ಅನಿವಾಸಿಗಳೆಲ್ಲರೂ ನಿರುದ್ಯೋಗಿಗಳಾಗಿ ಮರಳಿ ಬರುವರೇ ?

0
882

ಸನ್ಮಾರ್ಗ ವಾರ್ತೆ

ಖದೀಜ ನುಸ್ರತ್ ಅಬು ಧಾಬಿ

ಕೊರೊನ ವೈರಸ್ ಎಂಬ ಕಣ್ಣಿಗೆ ಕಾಣಲು ಸಾಧ್ಯವಾಗದಂತಹ ಒಂದು ಸಣ್ಣ ವೈರಸ್ ಜಗತ್ತುನ್ನು ಒಂದು ದೊಡ್ಡ ಜೈಲನ್ನಾಗಿ ಪರಿವರ್ತಿಸಿದೆ. ಅತ್ಯಾಧುನಿಕ ಯುಗದಲ್ಲಿರುವಾಗಲು ಕೂಡಾ ಇದಕ್ಕೆ ಸರಿಯಾದ ಯಾವುದೇ ರೀತಿಯ ಔಷಧಿಯನ್ನು ಕಂಡುಹಿಡಿಯಲಾಗಲಿಲ್ಲ ಎಂಬುವುದು ವೈದ್ಯಕೀಯ ಕ್ಷೇತ್ರ ವು ಎದುರಿಸುತ್ತಿರುವ ಅತೀ ದೊಡ್ಡ ಸವಾಲಾಗಿದೆ. ಈ ಸಾಂಕ್ರಾಮಿಕ ರೋಗದಿಂದಾಗಿ ಹೆಚ್ಚಿನ ಎಲ್ಲಾ ದೇಶಗಳಲ್ಲಿ ಅನೇಕ ಸಂಖ್ಯೆಯ ಬೆಲೆಬಾಳುವ ಮಾನವ ಜೀವಗಳನ್ನು ಕಳೆದುಕೊಂಡಿದ್ದಾರೆ. ಈ ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸಲು ಎಲ್ಲಾ ದೇಶಗಳು ಅಗತ್ಯವಾದ ಮುಂಜಾಗ್ರತಾ ಕ್ರಮ ಮತ್ತು ಯೊಜನೆಗಳನ್ನು ಹಾಕಿಕೊಂಡಿದೆ.

ವಿಮಾನ ಯಾನ, ಆರಾಧನಾ ಕೇಂದ್ರ, ವಿದ್ಯಾಲಯ, ಬಾರ್, ಹೋಟೆಲ್ ಗಳು ಮಾತ್ರವಲ್ಲದೇ ಎಲ್ಲಾ ರೀತಿಯ ವ್ಯಾಪಾರ ವಹಿವಾಟುಗಳು ಕೂಡಾ ಮುಚ್ಚಲ್ಪಟ್ಟಿದೆ. ಕೋವಿಡ್ ೧೯ ಅಂತ್ಯ ಯಾವಾಗ ಮತ್ತು ಯಾವ ರೀತಿಯಾಗುತ್ತದೆ ಎಂದು ಯಾರಿಗೂ ತಿಳಿದಿಲ್ಲ ಮತ್ತು ಇದರಿಂದ ಉಂಟಾಗುವ ನಷ್ಟ ಬಗ್ಗೆ ಊಹಿಸಲು ಯಾವುದೇ ಆರ್ಥಿಕ ತಜ್ಞರಿಂದಲು ಸಾಧ್ಯವಾಗುತ್ತಾ ಇಲ್ಲ. ಆದರೆ ಈ ಅಪರೂಪದ ವಿಪತ್ತಿನಿಂದದಾಗಿ ಜಗತ್ತಿನಲ್ಲಿ ಭೀಕರವಾದ ಆರ್ಥಿಕ ಬಿಕ್ಕಟ್ಟಿನ ಲಕ್ಷಣ ಗಳು ಗೋಚರಿಸತೊಡಗಿದೆ. ಈ ಬಿಕ್ಕಟ್ಟಿನ ತೀವ್ರ ಪರಿಣಾಮವನ್ನು ಅನುಭವಿಸಲು ಬರುವ ದಿನಗಳಲ್ಲಿ ನಾವೆಲ್ಲರೂ ಸಕಲ ಸಿದ್ದತೆಗಳನ್ನು ಮಾಡಬೇಕಾಗಿದೆ. ಲಾಕ್ ಡೌನ್ ನಂತರ ನಮ್ಮ ವ್ಯಾಪಾರ, ಉದ್ಯೋಗ, ಸಂಭಳ ಏನಾಗಲಿದೆ? ಜಗತ್ತು ಹೇಗಿರುವುದು? ನಮ್ಮ ಮಕ್ಕಳ ಭವಿಷ್ಯ, ವಿದ್ಯಾಭ್ಯಾಸ, ವಿವಾಹ ಹೇಗಿರುವುದು? ಹೀಗೆ ಭವಿಷ್ಯದ ಬಗ್ಗೆ ಎಲ್ಲರಲ್ಲೂ ಆಲೋಚನೆ ಮೂಡುವುದು ಸಹಜ. ಅನಿವಾಸಿ ಜೀವನ ಹೇಗಿರುವುದು? ಅನಿವಾಸಿಗಳೆಲ್ಲರೂ ಮರಳಿ ಬರುವರೇ ಎಂಬ ಆತಂಕ ಜನರಲ್ಲಿ ಹೆಚ್ಚಾಗತೊಡಗಿದೆ. ಕೊರೊನ ವೈರಸ್ ನಿಂದುಂಟಾಗುವ ಅನಾರೋಗ್ಯಕ್ಕಿಂತಲೂ ಹೆಚ್ಚಾಗಿ ಅದರಿಂದುಂಟಾಗುವ ಆರ್ಥಿಕ ಬಿಕ್ಕಟ್ಟು ಅತ್ಯಂತ ದುರಂತವೂ ಭೀಕರವಾಗಿರುವುದೆಂಬುದು ವಾಸ್ತವಿಕತೆಯಾಗಿದೆ.

ಆರ್ಥಿಕ ಕ್ಷೇತ್ರದಲ್ಲಿ ಜಾಗರೂಕತೆಯಿಂದ ವ್ಯವಹಾರ ಮಾಡುವುದು ಓರ್ವ ವ್ಯಕ್ತಿಯ ಜೀವನದ ಯಶಸ್ಸಿನ ರಹಸ್ಯವಾಗಿರುತ್ತದೆ. ಸಂಪತ್ತನ್ನು ಉತ್ತಮ ರೀತಿಯಲ್ಲಿ ನಿಭಾಯಿಸಲು ಮತ್ತು ನಿರ್ವಹಿಸಲು ಸಾಧ್ಯವಾಗುವವರ ಕೈಯಲ್ಲಿ ಮಾತ್ರ ಹಣ ಉಳಿಯುತ್ತದೆ. ನಿನ್ನೆ ಯಾರದೋ ಕೈಯಲ್ಲಿದ್ದ ಹಣ ಇವತ್ತು ಯಾರದೋ ಕೈಯಲ್ಲಿದೆ. ನಾಳೆ ಯಾರದೋ ಕೈಗೆ ಸೇರುವುದು. ಓರ್ವ ವ್ಯಕ್ತಿಯ ಕೈಯಲ್ಲಿ ಹಣ ಇರುವಾಗಲೇ ಉದ್ಯೋಗ ಮಾಡಲು ಸಾಧ್ಯವಾಗದ ಕಾಲ ಅಥವಾ ಉದ್ಯೋಗ ಕಳೆದುಕೊಂಡಂತಹ ಸಮಯದಲ್ಲಿ ಬೇಕಾದಂತಹ ವರಮಾನದ ಬಗ್ಗೆ ಆಲೋಚಿಸಬೇಕು. ತಮ್ಮಲ್ಲಿ ಹಣವಿರುವಾಗ ಮಕ್ಕಳ ವಿದ್ಯಾಭ್ಯಾಸ ಅಥವಾ ಹೆಣ್ಣು ಮಕ್ಕಳ ವಿವಾಹಕ್ಕೆ ಆಡಂಭರವಾಗಿ ಖರ್ಚು ಮಾಡಿ ಕೊನೆಗೆ ಮಕ್ಕಳಿಗೆ ಹೆತ್ತವರ ಖರ್ಚು ಭಾರವಾಗುವಂತಹ ಸ್ಥಿತಿಗೆ ತಲುಪಬಾರದು. ತಮ್ಮ ಜೀವಮಾನದ ಉಳಿತಾಯದ ದೊಡ್ಡಪಾಲನ್ನು ಹೆಣ್ಣು ಮಕ್ಕಳಿಗೆ ಚಿನ್ನ ಉಡುಗೊರೆಯಾಗಿ ಕೊಟ್ಟು ತಮ್ಮ ಅಗತ್ಯಕ್ಕೆ ಆ ಹೆಣ್ಣು ಮಕ್ಕಳು ತಿರುಗಿನೋಡದಂತಹ ಪರಿಸ್ಥಿತಿಯನ್ನು ಅನುಭವಿಸುವವರೂ ಇದ್ದಾರೆ. ತಂದೆಯಾದವನು ಮೊದಲ ಮಗಳ ವಿವಾಹಕ್ಕೆ ಖರ್ಚು ಮಾಡಿ ದಿವಾಳಿಯಾಗಬಾರದು. ತಂದೆಯ ಆದಾಯದಿಂದ ಎಲ್ಲ ಮಕ್ಕಳ ಮೂಲಭೂತ ಬೇಡಿಕೆಗಳು ಈಡೇರಬೇಕು. ಸುಂದರವಾದ ಎಲ್ಲಾ ಸೌಕರ್ಯಗಳಿರುವ ದೊಡ್ಡ ಮನೆಯಲ್ಲಿ ಸಾಲಗಾರನಾಗಿ ಅಥವಾ ಬೇಡುವ ಬಡವನಾಗಿ ಜೀವಿಸುವುದಕ್ಕಿಂತ ಸಣ್ಣ ಮನೆಯಲ್ಲಿ ಶ್ರೀಮಂತನಾಗಿ ಗೌರವದೊಂದಿಗೆ ಜೀವಿಸುವುದು ಉತ್ತಮವಲ್ಲವೇ? ತನ್ನ ಮನೆ, ಆಹಾರ, ವಸ್ತ್ರವನ್ನು ಯಾರಿಗೋ ತೋರಿಸಲಿಕ್ಕಾಗಿ ದುಂದು ವೆಚ್ಚಮಾಡಿ ನಂತರ ಅನ್ನಕ್ಕಾಗಿ ಪರದಾಡುವ ಸ್ಥಿತಿ ಬರಬಾರದು. ತಮ್ಮ ವರಮಾನಕ್ಕೆ ತಕ್ಕಂತೆ ಸಂತುಲಿತವಾಗಿ ಮನಸ್ಸಮಾಧಾನದಿಂದ ಜೀವಿಸುವುದು ಉತ್ತಮವಲ್ಲವೇ?

ತೋರಿಕೆ, ಪ್ರದರ್ಶನ, ಆಡಂಭರ, ದುಂದುವೆಚ್ಚಗಳನ್ನು ಮಾಡದೇ ಜೀವಿಸಬಹುದೆಂಬ ಸತ್ಯವು ಎಲ್ಲರಿಗೂ ಕೊರೊನಾದಿಂದ ಮನವರಿಕೆಯಾಯಿತು. ಇದು ನಮ್ಮ ಖರ್ಚುವೆಚ್ಚ, ಉಳಿತಾಯವನ್ನು ನಿಯಂತ್ರಿಸಲು ಒಂದು ಪಾಠವಾಗಲಿ. ಜೀವಿಸಲು ಬೇಕಾಗಿರುವುದು ಪೌಷ್ಠಿಕಾಂಶವಿರುವ ಅನ್ನಾಹಾರ ಮಾತ್ರ. ಶ್ರೀಮಂತಿರಿಗೆ ಎಷ್ಟಿದ್ದರೂ ಖರ್ಚು ಮಾಡಿದರೂ, ತಿಂದರೂ, ತಿರುಗಾಡಿದರೂ ಸಾಕಾಗುವುದಿಲ್ಲ. ಇಲ್ಲದವರಿಗೆ ಸಾಲ ಮಾಡಿಯಾದರೂ ಎಲ್ಲವನ್ನೂ ಮಾಡಬೇಕು. ಫಾಸ್ಟ್ ಫುಡ್, ಬೇಕರಿಯ ಸಿಹಿ ಖಾರದ ತಿಂಡಿ, ಅನಗತ್ಯ ವಾಹನಗಳ ಓಡಾಟವನ್ನು ನಮಗೆ ನಿಲ್ಲಿಸಬಹುದೆಂಬ ಪಾಠವನ್ನು ಕೊರೊನ ಕಲಿಸಿ ಕೊಟ್ಟಿತು. ನಮ್ಮ ಬಜೆಟ್ ನಲ್ಲಿ ಏನನ್ನು ತಿನ್ನಬೇಕು, ಎಷ್ಟು ಬೆಲೆಯ ವಸ್ತ್ರವನ್ನು ಧರಿಸಬೇಕು, ಮನೆ ನಿರ್ಮಾಣಕ್ಕೆ ಎಷ್ಟು ಖರ್ಚು ಮಾಡಬೇಕು, ಸ್ವಂತ ವಾಹನ ಬೇಕೇ, ಸಾರ್ವಜನಿಕ ಸಾರಿಗೆಯನ್ನು ಉಪಯೋಗಿಸಬೇಕೆ ಎಂದು ಪ್ರತಿಯೊಬ್ಬರೂ ಬುದ್ಧಿವಂತಿಕೆಯನ್ನು ಉಪಯೋಗಿಸಿ ಖರ್ಚು ಮಾಡಬೇಕು.

ಜಗತ್ತಿನಲ್ಲಿ ಯಾವುದೇ ಉದ್ಯೋಗ, ವ್ಯಾಪಾರ, ಆದಾಯವು ಸ್ಥಿರವೂ ಶಾಶ್ವತವೂ ಅಲ್ಲ. ತಮ್ಮ ಆದಾಯವನ್ನು ಹೆಚ್ಚಿಸಲು ಖರ್ಚನ್ನು ಕಡಿಮೆಗೊಳಿಸಿ ಜೀವಿಸಲು ಕಲಿಯಬೇಕು. ಎಲ್ಲಾ ಕಾಲದಲ್ಲೂ ವ್ಯಾಪಾರ, ತಂತ್ರಜ್ಞಾನದಲ್ಲಿ ಶೀಘ್ರವಾಗಿ ಬದಲಾವಣೆಯಾಗುತ್ತಿರುತ್ತದೆ. ಅದರಂತೆ ನಮ್ಮ ಉದ್ಯೋಗ, ವ್ಯಾಪಾರ ವಹಿವಾಟಿನ ಬಗ್ಗೆ ಅಧ್ಯಯನ ಮಾಡುತ್ತಾ, ತರಭೇತಿ ಪಡೆದು, ಆಯಾ ಕಾಲದ ಟ್ರೆಂಡ್ ಅರ್ಥಮಾಡಿಕೊಂಡು ನವೀಕರಿಸುವುದು ಅತ್ಯಗತ್ಯವಾಗಿರುತ್ತದೆ. ಪರಸ್ಪರ ಸಹಕಾರ, ತ್ಯಾಗ ಮಾಡಲು ಮುಂದೆ ಬರಬೇಕು. ಒಬ್ಬರಿಂದಲೋ, ಇಬ್ಬರಿಂದಲೋ ಸಾಧ್ಯವಾಗದ ಕೆಲಸವನ್ನು ಒಂದು ಗುಂಪಿನಿಂದ ಮಾಡಲು ಸಾಧ್ಯ.

ಶ್ರೀಮಂತರು ತುರ್ತು ಪರಿಸ್ಥಿತಿ ಹಾಗೂ ತುರ್ತು ಚಿಕಿತ್ಸೆಗೆ ಅಲ್ಪ ಹಣವನ್ನು ಉಳಿತಾಯ ಮಾಡಿ ತಮ್ಮಲ್ಲಿ ಅಗತ್ಯಕ್ಕಿಂತ ಹೆಚ್ಚಿರುವ ಹಣವನ್ನು ಹೂಡಿಕೆ ಮಾಡಿ ಉದ್ಯೋಗವನ್ನು ಸೃಷ್ಟಿಸಬೇಕು. ಸಾಧ್ಯವಾಗುವಲ್ಲಿಂದೆಲ್ಲ ಸಾಲ ಪಡೆದು ಅಥವಾ ಜೀವನ ಪೂರ್ತಿ ದುಡಿದ ಎಲ್ಲಾ ಹಣವನ್ನು ಉಪಯೋಗಿಸಿ ಅದ್ದೂರಿಯಾಗಿ ಒಂದೇ ಕಡೆ ಹೂಡಿಕೆ ಮಾಡಿಬೇಡಿರಿ. ಒಂದಕ್ಕಿಂತ ಹೆಚ್ಚು ಸಣ್ಣ ಸಣ್ಣ ಆದಾಯಮೂಲ ಮಾಡಲು ಪ್ರಯತ್ನಿಸಿ. ಹೂಡಿಕೆ ಮಾಡಿದ ತಕ್ಷಣವೇ ಲಾಭವನ್ನು ನಿರೀಕ್ಷಿಸಬೇಡಿರಿ. ಬೀಜವನ್ನು ಬಿತ್ತಿದ ತಕ್ಷಣವೇ ಫಲ ಸಿಗಲು ಸಾಧವೇ? ನಿಮ್ಮ ಹಣದಿಂದ ಇತರರಿಗೆ ಉಪಕಾರ ಮಾಡಿದಾಗ ನಿಮ್ಮ ಅಗತ್ಯದ ಸಮಯದಲ್ಲಿ ಹಣ ತಾನಾಗಿಯೇ ನಿಮ್ಮ ಬಳಿ ಬರುತ್ತದೆ. ನಿಮ್ಮ ಜೀವನದಲ್ಲಿ ಹಣ ಸಂಪಾದಿಸುವುದನ್ನು ಉದ್ದೇಶವನ್ನಾಗಿರಿಸಬೇಡಿರಿ. ಬದಲಾಗಿ ನಿಮ್ಮ ಗುರಿಯೆಡೆಗೆ ಮತ್ತು ಜನರಿಗೆ ಉಪಕಾರ ಮಾಡುವುದರೆಡೆಗೆ ಗಮನ ಕೊಡಿರಿ. ವ್ಯಾಪಾರ ಅಭಿವೃದ್ಧಿಯಾದಾಗ, ನಿರುದ್ಯೋಗ ಕಡಿಮೆಯಾದಾಗ, ದಾನಧರ್ಮಗಳಿಂದ ಹಸಿವು ನಿವಾರಣೆಯಾದಾಗ ದೇಶವು ಪ್ರಗತಿಯೆಡೆಗೆ ಸಾಗುತ್ತದೆ.

ನಮ್ಮಲ್ಲಿರುವ ಕೆಲವು ಸಂಸ್ಥೆಗಳು ಮುಚ್ಚಲ್ಪಟ್ಟರೂ, ಉದ್ಯೋಗ ಕಳೆದುಕೊಂಡೊರೂ ಅದಕ್ಕಿಂತ ಉತ್ತಮವಾದ ಹಲವಾರು ಹೊಸ ಹೊಸ ಉದ್ಯೋಗಾವಕಾಶಗಳು ತೆರೆಯಲ್ಪಡುವ ಸಾಧ್ಯತೆ ಇದೆ. ಹೊಸಲೋಕದೊಂದಿಗೆ ಹೊಂದಿಕೊಂಡು ಜೀವಿಸಲು ಕಲಿಯಬೇಕು. ಅದೇ ರೀತಿ ಮುಂದೆ ಬರುವ ದಿನಗಳಲ್ಲಿ ನಮ್ಮ ಕೌಶಲ್ಯ, ಪ್ರತಿಭೆಗಳನ್ನು ಹೆಚ್ಚಿಸಲು ಪ್ರಯತ್ನಿಸಬೇಕು. ಒಂದೇ ಸಮಯದಲ್ಲಿ ಒಂದಕ್ಕಿಂತ ಹೆಚ್ಚು ಕೆಲಸವನ್ನು ಮಾಡಲು ತಯಾರಾಗಬೇಕು. ಉದಾ: ಐಟಿ ಕ್ಷೇತ್ರದಲ್ಲಿರುವವರು ಐಟಿ ಸೇಲ್ಸ್, ಮಾರ್ಕೆಟಿಂಗ್, ಸಪೋರ್ಟ್ ಇತ್ಯಾದಿ ಎಲ್ಲವನ್ನೂ ಮಾಡಲು ಕಲಿಯಬೇಕು. ಹೋಟೆಲ್ ಮಾಲಕನು ಅಡುಗೆ ಮಾಡಲು, ಹೊರಗೆ ಹೋಗಿ ಸಾಮಾನು ತರಲು ತಯಾರಾಗಬೇಕು. ತಮ್ಮ ಪ್ರೊಫೆಶನ್ ಗೆ ಸಂಬಂಧಿಸಿದ ಇತರ ಕೋರ್ಸ್ಗ್ ಗಳನ್ನು ಕಲಿಯುವುದು. ಒಂದು ಸಂಸ್ಥೆಯ ಗ್ರಾಫಿಕ್ ಡಿಸೈನ್, ಡಿಜಿಟಲ್ ಮಾರ್ಕೆಟಿಂಗ್, ಲೆಕ್ಕಾಚಾರ, ಡ್ರೈವಿಂಗ್ ಎಲ್ಲವನ್ನೂ ಮಾಡಲು ತಯಾರಾಗಬೇಕು. ಇನ್ನು ಬರುವ ಕೆಲವು ತಿಂಗಳಿಗಳಲ್ಲಿ ಜನರು ಮನೆಯಲ್ಲೇ ಕುಳಿತುಕೊಂಡು ಆನ್ ಲೈನ್ ಶಾಪಿಂಗ್ ಹಾಗೂ ಹೋಮ್ ಡೆಲಿವರಿಗೆ ಹೆಚ್ಚಿನ ಆಧ್ಯತೆ ನೀಡುವರು.

ವ್ಯಕ್ತಿಪರವಾಗಿ ಪ್ರತಿಯೊಬ್ಬರೂ ತಮ್ಮ ವರಮಾನಕ್ಕೆ ತಕ್ಕಂತೆ ಮಿತವಾಗಿ ಖರ್ಚು ಮಾಡುತ್ತಾ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಿದಾಗ ಮಾತ್ರ ಸಮಾಜ, ದೇಶ ಪ್ರಗತಿಯೆಡೆಗೆ ಸಾಗಲು ಸಾಧ್ಯ. ದಿನಪತ್ರಿಕೆಯಲ್ಲಿ ಬರುವಂತಹ ರಿಯಲ್ ಎಸ್ಟೇಟ್ ಕುಸಿತ, ಬ್ಯಾಂಕಿಂಗ್ ಕ್ಷೇತ್ರ, ವೈದ್ಯಕೀಯ ಕ್ಷೇತ್ರ, ಕೃಷಿ, ಸಾರಿಗೆ ಸಂಪರ್ಕ, ಪ್ರವಾಸೋದ್ಯಮದ ನಷ್ಟ ಇತ್ಯಾದಿ ಆರ್ಥಿಕ ನಷ್ಟ, ಉದ್ಯೋಗ ನಷ್ಟದಂತಹ ಭವಿಷ್ಯ ವಾರ್ತೆಗಳನ್ನು ಕೇಳಿ ನಿರಾಶರಾಗಬೇಡಿರಿ. ಲಾಕ್ ಡೌನ್ ನಂತರ ಬರಲಿರುವ ದಿನಗಳು ನಮ್ಮ ಪಾಲಿಗೆ ಉತ್ತಮವಾಗಲಿದೆಯೆಂಬ ಭರವಸೆಯಿರಬೇಕು. ಭವಿಷ್ಯದ ಬಗ್ಗೆ ಆಲೋಚಿಸುತ್ತಾ ಇಂದಿನ ಆರೋಗ್ಯವನ್ನು ಹಾಳು ಮಾಡಬಾರದು. ಜಗತ್ತಿನ ಇತಿಹಾಸ ನೋಡಿದರೆ ಆರ್ಥಿಕ ಕುಸಿತ, ಬಿಕ್ಕಟ್ಟಿನ ನಂತರ ದೇಶವು ಆರ್ಥಿಕ ಪ್ರಗತಿ, ಅಭಿವೃದ್ಧಿಯೆಡೆಗೆ ಸಾಗುತ್ತದೆ. ಹಣದ ಬಗ್ಗೆ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್, ವ್ಯಾಪಾರ, ಉದ್ಯೋಗ, ಸಂಭಳ, ಬಾಡಿಗೆ ಅಥವಾ ವಿದೇಶದಲ್ಲಿರುವ ನಿಮ್ಮ ಸಂಬಂಧಿಕರ ಮೇಲೆ ಭರವಸೆಯಿಡಬೇಡಿರಿ. ನಮ್ಮನ್ನು ಸೃಷ್ಟಿಸಿದ, ನಮ್ಮನ್ನು ಪರಿಪಾಲಿಸುತ್ತಿರುವ, ಕೊನೆಗೆ ಯಾರ ಕಡೆಗೆ ನಮಗೆ ಮರಳಬೇಕೋ ಆ ಸೃಷ್ಟಿಕರ್ತನ ಮೇಲೆ ಭರವಸೆಯಿಡಿರಿ.

ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಬೆಂಬಲಿಸುವ ಮೂಲಕ ನಮ್ಮನ್ನು ಬೆಂಬಲಿಸಿ.