ಅಲ್ಪಸಂಖ್ಯಾತರನ್ನು ಮತದಾನದಿಂದ ಹೊರಗಿಡುವ ತಂತ್ರವೇ- ಅನುಮಾನವನ್ನು ಹುಟ್ಟುಹಾಕಿದ ಕಾಂಗ್ರೆಸ್ ಸಮೀಕ್ಷೆ?

0
1432

ಆಫ್ಶಾನ್ ಯಾಸ್ಮೀನ್ ಬೆಂಗಳೂರು
ಬೆಂಗಳೂರು: ಅಲ್ಪಸಂಖ್ಯಾತರ ಕುಟುಂಬಗಳಲ್ಲಿ ಒಂದು ಮನೆಯಲ್ಲಿ ಬಹುತೇಕ ಒಂದೇ ಮತ ಇರುವ ಕುರಿತು ಕಾಂಗ್ರೆಸ್ ಸಂದೇಹ ವ್ಯಕ್ತಪಡಿಸಿದ್ದು ಇದು ಚುನಾವಣೆಯ ಮೇಲೆ ಪರಿಣಾಮ ಬೀರಲು ಬಳಸಲಾದ ವ್ಯವಸ್ಥಿತ ಕುತಂತ್ರವೆಂದು ಆರೋಪಿಸಿದೆ. ಅಷ್ಟಕ್ಕೂ ಕಾಂಗ್ರೆಸ್ ಕಾರ್ಯಕರ್ತರು ನಡೆಸಿದ ಸರ್ವೇಗಳ ಆಧಾರದಲ್ಲಿ ಈ ವಿಷಯವು ಹೊರಬಿದ್ದಿದೆ. ಸ್ಥಳೀಯ ಶಾಸಕ ರೋಶನ್ ಬೇಗ್ ರವರ ಪ್ರಕಾರ ಶಿವಾಜಿನಗರದಲ್ಲಿನ ಸರಿಸುಮಾರು 14,591 ಅಲ್ಪಸಂಖ್ಯಾತರ ಮನೆಗಳಲ್ಲಿ ಒಂದು ಅಥವಾ ಎರಡು ಮತಗಳು ಮಾತ್ರವಿರುವುದು ಈ ಸಂದೇಹಕ್ಕೆ ಇನ್ನಷ್ಟು ಪುಷ್ಠಿ ನೀಡಿದಂತಿದೆ. ಶಿವಾಜಿನಗರ ನಿವಾಸಿಯಾದ ಅನ್ವರ್ ಪಾಶಾರವರ ಮನೆಯಲ್ಲಿ ಒಂಬತ್ತು ಜನರಿದ್ದು ಅವರೆಲ್ಲರೂ ಗುರುತುಚೀಟಿಯನ್ನು ಹೊಂದಿದ್ದಾರಲ್ಲದೇ 2013ರ ಚುನಾವಣೆಯಲ್ಲಿ ಎಲ್ಲರೂ ಮತದಾನಗೈದಿದ್ದಾರೆ‌. ಆದರೆ ಈ ಬಾರಿ ಅವರ ಮನೆಯಿಂದ ಚುನಾವಣಾ ಪಟ್ಟಿಯಲ್ಲಿ ಕೇವಲ ಒಂದು ಮತ ಮಾತ್ರವಿದೆ! ಇದನ್ನು ಗಮನಿಸಿದ ಕಾಂಗ್ರೆಸ್ ತನ್ನ ಸಮೀಕ್ಷೆಯನ್ನು ರಾಜ್ಯದ 49 ಮತಗಟ್ಟೆಗಳಿಗೆ ಸಂಬಂಧಿಸಿ ನಡೆಸಿತ್ತು. ಒಂದು ಕುಟುಂಬದಲ್ಲಿ 5 ಅಥವಾ ಅದಕ್ಕಿಂತಲೂ ಹೆಚ್ಚಿನ ವಯಸ್ಕ ಸದಸ್ಯರಿದ್ದರೂ 6,22,056 ಮನೆಗಳಲ್ಲಿ ಒಂದು ಅಥವಾ ಎರಡು ಮತಗಳು ಮಾತ್ರವಿದೆ.
” ಅಲ್ಪಸಂಖ್ಯಾತರು ಮೇಲುಗೈ ಸಾಧಿಸಿರುವ ಪ್ರದೇಶಗಳಲ್ಲಿಯೇ 18 ಲಕ್ಷಕ್ಕಿಂತಲೂ ಅಧಿಕ ಅಲ್ಪಸಂಖ್ಯಾತ ಮತದಾರರನ್ನು ಚುನಾವಣಾ ಪಟ್ಟಿಯಿಂದ ಹೊರಗಿಡಲಾಗಿದೆ.” ಎಂದು ಕರ್ನಾಟಕ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿಯಾದ ಎಸ್.ಆರ್.ಮೇಹ್ರೋಝ್ ಖಾನ್ ಆರೋಪಿಸಿದ್ದಾಗಿ ದ ಹಿಂದೂ ಪತ್ರಿಕೆ ವರದಿ ಮಾಡಿದೆ. .
ರಾಜ್ಯ ಸಭಾ ಸದಸ್ಯರಾದ ಸೈಯ್ಯದ್ ನಾಸಿರ್ ಹುಸೈನ್, ಎಐಸಿಸಿ ವಕ್ತಾರರಾದ ಬ್ರಿಜೇಶ್ ಕಲಪ್ಪ, ಎಐಸಿಸಿಯ ಮಾಜಿ ಕಾರ್ಯದರ್ಶಿಯಾದ ಎಮ್.ಎನ್. ಸೂರಜ್ ಹೆಗ್ಗಡೆ, ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ಇಲಾಖೆಯ ಅಧ್ಯಕ್ಷರಾದ ನಾಸಿರ್ ಅಹ್ಮದ್ , ಖಾನ್ ಹಾಗೂ ಬೇಗ್ ರವರನ್ನೊಳಗೊಂಡ ನಿಯೋಗವು ಮುಖ್ಯ ಚುನಾವಣಾಧಿಕಾರಿಯಾದ ಸಂಜೀವ್ ಕುಮಾರ್ ರವರನ್ನು ಭೇಟಿಯಾಯಿತಲ್ಲದೇ “ನಾವು ಈ ಕುರಿತು ಯಾರ ಮೇಲೆಯೂ ನೇರವಾಗಿ ಆರೋಪ ಹೊರಿಸಲು ತಯಾರಿಲ್ಲ. ಆದರೆ ರಾಜ್ಯದಲ್ಲಿ
ಅಲ್ಪಸಂಖ್ಯಾತ ಮತದಾರರ ಸಂಖ್ಯೆಯನ್ನು ಕುಗ್ಗಿಸಲು ಏನೋ ಸುವ್ಯವಸ್ಥಿತ ಷಡ್ಯಂತ್ರ ಹೂಡಲಾಗಿದೆ ಎಂದು ನಾವು ಶಂಕಿಸುತ್ತೇವೆ. ಈ ಕುರಿತು ತನಿಖೆ ನಡೆಸಬೇಕೆಂದು ನಾವು ಆಗ್ರಹಿಸುತ್ತೇವೆ‌ ಎಂದು ಮೆಹ್ರೋಝ್ ಖಾನ್ ರವರು ಬೇಡಿಕೆಯನ್ನಿರಿಸಿದ್ದಾರೆ; “ಪ್ರತಿ ವರ್ಷವೂ ಇದು ಜಾರಿಯಲ್ಲಿರುವ ಕ್ರಮವಾಗಿದೆ. ನಾವು ಕೂಡ ಅಷ್ಟೇ ನಿಖರವಾಗಿ ದತ್ತಾಂಶಗಳನ್ನು ಕಲೆ ಹಾಕಿದ್ದೇವೆ”‌ ಎಂದು ರೋಶನ್ ಬೇಗ್ ರವರು ಮನವಿ ಸಲ್ಲಿಸಿದರು.
ಈ ಕುರಿತು ಪ್ರತಿಕ್ರಿಯೆ ನೀಡಿದ ಸಂಜೀವ್ ಕುಮಾರ್ ರವರು “ಒಂದೇ ಒಂದು ಮತವನ್ನೂ ಕೂಡ ಉದ್ದೇಶ ಪೂರ್ವಕವಾಗಿ ರದ್ದುಪಡಿಸಲಾಗಿಲ್ಲ” ಎಂದರು.
3,67,445 ಮೃತ ವ್ಯಕ್ತಿಗಳ, 6,10,783 ಪುನರಾವರ್ತಿತ ಮತಗಳು ಹಾಗೂ 4,88,140 ವರ್ಗಾಯಿತ ಮತಗಳನ್ನು ಮಾತ್ರ ರದ್ದು ಪಡಿಸಲಾಗಿದ್ದು, 18 ಲಕ್ಷ ಅರ್ಹ ಮತದಾರರ ಕುರಿತು ಕಾಂಗ್ರೆಸ್ ಮಾಡಿರುವ ಆರೋಪಕ್ಕೆ ಸ್ಪಷ್ಟ ಪುರಾವೆಗಳಿಲ್ಲ. ಆದರೂ ನಾವು ಇದನ್ನು ತನಿಖೆಗೊಳಪಡಿಸುತ್ತೇವೆ‌ ಎಂದು ಅವರು ಹೇಳಿದ್ದಾರೆ.