ಕೊರೊನಾ ವೈರಸ್, ಲಾಕ್ ಡೌನ್ ಮತ್ತು ಮಸೀದಿಗಳ ಪುನಶ್ಚೇತನ- ಒಂದು ಅವಲೋಕನ

0
893

ಸನ್ಮಾರ್ಗ ವಾರ್ತೆ
ಡಾ| ಬೆಳಗಾಮಿ ಮುಹಮ್ಮದ್ ಸಾದ್

ಕೊರೊನಾ ವೈರಸ್ ಎಂಬ ಮಹಾಮಾರಿ ಮತ್ತದರ ಪರಿಣಾಮದಿಂದ ಇಡೀ ಜಗತ್ತು ತತ್ತರಿಸಿ ಹೋಗಿದೆ. ನಮ್ಮ ದೇಶದಲ್ಲಿ ಲಾಕ್ ಡೌನ್‍ನ ನಾಲ್ಕನೆಯ ಕಂತು ಜಾರಿಯಲ್ಲಿದೆ. ಲಾಕ್ ಡೌನ್‍ನ ಪರಿಣಾಮವಾಗಿ ಬಡ ಮತ್ತು ಕಾರ್ಮಿಕ ವರ್ಗವು ಅತಿ ಹೆಚ್ಚು ಸಂಕಷ್ಟಗಳಿಗೆ ತುತ್ತಾಗಿರುವುದು ಜಗಜ್ಜಾಹೀರಾಗಿದೆ. ದೇಶದ ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಯೂ ಬಹಳ ಕೆಟ್ಟು ಹೋಗಿದೆ. ಮುಸ್ಲಿಮರಾದ ನಮ್ಮ ಮಟ್ಟಿಗೆ ಇನ್ನೂ ಹೆಚ್ಚಿನ ಕಳವಳಕಾರಿ ಸಂಗತಿಯೇನೆಂದರೆ, ಮಸೀದಿಗಳಿಂದ ನಮ್ಮ ಸಂಬಂಧವು ಕಡಿದು ಹೋಗಿರುವುದಾಗಿದೆ. ಈ ಸಂದರ್ಭದಲ್ಲಿ ಈ ಕೆಳಗೆ ನೀಡಲಾಗಿರುವ ಮಗ್ಗುಲುಗಳಿಂದ ಪರಿ ಸ್ಥಿತಿಯ ಅವಲೋಕನ ನಡೆಸುವುದು ಅನಿವಾರ್ಯವೆನಿಸಿದೆ.

ಕೊರೊನಾ ವೈರಸ್

ಅಲ್ಲಾಹ್ ಹೇಳುತ್ತಾನೆ, “ಇವರು (ಬಂಡಾಯ ನೀತಿಯಿಂದ) ಹಿಂಜರಿಯಬಹುದೆಂದು ನಾವು ಇವರಿಗೆ ಆ ಮಹಾ ಯಾತನೆಗೆ ಮುಂಚೆ ಈ ಲೋಕದಲ್ಲೇ (ಒಂದಿಲ್ಲೊಂದು ಚಿಕ್ಕ ಪುಟ್ಟ) ಯಾತನೆಯ ರುಚಿಯನ್ನು ಸವಿಸುತ್ತಲೇ ಇರುವೆವು.” (ಪವಿತ್ರ ಕುರ್‍ಆನ್: 21)

ಮಾನವನು ವಿದ್ರೋಹದ ದಾರಿಯನ್ನು ತುಳಿದಾಗ ಅಲ್ಲಾಹನು ವಿವಿಧ ನೈಸರ್ಗಿಕ ವಿಕೋಪಗಳನ್ನು ಎರಗಿಸುವ ಮೂಲಕ, ಮಾನವ ನನ್ನು ಚಿಂತನೆಗೆ ಒಡ್ಡುತ್ತಾನೆ; ಅವನು ತನ್ನ ಯೋಗ್ಯತೆ ಮತ್ತು ಸರಿಯಾದ ಸ್ಥಾನಮಾನದ ಬಗ್ಗೆ ಪರ್ಯಾಲೋಚಿಸಲು ನಿರ್ಬಂಧಿತನಾಗುತ್ತಾನೆ ಹಾಗೂ ಅಲ್ಲಾಹನ ದಾಸ್ಯದ ದಾರಿಯನ್ನು ಸ್ವೀಕರಿಸಿ, ಪರಲೋಕದ ಬಗ್ಗೆ ಚಿಂತಿಸ ತೊಡಗುತ್ತಾನೆ. ಇಂದು ನಾವು ನೋಡುತ್ತೇವೆ, ಅಲ್ಲಾಹನ ಅಸಂಖ್ಯಾತ ಸೃಷ್ಟಿಗಳ ಪೈಕಿ ಕೊರೊನಾ ವೈರಸ್ ಕೂಡ ಒಂದಾಗಿದೆ. ಅದು ಬರಿಗಣ್ಣಿಗೆ ಗೋಚರಿಸ ದಷ್ಟು ಸೂಕ್ಷ್ಮವಾಗಿದೆ. ಈ ವೈರಸ್ ಮಾನವ ಶರೀರದಲ್ಲಿ ಪ್ರವೇಶಿಸಿ ಅದರ ಸಂಖ್ಯೆಯು ಏಳು ಕೋಟಿಯನ್ನೂ ಮೀರಿದಾಗಲೇ ಮಾನವನು ರೋಗಬಾಧಿತನಾಗುತ್ತಾನೆ. ಇಂದು ಜಗತ್ತಿನಾದ್ಯಂತ ಹರಡಿರುವ ವಿಪತ್ತು ಕೇವಲ ಒಂದು ಗ್ರಾಂ ವೈರಸ್‍ನ ದೆಸೆಯಿಂದಾಗಿದೆ.

ಈ ಸ್ಥಿತಿಯಲ್ಲಿ ಮಾನವನು ಅಲ್ಲಾಹನ ಕಡೆಗೆ ಮರಳುವುದೇ ಸರಿಯಾದ ಮಾರ್ಗವಾಗಿದೆ. ಜತೆಗೆ ಅಲ್ಲಾಹನಲ್ಲಿ ಕ್ಷಮೆ ಯಾಚಿಸುವುದು, ಅಕ್ರಮದಿಂದ ಹಿಂದೆ ಸರಿಯುವುದು ಮತ್ತು ಪರಿಸ್ಥಿತಿಯನ್ನು ಉತ್ತಮ ಪಡಿಸಲು ಅಲ್ಲಾಹನಲ್ಲಿ ಪ್ರಾರ್ಥಿಸಬೇಕಾಗಿದೆ. ಆದರೆ ಈ ರೀತಿಯ ಸುಧಾರಣೆಯ ಕಡೆಗೆ ಮಾನವನ ಗಮನ ಹರಿ ಯುವುದೇ ಇಲ್ಲವೆನ್ನುವುದು ತೀರಾ ಖೇದಕರ ವಾಗಿದೆ. ಅಲ್ಲದೆ ಎಚ್ಚರಿಸಬೇಕಾದ ಕೂಟ ಅಂದರೆ ಮುಸ್ಲಿಮರು ಕೂಡ ತಮ್ಮ ಹೊಣೆ ಗಾರಿಕೆಯ ಬಗ್ಗೆ ಸಾಕಷ್ಟರ ಮಟ್ಟಿಗೆ ಅಜ್ಞರಾಗಿದ್ದಾರೆ.

ವೈದ್ಯಕೀಯ ತಥ್ಯಗಳು

ಹೌದು, ಈ ರೋಗಕ್ಕೆ ಮದ್ದಿಲ್ಲ ಮತ್ತು ಇದರ ತಡೆಗೆ ಯಾವುದೇ ವ್ಯಾಕ್ಸಿನ್ ಕೂಡ ತಯಾರಾಗಿಲ್ಲ ಎಂಬುದು ಸತ್ಯ. ಹಾಗಾಗಿ ಈ ಜಾಡ್ಯವು ಹರಡುವುದನ್ನು ತಡೆಯಲು ಆಗಾಗ ಹೇಳಲಾಗುತ್ತಿರುವ ಮುನ್ನೆಚ್ಚರಿಕಾ ಕ್ರಮಗಳು… ಆಗಾಗ ಕೈಗಳನ್ನು ತೊಳೆಯುವುದು, ಸ್ವಚ್ಛತೆ ಕಾಪಾಡುವುದು, ಮಾಸ್ಕ್ ಧರಿಸುವುದು ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಇತ್ಯಾದಿ ಅಗತ್ಯ ಮತ್ತು ಪ್ರಯೋಜ ನಕಾರಿಯಾಗಿದೆ. ಆದರೆ ಯಾವ ರೀತಿಯ ಭೀತಿಯ ವಾತಾವರಣವನ್ನು ಉಂಟು ಮಾಡಲಾಗಿದೆಯೋ ಮತ್ತು ರೋಗ ಹರಡುವ ಹಾಗೂ ಮರಣದ ಪ್ರಮಾಣವನ್ನು ಯಾವ ರೀತಿ ಭವಿಷ್ಯ ನುಡಿಯಲಾಗುತ್ತಿದೆಯೋ ಅವುಗಳ ಬಗ್ಗೆ ಭಿನ್ನಾಭಿಪ್ರಾಯಗಳಿಗೆ ಅವಕಾಶವಿದೆ. ಅನೇಕ ಸಂಗತಿಗಳು ಸುಳ್ಳೆಂದು ಸಾಬೀತಾಗಿವೆ. ವಿಶೇಷತಃ ಮರಣದ ಸುನಾಮಿಯನ್ನು ತೋರಿಸಲಾಗುತ್ತಿರುವುದು ಕೂಡ ಸತ್ಯಕ್ಕೆ ದೂರವಾದ ಸಂಗತಿಯೆಂದು ತೋರುತ್ತದೆ. ವಲಸೆ ಕಾರ್ಮಿಕರಲ್ಲಿಯೂ ಈ ರೋಗವು ಅಷ್ಟೇನೂ ಪ್ರಾಣಕಂಟಕವಾಗಿ ಪರಿಣಮಿಸಿಲ್ಲ. ಏನಿದ್ದರೂ ಈ ವೈರಸ್ ಇಡೀ ಜನ ಸಮುದಾಯದಲ್ಲಿ ಹರಡಿ ಹೋಗುವುದು ಮತ್ತು ಅನೂಹ್ಯ ರೀತಿಯಲ್ಲಿ ರೋಗನಿರೋಧಕ ಶಕ್ತಿಯೂ ಬೆಳೆದು ಬರುವುದು. ಈ ರೀತಿ ಇದು ನಿಯಂತ್ರಣಕ್ಕೆ ಬರುವುದು. ಇದರ ಹೊರತು ಬೇರೇ ನಿವೆಯೋ ಅವೆಲ್ಲ ದೂರಗಾಮಿ ಪರಿಣಾಮದ ಆತಂಕಗಳು ಮತ್ತು ದಿಗಿಲಿನ ಪ್ರತಿಕ್ರಿಯೆಗಳಾಗಿವೆ.

ಲಾಕ್ ಡೌನ್‍ನ ಘೋರ ಪರಿಣಾಮ

ಜನ ಬೆರೆಯುವುದನ್ನು ತಡೆಯುವುದು ಮತ್ತು ಪ್ರಯಾಣದ ಮೇಲೆ ನಿರ್ಬಂಧ ಹೇರುವುದು ಒಂದು ಹಂತದ ವರೆಗೆ ಅಗತ್ಯ. ಇದುವೇ ಲಾಕ್ ಡೌನ್‍ನ ಮೂಲಭೂತ ಕಲ್ಪನೆಯಾಗಿದೆ. ಆದರೆ ಯಾವ ವಿವೇಕಹೀನ ವಿಧಾನದಲ್ಲಿ ಮತ್ತು ಯಾವುದೇ ತಯಾರಿ ನಡೆಸದೆ, ಚಪ್ಪಾಳೆ-ತಟ್ಟೆ ತಟ್ಟುವ ಹಾಗೂ ದೀಪ ಉರಿಸುವ ನಾಟಕವಾಡಿ ಅದನ್ನು ಜಾರಿಗೊಳಿಸಲಾಗಿತ್ತೋ ಅದೊಂದು ತಮಾಷೆ ಮಾತ್ರವಾಗಿದೆ ಅಷ್ಟೇ. ದಟ್ಟ ಜನಸಾಂಧ್ರತೆ ಮತ್ತು ಸ್ಲಂ ಇರುವ ನಮ್ಮ ದೇಶದಲ್ಲಿ ಲಾಕ್ ಡೌನ್ ಒಂದು ಅನುಕರಣೀಯ ವಲ್ಲದ ಕಲ್ಪನೆಯಾಗಿದೆ. ಈಗ ಅದು ನಾಮಮಾತ್ರಕ್ಕೆ ಉಳಿದಿದೆ ಮತ್ತು ಎಲ್ಲೆಡೆ ಅದನ್ನು ಬಹಿರಂಗ ವಾಗಿಯೇ ಉಲ್ಲಂಘಿಸಲಾಗುತ್ತಿದೆ. ನಮ್ಮ ದೇಶದಲ್ಲಿ ಶ್ರೀಮಂತ-ಬಡವರ ನಡುವಿನ ಅಂತರ ಹಾಗೂ ಭಿನ್ನತೆ, ಬಡವವರು ಮತ್ತು ದಿನಗೂಲಿ ಕಾರ್ಮಿಕರ ವಲಸೆಯಿಂದಾಗಿರುವ ದುಃಸ್ಥಿತಿ, ಅವರು ಮ ನೆಗೆ ಮರಳುವ ವಿಷಯದಲ್ಲಿ ಆಗುತ್ತಿರುವ ಕೋಲಾಹಲ, ಹಸಿವಿನಿಂದಾಗುವ ಸಾವು, ದಾರಿದ್ರ್ಯ, ಧಾಂದಲೆ, ಅಕ್ರಮ-ದೌರ್ಜನ್ಯ, ಲಂಚಕೋರತನ, ಜೀವಹಾನಿ ದಾರಿಯಲ್ಲಿ ಆಗುತ್ತಿರುವ ಅಪಘಾತಗಳು ಮುಂತಾದ ಹೃದಯವಿದ್ರಾವಕ ಘಟನೆಗಳು ನಮ್ಮ ದೇಶದ ಪರಿಸ್ಥಿತಿಯನ್ನು ಅನಾವರಣ ಗೊಳಿಸಿವೆ. ಕೊರೊನಾ ವೈರಸ್‍ಗಿಂತ ಹೆಚ್ಚು ಲಾಕ್ ಡೌನ್‍ನಿಂದಾಗಿ ಮರಣಗಳು ಸಂಭವಿಸಿವೆ. ಬಡತನ ಹೆಚ್ಚಿದೆ, ಕೋಟಿ ಕೋಟಿ ಸಂಖ್ಯೆಯಲ್ಲಿ ನಿರುದ್ಯೋಗ ಹೆಚ್ಚಾಗಿದೆ ಮತ್ತು ಆರ್ಥಿಕತೆಯು ತೀರಾ ಹದಗೆಟ್ಟು ಹೋಗಿದೆ. ಪ್ರಗತಿಯ ಕನಸು ಕಾಣುತ್ತಿರುವ ನಮ್ಮ ದೇಶವು ಹಲವು ದಶಕ ಗಳಷ್ಟು ಹಿಂದಕ್ಕೆ ಸರಿದು ಹೋಗಿದೆ. ಇನ್ನು ದೇಶವನ್ನು ಸಹಜ ಸ್ಥಿತಿಗೆ ತರಲು ಸುದೀರ್ಘ ಸಮಯ ತಗಲಬಹುದು. ನಮ್ಮ ದೇಶದ ಆಡಳಿತಗಾರರು ಇದನ್ನು ಅರಿತಿದ್ದರೆ!

ಕೋಮುವಾದಿ ಶಕ್ತಿಗಳ ಆಡಳಿತದಲ್ಲಿ ಸಾಮಾಜಿಕ ವಿದ್ವೇಷ, ಅಕ್ರಮ-ಅನ್ಯಾಯ, ಸ್ವಾರ್ಥ ಹಿತಾಸಕ್ತಿ ಯಾವ ರೀತಿ ಹೆಚ್ಚಾಗಿದೆ ಮತ್ತು ಮಾನವೀಯ ಮೌಲ್ಯಗಳು, ನೈತಿಕತೆ ಯಾವ ರೀತಿ ಪ್ರಭಾವಿತಗೊಂಡಿವೆ ಎಂಬುದರ ಪ್ರತಿಬಿಂಬವು ಈ ಸೂಕ್ಷ್ಮ ಸ್ಥಿತಿಯಲ್ಲಿಯೂ ಕೋಮುವಾದದ ಮಾರಕ ವೈರಸನ್ನು ಹೆಚ್ಚಿಸುವ ಪ್ರಯತ್ನದಲ್ಲಿ ನೋಡಬಹುದಾಗಿದೆ. ಇದರಲ್ಲಿ ಮಾಧ್ಯಮದ ಪಾತ್ರ ಮತ್ತು ಮುಸ್ಲಿಮರನ್ನು ಯಾವೆಲ್ಲ ರೀತಿ ಗುರಿಯಾಗಿಸಲಾಯಿತೋ ಅದೆಲ್ಲವೂ ನಮ್ಮ ದೇಶದ ಮಟ್ಟಿಗೆ ಒಂದು ಅಳಿಸಲಾಗದ ಕಪ್ಪುಚುಕ್ಕೆಯಾಗಿದೆ. ಲಾಕ್ ಡೌನ್‍ನ ಇಡೀ ಯುಕ್ತಿಯೇ ತಿರುಗಿ ಬಿದ್ದಿತು. ನೈತಿಕತೆ ಮತ್ತು ಮಾನವೀಯತೆಯ ಪಾಠ ಕಲಿಯುವುದರ ಬದಲು ನಮ್ಮ ದೇಶವನ್ನು ದ್ವೇಷದ ಕೆಸರಲ್ಲಿ ಇನ್ನಷ್ಟು ಸಿಲುಕಿಸಲು ಪ್ರಯತ್ನಿಸಲಾಯಿತು.

ಮಸೀದಿಗಳ ಸ್ಥಿತಿಗತಿ

ಜನ ಸೇರುವುದರಿಂದ ತಡೆಯುವ ಹೆಸರಲ್ಲಿ ಮಸೀದಿಗಳಿಗೆ ಹೋಗುವುದನ್ನು ಬಲವಂತವಾಗಿ ತಡೆಯಲಾಯಿತು. ಇದೀಗ ಈ ಪ್ರತಿಬಂಧಕ್ಕೆ ಎರಡು ತಿಂಗಳಾಗುತ್ತಾ ಬಂತು. ಆದಾಗಿಯೂ ಈಗ ಟ್ರಾಫಿಕ್ ಸಹಜ ಸ್ಥಿತಿಗೆ ಬಂದಿದೆ, ಮಾರುಕಟ್ಟೆಗಳು ತೆರೆದುಕೊಂಡಿವೆ, ವ್ಯಾಪಾರ ವಹಿವಾಟುಗಳು ನಡೆಯುತ್ತಿವೆ, ಎಲ್ಲೆಡೆ ಸಾಮಾಜಿಕ ಅಂತರವನ್ನು ಚಿಂದಿಚೂರು ಮಾಡಲಾಗುತ್ತಿದೆ. ಆದರೂ ಆರಾಧನಾಲಯಗಳ ನ್ನು ಮುಚ್ಚಿಡಲು ಒತ್ತಾಯಿಸಲಾಗುತ್ತಿದೆ. ಇದಂತೂ ತೀರಾ ಅನ್ಯಾಯದ ಮಾತಾಗಿದ್ದು, ಇದರ ಬಗ್ಗೆ ಸರಕಾರವು ತಕ್ಷಣ ಗಮನ ಹರಿಸಬೇಕಾಗಿದೆ.

ವಿಶೇಷವಾಗಿ ಯಾವ ಶಕ್ತಿಗಳು ಇಂದು ಆಡಳಿತದಲ್ಲಿವೆಯೋ ಮತ್ತು ನಮ್ಮ ಧರ್ಮ, ವಿಶ್ವಾಸಾಚಾರ, ಧಾರ್ಮಿಕ ವ್ಯಕ್ತಿತ್ವ, ಮದ್ರಸಾಗಳು, ಸಂಘ-ಸಂಸ್ಥೆಗಳು ಯಾವ ರೀತಿ ಗುರಿ ಮಾಡಲಾಗು ತ್ತಿದೆಯೋ ಆ ಹಿನ್ನೆಲೆಯಲ್ಲಿ ಮಸೀದಿಗಳು ದೀರ್ಘ ಕಾಲ ಮುಚ್ಚಿರುವುದು ನಮ್ಮ ವಿಶ್ವಾಸ ಮತ್ತು ಸಾಮೂಹಿಕತೆಯ ಮಟ್ಟಿಗೆ ದೊಡ್ಡ ಅಪಾಯವಾಗಿ ಪರಿಣಮಿಸುವುದು.

ಬಾಬರಿ ಮಸೀದಿ, ಪರ್ಸನಲ್ ಲಾ, ಮುತ್ತಲಾಕ್ ಮಸೂದೆ ಇತ್ಯಾದಿಗಳಿಗೆ ಸಂಬಂಧಿಸಿ ಮುಸ್ಲಿಮರು ರಕ್ಷಣಾತ್ಮಕತೆ ಮತ್ತು ನಿಷ್ಕ್ರಿಯತೆಯನ್ನು ಪ್ರದರ್ಶಿಸುವಲ್ಲಿ ನಿರ್ಬಂಧಿತರಾಗಿದ್ದರು. ಕನಿಷ್ಠ ಪಕ್ಷ ಮಸೀ ದಿಗಳಿಗೆ ಸಂಬಂಧಿಸಿಯಾದರೂ ನಾವು ಸ್ತಿಮಿತತೆ ಮತ್ತು ಸೂಕ್ಷ್ಮತೆಯಿಂದ ಪ್ರವೃತ್ತರಾಗಬೇಕಾಗಿದೆ. ಯಾವ ರೀತಿ ರಮಝಾನ್ ಕಳೆಯಲು ನಿರ್ಬಂಧಿತರಾದೆವೋ, ತರಾವೀಹ್-ಕುರ್‍ಆನ್ ಆಲಿಕೆ ಮತ್ತು ಸಾಮೂಹಿಕ ಆರಾಧನೆಗಳು ಉಪೇಕ್ಷಿಸಲ್ಪ ಟ್ಟವೋ ಅದರ ಬಗ್ಗೆ ನಮ್ಮ ನೇತ್ರಗಳಿಂದ ರಕ್ತಕಣ್ಣೀರು ಹರಿಯ ಬೇಕು. ತರಾವೀಹ್‍ನ ಸಮಯದಲ್ಲಿ ಕೆಲವು ಮೊಹಲ್ಲಾಗಳಲ್ಲಿ ಗಸ್ತು ತಿರುಗಿ ಅವಲೋಕಿಸಿದಾಗ, ಹೆಚ್ಚಿನ ಮನೆಗಳಲ್ಲಿ ಟಿ.ವಿ., ಹಾಡುಗಳು, ನೆಟ್‍ಫ್ಲಿಕ್ಸ್, ಟಿಕ್‍ಟಾಕ್‍ಗಳೇ ಗಮನದ ಕೇಂದ್ರಗಳಾಗಿದ್ದುವು. ಕುರ್‍ಆನ್ ಪಠಣದ ಧ್ವನಿಯಂತೂ ತೀರಾ ಕಡಿಮೆಯೇ ಆಲಿಸಲು ಸಿಕ್ಕಿತ್ತು.

ಅಲ್ಲಾಹನ ಸಂದೇಶವಾಹಕರು(ಸ) ಹೇಳಿರುವರು, ಅಲ್ಲಾಹನಿಗೆ ಅತೀ ಹೆಚ್ಚು ಪ್ರಿಯವಾಗಿರುವ ಸ್ಥಳ ಮಸೀದಿಗಳಾಗಿವೆ ಮತ್ತು ತಿರಸ್ಕøತ ಸ್ಥಳ ಮಾರುಕಟ್ಟೆಗಳಾಗಿವೆ. ಇಂದು ಮಾರುಕಟ್ಟೆಯಂತಹ ಸ್ಥಳಗಳು ತೆರೆದಿದ್ದು, ಮಸೀದಿಗಳಂತಹ ಪಾವನ ಸ್ಥಳಗಳು ಮುಚ್ಚಿರುವುದು ನಮ್ಮ ದೌರ್ಬಲ್ಯ ಮತ್ತು ಜಡತ್ವದ ಲಕ್ಷಣಗಳಾಗಿವೆ ಎನ್ನಲೇ ಬೇಕು. ಒಂದು ವೇಳೆ ನಮ್ಮ ಸಂಸ್ಕøತಿ ಮತ್ತು ಧರ್ಮ-ವಿಶ್ವಾಸವು ನಮಗೆ ಪ್ರಿಯವಾಗಿದ್ದರೆ, ನಾವು ಸಾಂಸ್ಕøತಿಕ ಸ್ವಾಯತ್ತತೆಯ ಕಡೆಗೆ ಮುಂದಡಿಯಿಡಬೇಕಾಗಿದೆ. ಈ ದೇಶದಲ್ಲಿ ನಮ್ಮ ಧಾರ್ಮಿಕ ವಿಷಯಗಳಿಗೆ ಸಂಬಂಧಿಸಿ ಯುಕ್ತಿ, ಒಗ್ಗಟ್ಟು ಮತ್ತು ಧೀಮಂತಿಕೆಯಿಂದ ಕಾರ್ಯಪ್ರವೃತ್ತವಾಗಬೇಕಾಗಿದೆ.

ಬಿಗಡಾಯಿಸಿದ ಆರ್ಥಿಕತೆ ಮತ್ತು ಜೀವನ ವ್ಯವಸ್ಥೆ

ಸಾಮ್ರಾಜ್ಯಶಾಹಿತ್ವ, ಬಂಡವಾಳಶಾಹಿತ್ವ ಮತ್ತು ಬೃಹತ್ ಕಂಪೆನಿಗಳು ಆರ್ಥಿಕತೆಯನ್ನು ತನ್ನ ಲಾಭ ಹಾಗೂ ಹಿಡಿತದಲ್ಲಿರಿ ಸಿದ್ದು, ಬಡ ರಾಷ್ಟ್ರಗಳು ಮತ್ತು ಬಡಜನತೆಯ ಮೇಲೆ ಆಗು ತ್ತಿರುವ ದೌರ್ಜನ್ಯ ಇವೆಲ್ಲವೂ ಸಂಪೂರ್ಣವಾಗಿ ಮುಖ್ಯವಾಹಿನಿಗೆ ಬಂದಿವೆ. ಸಾಮಾಜಿಕ-ಆರ್ಥಿಕ ಅನ್ಯಾಯ, ಕಾರ್ಮಿಕರ ವಿವಶತೆ ಮತ್ತು ಹಕ್ಕುಚ್ಯುತಿ, ನೈಸರ್ಗಿಕ ಸಂಪನ್ಮೂಲಗಳ ಮೂಲೋತ್ಪಾಟನೆ, ಆರ್ಥಿಕತೆಯ ಹೆಚ್ಚಿನ ವಿಭಾಗಗಳ ಖಾಸಗೀಕರಣ, ವಿದೇಶಿ ಬಂಡವಾಳದ ಹೆಚ್ಚಳ ಇವೆಲ್ಲವೂ ಮುಂಬರುವ ಸರ್ವನಾಶದ ಕಡೆಗೆ ಬೆಟ್ಟು ಮಾಡುತ್ತಿವೆ.

ಮಾನವೀಯತೆಯು ನರಳುತ್ತಿದೆ ಮತ್ತು ಅಕ್ರಮ-ಅನ್ಯಾಯ ತಾಂಡವವಾಡುತ್ತಿದೆ ಹಾಗೂ ಭವಿಷ್ಯವು ಅಂಧಕಾರಮಯವಾಗಿ ತೋರುತ್ತಿದೆ.
ಮುಸ್ಲಿಮರ ಮಟ್ಟಿಗೆ ದೈವಿಕ ಜೀವನ ವ್ಯವಸ್ಥೆಯ ನೀತಿಗಳನ್ನು ಪರಿಚಯಿಸಲು ಮತ್ತು ಅದಕ್ಕೆ ಸ್ವಯಂ ಮಾದರಿಯಾಗಲು ಇನ್ನೂ ಸಮಯವಾಗಿಲ್ಲವೇ? ಏಕದೇವತ್ವ, ಪ್ರವಾದಿತ್ವ, ಪರಲೋಕದ ಭದ್ರ ಬು ನಾದಿಗಳಲ್ಲಿ ಒಂದು ಹೊಸ ಲೋಕವನ್ನು ಹುಟ್ಟು ಹಾಕುವ ಸಂದೇಶ ಹೊತ್ತು ಹೊರಡಲು ಇನ್ನೂ ಸಮಯವಾಗಿಲ್ಲವೇ? ದಾರಿ ತಪ್ಪಿದ ಮತ್ತು ಗಾಯಗಳಿಂದ ಜರ್ಝರಿತಗೊಂಡಿರುವ ಮಾನವೀಯ ಯಾತ್ರಾತಂಡವನ್ನು ಮತ್ತೆ ದೇವಾರಾಧನೆ ಹಾಗೂ ಇಹಪರಗಳ ಯಶಸ್ಸಿನ ರಹದಾರಿಗೆ ಕರೆತರಲು ಇನ್ನೂ ಸಮಯವಾಗಿಲ್ಲವೇ? ನಾವು ಇನ್ನೂ ಎಚ್ಚೆತ್ತುಕೊಳ್ಳದಿದ್ದರೆ, ದೇವನ ಹಿಡಿತ ಮತ್ತು ನಮ್ಮ ಕುಕರ್ಮಗಳ ದುಷ್ಪರಿಣಾಮಗಳಿಂದ ರಕ್ಷಿಸುವವರಾರಿದ್ದಾರೆ? ಒಂದೋ ನಾವು ನೇತೃತ್ವದ ಗುಣಗಳು ಮತ್ತು ಬೇಡಿಕೆ ಗಳನ್ನು ಪೂರೈಸಲು ಎದ್ದು ಕಾರ್ಯಪ್ರವೃತ್ತವಾಗಬೇಕು; ಇಲ್ಲವೇ ಇದೇ ರೀತಿ ಅವಮಾನ ಮತ್ತು ಕಷ್ಟಕಾರ್ಪಣ್ಯದ ಜೀವನ ಕಳೆಯಲು ವಿವಶರಾಗಿದ್ದು ಬಿಡಬೇಕಾದೀತು.

(ಲೇಖಕರು, ಜಮಾಅತೆ ಇಸ್ಲಾಮೀ ಹಿಂದ್ ರಾಜ್ಯ ಘಟಕದ ಅಧ್ಯಕ್ಷರಾಗಿದ್ದಾರೆ)

ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಬೆಂಬಲಿಸುವ ಮೂಲಕ ನಮ್ಮನ್ನು ಬೆಂಬಲಿಸಿ.