ನಾನು ಕಂಡುಕೊಂಡ ಇಸ್ಲಾಮ್: ಸ್ವಾಮಿ ಶ್ರೀ ಲಕ್ಷ್ಮೀ ಶಂಕರಾಚಾರ್ಯರೊಂದಿಗೆ ನಡೆಸಿದ ಸಂದರ್ಶನ

0
1247

ಸಂಘಪರಿವಾರದ ನಾಯಕ ಬಲರಾಜ್ ಮುಧೋಕ್ ಅವರು ದೈನಿಕ್ ಜಾಗರಣ್ ಪತ್ರಿಕೆಯಲ್ಲಿ ಬರೆದ ‘ದಂಗೆಗಳು ಏಕೆ ಆಗುತ್ತವೆ’ ಎಂಬ ಲೇಖನದಿಂದ ಪ್ರೇರಿತರಾಗಿ History Of Islamic Terrorism ಎಂಬ ಹೆಸರಲ್ಲಿ ಇಸ್ಲಾಮನ್ನು ಕಟುವಾಗಿ ಟೀಕಿಸುವ ಪುಸ್ತಕವನ್ನು ಬರೆದು ಉತ್ತರ ಭಾರತದಾದ್ಯಂತ ಮನೆ ಮಾತಾಗಿದ್ದ ಉತ್ತರ ಪ್ರದೇಶದ ಕಾನ್ಪುರದವರಾದ  ಶ್ರೀ ಶಂಕರಾಚಾರ್ಯ ಸ್ವಾಮೀಜಿಯವರು ಆ ಬಳಿಕ ಇನ್ನೊಂದು ಪುಸ್ತಕ  ವನ್ನು ಬರೆಯಲು ಅಧ್ಯಯನಕ್ಕೆ ತೊಡಗಿದರು. ಅವರ ಬರಹದ ಉದ್ದೇಶ ಇಸ್ಲಾಮ್‍ನಿಂದಾಗಿ ಅಮೇರಿಕವು ಅಪಾಯದಲ್ಲಿದೆ ಎನ್ನುವುದನ್ನು ಹೇಳುವು ದಾಗಿತ್ತು. ಆದರೆ ಅಧ್ಯಯನ ನಿರತರಾದ ಸ್ವಾಮೀಜಿಯವರ ನಿಲುವುಗಳು  ದಿನೇ ದಿನೇ ಬದಲಾದುವು.ಕೊನೆಗೆ ‘ಇಸ್ಲಾಮ್: ಆತಂಕ್ ಯಾ ಆದರ್ಶ್’ (‘ಇಸ್ಲಾಮ್ ಭಯೋತ್ಪಾದನೆಯ ಧರ್ಮವಲ್ಲ’ ಎಂಬ ಹೆಸರಲ್ಲಿ ಶಾಂತಿ ಪ್ರಕಾಶನವು ಅದನ್ನು ಪ್ರಕಟಿಸಿದೆ) ಎಂಬ ಕೃತಿಯನ್ನು ರಚಿಸುವುದಕ್ಕೆ ಆ ಅಧ್ಯಯನ ಕಾರಣವಾಯಿತು. ಹಿಂದೂ ಮುಸ್ಲಿಮ್ ಜನ್ ಏಕ್ತಾ ಮಂಚ್ ಅನ್ನು ಸ್ಥಾಪಿಸಿರುವ ಇವರು ಕಳೆದ ವಾರ ಮಂಗಳೂರಿಗೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಎಸ್‍ಐಓ ಮಾಜಿ ರಾಷ್ಟ್ರಾಧ್ಯಕ್ಷ ಅಶ್ಫಾಕ್ ಅಹ್ಮದ್ ಶರೀಫ್ ಅವರು ನಡೆಸಿದ ಸಂದರ್ಶನವನ್ನು ಇಲ್ಲಿ ನೀಡಲಾಗಿದೆ.-ಸಂ.

?ಭಾರತದಲ್ಲಿ ಹಲವು ಜಾತಿ-ಮತಗಳ ಜನರು ನೆಲೆಸಿದ್ದಾರೆ. ಈ ವಿವಿಧ ಜಾತಿ ಮತಗಳಲ್ಲಿಯೂ ಅವರದ್ದೇ ಆದ ವಿಚಾರಧಾರೆಗಳನ್ನು ಬಿಂಬಿಸುವ ಧಾರ್ಮಿಕ ಪಂಡಿತರು, ಮೌಲವಿಗಳು, ಪಾದ್ರಿಗಳು ಹೀಗೆ ಹಲವಾರು ಧಾರ್ಮಿಕ ನಾಯಕರಿದ್ದಾರೆ ದೇಶದಲ್ಲಿರುವ ಈ ‘ವಿವಿಧತೆಯಲ್ಲಿ ಏಕತೆ’ ಎಂಬ ಸಾರವನ್ನು ಉಳಿಸಿಕೊಳ್ಳಲು ಧಾರ್ಮಿಕ ನಾಯಕರು ತಮ್ಮ ನಡುವೆ ಯಾವ ರೀತಿಯ ಪಾತ್ರವನ್ನು ಹೊಂದಿರಬೇಕು? ಮತ್ತು ಈ ಸಂದೇಶವನ್ನು ಉಳಿಸಿ ಕೊಳ್ಳಲು ಸಮಾಜದಲ್ಲಿ ಅವರು ಹೇಗೆ ಜನರಲ್ಲಿ ಪರಿವರ್ತನೆಯನ್ನು ತರಬೇಕೆಂದು ತಾವು ಬಯಸುತ್ತೀರಿ?

√ಪ್ರತಿಯೊಂದು ಧರ್ಮ ದಲ್ಲಿಯೂ ಕೂಡಾ ‘ಮಾನವೀಯತೆ’ ಎಂಬ ಸಾರವಿದೆ.ಇದು ಜನರೊಂದಿಗೆ ಪರಸ್ಪರ ಸಂಪರ್ಕ ಸಾಧಿಸಲು ಎಲ್ಲ ಧರ್ಮೀಯರು ಇಷ್ಟಪಡುವ ಮತ್ತು ಆದರದಿಂದ ಬರಮಾಡಿಕೊಳ್ಳುವ ಒಂದು ಪ್ರಮುಖ ಅಂಶವಾಗಿದೆ. ಈ ಸಾರವನ್ನು ಮೊದಲು ಬಳಸಿಕೊಳ್ಳ ಬೇಕಿದೆ. ಎರಡನೆಯದಾಗಿ, ‘ದೇವ ವಿಶ್ವಾಸ’ ಎಂಬ ವಿಷಯವನ್ನು ನಾವಿಲ್ಲಿ ನೆನಪಿನಲ್ಲಿಟ್ಟುಕೊಳ್ಳಬೇಕಿದೆ. ಯಾಕೆಂದರೆ, ಸನಾತನ ವೈದಿಕ್ ಧರ್ಮವೂ ಒಂದೇ ದೇವನ ಆರಾಧನೆಗೆ ಒತ್ತು ಕೊಡುತ್ತದೆ. ಅದೇ ರೀತಿ ಪ್ರವಾದಿ ಮುಹಮ್ಮದ್(ಸ) ರವರು 13 ವರ್ಷಗಳ ಕಾಲ ಮಕ್ಕಾ ಪ್ರದೇಶದಲ್ಲಿ ಏಕದೇವತ್ವದ ಸಂದೇಶ ವನ್ನು ಜನರ ಮುಂದಿರಿಸಿದರು. ಆದರೆ 99.9% ಜನರು ಅವರು ಮುಂದಿರಿಸಿದ ಏಕದೇವ ವಿಶ್ವಾಸದ ವಿಚಾರವನ್ನು ಕಟುವಾಗಿ ವಿರೋಧಿಸಿದರು. ಅಲ್ಲಾಹನ ಪ್ರವಾದಿಯಾಗಿ ನಿಯುಕ್ತರಾದ ಅವರು 13 ವರ್ಷಗಳ ಕಾಲ ಸಂದೇಶ ಪ್ರಚಾರ ನೀಡಿದರಾದರೆ ಜನರು ಬದಲಾಗಲಿಲ್ಲ. ಹಾಗಿರುವಾಗ ಇಂದು ಧಾರ್ಮಿಕ ವಿಷಯಗಳಲ್ಲಿ ಹೇಳಿಕೆಗಳನ್ನು ನೀಡುವ ನೇತಾರರು ವಿವೇಚಿಸಬೇಕಾದ ಅಗತ್ಯತೆ ಇದೆ. ಸಮಾಜದಲ್ಲಿ ಅವರ ಹೇಳಿಕೆಯ ಪರಿಣಾಮ ಯಾವ ತೆರನಾಗಿ ಪರಿವರ್ತನೆ ಹೊಂದ ಬಹುದು; ಅದರಿಂದಾಗುವ ಸಾಮಾಜಿಕ ಅಲ್ಲೋಲ ಕಲ್ಲೋಲಗಳ ಕುರಿತು ಅವರು ವಿವೇಚಿಸುವವರಾಗಬೇಕು. ಒಂದು ವೇಳೆ ತಮ್ಮ ವಿಚಾರಧಾರೆ ಗಳನ್ನು ಪ್ರಸ್ತುತಪಡಿಸುತ್ತಾ ಇತರರ ಧಾರ್ಮಿಕ ಭಾವನೆಗಳಿಗೆ ನೇರವಾಗಿ ಆ ವಿಷಯವು ಬಾಧಿಸುವುದಾದಲ್ಲಿ ಬಾತುಕೋಳಿಗಳು ಕೊಳದಲ್ಲಿ ಕಾದು ನಿಂತು ಮೀನುಗಳನ್ನು ಹೆಕ್ಕಿದಂತೆ ಧಾರ್ಮಿಕ ನೇತಾರರ ಹೇಳಿಕೆಗಳನ್ನು ಧರ್ಮದ ಸಾರವನ್ನೇ ಅರಿಯದ ಆಡಳಿತದಾಹಿಗಳು, ರಾಜಕೀಯ ಜೀವಿಗಳು ಅವುಗಳನ್ನು ಎತ್ತಿಕೊಂಡು ಸಮಾಜದ ಸ್ವಾಸ್ಥ್ಯವನ್ನೇ ಕೆಡಿಸಬಹುದು.ಒಂದು ವೇಳೆ ಓರ್ವ ಧಾರ್ಮಿಕ ನೇತಾರರು ಹೇಳುತ್ತಿರುವ ವಿಷಯ ದಲ್ಲಿ ಸತ್ಯಾಸತ್ಯವಿದ್ದರೂ ಕೂಡಾ  ಜನರು ಅದನ್ನು ಅರ್ಥೈಸಿಕೊಳ್ಳುವಲ್ಲಿ ವಿಫಲರಾದರೆ ಅದು ಸಾಮಾಜಿಕ ಅಸ್ವಸ್ಥತೆಗೆ, ಕೋಮು ಘರ್ಷಣೆಗೆ ಕಾರಣವಾಗಬಹುದು.

?ಹಾಗಾದರೆ ಯಾವ ರೀತಿ ವಿಚಾರಧಾರೆಗಳನ್ನು ಧಾರ್ಮಿಕ ನೇತಾರರು ಜನರ ಮುಂದಿರಿಸಬಹುದು?

√ ಇಲ್ಲಿ ಗಮನಿಸಬೇಕಾದ ಕೆಲವು ಅಂಶಗಳಿವೆ. ಜನರು ಎಲ್ಲವನ್ನು ಆಲಿಸುವವರೂ ವಿವೇಚಿಸುವವರೂ ಆಗಿದ್ದಾರೆ. ಹಾಗಿರುವಾಗ ಧಾರ್ಮಿಕ ನೇತಾರರ ಸಮ್ಮಿಲನಗಳಲ್ಲಿ ಪರಸ್ಪರರ ಧರ್ಮಗಳ ಕುರಿತು ಕೆಸರೆರಚಾಟ ನಡೆಸದೇ ಅವರವರ ಧರ್ಮದ ಸಾರವನ್ನು ಅವರು ಜನರಿಗೆ ತಿಳಿಸಿ ಕೊಡುವವರಾಗಬೇಕು. ಪ್ರವಾದಿ ವರ್ಯರಿಗೆ(ಸ) 13 ವರ್ಷಗಳ ಕಾಲಾವಧಿಯು ಏಕದೇವತ್ವದ ಸಂದೇಶ ವನ್ನು ಜನರಿಗೆ ಮನದಟ್ಟು ಮಾಡಲು ತಗುಲಿರುವಾಗ ತ್ವರಿತಗತಿಯಲ್ಲಿ ಫಲಿ ತಾಂಶವನ್ನು ಬಯಸುವ ಉದ್ದೇಶ ದಿಂದ ಯಾವುದೇ ರೀತಿಯ ಪ್ರಕ್ರಿಯೆ ಗಳನ್ನು ನಡೆಸಬಾರದು.

?ಜಮಾಅತೆ ಇಸ್ಲಾಮೀ ಹಿಂದ್‍ನ ಸಾಹಿತ್ಯ ಕೃತಿಗಳನ್ನು ಓದಿದ ನಂತರ ತಮಗೆ ಯಾವ ರೀತಿಯ ಅನುಭವ ವಾಯ್ತು?

√ ಜಿಹಾದ್ ಎಂಬುದು ಭಯೋ ತ್ಪಾದನೆಯನ್ನು ತೊಲಗಿಸಲಿಕ್ಕಾಗಿ ಬಳಸ ಲಾದ ಪವಿತ್ರತೆಯಾಗಿತ್ತು. ಅದರ ಉದ್ದೇಶ ಭಯೋತ್ಪಾದನೆಯನ್ನು ನಿರ್ನಾಮ ಮಾಡುವುದಾಗಿ ಹೊರತು ಅದನ್ನು ಪಸರಿಸುವುದಾಗಿರಲಿಲ್ಲ. ಇಸ್ಲಾಮ್‍ನ ಕುರಿತು ಬರೆಯಲಾದ “the history of Islamic Terrorism” ಎಂಬ ಪುಸ್ತಕವನ್ನು ಮರು ಪರಿಶೀಲಿಸಲಿಕ್ಕಾಗಿ ನಾನು `ಇಸ್ಲಾಮ್ ಆತಂಕ್ ಯಾ ಆದರ್ಶ’ ಎಂಬ ಪುಸ್ತಕವನ್ನು ನಾನು ಬರೆದೆನು. ಆದರೆ ನನ್ನ ಕುರಿತಾದ ವಿರೋಧಾಭಾಸ ಗಳು ಮುಸ್ಲಿಮರಲ್ಲಿ ಹೆಚ್ಚಾಗುವಾಗ ನಾನು ಅವರನ್ನು ಸಂತೈಸಲಿಕ್ಕಾಗಿ ಓರ್ವ ಮೌಲಾನಾರ ಪ್ರೇರಣೆಯಿಂದ ಈ ಪುಸ್ತಕವನ್ನು ಬರೆದೆನೆಂದು ಹೇಳಿದ ಕಾರಣ ಇದು ಸತ್ಯವಾಗಿರಲಿಲ್ಲ. ಈ ಪುಸ್ತಕದಲ್ಲಿ ನಾನು ಹೇಳಿದ ಮಾತಿಗೆ ಅವರಿಂದ ಯಾವುದೇ ರೀತಿಯ ಉತ್ತರಗಳಿರಲಿಲ್ಲವಾದರೆ ನನಗೆ ಪ್ರೇರಣೆ ಲಭಿಸಿದುದೇ ಆ ಸೃಷ್ಟಿಕರ್ತನಿಂದ. ದೇವನ ಸತ್ಯಾಸತ್ಯಗಳನ್ನು ತಿಳಿಸುವ ಪುಸ್ತಕದಲ್ಲಿ ಸುಳ್ಳುಗಳಿಗೆ ಪ್ರವೇಶವಿರ ಬಾರದು. ಹಾಗಾಗಿ ನಾನು ಅದನ್ನು ಮರು ತಿದ್ದುಪಡಿಗೊಳಪಡಿಸಲು ತೀರ್ಮಾನಿಸಿರುವೆನು. ಪವಿತ್ರ ಕುರ್‍ಆನನ್ನು ಯಾವ ರೀತಿ ಅರಿಯ ಬೇಕು, ಯಾವ ರೀತಿ ಓದಬೇಕು ಎಂಬುದನ್ನು ನನಗೆ ಪ್ರವಾದಿ ಮುಹಮ್ಮದ್(ಸ)ರವರ ಜೀವನ ಚರಿತ್ರೆಯು ತಿಳಿಸಿಕೊಟ್ಟಿತು. ನೇರವಾಗಿ ಕುರ್‍ಆನ್ ಓದುವುದಕ್ಕಿಂತ ಪ್ರವಾದಿ ಮುಹಮ್ಮದ್(ಸ)ರವರ ಜೀವನ ಚರಿತ್ರೆಯನ್ನು ಓದಿದರೆ ಪವಿತ್ರ ಕುರ್‍ಆನ್ ಕನ್ನಡಿಯಂತೆ ಪ್ರಕಾಶಿಸು ವುದು. ಅದರಲ್ಲಿ ಯಾವುದೇ ರೀತಿಯ ಸಂಶಯಗಳು ಮಾನವನಲ್ಲಿ ಹುಟ್ಟಿ ಕೊಳ್ಳಲಾರವು.

? ಈ ಹಿಂದೆ ತಾವು ಇಸ್ಲಾಮ್‍ನ ಕುರಿತು ಪ್ರಸ್ತುತ ಪಡಿಸುವ ವಿಚಾರ ಧಾರೆಗಳ ಪುಸ್ತಕಗಳು ಈಗಲೂ ಓದುಗರ ಕೈ ಸೇರುತ್ತಿವೆ. ಅವರೊಂದಿಗೆ ತಾವು ಮತ್ತೊಮ್ಮೆ ಇಸ್ಲಾಮಿನ ಕುರಿತು ಪ್ರಸ್ತುತ ಪಡಿಸಿದ ನಿಲುವುಗಳೂ ಕೂಡಾ ಓದುಗರ ಕೈ ಸೇರುತ್ತಿವೆ. ಈ ನಿಟ್ಟಿನಲ್ಲಿ ತಾವು ಓದುಗರಿಗೆ ಏನು ಸಂದೇಶವನ್ನು ನೀಡಲಿಚ್ಛಿಸುತ್ತೀರಿ?

√ ಇಸ್ಲಾಮನ್ನು ಸರಿಯಾದ ರೀತಿಯಲ್ಲಿ ಅರ್ಥೈಸಲಿ ಎಂಬ ಸಾರ ವನ್ನೇ ನಾನು ನನ್ನ ಎರಡನೆಯ ಪುಸ್ತಕದಲ್ಲಿ ತಿಳಿಸಿದ್ದೇನೆ. ರಾವಣನ ಕಥಾಪಾತ್ರವನ್ನು ನೀವು ಕೇಳಿದ್ದೀ ರಲ್ಲವೇ? ಆತನು ನಾಲ್ಕು ವೇದಗಳನ್ನು ಕಂಠಪಾಠ ಮಾಡಿದವನಾಗಿದ್ದನು. ಹೀಗಿದ್ದರೂ ಕೂಡಾ ಆತನನ್ನು ಯಾರೂ ಕೂಡ ವಿದ್ವಾಂಸನೆಂದಾಗಲಿ, ಪಂಡಿತನೆಂದಾಗಲಿ ಎಂದು ಕರೆಯುವು ದಿಲ್ಲ. ಬದಲಾಗಿ ಆತನನ್ನು ರಾಕ್ಷಸ ನೆಂದೇ ಕರೆಯುತ್ತಾರೆ. ವೇದವನ್ನು ಕಂಠಪಾಠ ಮಾಡುವುದೆಂದರೆ ಅಷ್ಟೊಂದು ಸುಲಭದ ವಿಷಯವಲ್ಲ. ಋಗ್ವೇದವನ್ನೇ ತೆಗೆದುಕೊಂಡರೆ ಅದ ರಲ್ಲಿ 5 ಭಾಗಗಳಿವೆ. ಆ ಪ್ರತಿಯೊಂದು ಭಾಗದಲ್ಲಿಯೂ ಕೂಡಾ 800 ಪುಟಗಳಿವೆ. ಅಂದರೆ 4000 ಪುಟಗಳ ಋಗ್ವೇದ ಮಂತ್ರಗಳನ್ನು ಕಂಠಪಾಠ ಮಾಡಿ. ಅದನ್ನು ಸಂದರ್ಭಕ್ಕೆ ತಕ್ಕಂತೆ ತಿಳಿಸುವ ಕೌಶಲ್ಯತೆ ಹೊಂದುವುದು ಸುಲಭದ ಮಾತಲ್ಲ. ಹಾಗಾದರೆ ನಾಲ್ಕೂ ವೇದಗಳನ್ನು ಕಂಠಪಾಠ ಮಾಡುವುದು ಸುಲಭವಲ್ಲವೆಂಬುದು ನಮಗೆ ತಿಳಿಯುತ್ತದೆ. ಆದರೆ ರಾವಣನ ಕೆಲಸವೇನಾಗಿತ್ತೆಂದರೆ ಆತನೋರ್ವ ಅತ್ಯಾಚಾರಿ ರಾಕ್ಷಸನಾಗಿದ್ದನು.

ಹಾಗಿರುವಾಗ,ಆತ ವೇದ ಪಂಡಿತನಾಗಿದ್ದರೂ ಆತನನ್ನು ಮಾತ್ರ ರಾಕ್ಷಸನೆಂದು ಕರೆಯಲಾಗುತ್ತದೆಯೇ ಹೊರತು ಆತನ ಆ ಕೃತ್ಯಗಳಿಗೆ ವೇದಗಳೂ ಕಾರಣ ವೆಂದು ಎಲ್ಲಿಯೂ ಆಗಲಿ ಯಾರೇ ಆಗಲಿ ಹೇಳುವುದಿಲ್ಲ. ಅದೇ ರೀತಿ ಓರ್ವ ಮುಸ್ಲಿಮನು ತಪ್ಪೆಸಗುತ್ತಾ ನೆಂದಾದಲ್ಲಿ ಆತನನ್ನು ಮಾತ್ರ ದೋಷಿಯಾಗಿಸಬೇಕೇ ಹೊರತು ಇಸ್ಲಾಮ್ ಧರ್ಮವನ್ನೇ ದೋಷಿಗಳ ಸಾಲಿನಲ್ಲಿ ನಿಲ್ಲಿಸಬಾರದು, ಅಲ್ಲಾಹನ ಆಜ್ಞೆಗಳಿಗೆ ವಿರುದ್ಧವಾಗಿ ನಡೆದು ಕೊಳ್ಳುವ ವ್ಯಕ್ತಿಯನ್ನು ದೋಷಿ ಯಾಗಿಸಬೇಕೇ ಹೊರತು ಪವಿತ್ರ ಕುರ್‍ಆನನ್ನೇ ದೋಷದ ಸಾಲಿನಲ್ಲಿ ನಿಲ್ಲಿಸಬಾರದು. ಇದನ್ನೇ ನಾನು ನನ್ನ ಪುಸ್ತಕದಲ್ಲಿ ತಿಳಿಸಿದ್ದೇನೆ. ಇಸ್ಲಾಮ್ ಮತ್ತು ಮುಸ್ಲಿಮರ ಕರ್ಮಗಳೆರಡೂ ಪ್ರತ್ಯೇಕ ಅಂಶಗಳಾಗಿವೆ. ಇವೆರಡೂ ಒಂದೇ ಅಲ್ಲ ಎಂಬುದನ್ನು ನಾನು ತಿಳಿಸಲು ಪ್ರಯತ್ನಿಸಿದ್ದೇನೆ. `ಕುರ್‍ಆನ್ ಜಿನೇ ಕೀ ಕಲಾ’ ಎಂಬ ಪುಸ್ತಕವನ್ನು ನಾನು ಬರೆದಿದ್ದೇನೆ. ಜೀವನ ಕಲೆ ಎಂಬುದನ್ನು ಯಾರು ಆರಂಭಿಸಿ ದರೋ ಆ ಕುರಿತು ನನಗೆ ತಿಳಿದಿಲ್ಲವಾದರೋ ಜೀವನ ಕಲೆ ಎಂದರೆ ಜೀವನದ ಪ್ರತಿಯೊಂದು ಏಳು-ಬೀಳಿನಲ್ಲಿಯೂ ಅದು ಮಾರ್ಗ ದರ್ಶಿಯಾಗಿರುವಂತಹುದ್ದಾಗಿರಬೇಕು. ತಂದೆ-ತಾಯಿಗಳ ಜೊತೆಗೆ, ನೆರೆಕರೆ ಯವರೊಂದಿಗೆ, ಸಂಬಂಧಿಗಳೊಂದಿಗೆ ಸಮಾಜದೊಂದಿಗೆ ಯಾವ ರೀತಿ ನಡೆದುಕೊಳ್ಳಬೇಕು ಎಂಬುದನ್ನು ನನಗೆ ತಿಳಿಸಿಕೊಟ್ಟಿರುವುದು ಪವಿತ್ರ ಕುರ್‍ಆನ್ ಆಗಿದೆ. ಯೂರೋಪ್ ಅಮೇರಿಕಾ ಗಳಲ್ಲಿ ಹರಡಿರುವ ಇಸ್ಲಾಮೋ ಫೋಬಿಯಾವನ್ನು ಹೋಗಲಾಡಿಸಲು ನಾನು “Quran an Art of living ಎಂಬ ಪುಸ್ತಕವನ್ನು ಪ್ರಕಟಿಸಲು ಪ್ರಕಾಶಕರು ಮುಂದಡಿ ಇಟ್ಟರೆ ಅದನ್ನು ಮುದ್ರಿಸಲು ಮುಂದಾಗುತ್ತಿದ್ದೇನೆ.

?ಸಮಾಜದ ವಿವಿಧ ಧರ್ಮೀಯ ಗುರುಗಳು ಒಂದೇ ವೇದಿಕೆಯಲ್ಲಿ ಒಟ್ಟು ಸೇರುವ ಸಂದರ್ಭ ಇನ್ನೂ ಯಾಕೆ ಸೃಷ್ಟಿಯಾಗಿಲ್ಲ? ಈ ಕುರಿತು ತಾವೇನು ಹೇಳ ಬಯಸುತ್ತೀರಿ?

√ ಖಂಡಿತವಾಗಿಯೂ ಧಾರ್ಮಿಕ ಗುರುಗಳು ಒಂದೇ ವೇದಿಕೆಯಲ್ಲಿ ಒಟ್ಟು ಸೇರಬೇಕು, ಸಮಾಜ ಮತ್ತು ದೇಶದ ಉದ್ಧಾರಕ್ಕಾಗಿ ಧಾರ್ಮಿಕ ನೇತಾರರು ಮುಂದಡಿ ಇಡಬೇಕಾದ ಅಗತ್ಯ ಇದೆ. ಧಾರ್ಮಿಕ ಬೋಧನೆಗಳು ಮತ್ತು ವ್ಯಕ್ತಿಗಳ ನಡುವೆ ಇರುವ ವ್ಯತ್ಯಾಸವನ್ನು ಋಣಾತ್ಮಕ ವಿಚಾರಧಾರೆ ಗಳನ್ನು ತೊಲಗಿಸಲು ಸಮಾಜದ ಸ್ವಾಸ್ಥ್ಯ ಕಾಪಾಡಲು ಧಾರ್ಮಿಕ ನೇತಾರರು ಮುಂದಡಿ ಇಡಬೇಕಿದೆ. ಆದುದರಿಂದಲೇ ನಾನು ಇಂತಹ ವೇದಿಕೆಗಳಲ್ಲಿ ಭಾಗವಹಿಸಲು ಮುಂದಾ ಗುತ್ತೇವೆ. ಯಾಕೆಂದರೆ ಓರ್ವ ಧಾರ್ಮಿಕ ನೇತಾರನ ಹೇಳಿಕೆಗಳು ಮತ್ತೊಂದು ಧರ್ಮದ ಧಾರ್ಮಿಕ ವಿಚಾರಗಳ ಮೇಲೆ ಋಣಾತ್ಮಕ ಭಾವನೆಯನ್ನು ಹುಟ್ಟು ಹಾಕುವಂತಹುಗಳಾಗಬಾರದು ಎಂಬ ಉದ್ದೇಶದಿಂದಾಗಿದೆ.

? ಸ್ವಾಮೀಜಿ, ನೀವು ಇಸ್ಲಾಮಿನ ಕುರಿತು ಗಾಢವಾಗಿ ಅಧ್ಯಯನ ನಡೆಸಿರುವಿರೆಂಬುದನ್ನು ನಾವು ತಿಳಿದುಕೊಂಡಿದ್ದರೆವೆ. ಇಸ್ಲಾಮ್‍ಗೆ ಭಯೋ ತ್ಪಾದನೆಯೊಂದಿಗೆ ಯಾವುದೇ ನಂಟಿಲ್ಲ ಎಂಬುದನ್ನು ನೀವು ನಿಮ್ಮ ವಿಚಾರಧಾರೆಗಳಲ್ಲಿ ಪ್ರಸ್ತುತ ಪಡಿಸಿ ದ್ದೀರಿ. ಆದರೆ  ಇದಕ್ಕಿಂತಲೂ ಮುನ್ನ ತಮ್ಮ ವಿಚಾರಧಾರೆಗಳು ಬೇರೆಯೇ ಆಗಿದ್ದವು. ತಾವು ಇಸ್ಲಾಮಿನ ಕುರಿತು ಅಧ್ಯಯನ ನಡೆಸಿದಿರಿ, ವಿವೇಚಿಸಿದಿರಿ.ತದನಂತರ ನೀವು ನಿಮ್ಮ ನಿಲುವುಗಳನ್ನು ಬದಲಿಸಿದ್ದೀರಿ ಕೂಡಾ.ಈ ಕುರಿತು ತಾವು ಏನಾದರೂ ಹೇಳಲಿಚ್ಛಿಸುವಿರಾ?

√ ನೋಡಿ, ವಿಷಯಗಳು ಹೇಗಿವೆಯೆಂದರೆ, ಎಲ್ಲದರ ಆರಂಭ ಇತಿಹಾಸದಿಂದಲೇ ಆಗುತ್ತದೆ. ನಾನು 6ನೇ ತರಗತಿಯಲ್ಲಿರುವಾಗ  ಇತಿಹಾಸವನ್ನು ನಮಗೆ ಬೋಧನಾ ವಿಷಯವಾಗಿಸಲಾಗಿತ್ತು. ಆದರೆ ಇತಿಹಾಸದಲ್ಲಿ ಮುಹಮ್ಮದ್ ಖಾಸಿಮ್ ರಿಂದ ಹಿಡಿದು ಔರಂಗ್‍ಜೇಬ್  ತನಕವೂ ಕಲಿಯಲಾರಂಭಿಸಿದೆವು. ನಮಗೆ ಓದಲು ಏನನ್ನು ನೀಡಲಾಗಿದೆಯೋ ಅದನ್ನು ನಾವು ಓದಿದರೆ ಮುಸ್ಲಿಮರ ಕುರಿತು ಋಣಾತ್ಮಕ  ಮನೋಧೋರಣೆ ಗಳು ಹುಟ್ಟಿಕೊಳ್ಳುವುದು ಸಹಜವೇ. ಯಾಕೆಂದರೆ, ಅಲ್ಲಿ ಇಸ್ಲಾಮ್ ಧರ್ಮದ ಕುರಿತು ಕಲಿಸಲಾಗುವು ದಿಲ್ಲ. ಬದಲಾಗಿ  ಅಲ್ಲಿ ಮುಸ್ಲಿಮರು ಏನು ಮಾಡಿದರು, ಮುಸ್ಲಿಮ್ ದೊರೆಗಳೇನು ಮಾಡಿದರು ಎಂಬ ನೆಗೆಟಿವ್ ವಿಚಾರಗಳನ್ನು ಎಳೆಯ ವಯಸ್ಸಿನಲ್ಲಿಯೇ  ಮಕ್ಕಳ ಮನಸ್ಸಲ್ಲಿ ತುಂಬಲಾಗು ತ್ತದೆ. 10ನೇ ವಯಸ್ಸಿನಲ್ಲಿಯೇ, ‘ಮುಸ್ಲಿಮರು ಹಿಂದೂಗಳನ್ನು ಕೊಂದರು, ಮರ್ದಿಸಿದರು’ ಎಂಬ  ಧೋರಣೆಗಳು ಅಚ್ಚೊತ್ತುತ್ತವೆ. ತದನಂತರ ಮುಂದಿನ ದಿನಗಳಲ್ಲಿ ಮುಸ್ಲಿಮ್ ಸ್ನೇಹಿತರು ಜೀವನದಲ್ಲಿ ಪ್ರವೇಶಿಸಿದರಾದರೂ, ಅವರು ಇಸ್ಲಾ  ಮಿನ ಗಂಧ ಗಾಳಿಯೂ ತಿಳಿಯದವರಾಗಿದ್ದರು. ಆಗಲೂ ನಮಗೆ ಇಸ್ಲಾಮಿನ ಅರಿವು ಲಭಿಸಲಿಲ್ಲ.

ಸಂಘಪರಿವಾರದ ನಾಯಕ ಬಲರಾಜ್  ಮಧೋಕ್ ಹಳೆಯ ಕಾಶ್ಮೀರಿ ನಾಯಕರಾಗಿದ್ದರು. ‘ದಂಗೆಗಳು ಯಾಕೆ ಆಗುತ್ತವೆ?’ ಎಂಬ ವಿಷಯದ ಕುರಿತು ಅವರೊಂದು ಲೇಖನವನ್ನು  ದೈನಿಕ ಜಾಗರಣ್ ಹಿಂದಿ ಪತ್ರಿಕೆಯಲ್ಲಿ ಬರೆದಿದ್ದರು. ಆ ಲೇಖನದಲ್ಲಿ ಪವಿತ್ರ ಕುರ್‍ಆನಿನ ಕೆಲವು ಸೂಕ್ತಗಳನ್ನು ನೇರಾತಿನೇರವಾಗಿ ಬಳಸಿ  ವಿವರಿಸಲಾಗಿತ್ತು

ಅದರಲ್ಲಿಯೂ ಸೂರಃ ಅತ್ತೌಬದ 5ನೇ ಸೂಕ್ತ “ನಿಷೇಧಿತ ಮಾಸಗಳು ಕಳೆದ ಬಳಿಕ ಬಹು ದೇವ ವಿಶ್ವಾಸಿಗಳನ್ನು ಸಿಕ್ಕಲ್ಲಿ ವಧಿಸಿರಿ. ಅವರನ್ನು ಸೆರೆ ಹಿಡಿಯಿರಿ, ಮುತ್ತಿಗೆ ಹಾಕಿರಿ, ಬೇಹು  ನಡೆಸುವಲ್ಲೆಲ್ಲ ಅವರನ್ನು ಹೊಂಚು ಹಾಕುತ್ತಾ ಕುಳಿತುಕೊಳ್ಳಿರಿ. ಮುಂದೆ ಅವರು ಪಶ್ಚಾತ್ತಾಪ ಪಟ್ಟರೆ, ನಮಾಝನ್ನು ಸಂಸ್ಥಾಪಿಸಿದರೆ ಮತ್ತು  ಝಕಾತ್ ಕೊಟ್ಟರೆ ಅವರನ್ನು ಬಿಟ್ಟುಬಿಡಿರಿ. ಅಲ್ಲಾಹ್ ಕ್ಷಮಾಶೀಲನೂ ಕರುಣಾನಿಧಿಯೂ ಆಗಿರುತ್ತಾನೆ.” (ಪವಿತ್ರ ಕುರ್‍ಆನ್ 9:5)

ಇನ್ನೊಂದು ಸೂಕ್ತವು ಸತ್ಯನಿಷೇಧಿಗಳ ರುಂಡ ವನ್ನು ಕಡಿದು ಎಸೆದು ಬಿಡಿರಿ ಎಂಬರ್ಥವುಳ್ಳ ಸೂಕ್ತವಾಗಿದೆ.

ಈ ರೀತಿ ಬರೆಯಲಾದ ಒಂದು ಲೇಖನವನ್ನು ಓರ್ವ ಮುಸ್ಲಿಮೇತರನು ಓದುತ್ತಾನೆಂದಾದಲ್ಲಿ ಆತನ ಮನದಲ್ಲಿ ಮುಸ್ಲಿಮರ ಕುರಿತು ದ್ವೇಷ  ವನ್ನಲ್ಲದೇ ಮತ್ತೇನನ್ನೂ ಕಾಣಲು ಸಾಧ್ಯವಾಗದು. ಮೌಲಾನ ಫತೇಹ್ ಮುಹಮ್ಮದ್ ಸಾಹಬ್ ಜಾಲಂದರಿಯವರಿಂದ ಕುರ್‍ಆನಿನ ಹಿಂದಿ  ಅನುವಾದವು ಹೊರಬಂತು. ಯಾವ ರೀತಿ ಬಲರಾಜ್ ಮಧೋಕ್ ಆ ಲೇಖನವನ್ನು ಪ್ರಸ್ತುತಪಡಿಸಿದ್ದರೋ ಅದರದ್ದೇ ಅಚ್ಚು ರೂಪವನ್ನು  ಈ ಹಿಂದಿ ಅನುವಾದವು ಹೊಂದಿತ್ತು. ನಾವು ಇದನ್ನು ಓದಿದ ನಂತರ, ಅಂದರೆ ‘ಇದು ಅಲ್ಲಾಹನ ಆದೇಶವೇ? ಮುಸ್ಲಿಮರ  ಧರ್ಮವೇ?’ ಎಂಬ ಆಶ್ಚರ್ಯಕರ ಪ್ರಶ್ನೆಗಳು ಹುಟ್ಟಿಕೊಂಡವು. ಒಂದು ವೇಳೆ ಈ ಧರ್ಮವನ್ನು ನಂಬದಿದ್ದರೆ ನಮ್ಮ ರುಂಡಗಳೂ  ಕಡಿಯಲ್ಪಡುವವೋ? ಇಂತಹ ಸಂದಿಗ್ಧ ವಾತಾವರಣದಲ್ಲಿ ನಾವಿದನ್ನು ಇತಿಹಾಸ ದೊಂದಿಗೆ ಜೋಡಿಸಿಕೊಂಡೆವು. ಅಲ್ಲಾಹನ ಇಂತಿಂತಹ  ಆದೇಶಗಳಿಂದಾಗಿ ಇಂತಿಂತಹ ಬೆಳ ವಣಿಗೆಗಳಾದವು ಎಂದು ನಾನು ಬರೆದೆನಾದರೆ ಎಲ್ಲಿಯೂ ಅದನ್ನು ಹಿಂದೂಗಳನ್ನೇ ವಿರೋಧಿಸಿ  ಹೇಳಲಾಗಿದೆ, ಬಹುದೇವಾರಾಧಕರನ್ನು ಉದ್ದೇಶಿಸಲಾಗಿದೆ ಎಂದು ಪ್ರಸ್ತುತಪಡಿಸಲಿಲ್ಲ. ನಾನು ಇಸ್ಲಾಮನ್ನು ಈ ಸೂಕ್ತಗಳ ಆಧಾರದಲ್ಲಿ  ಅಳೆದು ತೂಗಿದೆನಲ್ಲದೇ ಇಸ್ಲಾಮ್ ನಮ್ಮೆಲ್ಲರಿಗೆ ದೊಡ್ಡ ವಿಪತ್ತಾಗಿದೆ ಎಂಬುದನ್ನು ತಿಳಿಸಿಕೊಡಲು ಪ್ರಯತ್ನಿಸಿದೆನು. ‘ಇಸ್ಲಾಮಿಕ್  ಆತಂಕ್‍ವಾದ್‍ ಕಾ ಇತಿಹಾಸ್’ ಎಂಬ ಪುಸ್ತಕವನ್ನು ಬರೆದೆನು. ‘’the history of Islamic terrorism ” ಎಂಬ ಹೆಸರಲ್ಲಿ  ಅದರ ಅನುವಾದವೂ ಆಯ್ತು. ಈ ವಿಷಯವನ್ನು ಜಿಂದಾಲ್ ಸಂಸ್ಥೆಗಳು ನಡೆಸಿದ ಹಲವಾರು ಬೃಹತ್ ಕಾರ್ಯಕ್ರಮಗಳಲ್ಲಿಯೂ ನಾನು  ಹೇಳಿದೆನು. ತದನಂತರ ಓರ್ವ ವಜ್ರದ ವ್ಯಾಪಾರಿಯು ನನ್ನ ಬಳಿ ಬಂದು, “ಸ್ವಾಮೀಜಿ, ನಿಮ್ಮಲ್ಲಿ ದೇಣಿಗೆಯ ಕೊರತೆ ಇರುವಾಗ, ಇಸ್ಲಾಮ್ ಕೇವಲ ಭಾರತಕ್ಕಲ್ಲ ಎಲ್ಲ ದೇಶಗಳಿಗೂ ಮಾರಕವೆಂಬುದನ್ನು ನೀವು ತಿಳಿದಿರುವಾಗ ಅಮೇರಿಕಕ್ಕೆ ಸಂಬಂಧಿಸಿ ಒಂದು ಪುಸ್ತಕವನ್ನು  ಬರೆಯಿರಿ. ಒಂದು ವೇಳೆ ವಿದೇಶದಲ್ಲಿ ಈ ಪುಸ್ತ ಕವು ಮನ್ನಣೆ ಪಡೆದರೆ ಇಲ್ಲಿನ ಪ್ರಕಾಶನಕ್ಕಿಂತಲೂ ಅಲ್ಲಿನ ಪ್ರಕಾಶನ ಸಂಸ್ಥೆಗಳು ಭಾರೀ  ಮನ್ನಣೆ ಪಡೆಯುತ್ತವೆ” ಎಂದವರು ನನ್ನಲ್ಲಿ ಹೇಳಿದರು.

ಭಾರತದಲ್ಲಿ 60 ಪುಟಗಳ ಪುಸ್ತಕವನ್ನು ಯಾರು ಓದಲಾರರಾದರೆ ಅಮೇರಿಕಾದಲ್ಲಿ ವಿಷಯದ ಆಳ ಇಲ್ಲದ 60 ಪುಟಗಳನ್ನು ಯಾರೂ  ಕೂಡ ಓದಲಾರದು. ಹಾಗಾಗಿ ಅದರ ದೀರ್ಘ ಅಧ್ಯಯನ ನಡೆಸುವುದರೊಂದಿಗೆ ಪುಸ್ತಕದ ಪುಟ ಗಳನ್ನು ತುಂಬಬೇಕಾದ ಅಗತ್ಯತೆಯನ್ನು  ನಾನು ಆ ಮಾತುಕತೆಯಲ್ಲಿ ಅರಿತೆನು. ಆ ಸಂದರ್ಭದಲ್ಲಿ ಇಸ್ಲಾಮಿನ ಕುರಿತು ಇನ್ನಷ್ಟು ಅರಿಯಲು ನಾನು ಜಮಾಅತೆ ಇಸ್ಲಾಮೀ ಹಿಂದ್‍ನ  ಪುಸ್ತಕ ಮಳಿಗೆಗೆ ಭೇಟಿ ನೀಡಿದೆನು ಮತ್ತು ಅಲ್ಲಿಂದ `ಪ್ರವಾದಿ ಮುಹಮ್ಮದ್(ಸ)’ ಎಂಬ ಪುಸ್ತಕವನ್ನು ಖರೀದಿಸಿ ದೆನು. ಈ ಪುಸ್ತಕಗಳನ್ನು  ಖರೀದಿಸಿ ಅಧ್ಯಯನ ನಡೆಸಿದಾಗ ಪ್ರವಾದಿ ಮುಹಮ್ಮದ್(ಸ)ರವರ ಜೀವನದ ಕಾಲಘಟ್ಟದಲ್ಲಿ ಗತಿಸಿದ ಘಟನೆಗಳಿ ಗನುಗುಣವಾಗಿ ಕುರ್‍ಆನಿನ ಸೂಕ್ತಗಳು ಅವ ತೀರ್ಣಗೊಳ್ಳುವುದನ್ನು ನಾನು ಓದಿದೆನು.

ಆವಾಗ ನನಗೆ ಸೂರಃ ಅತ್ತೌಬದ ಸೂಕ್ತಗಳ ಅರ್ಥವನ್ನು ತಿಳಿಯಲು ಸಾಧ್ಯವಾಯ್ತು. ಹುದೈಬಿಯ ಸಂಧಾ ನವು ಮುರಿದು ಬಿದ್ದ ನಂತರ ಅಂದರೆ ಸತ್ಯ ನಿಷೇಧಿಗಳ ನಿಬಂಧನೆಗಳಿಗನುಗುಣವಾಗಿ ಮುಸ್ಲಿ ಮರು  ಹುದೈಬಿಯ ಸಂಧಾನ ಮಾಡಿಕೊಂಡು ದೀರ್ಘ ಕಾಲದವರೆಗೆ ಸಹನೆ ವಹಿಸಿದರೂ ಕೂಡಾ ಸತ್ಯನಿಷೇಧಿಗಳಲ್ಲಾಗದ ಬದಲಾವಣೆ ಮತ್ತು ಯಾವುದೇ ರೀತಿಯ ಒಪ್ಪಂದದ ಮಾರ್ಗಗಳು ಉಳಿಯದೇ  ಇರುವಾಗ, ಹಲವು ವರ್ಷಗಳಿಂದ ಅಪಮಾನಗಳನ್ನೂ, ಸಂಕಷ್ಟಗಳನ್ನೂ, ಮರ್ದನಗಳನ್ನೂ ಸಹನೆಯೊಂದಿಗೆ ಎದುರಿಸಿದರೂ ಕೂಡಾ ಸತ್ಯನಿಷೇಧಿ ಗಳ ಮನದಲ್ಲಿ ಯಾವುದೇ ರೀತಿಯ ಬದಲಾವಣೆಗಳು ಕಾಣದೇ  ಇದ್ದಾಗ ಈ ಸೂಕ್ತಗಳ ಸಾರವು ಭಗವದ್ಗೀತೆಯಲ್ಲಿ ನೀಡಲಾದದ ಸಮರದ(ಯುದ್ಧದ) ಆದೇಶಕ್ಕೆ ಸಮಾನವಾದುದೆಂಬುದು ಅರಿವಾಯ್ತು. ಅಲ್ಲಿಯೂ ಅರ್ಜುನನು ಯುದ್ಧದಲ್ಲಿ ಆಯುಧಗಳನ್ನು  ಹಿಡಿದಿದ್ದನು. ಯಾಕೆಂದರೆ ಅಲ್ಲಿ ಈಶ್ವರನ ಆದೇಶವಿತ್ತು. ಅತ್ಯಾಚಾರಿಗಳೊಂದಿಗೆ ಸತ್ಯನಿಷೇಧಿಗಳೊಂದಿಗೆ ಹೋರಾಡಲು ಆಜ್ಞೆ ನೀಡಲಾಗಿತ್ತು.

ಅದರಂತೆಯೇ ಪ್ರವಾದಿ ಮುಹಮ್ಮದ್(ಸ)ರವರ ಕಾಲಘಟ್ಟದಲ್ಲಿ ಸ್ಫೋಟಿಸಬಹುದಾದ ದುಷ್ಟ ಶಕ್ತಿಗಳ ವಿರುದ್ಧ ಯುದ್ಧದ ಆದೇಶವನ್ನು ನೀಡಲಾಗಿತ್ತೆಂಬುದು ನಮಗೆ ತಿಳಿದು ಬಂತು. ಈ ಯುದ್ಧವು ಭಯೋತ್ಪಾದನೆಯನ್ನೂ ಹಿಂಸೆಯನ್ನೂ ತಡೆದಿರಿಸಲಿಕ್ಕಾಗಿ ಮಾಡಲಾದ  ಯುದ್ಧವಾಗಿತ್ತೆಂಬುದು ಅರಿವಿಗೆ ಬಂತು. ಅನುವಾದಕಾರರು ಕುರ್‍ಆನಿನ ಅತ್ತೌಬದ ಈ ಸೂಕ್ತಗಳನ್ನು ಯಾವುದರೊಂದಿಗೆ ಬರೆಯಬೆಕಾಗಿತ್ತೋ ಅದರೊಂದಿಗೆ ಬರೆಯದೇ ಇದ್ದುವುದೇ ಇಂತಹ ತಪ್ಪುಕಲ್ಪನೆಗಳಿಗೆ ಎಡೆಮಾಡಿಕೊಟ್ಟಿತು. ದೊಡ್ಡ ದೊಡ್ಡ ಕಾರ್ಯಕ್ರಮಗಳಲ್ಲಿ  ಮುಸ್ಲಿಮರು ನನ್ನನ್ನು ಉದ್ದೇಶಿಸಿ`ಸ್ವಾಮಿ’ ನಿಮಗೆ ಎಲ್ಲಿಯೋ ಇಸ್ಲಾಮಿನ ಕುರಿತಾದ ತಪ್ಪು ಧೋರಣೆಗಳು ಲಭಿಸಿವೆ/ತಪ್ಪುಕಲ್ಪನೆಗಳಿವೆ”  ಎಂದು ಹೇಳುತ್ತಿದ್ದರಾದರೂ ಅದನ್ನು ಸರಿಪಡಿಸಲು ಮುಂದಾಗಲಿಲ್ಲ. ಒಂದು ರೀತಿಯಲ್ಲಿ ಈ ತಪ್ಪುಕಲ್ಪನೆಗಳು ಹುಟ್ಟಿಕೊಳ್ಳಲು ಅವರೇ  ಕಾರಣೀಕರ್ತರಾಗಿದ್ದರು. ಇಸ್ಲಾಮಿನ ಉದ್ದೇಶ ಸತ್ಯನಿಷೇಧಿಗಳನ್ನು ನೆಲಸಮ ಗೊಳಿಸುವುದು ಎಂಬ ಸಾರ ಹೊಂದಿದ ಹಿಂದಿ  ಅನುವಾದಗಳ ಪರಿಣಾವಾಗಿ ಈ ವಿಚಾರಧಾರೆಗಳು ಹುಟ್ಟಿಕೊಂಡಿರುವನೇ ವಿನಃ ಇಲ್ಲಿ ಸರಿಯಾದ ಮಾಹಿತಿ ನೀಡುವ ಪುಸ್ತಕಗಳ ಅಲಭ್ಯತೆಯ ಕುರಿತು ಯಾರೂ ಮಾತನಾಡುವುದಿಲ್ಲ.

?ಕೆಲವೇ ಕೆಲವು ಧಾರ್ಮಿಕ ಗುರುಗಳು ಮಾತ್ರ ಒಂದು ವೇದಿಕೆಯಲ್ಲಿ ಒಟ್ಟು ಸೇರಲು ಮುಂದಾಗು ತ್ತಾರೆ. ಆದರೆ ಹೆಚ್ಚಿನಾಂಶ ಧಾರ್ಮಿಕ  ನೇತಾರರು ಇದರಿಂದ ಹಿಂದಡಿ ಇಟ್ಟಿರುವುದಕ್ಕೆ ಏನು ಕಾರಣ ವಾಗಿರಬಹುದೆಂದು ತಾವು ಭಾವಿಸುತ್ತೀರಿ?

√ ಇಲ್ಲಿ ಹಲವು ವಿಚಾರಗಳು ತಡೆಗೋಡೆಗಳಾಗಿ ನಿಂತುಕೊಂಡಿರುವುದನ್ನು ಗಮನಿಸಬೇಕಿದೆ. ಉದಾಹರಣೆಗೆ ಮುಸ್ಲಿಮ್ ಸಮುದಾಯದಲ್ಲಿ ಇಸ್ಲಾಮಿನ ನೈಜ ಸಾರವನ್ನೇ ಅರಿಯದೇ ಕರ್ಮ ಭ್ರಷ್ಟರಾಗಿರುವ ಜನರ ಸಂಖ್ಯೆ ಅಪಾರವಾಗಿದೆ. ಇದಲ್ಲದೇ ಐತಿಹಾಸಿಕ  ಪಠ್ಯಗಳಲ್ಲಿರುವ ಮುಸ್ಲಿಮರ ಕುರಿತಾಗಿ ನೀಡಲಾಗಿರುವ ಮಾಹಿತಿಗಳು ಘೋರ ಅಪಾಯದ ಎಚ್ಚರಿಕೆಗಳಂತೆಯೇ ಕಂಡು ಬರುತ್ತವೆ.  ಹೀಗಿರುವಾಗ ಇತರೆ ಧರ್ಮದ ಧಾರ್ಮಿಕ ಗುರುಗಳಿಗೆ, ವಿದ್ವಾಂಸರಿಗೆ ಸರಿಯಾದ ಇಸ್ಲಾಮೀ ಸಂದೇಶ ಹಾಗೂ ನೈಜ ಸತ್ಯವನ್ನು ತಿಳಿಸುವ  ಆಧಾರಗಳು ತೀರಾ ವಿರಳವಾಗಿವೆ. ಯಾವಾಗ ಬಾಹ್ಯ ಸಮಾಜದಲ್ಲಿ ಇಷ್ಟೆಲ್ಲ ಅಪಾಯಕಾರಿ ವಿಚಾರಗಳನ್ನು ಸಮಾಜದ ಮುಗ್ಧ ಜನರ ತಲೆಗಳಲ್ಲಿ ಹೆಣೆಯಲಾಗಿದೆಯೋ ಆಗ ಸತ್ಯದ ಸಾರವನ್ನು ಧರ್ಮದ ಒಳಹೊಕ್ಕು ಓದಿದ ಧಾರ್ಮಿಕ ನೇತಾರರ ಮಾತುಗಳು ಓರ್ವ  ಏಜೆಂಟರನಂತೆ ಅಥವಾ ತನ್ನ ಲಾಭಕ್ಕಾಗಿ ಮಾತನಾಡುತ್ತಿದ್ದಾರೆಂಬಂತೆ ಗೋಚರಿಸುತ್ತದೆ. ನನಗೆ ಇಸ್ಲಾಮನ್ನು ಅರಿಯಲು ಮೊದಲು  ಪ್ರವಾದಿ ರವರ(ಸ) ಚರಿತ್ರೆಯನ್ನು ಓದಬೇಕೆಂಬ ನೈಜ ಸತ್ಯ ತಿಳಿಯುತ್ತದೆ. ಎಲ್ಲ ಧಾರ್ಮಿಕ ಗುರುಗಳಿಗೂ ಈ ಕುರಿತಾದ ವಿಷಯ ತಿಳಿದಿ ರಬೇಕೆಂದೇನಿಲ್ಲ. ಅವರಲ್ಲಿ ಹೆಚ್ಚಿನವರನ್ನು ಜನರ ಕರ್ಮಗಳ ಆಧಾರವನ್ನು ಬಳಸಿ, ಅವರ ಜೀವನ ಶೈಲಿಯನ್ನು ಬಳಸಿ ಒಂದು ನಿಲುವಿಗೆ  ತಲುಪಿಸಬಹುದು. ಹೀಗಿರುವಾಗ ಸರಿಯಾದ ಇಸ್ಲಾಮೀ ಸಂದೇಶ ವನ್ನು ಜನಸಾಮಾನ್ಯರಿಗೆ ತಲುಪಿಸುವ ಕೆಲಸವನ್ನು ಮೊದಲು  ಮುಸ್ಲಿಮರೇ ಮಾಡಬೇಕಿದೆ. ಆಗ ಹೆಚ್ಚಿನಾಂಶ ಧಾರ್ಮಿಕ ಗುರುಗಳು ಒಂದೇ ವೇದಿಕೆಯಲ್ಲಿ ಕಾಣಲು ಸಾಧ್ಯವಾಗಬಹುದು. ಓರ್ವ  ಧಾರ್ಮಿಕ ಗುರು ತನ್ನದೇ ಆದ ಆಶ್ರಮ ವನ್ನು ನಡೆಸುತ್ತಾನೆಂದಾದಲ್ಲಿ ಆತನಲ್ಲಿ ಬರುವ ಭಕ್ತಾದಿಗಳೇ ಆತನ ಆಶ್ರಮದ ಬೆಳವಣಿಗೆಗೆ, ಅಲ್ಲಿನ ಭೋಜನ ವ್ಯವಸ್ಥೆ, ಉಪಹಾರ ಇನ್ನಿತರೆ ಖರ್ಚು ವೆಚ್ಚಗಳಿಗೆ ಸಿಬ್ಬಂದಿಗಳ ವೇತನಕ್ಕೆ ಆರ್ಥಿಕ ಬಂಡವಾಳವಾಗಿರುತ್ತಾರೆ. ಒಂದು ವೇಳೆ  ಓರ್ವ ಧಾರ್ಮಿಕ ನೇತಾರನು ತನ್ನ ಆ ವ್ಯಾಪ್ತಿ ಯಲ್ಲಿರುವ ಋಣಾತ್ಮಕ ವಿಚಾರಗಳನ್ನು ಅರಿತ ನಂತರವೂ ಇತರೆ ಧರ್ಮದಲ್ಲಿರುವ ಸತ್ಯಾಸತ್ಯ ಗಳನ್ನು ತಿಳಿಸುತ್ತಾನೆಂದಾದಲ್ಲಿ ಆತನನ್ನು ಜನರು ನಿರಾಕರಿಸುತ್ತಾರೆ. ಆತನನ್ನು ದ್ವೇಷಿಸುತ್ತಾರೆ. ಈ ಕುರಿತು ಅನೇಕ ಋಣಾತ್ಮಕ ಸಂಕಷ್ಟಗಳನ್ನು ನಾನು ಸೇರಿ ಹಲವರು ಅನುಭವಿಸುತ್ತಿದ್ದೇವೆ. ನನ್ನ ಬಳಿ ಆಶ್ರಮವಿಲ್ಲದೇ ಇರಬಹುದು. ಆದರೆ ನಾನು ನೀಡುತ್ತಿರುವ ನೈಜ  ಧಾರೆಗಳ ಕುರಿತು ನನಗೆ ಆತ್ಮ ಸಂತೃಪ್ತಿ ಇದೆ.

? ಸನ್ಮಾರ್ಗ ವಾರಪತ್ರಿಕೆಯು ಇಸ್ಲಾಮಿನ ನೈಜ ಸಂದೇಶ ತಲುಪಿಸುವ ಹಾಗೂ ಸಾರ್ವಜನಿಕ ಸಮಸ್ಯೆಗಳ ಕುರಿತು ಜನರಿಗೆ ನೈಜ ಮಾಹಿತಿ  ನೀಡುವ ಕೆಲಸವನ್ನು ಕಳೆದ ನಲವತ್ತು ವರ್ಷಗಳಿಂದ ಕನ್ನಡ ಮಾಧ್ಯಮರಂಗದಲ್ಲಿ ಮಾಡುತ್ತಾ ಬಂದಿದೆ. ಈ ಪತ್ರಿಕೆಯಲ್ಲಿ ಸಕಲ  ಧರ್ಮೀಯ ಬಾಂಧವರೂ ಕೂಡಾ ಚಂದಾದಾರರಾಗಿದ್ದಾರೆ. ಈ ನಿಟ್ಟಿನಲ್ಲಿ ಸನ್ಮಾರ್ಗದ ಓದುಗರಿಗೆ ತಾವು ಯಾವ ಸಂದೇಶವನ್ನು ನೀಡಲು ಇಚ್ಛಿಸುತ್ತೀರಿ?

√ ನಾನು ಕಂಡುಕೊಂಡಂತೆ ಮುಸ್ಲಿಮ್ ಸಮುದಾಯದಲ್ಲಿ ಹಲವಾರು ಪಂಗಡಗಳೂ ಗುಂಪುಗಳೂ ಆಗಿ ಜನರು ಹಂಚಲ್ಪಟ್ಟಿದ್ದಾರೆ. ಇಲ್ಲಿನ  ಪಂಗಡಗಳ ಗುಂಪುಗಳ ನೇತಾರರು ಇಸ್ಲಾಮಿನ ನೈಜ ಸಂದೇಶವನ್ನು ತಲುಪಿಸುವ ಕೆಲಸವನ್ನು ಮಾಡಬೇಕಿದೆಯೇ ಹೊರತು ತಮ್ಮ ತಮ್ಮ  ನಡುವೆ ಜಗಳ ಮಾಡುವುದನ್ನು ನಿಲ್ಲಿಸ ಬೇಕಾಗಿದೆ. ಯಾವಾಗ ಸಮಾಜದಲ್ಲಿ ಪ್ರವಾದಿ ರವರು(ಸ) ಹೇಳಿದ ಒಳಿತಿನ ಸಂಸ್ಥಾಪನೆ ಮತ್ತು  ಕೆಡುಕಿನ ನಿರ್ಮೂಲನೆ ಎಂಬ ಸಂದೇಶವು ಕಾರ್ಯರೂಪಗೊಳ್ಳುವುದಿಲ್ಲವೋ ಅಲ್ಲಿಯವರೆಗೂ ಸಮುದಾಯವು ಪರಸ್ಪರರ ಕಾಲೆಳೆಯುವುದರ ಲ್ಲಿಯೇ ಸಮಯವನ್ನು ವ್ಯರ್ಥಗೊಳಿಸಬಹುದು. ಸನ್ಮಾರ್ಗ ವಾರಪತ್ರಿಕೆಯು ಇಸ್ಲಾಮಿನ, ಪ್ರವಾದಿ ರವರ(ಸ) ನೈಜ ಸಂದೇಶವನ್ನು ಜನರತ್ತ ತಲುಪಿಸುವ ಕೆಲಸವನ್ನು ಮಾಡುತ್ತಿರುವಾಗ ಅದು ಇಹಲೋಕ ಮತ್ತು ಪರಲೋಕಗಳೆರಡರ ವಿಜಯಕ್ಕೆ ಕಾರಣೀಭೂತವಾಗುವುದು. ಇಹ-ಪರಗಳೆರಡರ ಸಂದೇಶವನ್ನು ಜನರಿಗೆ ತಲುಪಿಸಿದ್ದೇ ಆದಲ್ಲಿ ಅದನ್ನು ಅರಿತು ಜೀವನದಲ್ಲಿ ಪ್ರವಾದಿ ರವರ(ಸ)  ಜೀವನ ಸಂದೇಶವನ್ನು ಪಾಲಿಸಿದಲ್ಲಿ ಮುಸ್ಲಿಮರು ಈ ಜಗತ್ತಿನಲ್ಲಿಯೇ ಮಾದರಿ ಸಮುದಾಯವಾಗುವಲ್ಲಿ ಸಮಾಜದಲ್ಲಿ ಧನಾತ್ಮಕ  ಪರಿವರ್ತನೆಗೆ ಕಾರಣವಾಗುತ್ತದೆ. ಅಲ್ಲಾಹನು ಮುಸ್ಲಿಮ್ ಸಮುದಾಯಕ್ಕೆ ಎಲ್ಲ ರೀತಿಯ ಅನು ಗ್ರಹಗಳನ್ನು ನೀಡಿರುವಾಗ ಅವುಗಳೆಲ್ಲದರಲ್ಲಿಯೂ ಪ್ರವಾದಿವರ್ಯರ(ಸ) ಜೀವನ ಸಂದೇಶವನ್ನು ಪಾಲಿಸಬೇಕಾಗಿದೆ. ಇಲ್ಲವೆಂದಾದಲ್ಲಿ ಅದು ಅವರ ವಿನಾಶಕ್ಕೆ ಕಾರಣವಾಗುವುದು.