ಅಕ್ರಮ ಗಣಿಗಾರಿಕೆ ಮತ್ತು ಕಬ್ಬಿಣದ ಅದಿರು ರಫ್ತು :  ಸಿ ಬಿ ಐ ಕೈಬಿಟ್ಟ ಪ್ರಕರಣ ಎಸ್ ಐ ಟಿ ಗೆ  ವಹಿಸಲು ಸಂಪುಟ ತೀರ್ಮಾನ

0
1894

ಬೆಂಗಳೂರು, ಜನವರಿ 17: ಗೋವಾ ರಾಜ್ಯದ ಮರ್ಮ ಗೋವಾ ಹಾಗೂ ಪಣಜಿ ಬಂದರು ಮೂಲಕ  ಕಬ್ಬಿಣದ ಅದಿರು ಸಾಗಣೆಯಾಗಿರುವ ಕುರಿತಂತೆ ಮೇಲ್ನೋಟಕ್ಕೆ ಯಾವುದೇ ದಾಖಲೆಗಳು ಕಂಡು ಬರುತ್ತಿಲ್ಲ ಎಂಬ ಕೇಂದ್ರ ತನಿಖಾ ತಂಡದ ವರದಿಯನ್ನು ಸಮಗ್ರವಾಗಿ ಪರಿಶೀಲಿಸಿದ ರಾಜ್ಯ ಸಚಿವ ಸಂಪುಟವು ಗೋವಾ ರಾಜ್ಯದ ಈ ಎರಡೂ ಪ್ರದೇಶಗಳೂ ಹಾಗೂ ರಾಜ್ಯದ ನವ ಮಂಗಳೂರು ಮತ್ತು ಕಾರವಾರದ ಬೇಲಿಕೇರಿ ಬಂದರು ಮೂಲಕ        ಅವ್ಯಾಹತವಾಗಿ ನಡೆದಿದೆ ಎನ್ನಲಾದ ಕಬ್ಬಿಣದ ಅದಿರು ಅಕ್ರಮ ರಫ್ತು ಪ್ರಕರಣವನ್ನು ರಾಜ್ಯದ ವಿಶೇಷ ತನಿಖಾ ತಂಡಕ್ಕೆ ವಹಿಸಿ ತನಿಖೆ ನಡೆಸುವಂತೆ ಸೂಚಸಿಲು ತೀರ್ಮಾನಿಸಿದೆ.ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಹತ್ವಯುತ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಸಣ್ಣ ನೀರಾವರಿ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ ಬಿ ಜಯಚಂದ್ರ ಅವರು ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದರು. 

ಬಳ್ಳಾರಿ ಜಿಲ್ಲೆಯಲ್ಲಿ ನಡೆದ ಅಕ್ರಮ ಗಣಿಗಾರಿಕೆ ಹಾಗೂ ಕಬ್ಬಿಣದ ಅದಿರು ಸಾಗಣೆ ಕುರಿತಂತೆ ಕರ್ನಾಟಕ ಲೋಕಾಯುಕ್ತ ಸಲ್ಲಿಸಿದ ಎರಡು ವರದಿಗಳನ್ನು ಆಧರಿಸಿ, ಕರ್ನಾಟಕ, ಗೋವಾ, ಆಂಧ್ರ ಪ್ರದೇಶ ಹಾಗೂ ತಮಿಳು ನಾಡು ರಾಜ್ಯಗಳ ವಿವಿಧ ಬಂದರುಗಳ ಮೂಲಕ ರಾಜ್ಯದ 50,000 ಲಕ್ಷಕ್ಕೂ ಹೆಚ್ಚು ಮೆಟ್ರಿಕ್ ಟನ್ ಕಬ್ಬಿಣದ ಅದಿರು ಲೂಟಿಯಾಗಿದೆ ಎಂಬ  ಆರೋಪ ಕುರಿತಂತೆ ತನಿಖೆ ನಡೆಸಲು ಲೋಕಾಯುಕ್ತ ವರದಿಯಲ್ಲಿನ ದಾಖಲೆಗಳನ್ನು ಆಧರಿಸಿ ಭಾರತ ಸರ್ವೋಚ್ಛ ನ್ಯಾಯಾಲಯವು ಪ್ರಕರಣವನ್ನು ಸಿ ಬಿ ಐ ಗೆ ವಹಿಸಿತ್ತು.                         

ಲೋಕಾಯುಕ್ತ ವರದಿಯಲ್ಲಿಯೇ ದಾಖಲೆಗಳು ನಮೂದಾಗಿದ್ದರೂ, ಗೋವಾ ರಾಜ್ಯದ ಬಂದರುಗಳಲ್ಲಿ ತನಿಖೆ ನಡೆಸಿದ ಸಿ ಬಿ ಐ ಮೇಲ್ನೋಟಕ್ಕೆ ದಾಖಲೆಗಳಿಲ್ಲ ಎಂದು ಹೇಳಿ ಪ್ರಕರಣವನ್ನು ಮುಕ್ತಾಯಗೊಳಿಸಿದೆ. ಈ ಹಿನ್ನೆಲೆಯಲ್ಲಿ ಈ ನಿಟ್ಟಿನಲ್ಲಿ ತನಿಖೆ ನಡೆಸಲು ರಾಜ್ಯದ ಎಸ್ ಐ ಟಿ ಗೆ ವಹಿಸಲು ಸಂಪುಟ ನಿರ್ಧರಿಸಿದೆ ಎಂದು ಸಚಿವರು ತಿಳಿಸಿದರು. 

ವ್ಯಾಪ್ತಿ ಇದೆಯೇ : ಇದು ಅಂತಾರಾಜ್ಯ ಪ್ರಕರಣ. ಗೋವಾ ಬಂದರುಗಳಿಗೆ ತೆರಳಿ ತನಿಖೆ ನಡೆಸಲು ರಾಜ್ಯದ ವಿಶೇಷ ತನಿಖಾ ತಂಡಕ್ಕೆ ವ್ಯಾಪ್ತಿ ಇದೆಯೇ ? ಎಂಬ ಪತ್ರಕರ್ತರ ಪ್ರಶ್ನೆಗೆ  ” ನಮ್ಮ ಅದಿರು, ನಮಗೆ ನಷ್ಟ ಉಂಟಾಗಿದೆ ” ಎಂದು ಸಚಿವರು ಪ್ರತಿಕ್ರಿಯಿಸಿದರು.

ಆಂಧ್ರ ಪ್ರದೇಶ ಹಾಗೂ ತಮಿಳು ನಾಡು ರಾಜ್ಯಗಳ ಬಂದರುಗಳಲ್ಲಿ ನಡೆದಿದೆ ಎನ್ನಲಾದ  ಅದಿರು ರಫ್ತು ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದಿಂದ ಸೂಕ್ತ ತೀರುವಳಿಗಳು ಈವರೆಗೂ ಬಾರದ ಹಿನ್ನೆಲೆಯಲ್ಲಿ ಈ ಬಗ್ಗೆ ಸಿ ಬಿ ಐ ಇನ್ನೂ ತನಿಖೆ ಪ್ರಾರಂಭಿಸಿಲ್ಲ ಹಾಗೂ ಪೂರ್ಣಗೊಳಿಸಿರುವುದಿಲ್ಲ. ಆದಕಾರಣ, ಗೋವಾ ಮತ್ತು ಕರ್ನಾಟಕದ ಬಂದರುಗಳಿಗೆ ಸೀಮಿತವಾಗಿ ತನಿಖೆ ನಡೆಸಲು  ಎಸ್ ಐ ಟಿ ಗೆ ಸೂಚಿಸಲು ಸಂಪುಟ ಸಮ್ಮತಿಸಿದೆ ಎಂದು ಜಯಚಂದ್ರ ಅವರು ಹೇಳಿದರು.