ಯಕರ್ತರು ಪ್ರತಿದಿನ ಈ ಸೇವಾರಂಗದಲ್ಲಿ ಸಕ್ರಿಯರಾಗಿದ್ದಾರೆ. ಜಲ ಪ್ರಳಯ ಬರುತ್ತಿರುವಂತಹ ಸಂದರ್ಭದಲ್ಲಿ ಈ ಭಾಗದ ಜಮಾಅತೆ ಇಸ್ಲಾಮಿಯ ಕಾರ್ಯಕರ್ತರು ಅವರ ಪ್ರಾಣದ ಹಂಗು ತೊರೆದು ಹಲವರನ್ನು ಈ ಪ್ರವಾಹದಿಂದ ರಕ್ಷಿಸಿದ್ದಾರೆ. ವಿಶೇಷವಾಗಿ ಈ ಪ್ರದೇಶದ ಕಾರ್ಯಕರ್ತರು ತಮ್ಮ ಸಹವಾಸಿಗಳ ಸಂಕಷ್ಟ ನೀಗಿಸಲು ಶ್ರಮಿಸಿದ್ದಾರೆ. ಸ್ವತಃ ತಮ್ಮ ಮನೆ ಅಂಗಡಿಗಳಿಗೆ ನೀರು ನುಗ್ಗುತ್ತಿರುವುದನ್ನು ನಿರ್ಲಕ್ಷಿಸಿ ಇತರರ ಮನೆಯನ್ನು ಅದರಲ್ಲೂ ಮುಸ್ಲಿಮರೋ ಮುಸ್ಲಿಮೇತರರೋ ಎಂದು ವಿಂಗಡಿಸದೆ ಮನುಷ್ಯರೆಂಬ ದೃಷ್ಟಿಯಲ್ಲಿ ಎಲ್ಲರಿಗೂ ನೆರವಾದರು.

ತಕ್ಕಂಪಾಡಿ ಎಂಬ ಸ್ಥಳದಲ್ಲಿ ದೋಣಿಯಲ್ಲಿ ಸಾಗುತ್ತಿದ್ದ ಹದಿನೆಂಟು ಮಂದಿ ಯನ್ನು ರಕ್ಷಿಸಿದ್ದು ವಿಸ್ಮಯಕಾರಿಯಾಗಿದೆ. ಒಂದು ಗಂಟೆಯ ಕಾಲದ ಪ್ರಯತ್ನದಿಂದ ಅವರನ್ನು ದೇವಾನುಗ್ರಹದಿಂದ ರಕ್ಷಿಸಲಾಯಿತು. ಇಂತಹ ಹಲವು ಘಟನೆಗಳು ನಮ್ಮಲ್ಲಿ ನಡೆದಿವೆ. ಇವೆಲ್ಲ ವನ್ನೂ ಗಮನಿಸಿದಾಗ ಕೇರಳದ ಜನರು ತಮ್ಮ ಹಳೆಯ ಕಾಲಕ್ಕೆ ಮರಳುತ್ತಿದ್ದುದಾಗಿ ಕಂಡುಬಂತು. ಬೆಂಕಿ ಪೆಟ್ಟಿಗೆ ಕೇಳಿಕೊಂಡು ಪಕ್ಕದ ಮನೆಗೆ-ತೆರಳುವ ಸ್ಥಿತಿಗೆ ತಲುಪಿದೆ. ಸ್ವತಃ ಕಲ್ಲಿನಲ್ಲಿ ಅರೆದು ಗುದ್ದಿ ಆಹಾರ ಪದಾರ್ಥ ತಯಾರಿಸುವ ದಿನಗಳೂ ಬಂದಿದೆ. ಆಧುನಿಕ ಯಂತ್ರೋಪಕರಣ ಗಳಿಂದ ಮುಕ್ತಿ ಪಡೆದಂತಿತ್ತು ಇದು. ಮತ್ತೊಂದು ವಿಶೇಷತೆಯೇನೆಂದರೆ ಪರಸ್ಪರ ದ್ವೇಷ ತೊರೆದು ಜಾತಿ, ಮತ, ಭೇದದ ವಿಂಗಡನೆಯಿಂದ ಹೊರ ಬಂದು ಸಹಬಾಳ್ವೆ, ಸಹೋದರತೆಯ ಜೀವನವನ್ನು ನಡೆಸಲು ಅಂದರೆ ಈ ದೇಶ ಬಯಸುವಂತಹ ಜೀವನಕ್ಕೆ ಜನರು ಮರಳುವಂತಾಗಿದೆ. ಎಲ್ಲವೂ ಅಲ್ಲಾಹನ ವತಿಯಿಂದ ಬರುವುದಾಗಿದೆ. ಅಲ್ಲಾಹನು ತನ್ನ ಉದ್ದೇಶಗಳನ್ನು ಈಡೇರಿಸುತ್ತಾನೆ. ಹೆಚ್.ಆರ್.ಎಸ್. ಕರ್ನಾಟಕದ ಈ ತಂಡದ ಸೇವೆಯನ್ನು ನಾವು ಸದಾ ಸ್ಮರಿಸುತ್ತೇವೆ ಎಂದು ಹೇಳಿ ತಂಡಕ್ಕಾಗಿ
ಪ್ರಾರ್ಥಿಸಿ ಅಭಿನಂದಿಸಿದರು.

ಕಾಸರಗೋಡಿನಿಂದ ತೆರಳಿದ ಸೇವಾ ತಂಡದ ಕ್ಯಾಪ್ಟನ್ ಆದ ಇಸ್ಮಾಈಲ್ ಮಾಸ್ಟರ್‍ರವರನ್ನು ಸಂಪರ್ಕಿಸಿದಾಗ ಅವರು ತನ್ನ ತಂಡದ ಅನುಭವದ ಬಗ್ಗೆ ಈ ರೀತಿ ವಿವರಿಸಿದರು. `ಐವರು ಐ.ಆರ್.ಡಬ್ಲ್ಯೂ’ (ರೀಲಿಫ್ ವಿಂಗ್) ಕಾರ್ಯಕರ್ತರು ಹಾಗೂ ಹತ್ತು ಮಹಿಳೆಯರು 50 ಪುರುಷರ ಸಹಿತ ಒಟ್ಟು 60 ಜನರ ತಂಡದೊಂದಿಗೆ ನಾವು ಜಮಾಅತ್ ರಾಜ್ಯದ ಆದೇಶದನುಸಾರ ಎರ್ನಾಕುಳಮ್‍ನ ಆಲುವಾ ತಲುಪಿದೆವು. ಈದ್ ಕಳೆದು ಮೂರನೇ ದಿನ ಹೊರಟವು. ಆಗಸ್ಟ್ 26, 27 ಎರಡು ದಿನಗಳ ಸೇವೆಯಲ್ಲಿ ಸಕ್ರಿಯರಾದೆವು. ನಮ್ಮದು ಡಾಕ್ಟರ್‍ಗಳು, ಅಧ್ಯಾಪಕರು, ಕೂಲಿ ಕಾರ್ಮಿಕರು, ಉಪನ್ಯಾಸಕರು, ವಿದ್ಯಾರ್ಥಿಗಳು, ಗೃಹಿಣಿಯರು ಸೇರಿದ ತಂಡವಾಗಿತ್ತು. ಆಲುವಾದ ಸಂತ್ರಸ್ತರ ಕೇಂದ್ರದಲ್ಲಿ ಸೇರಿದೆವು. ಅಲ್ಲಿ ತಲಾ ಒಂಭತ್ತು ಮಂದಿಯ ತಂಡವಾಗಿ ವಿಂಗಡಿಸಿ ಬೇರೆ ಬೇರೆ ತಂಡಗಳನ್ನು ಎರ್ನಾಕುಳಮ್ ಜಿಲ್ಲೆಯ ಪಾಲಾಯಿ ಕುಳಮ್‍ಗೆ ಕಳುಹಿಸಲಾಯಿತು. ಅಲ್ಲಿ ನೋಡಿದಾಗ ಹೃದಯ ವಿದ್ರಾವಕ ದೃಶ್ಯವಾಗಿತ್ತು. ಎರಡು ದಿನಗಳಲ್ಲಿ 14 ಮನೆಗಳು 2 ಶಿಕ್ಷಣ ಕೇಂದ್ರ ಒಂದು ಜುಮಾ ಮಸೀದಿ ಮತ್ತು ಸಣ್ಣ ಮಸೀದಿಯನ್ನು ಶುಚಿಗೊಳಿಸಿದೆವು. ಮಸೀದಿಯೊಂದರಲ್ಲಿ ಕೆಸರು ತುಂಬಿದ್ದರಿಂದ ನಮಾಝ್ ಸ್ಥಗಿತಗೊಂಡಿತ್ತು. ನಾವು ಶುಚಿಗೊಳಿಸಿ ಝೊಹರ್ ಅದಾನ್ ಕೊಟ್ಟು ನಮಾಝ್‍ಗೆ ಮತ್ತೆ ಚಾಲನೆ ನೀಡಿದೆವು. ರಸ್ತೆಯೊಂದು ತ್ಯಾಜ್ಯ ವಸ್ತುಗಳಿಂದ ಸಂಪೂರ್ಣ ಕಡಿದು ಹೋಗಿತ್ತು. ನಮ್ಮ ತಂಡದಲ್ಲಿದ್ದ ಈರ್ವರು ತಮಿಳರ ಇಸ್ಲಾಮಿಕ್ ಕಾರ್ಯಕರ್ತರ ಪ್ರಯತ್ನದಿಂದ ಜೆಸಿಬಿ ತರಿಸಿ ರಸ್ತೆಯನ್ನು ಶುಚಿಗೊಳಿಸಿ ಸಂಚಾರಕ್ಕೆ ವ್ಯವಸ್ಥೆ ಮಾಡಲಾಯಿತು. ಈ ದೊಡ್ಡ ದೊಡ್ಡ ಮನೆ ಮಾಳಿಗೆಯ ಜನರು ಕೂಲಿಗೆ ಜನರನ್ನು ಕರೆಸಿ ಪಂಪ್ ಹೊಡೆದು ಕೆಲಸ ನಿರ್ವಹಿಸಿದ್ದರು. ಆದರೆ ವಯೋವೃದ್ಧರಿರುವ ಬಡ ನಿರ್ಗತಿಕರ ಮನೆಯನ್ನು ಆಯ್ದುಕೊಂಡು ನಾವು ಸೇವಾ ಕಾರ್ಯದಲ್ಲಿ ನಿರತರಾದೆವು. ಎರಡು ಶಿಕ್ಷಣ ಕೇಂದ್ರಗಳ ಲಕ್ಷಾಂತರ ಮೊತ್ತದ ಶಾಲಾ ಸಾಮಗ್ರಿಗಳ ರಾಶಿಯೇ ಬಿದ್ದಿತ್ತು. ಅದನ್ನೆಲ್ಲವನ್ನೂ ತೊಳೆದುಕೊಡಲಾಯಿತು. ಅನೇಕ ಕಡೆಯಿಂದ ಈ ಕಾರ್ಯಕರ್ತರಿಗೆ ಅಭಿನಂದನೆಗಳು ಮೂಡಿಬಂದವು.