ಇಸ್ರೇಲ್ ನಲ್ಲಿ ಕಾರ್ಯಕ್ರಮ ನೀಡುವುದಿಲ್ಲ ಎಂದ ಖ್ಯಾತ ಪಾಪ್ ತಾರೆ ಶಕೀರಾ: ಕಾರಣ ಏನೆಂದರೆ.. 

0
3332
ನ್ಯೂಸ್ ಡೆಸ್ಕ್
ಇಸ್ರೇಲ್ ನ ಟೆಲ್ ಅವೀವ್ ನಲ್ಲಿ ನೀಡಬೇಕಿದ್ದ ಕಾರ್ಯಕ್ರಮದಿಂದ ಗ್ರಾಮಿ ಪ್ರಶಸ್ತಿ ವಿಜೇತ ಕೊಲಂಬಿಯದ ಖ್ಯಾತ  ಪಾಪ್ ತಾರೆ ಶಕೀರಾ ಅವರು ಹಿಂಜರಿದಿದ್ದಾರೆ. ಇಸ್ರೇಲ್ ನ ಕ್ರೌರ್ಯದ ವಿರುದ್ಧ ಹೋರಾಡುತ್ತಿರುವ BDS ಸಂಘಟನೆಯ ಮನವಿಗೆ ಓಗೊಟ್ಟು ಅವರು ಈ ನಿರ್ಧಾರಕ್ಕೆ ಬಂದಿದ್ದಾರೆ. ಇಸ್ರೇಲ್ ನ ವಿರುದ್ಧ ಅಕಾಡೆಮಿಕ್ ಮತ್ತು ಸಾಂಸ್ಕೃತಿಕ ಬಹಿಷ್ಕಾರ ಎಂಬ ಹೆಸರಲ್ಲಿ ಫೆಲೆಸ್ತೀನಿಯರಿಗಾಗಿ ಚಳವಳಿ ನಿರತವಾಗಿರುವ PACBI ಸಂಘಟನೆಯು ಶಕೀರಾ ಅವರ ನಿರ್ಧಾರವನ್ನು ಸ್ವಾಗತಿಸಿದ್ದು, ಕಲಾವಿದರನ್ನು ಬಳಸಿಕೊಂಡು ತನ್ನ ಕುಕೃತ್ಯಗಳ ಮೇಲೆ ಪರದೆ ಹಾಕಲು ನೋಡುತ್ತಿರುವ ಇಸ್ರೇಲ್ ಗೆ ಇದು ದೊಡ್ಡ ತಿರುಗೇಟು ಎಂದು  ಹೇಳಿದೆ.
ಫೆಲೆಸ್ತೀನಿನ ನೂರಾರು, ಮುನ್ಸಿಪಾಲಿಟಿಗಳು ಮತ್ತು ಸಾಂಸ್ಕೃತಿಕ ಸಂಘಟನೆಗಳು ಹಾಗೆಯೇ ಗಾಜಾ – ಲೆಬನಾನ್ ನಿಂದ ಕೊಲಂಬಿಯ ಮತ್ತು ಅಮೆರಿಕಾದವರೆಗೆ ಹರಡಿರುವ ಅಸಂಖ್ಯ ಫೆಲೆಸ್ತೀನಿ ಬೆಂಬಲಿಗರು ಮತ್ತು ಬಾಯ್ಕಾಟ್ ಇಸ್ರೇಲ್ ಹೋರಾಟಗಾರರು ಕೊಲಂಬಿಯದ ಈ ಹಾಡುಗಾರ್ತಿಗೆ ಕಾರ್ಯಕ್ರಮ ನೀಡದಂತೆ ಮನವಿ ಮಾಡಿದ್ದರು.
BDS ಮತ್ತು PACBI ಗಳು ಜಂಟಿಯಾಗಿ ಬಿಡುಗಡೆಗೊಳಿಸಿದ ಪತ್ರಿಕಾ ಹೇಳಿಕೆಯಲ್ಲಿ, ಅಂತಾರಾಷ್ಟ್ರೀಯ ತಾರೆಗಳಾದ ಲಾರ್ದೆ, ನೇತಾಲಿ ಪೋರ್ಟ್ ಮನ್ ಮತ್ತು ಗಿಲ್ಬರ್ತೋ ಗಿಲ್ ಮುಂತಾದವರು ಇಸ್ರೇಲ್ ನ ಅನ್ಯಾಯವನ್ನು ಪರಿಗಣಿಸಿ ಅಲ್ಲಿ ಕಾರ್ಯಕ್ರಮ ನೀಡಲು ಹಿಂಜರಿದಿದ್ದಾರೆ ಎಂದು ಹೇಳಲಾಗಿದೆ.
ಫೆಲೆಸ್ತೀನ್ ಸ್ವಾತಂತ್ರ್ಯ ಹೋರಾಟಕ್ಕೆ ಬೆಂಬಲ ಸೂಚಿಸಿ ಪೋರ್ಚುಗಲ್ ನ ಪ್ರಸಿದ್ಧ ಚಿತ್ರ ನಿರ್ದೇಶಕ ಟಿಯಾಗೋ ರೊಡ್ರಿಗಸ್ ಮತ್ತು ಅನೇಕ ಬ್ರಿಟನ್ ಕಲಾವಿದರು ಇಸ್ರೇಲ್ ಗೆ ಬಹಿಷ್ಕಾರ ಹಾಕುವ ಕರೆಗೆ ಬೆಂಬಲ ಸೂಚಿಸಿ ದನಿಯೆತ್ತಿದ್ದರು.