ನೀಟ್ ಫಲಿತಾಂಶ: ಬೀದರ್‌ನ ಶಾಹೀನ್‌ ಶಿಕ್ಷಣ ಸಂಸ್ಥೆಗೆ ಆಲ್ ಇಂಡಿಯಾ 9ನೇ ರ‍್ಯಾಂಕ್

0
902

ಸನ್ಮಾರ್ಗ ವಾರ್ತೆ

ಬೀದರ್: ಪ್ರಸಕ್ತ ಸಾಲಿನ ನೀಟ್ ಪರೀಕ್ಷೆಯಲ್ಲಿ ಬೀದರ್ ನಗರದ ಶಾಹೀನ್ ಸ್ವತಂತ್ರ ಪದವಿ ಪೂರ್ವ ವಿಜ್ಞಾನ ಕಾಲೇಜಿನ ವಿದ್ಯಾರ್ಥಿಗಳು ಹೆಚ್ಚಿನ ಅಂಕಗಳನ್ನು ಗಳಿಸಿ ಟಾಪ್ 10ರಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.

ಕಾಲೇಜಿನ ಕಾರ್ತಿಕ್ ರೆಡ್ಡಿ 710 ಅಂಕಗಳನ್ನು ಪಡೆದು ರಾಜ್ಯದಲ್ಲೇ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಯಾಗಿ ಹೊರ ಹೊಮ್ಮಿದ್ದು ಆಲ್ ಇಂಡಿಯಾ 9ನೇ ಸ್ಥಾನ ಗಳಿಸಿದ್ದಾರೆ. ಎಂ.ಡಿ. ಅರ್ಬಾಜ್ ಅಹಮ್ಮದ್ 700 ಅಂಕಗಳನ್ನು ಪಡೆದು ಆಲ್ ಇಂಡಿಯಾ 85ನೇ ರ್ಯಾಂಕ್ ಪಡೆದುಕೊಂಡಿದ್ದಾರೆ.

ಶಾಹೀನ್ ಕಾಲೇಜು ಹಿಂದಿನಿಂದಲೂ ಸಿಇಟಿ ಹಾಗೂ ನೀಟ್‌ನಲ್ಲಿ ಗಮನ ಸೆಳೆಯುವ ಸಾಧನೆ ಮಾಡುತ್ತಲೇ ಬಂದಿದೆ. ಈ ಬಾರಿಯೂ ಕಾಲೇಜಿನ ವಿದ್ಯಾರ್ಥಿಗಳು ಅಮೋಘ ಸಾಧನೆ ತೋರಿದ್ದಾರೆ.

ಕಾಲೇಜಿನಲ್ಲಿ ಪಿ.ಯು.ಸಿ ಪ್ರಥಮ ವರ್ಷದಿಂದಲೇ ಸಿಇಟಿ ಹಾಗೂ ನೀಟ್ ತರಬೇತಿಗೆ ವಿಶೇಷ ಒತ್ತು ಕೊಡಲಾಗುತ್ತಿದೆ. ವೈದ್ಯಕೀಯ, ಎಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿಯ ವಿದ್ಯಾರ್ಥಿಗಳ ಕನಸು ನನಸಾಗಿಸಲು ಸರ್ವ ಪ್ರಯತ್ನ ನಡೆಸಲಾಗುತ್ತಿದೆ.

ಕಳೆದ ವರ್ಷ 327 ಉಚಿತ ಸರಕಾರಿ ವೈದ್ಯಕೀಯ ಸೀಟುಗಳನ್ನು ಶಾಹೀನ್ ಕಾಲೇಜು ಪಡೆದಿತ್ತು. ಈ ವರ್ಷ ಕಾಲೇಜಿನಿಂದ 400ಕ್ಕೂ ಹೆಚ್ಚು ಉಚಿತ ಸರಕಾರಿ ವೈದ್ಯಕೀಯ ಸೀಟುಗಳು ಪಡೆಯುವ ಸಾಧ್ಯತೆಗಳಿವೆ ಎಂಬುದಾಗಿ ವರದಿಯಾಗಿದೆ.