ಉತ್ತರಪ್ರದೇಶ: ಶಿಯಾ ವಕ್ಫ್ ಬೋರ್ಡ್‍ನ್ನು `ಭ್ರಷ್ಟಾಚಾರದ ಭವನ’ ಎಂದ ಬಿಜೆಪಿ ಸಚಿವ!

0
675

ಲಕ್ನೋ: ಉತ್ತರ ಪ್ರದೇಶದ ಶಿಯಾ ವಕ್ಫ್ ಬೋರ್ಡ್‍ನ ಅಧ್ಯಕ್ಷರಾದ ವಾಸೀಮ್ ರಿಝ್ವಿ ಕೆಲವು ದಿನಗಳ ಹಿಂದೆಯಷ್ಟೇ ವಕ್ಫ್ ಸೊತ್ತನ್ನು ದೇವಾಲಯ ಅಥವಾ ಬಸರಿಗಳ ನಿರ್ಮಾಣಕ್ಕೆ ನೀಡುವುದನ್ನು ವಿರೋಧಿಸಿದ ಇರಾಕ್‍ನ ಉನ್ನತ ಶಿಯಾ ಫತ್ವಾದ ವಿರುದ್ಧ ನಡೆದುಕೊಂಡು ಬಹಿಷ್ಕಾರಕ್ಕೆ ಗುರಿಯಾಗಿದ್ದರು. ಆದರೆ ಇದೀಗ ಬಿಜೆಪಿ ಎಮ್‍ಎಲ್‍ಸಿ ಆದ ಮಝ್ಹರ್ ಅಲಿ ಖಾನ್‍ರವರು ಶಿಯಾ ವಕ್ಫ್ ಬೋರ್ಡ್‍ಗೆ ರಾಜಿನಾಮೆ ನೀಡಿದ್ದಲ್ಲದೇ ಮಂಡಳಿಯನ್ನು ವಿಸರ್ಜಿಸಬೇಕೆಂದು ಆಗ್ರಹಿಸಿದ್ದಾರೆ.

“ಶಿಯಾ ವಕ್ಫ್ ಬೋರ್ಡ್ ಭ್ರಷ್ಟಾಚಾರದ ಭವನವಾಗಿದೆ. ರಿಝ್ವಿಯವರಿಗೆ ಮತ ನೀಡಿರುವುದೇ ನನ್ನ ಅತಿ ದೊಡ್ಡ ಪ್ರಮಾದ. ಬೋರ್ಡ್- ಹಲವಾರು ಹಗರಣಗಳು ಮತ್ತು ಭ್ರಷ್ಟಾಚಾರಗಳಲ್ಲಿ ತೊಡಗಿಸಿಕೊಂಡಿದ್ದು ಇದನ್ನು ಮುಚ್ಚಿಡಲು ರಿಝ್ವಿಯವರ ಪರವಾಗಿಯೇ ಮತ ಚಲಾಯಿಸುತ್ತಾ ಬಂದಿದೆ” ಎಂದು ಅವರು ಆರೋಪಿಸಿದ್ದಾರೆ.
ಆದರೆ ರಿಝ್ವಿ ಈ ಎಲ್ಲ ಆಪಾದನೆಗಳನ್ನು ತಳ್ಳಿ ಹಾಕಿದ್ದು “ಬುಕ್ಕಲ್‍ರವರು ಪ್ರಚಾರ ಪಡೆಯಲು ಹಾಗೂ ಶಿಯಾ ವಿದ್ವಾಂಸರ ಅನುಕಂಪ ಗಿಟ್ಟಿಸಿಕೊಳ್ಳಲು ತನ್ನ ವಿರುದ್ಧ ಇಲ್ಲ ಸಲ್ಲದ ಆರೋಪಗಳನ್ನು ಹೊರಿಸುತ್ತಿದ್ದಾರೆ” ಎಂದಿದ್ದಾರೆ.

2017ರ ಜುಲೈ 27ರಂದು ಯುಪಿ ಶಿಯಾ ವಕ್ಫ್ ಬೋರ್ಡ್‍ಗೆ ಬಿಜೆಪಿ ಎಮ್‍ಎಲ್‍ಸಿ ಬುಕ್ಕಲ್ ನವಾಬ್ ರಾಜಿನಾಮೆ ನೀಡಿದ್ದು ಅವರು ಬೋರ್ಡ್‍ನ ಸದಸ್ಯರಾಗಿಲ್ಲ. ಸಮಾಜವಾದಿ ಪಕ್ಷವನ್ನು ತೊರೆದಾಗಲೇ ಅವರ ಸದಸ್ಯತ್ವವು ರದ್ದಾಗಿದೆ ಎಂದು ರಿಝ್ವಿ ತಿಳಿಸಿದ್ದಾರೆ.

ನವಾಬ್‍ರವರ ರಾಜಿನಾಮೆಯ ನಂತರ ಅವರ ಸ್ಥಳವನ್ನು ಭರ್ತಿಗೊಳಿಸಲು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ಕಳೆದ ವರ್ಷವೇ ಮನವಿ ಸಲ್ಲಿಸಿರುವುದಾಗಿ ರಿಝ್ವಿ ಹೇಳಿಕೆ ನೀಡಿದ್ದಾರೆ.