ವೀಲ್‌ಚೇರ್‌ ನಿಂದ ಒಲಂಪಿಕ್ಸ್‌ ವರೆಗೆ- ಗ್ಲೆನ್ ಕನ್ನಿಂಗ್ಹ್ಯಾಮ್‌‌ರ ರೋಚಕ ಕಥೆ

0
811

-ಶಬೀನಾ ಬಾನು ವೈಕೆ

ಶಾಲೆಯಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಬಾಲಕನೋರ್ವನು ಅತೀವ ಗಾಯಗೊಂಡನು. ಆತ ಬದುಕುಳಿಯುವುದಿಲ್ಲವೆಂದು ಎಲ್ಲರೂ ಭಾವಿಸಿದ್ದರು. ಆತನ ದೇಹದ ಕೆಳಭಾಗವು ನಿಸ್ತೇಜವಾಗಿರುವುದರಿಂದ ಆತ ಬದುಕುಳಿಯುವುದಿಲ್ಲವೆಂದೇ ಆತನ ತಾಯಿಯ ಬಳಿ ವೈದ್ಯರು ಹೇಳಿದ್ದರು. ಒಂದು ವೇಳೆ ಆತ ಬದುಕುಳಿದರೂ ಜೀವನ ಪೂರ್ತಿ ಕುಂಟನಾಗಿಯೇ ಇರುತ್ತಾನೆಂದು ಅವರು ತಿಳಿಸಿದರು.

ಆದರೆ, ಆ ಬಾಲಕ ಸಾಯಲೂ ಇಲ್ಲ; ಜೀವನ ಪೂರ್ತಿ ಕುಂಟನೂ ಆಗಲಿಲ್ಲ‌. ವೈದ್ಯರ ನಿರೀಕ್ಷೆಗೂ ಮೀರಿ ಆತ ಬದುಕುಳಿದನು. ಆದರೆ ಬಲಹೀನವಾದ ಆತನ ತೆಳುವಾದ ಕಾಲುಗಳು ನೇತಾಡುತ್ತಿದ್ದವು. ಚೇತರಿಸಿಕೊಂಡ ಆತ ಕೊನೆಗೂ ಆಸ್ಪತ್ರೆಯಿಂದ ಮನೆ ಸೇರಿದನು. ಆದರೆ, ಆತನ ದೇಹ ಎಂದಿಗೂ ಹಾಸಿಗೆಯ ಮಂಚದತ್ತ ಸುಳಿಯಲು ಬಯಸಲಿಲ್ಲ‌‌. ಆತ ಸದಾ ತನ್ನ ವೀಲ್‌ಚೇರ್ ಮೇಲೆ ಸಮಯವನ್ನು ಕಳೆಯಲಾರಂಭಿಸಿದನು.

ಒಂದು ದಿನ ಆತ ತನ್ನಿಂತಾನೆ ಹುಲ್ಲಿನ ಹಾಸಿನ ಮೇಲೆ ಎಸೆಯಲ್ಪಟ್ಟನು. ತನ್ನ ಬಲಹೀನ ಕಾಲುಗಳನ್ನು ಎಳೆದುಕೊಂಡು ಹೋಗಿ ಕೊನೆಗೂ ಬೇಲಿಯನ್ನು ಹಿಡಿದೇ ಬಿಟ್ಟನು. ಆತ ತನ್ನೆಲ್ಲ ಶಕ್ತಿಯನ್ನು ಮೀರಿ ತನ್ನ ಕಾಲುಗಳ ಮೇಲೆ ನಿಯಂತ್ರಣ ಸಾಧಿಸಲು ಪ್ರಯತ್ನಿಸಿದನು. ಹಲವು ಬಾರಿ ವಿಫಲನಾಗಿ ಕೆಳಗೆ ಬಿದ್ದನು‌.

ಆದರೆ ತನ್ನ ಈ ಪ್ರಯತ್ನವನ್ನು ಆತ ನಿಲ್ಲಿಸಲಿಲ್ಲ, ದಿನಂಪ್ರತಿ ಆತ ಹುಲ್ಲಿನ ಹಾಸಿನ ಮೇಲೆ ತನ್ನನ್ನು ತಾನು ಎಸೆದನು ತನ್ನ ಕಾಲುಗಳನ್ನು ಎಳೆದೆಳೆದುಕೊಂಡು ಹೋಗಿ ಬೇಲೆಯನ್ನು ಮತ್ತೆ ಮತ್ತೆ ಹಿಡಿದು ನಿಲ್ಲಲಾರಂಭಿಸಿದನು ಆತ ಹಲವು ಬಾರಿ ಬಿದ್ದನು ಆದರೆ ಧೃತಿಗೆಡದೇ ತನ್ನ ಈ ಪ್ರಯತ್ನ ಮುಂದುವರೆಸಿದನು.‌ ಬೇಲಿ ಹಿಡಿದು ತನ್ನ ಕಾಲುಗಳ ಮೇಲೆ ಸ್ವಾಧೀನ ಸ್ಥಾಪಿಸಲು ಪ್ರಯತ್ನಿಸಿದನು.

ಯಶಸ್ಸು ಆತನದ್ದಾಗಿತ್ತು. ತದನಂತರ ಯಾವುದೇ ಆಸರೆ ಇಲ್ಲದೇ ನಡೆಯಲು ಆತ ಪ್ರಯತ್ನವನ್ನು ಮುಂದುವರೆಸಿ ತನ್ನ ಕಾಲುಗಳ ಮೇಲೆ ಬಲವನ್ನು ಸಾಧಿಸುವಲ್ಲಿ ಯಶಸ್ವಿಯಾದನು. ಆತನಿಗೆ ತನ್ನ ಕಾಲುಗಳ ಮೇಲೆ ಬಲವೂರಿ ನಿಲ್ಲಲು ಸಾಧ್ಯವಾಯ್ತು. ನಂತರ ಆತ ಹಂತ ಹಂತವಾಗಿ ನಡೆಯಲು ಪ್ರಾರಂಭಿಸಿದನು. ತದನಂತರ ಆತ ನಡೆಯುವುದರಿಂದ ಮುಂದುವರಿದು ಓಡುವುದನ್ನು ರೂಢಿಸಿದನು‌.

ಆತ ಶಾಲೆಯಿಂದ ಮನೆಯತ್ತ ಮನೆಯಿಂದ ಶಾಲೆಯತ್ತ ಓಡಲಾರಂಭಿಸಿದನು. ಓಡುವುದರಲ್ಲಿ ಆತನಿಗಿದ್ದ ಉತ್ಸುಕತೆಯು ಆತನನ್ನು ಕೊನೆಗೂ ಶಾಲೆಯ ಓಟದ ಸ್ಪರ್ಧಿಯನ್ನಾಗಿ ಟ್ರ್ಯಾಕ್ ಟೀಮ್ ಸೇರುವಲ್ಲಿ ಸಫಲವಾಗಿಸಿತು.

1934 ರ ಫೆಬ್ರುವರಿಯಲ್ಲಿ, ನ್ಯೂಯಾರ್ಕ್ ನಗರದ ಪ್ರಸಿದ್ಧ ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್‌ನಲ್ಲಿ, ಬದುಕುಳಿಯುವ ನಿರೀಕ್ಷೆಯಿಲ್ಲದ, ಜೀವನದಾದ್ಯಂತ ನಡೆಯಲಾಗದೇ ಕುಂಟನಾಗಿರುವನೆಂದು ನಿರೀಕ್ಷಿಸಿದ್ದ, ಓಡುತ್ತಾನೆಂಬ ಭಾವನೆಯನ್ನೂ ಹೊಂದದ ಯುವಕನೊಬ್ಬ ಎಲ್ಲರ ಊಹೆಗೂ ಮೀರಿ ತನ್ನ ದೃಢ ನಿರ್ಧಾರ, ಸತತ ಪ್ರಯತ್ನದಿಂದಾಗಿ ಅಮೇರಿಕಾದ ಇತಿಹಾಸದಲ್ಲಿಯೇ ಒಳಾಂಗಣದ ‘ಅತೀ ವೇಗಿ ಮೈಲಿ ಓಟಗಾರನಾಗಿ’ ಹೊರಹೊಮ್ಮಿದರು.
ಅವರೇ “ಗ್ಲೆನ್ ಕನ್ನಿಂಗ್ಹ್ಯಾಮ್”.

ಅವರ ಐತಿಹಾಸಿಕ ದಾಖಲೆಯಾದ ನಾಲ್ಕು ನಿಮಿಷ ಆರು ಸೆಕೆಂಡ್‌ಗಳ ಸಮಯವು ಗಣನೀಯವಾದುದು. ಈ ದಾಖಲೆಯನ್ನು ಮೂರು ವರ್ಷಗಳ ನಂತರ ಸಿಡ್ನಿಯ ವುಡರ್ಸನ್ ಮುರಿದರು.

ಗ್ಲೆನ್ ಕನ್ನಿಂಗ್ಹ್ಯಾಮ್ 1936 ರಲ್ಲಿ ಪುರುಷರ 800 ಮೀ ಓಟದಲ್ಲಿ ವಿಶ್ವ ದಾಖಲೆಯನ್ನು ಬರೆದರು. ಅವರ ಸ್ಪೂರ್ತಿದಾಯಕ ವೃತ್ತಿಜೀವನದಲ್ಲಿ ಅವರು ಅನೇಕ ಪ್ರಶಂಸೆಗಳನ್ನು ಪಡೆದರು, ಅದರಲ್ಲಿ ಪ್ರಮುಖವಾದುದು 1933 ರಲ್ಲಿ ಜೇಮ್ಸ್ ಇ. ಸುಲ್ಲಿವಾನ್ ಗೌರವ ಮತ್ತು 1936 ರಲ್ಲಿ ಬರ್ಲಿನ್ ಒಲಿಂಪಿಕ್ಸ್‌ನಲ್ಲಿ 1500 ಮೀ ಓಟದಲ್ಲಿ ಬೆಳ್ಳಿ ಪದಕ ಪಡೆದರು. ತದನಂತರ ಅವರು 1940 ರಲ್ಲಿ ನಿವೃತ್ತರಾದರು. ಆ ಹೊತ್ತಿಗಾಗಲೇ ಅವರು ‘ಕಾನ್ಸಾಸ್ ಫ್ಲೈಯರ್’, ‘ಎಲ್ಕ್‌ ಹಾರ್ಟ್ ಎಕ್ಸ್‌ಪ್ರೆಸ್’ ಮತ್ತು ‘ ಐರನ್ ಹಾರ್ಸ್ ಕಾನ್ಸಾಸ್’ ಎಂಬ ಅಡ್ಡಹೆಸರುಗಳನ್ನು ಗಳಿಸಿದ್ದರು.

ಈ ಕಥೆಯು ಚಿಕ್ಕ ವಯಸ್ಸಿನಲ್ಲಿಯೇ ಕಾಲುಗಳನ್ನು ಊನವಾಗಿಸಿಕೊಂಡು ನಂತರ ಟ್ರ್ಯಾಕ್ ಮತ್ತು ಫೀಲ್ಡ್‌ನಲ್ಲಿ ವಿಶ್ವ ದಾಖಲೆಗಳನ್ನು ನಿರ್ಮಿಸಲು ಅದ್ಭುತವಾಗಿ ಚೇತರಿಸಿಕೊಂಡ ವ್ಯಕ್ತಿಯ ಬಗ್ಗೆ ಮಾತ್ರವಲ್ಲ, ಈ ಕಥೆಯು ವಾಸ್ತವವಾಗಿ ಯಶಸ್ಸಿನ ಆಧಾರ ಸ್ತಂಭಗಳ ಕುರಿತಾಗಿದೆ. ಪ್ರಯತ್ನಕ್ಕೆ ಅಂಟಿಕೊಂಡಾಗ ಊಹಿಸಲಾಗದ ಫಲಿತಾಂಶಗಳು ಹೊರಬರುತ್ತವೆ, ಫಲಿತಾಂಶಗಳು ಮಾನವನ ಮಿತಿಯಲ್ಲಿಲ್ಲ ಎಂದು ಹಲವರು ನಂಬುತ್ತಾರೆ. ಆದರೆ, ಪ್ರಯತ್ನ ಪಡುವವರು ಎಂತಹ ದುರ್ಬಲತೆಯನ್ನೂ ಮೆಟ್ಟಿ ನಿಲ್ಲಲು ಶಕ್ತರಾಗುತ್ತಾರೆ ಎಂಬುದಕ್ಕೆ ಗ್ಲೆನ್ ಕನ್ನಿಂಗ್ಹ್ಯಾಮ್ ಅವರ ಸಾಧನೆಗಳನ್ನು ಸಾಕ್ಷಿಯಾಗಿಸಬಹುದು.

ಈ ನಡುವೆ ಜನರ ಮಾತುಗಳು ಅವರ ವರ್ತನೆಗಳು ವಿಕಲಾಂಗನ ಮೇಲೆ ಅನುಕಂಪವನ್ನು ತೋರುತ್ತವೆಯಾದರೂ ಇದು ವ್ಯಕ್ತಿಯ ಮನಸ್ಥಿತಿಯ ಮೇಲೆ ಭಾವನೆಗಳ ಮೇಲೆ ಪರಿಣಾಮ ಬೀರುತ್ತದೆ. ಆದರೆ ಇವುಗಳನ್ನೆಲ್ಲ ಮೆಟ್ಟಿ ನಿಂತಾಗಲೇ ಆತ ಪರಿಪೂರ್ಣ ಮನುಷ್ಯನಾಗುತ್ತಾನೆ‌. ಅದಕ್ಕಾಗಿಯೇ ಗ್ಲೆನ್ ವೆರೆನಿಕ್ ಕನ್ನಿಂಗ್ಹ್ಯಾಮ್ ಹೀಗೆ ನುಡಿಯುತ್ತಾರೆ;

“ಓಟದಲ್ಲಿ ಸ್ಪರ್ಧಿಯು ತನ್ನ ವಿರುದ್ಧವೇ ಓಡುತ್ತಾನೆ. ಆತನೇ ತನ್ನ ನಿಜವಾದ ಕ್ರೂರ ಎದುರಾಳಿಯಾಗಿರುತ್ತಾನೆ‌. ಇತರ ಓಟಗಾರರು ಆತನ‌ ನಿಜವಾದ ಶತ್ರುಗಳಲ್ಲ. ಅವನ ಮೆದುಳು ಮತ್ತು ಹೃದಯದ ಮೇಲೆ ನಿಯಂತ್ರಣ ಸಾಧಿಸುವ ಮೂಲಕ ತನ್ನ ಭಾವನೆಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಆತ ಪರಿಣಿತನಾಗಲು ಆತ ಓಟಕ್ಕಿಳಿಯಬೇಕಿದೆ”.