ಕಟೀಲು ಯಕ್ಷಗಾನ ಮೇಳಕ್ಕೆ ನೋಟೀಸು: ಬಪ್ಪನಾಡು ಮೇಳದ ವಿಡಿಯೋ ಮತ್ತೆ ಚರ್ಚೆಗೆ

0
2101

ನ್ಯೂಸ್ ಡೆಸ್ಕ್

ಯಕ್ಷಗಾನವೆಂಬ ‘ಪರಿಪೂರ್ಣ ರಂಗಭೂಮಿ’ ಕಲೆಯೊಂದು ಬರಬರುತ್ತಾ ಹೇಗೆ ನಿರ್ಧಿಷ್ಟ ವಿಚಾರಧಾರೆಯ ಪರ ಮತ್ತು ನಿರ್ದಿಷ್ಟ ಧರ್ಮದ ವಿರುದ್ಧದ ಪ್ರಚಾರ ಸಾಮಗ್ರಿಯಾಗಿ ಬಳಕೆಯಾಗತೊಡಗಿದೆ ಅನ್ನುವುದನ್ನು ಬೇರೆ ಬೇರೆ ಪ್ರಸಂಗಗಳ ಮೂಲಕ ಹಲವಾರು ಮಂದಿ ಸಾಬೀತುಪಡಿಸುತ್ತಾ ಬಂದಿದ್ದಾರೆ. ಯಕ್ಷರಂಗ ಸಾಗುತ್ತಿರುವ ರೀತಿಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಬಪ್ಪನಾಡು ಯಕ್ಷಗಾನ ಮೇಳದ ಯಕ್ಷಗಾನ ಪ್ರಸಂಗದಲ್ಲಿ ಇಬ್ಬರು ಪಾತ್ರಧಾರಿಗಳ ಸಂಭಾಷಣೆಯ ವಿಡಿಯೋ ಇತ್ತೀಚಿಗೆ ಸಾಮಾಜಿಕ ತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು.

ಬುದ್ಧಿಜೀವಿಗಳನ್ನು ಮತ್ತು ಮುಸ್ಲಿಮರನ್ನು ಪರೋಕ್ಷವಾಗಿ ಅಣಕಿಸುವ ಮತ್ತು ತೇಜೋವಧೆಗೈಯುವ ಮಾತುಗಳು ಆ ವಿಡಿಯೋದಲ್ಲಿ ಧಾರಾಳ ಇದ್ದುವು. ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ವಿಸ್ತೃತ ಚರ್ಚೆಯೂ ನಡೆದಿತ್ತು. ಕರಾವಳಿಯ ಸಾಂಸ್ಕೃತಿಕ ಶ್ರೀಮಂತಿಕೆಯ ಮೆರುಗು ಆಗಿ ಗುರುತಿಸಿಕೊಂಡಿರುವ ಯಕ್ಷಗಾನವು ಬರಬರುತ್ತಾ ಯಾಕೆ ನಿರ್ದಿಷ್ಟ ಪಕ್ಷದ ಪರ ಪ್ರಚಾರ ಸಾಮಗ್ರಿಯಾಗಿ ಬಳಕೆಯಾಗತೊಡಗಿದೆ? ಯಕ್ಷಗಾನ ವೀಕ್ಷಕರು ಒಂದೇ ಧರ್ಮದವರಲ್ಲ. ಒಂದೇ ರಾಜಕೀಯ ಪಕ್ಷದವರೂ ಅಲ್ಲ. ಹಿಂದೂ ಪೌರಾಣಿಕ ಕಥಾನಕಗಳನ್ನು ಕರಾವಳಿಯ ಹಿಂದೂ ಮುಸ್ಲಿಂ ಕ್ರೈಸ್ತ ರೆಲ್ಲರೂ ಅರಿತುಕೊಳ್ಳುವುದಕ್ಕೆ ಯಕ್ಷಗಾನ ಈ ಹಿಂದೆ ಒಂದು ಉತ್ತಮ ವೇದಿಕೆಯಾಗಿತ್ತು. ಆದರೆ, ಇವತ್ತಿನ ಯಕ್ಷಗಾನ ಸಂಭಾಷಣೆಗಳಲ್ಲಿ ಇನ್ನೊಂದು ಧರ್ಮವನ್ನು ತಮಾಷೆ ಮಾಡುವ ಮತ್ತು ವೈಚಾರಿಕ ಭಿನ್ನಾಭಿಪ್ರಾಯವನ್ನು ಅಣಕಿಸುವ ಸನ್ನಿವೇಶಗಳೇಕೆ ಅಧಿಕವಾಗುತ್ತಿದೆ? ಶೇಣಿ, ಸಾಮಗ, ಚಿಟ್ಟಾಣಿ, ಕೊಂಡದಕುಳಿ, ವಿಟ್ಲ ಮುಂತಾದ ಅನೇಕ ಕಲಾವಿದರಿಂದ ಶ್ರೀಮಂತಿಕೆಯನ್ನು ಪಡೆದ ಕಲೆಯೊಂದು ಯಾಕಾಗಿ ವೈಚಾರಿಕ ಸೊರಗುವಿಕೆಗೆ ಒಳಗಾಗಿದೆ?
ಕಟೀಲು ದುರ್ಗಾಪರಮೇಶ್ವರಿ ಪ್ರಸಾದಿತ ಯಕ್ಷಗಾನ ಮಂಡಳಿಯ ಕಲಾವಿದ ಪೂರ್ಣೇಶ್ ಆಚಾರ್ಯ ಎಂಬವರಿಗೆ ಮೂಡಬಿದಿರೆ ವಿಧಾನಸಭಾ ಕ್ಷೇತ್ರದ ಚುನಾವಣಾ ಅಧಿಕಾರಿ ಪ್ರಸನ್ನ ಅವರು ಮೊನ್ನೆ ನೋಟೀಸು ಕಳುಹಿಸಿದ್ದು ಮತ್ತು ಎರಡು ದಿನಗಳವರೆಗೆ ಪಾತ್ರ ನಿರ್ವಹಿಸದಂತೆ ಕಟೀಲು ಮೇಳವು ಆಚಾರ್ಯರಿಗೆ ತಡೆ ನೀಡಿದ್ದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿದೆ. ಮೂಡಬಿದಿರೆ ಸಮೀಪದ ಪಡುಮರನಡುವಿನ ಬನ್ನಡ್ಕದಲ್ಲಿ ನಡೆದ ಕಟೀಲು ಮೇಳದ ಯಕ್ಷಗಾನ ಪ್ರಸಂಗದಲ್ಲಿ ಕಲಾವಿದ ಪೂರ್ಣೇಶ್ ಆಚಾರ್ಯ ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನು ಅಣಕಿಸಿದ್ದಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಬಸವಣ್ಣರ ವಚನ ಇವನಾರವ.. ಎಂಬುದನ್ನು ಗಾಂಧಿಯವರು ಇವನಾರ್ವ ಎಂದು ಇತ್ತೀಚಿಗೆ ಸಂಬೋಧಿಸಿದ್ದರು. ಅದನ್ನೇ ಆಚಾರ್ಯ ಅಣಕಿಸಿದ್ದರು ಎಂದು ಚುನಾವಣಾ ಅಧಿಕಾರಿ ನೋಟೀಸಿನಲ್ಲಿ ಉಲ್ಲೇಖಿಸಿದ್ದಾರೆ. ಈ ನೋಟೀಸಿನ ಆಧಾರದಲ್ಲಿ ಕಟೀಲು ಮೇಳವು ಏಪ್ರಿಲ್ 3 ರ ತನ್ನ ಬಯಲಾಟದಲ್ಲಿ ಆಚಾರ್ಯರಿಗೆ ಅವಕಾಶವನ್ನು ನೀಡಿರಲಿಲ್ಲ ಎಂದು ಮಾಧ್ಯಮ ವರದಿಯೊಂದು ತಿಳಿಸಿದೆ. ಕಾಂಗ್ರೆಸನ್ನು ಅಣಕಿಸುವ ಮತ್ತು ಬಿಜೆಪಿ ವಿಚಾರಧಾರೆಯನ್ನು ಮೆಚ್ಚಿಕೊಳ್ಳುವ ಸನ್ನಿವೇಶಗಳು ಯಕ್ಷಗಾನಗಳಲ್ಲಿ ಅಧಿಕವಾಗುತ್ತಿದೆ ಎಂಬುದಕ್ಕೆ ಈ ನೋಟೀಸು ಮತ್ತೊಂದು ಪುರಾವೇಯಾಗಿದೆ
ಕೆಲವು ವಿಡಿಯೋ ತುಣುಕು

ಕೃಪೆ: Video Hub youtube channel

ಕೃಪೆ Rain Drops youtube channel