ಕಾಶ್ಮೀರವನ್ನು ಉನ್ಮಾದಗೊಳಿಸಿ 2019ನ್ನು ಗೆಲ್ಲುವ ಉದ್ದೇಶವೇ ಬಿಜೆಪಿಯದು?

0
1025

ಜಮ್ಮು ಕಾಶ್ಮೀರದಲ್ಲಿ ಪಿಡಿಪಿಯೊಂದಿಗಿನ ಮೈತ್ರಿಯನ್ನು ಬಿಜೆಪಿ ಕಡಿದುಕೊಂಡಿರುವುದು ರಾಜಕೀಯ ನಿರೀಕ್ಷಕರಿಗೆ ಮೊದಲೇ ತಿಳಿದ ವಿಷಯವಾಗಿದೆ. ಇದು ಯಾವಾಗ ಬೇಕಿದ್ದರೂ ಸಂಭವಿಸಬಹುದು ಮತ್ತು ಯಾವಾಗ ಸಂಭವಿಸಬಹುದು ಎನ್ನುವುದಷ್ಟೆ ಅವರ ನಿರೀಕ್ಷೆಯಲ್ಲಿತ್ತು. ಜಮ್ಮು-ಕಾಶ್ಮೀರಕ್ಕೆ ಸಂಬಂಧಿಸಿದ ಸಂವಿಧಾನದ 370ನೇ ವಿಧಿ, ವಿಶೇಷ ಮಿಲಿಟರಿ ಕಾನೂನು, ಹೆಚ್ಚು ಸ್ವಯಮಾಡ ಳಿತ ಇತ್ಯಾದಿಗಳಿಗೆ ಸಂಪೂರ್ಣ ವಿರುದ್ಧವಿರುವ ಎರಡು ಧ್ರುವಗಳು ಬಿಜೆಪಿ ಮತ್ತು ಪಿಡಿಪಿ. ಮೃದು ಪ್ರತ್ಯೇಕತಾವಾದಿ ಎನ್ನಲಾಗುತ್ತಿರುವ ಪಿಡಿಪಿ ಮತ್ತು ಹಿಂದುತ್ವವಾದಿ ಬಿಜೆಪಿ ಒಟ್ಟುಗೂಡಿ ಇಷ್ಟು ವರ್ಷ ಆಡಳಿತದಲ್ಲಿ ಕೂತದ್ದೇ ವಿಶೇಷ. ಇದೆಲ್ಲ ಬಿಜೆಪಿಗೆ ಹೇಗೆ ಸಾಧ್ಯವಾಯಿತೆನ್ನುವ ಪ್ರಶ್ನೆಗೆ ಇರುವುದು ಏಕೈಕ ಉತ್ತರ- ಅಧಿಕಾರ ವ್ಯಾಮೋಹ. ಎರಡೇ ಸದಸ್ಯರಿರುವ ಮೇಘಾಲಯದಲ್ಲಿ ಬಿಜೆಪಿ ಅಧಿಕಾರದಲ್ಲಿ ಪಾಲು ಹೊಂದಿದೆ. ಅಮಿತ್ ಶಾರ ಇಂತಹ ಥಿಯರಿ ಬಿಜೆಪಿ ಕಾಶ್ಮೀರದಲ್ಲಿಯೂ ಅಧಿಕಾರಕ್ಕೆ ಹಂಚಿಕೊಂಡಿರುವುದಕ್ಕೆ ಕಾರಣವಾಗಿದೆ. ಈಗ ಇದರ ಅಂತಿಮ ಪರಿಣಾಮವನ್ನು ರಾಷ್ಟ್ರವೇ ಪ್ರತ್ಯಕ್ಷ ಕಂಡಿದೆ. ಈ ರೀತಿಯಲ್ಲಿ ಕಾಶ್ಮೀರ ಪುನಃ ರಾಷ್ಟ್ರಪತಿ ಆಳ್ವಿಕೆಗೆ ಬಂತು. ಅಂದರೆ ಕೇಂದ್ರದ ಅಧಿಕಾರಕ್ಕೊಳಪಟ್ಟಿತು. ಇನ್ನು ಆ ರಾಜ್ಯದ ಜನರಿಗೆ ಇದು ಹೇಗೆ ಬಾಧಕವಾಗಬಹುದು ಎನ್ನುವ ವಿಚಾರಕ್ಕೆ ಮಾತ್ರ ಪ್ರಾಮುಖ್ಯತೆ ಇದೆ. ಹಿಂದಿನದ್ದೆಲ್ಲ ಇತಿಹಾಸ. ಅವು ಹಳೆಯ ಘಟನೆಗಳು ಮಾತ್ರ ಆಗಿ ಉಳಿಯುತ್ತವೆ. ಉಳಿದಿದೆ.
2015 ಮಾರ್ಚ್ ಒಂದರಂದು ಮುಫ್ತಿ ಮುಹಮ್ಮದ್ ಸಈದ್ ಮುಖ್ಯಮಂತ್ರಿಯಾಗಿ ಬಿಜೆಪಿ-ಪಿಡಿಪಿ ಅಧಿಕಾರಕ್ಕೆ ಬಂದಿತ್ತು. ಅವರ ಸಾವಿನ ಬಳಿಕ ಪುತ್ರಿ ಮೆಹಬೂಬ ಮುಫ್ತಿ ಮುಖ್ಯಮಂತ್ರಿಯಾದರು (2016 ಎಪ್ರಿಲ್ 14). ಕಾನೂನು ವ್ಯವಸ್ಥೆ ತೀರ ಹದಗೆಟ್ಟಿದ್ದಾಗ ಈ ಮೈತ್ರಿ ಸರಕಾರದ ಆಡಳಿತವಿತ್ತು. 2016ರ ಜುಲೈಯಲ್ಲಿ ಪ್ರತ್ಯೇಕತಾ ವಾದಿ ಸಂಘಟನೆ ಹಿಝ್ಬುಲ್ ಮುಜಾಹಿದೀನ್ ಕಮಾಂಡರ್ ಬುರ್‍ಹಾನ್ ವಾನಿಯನ್ನು ಸೇನೆ ಕೊಂದಿತು. ಇದು ಕಾಶ್ಮೀರದ ಇತಿಹಾಸದಲ್ಲೇ ಅತಿ ತೀಕ್ಷ್ಣವಾದ ಘರ್ಷಣೆಗೆ ಕಾರಣವಾಯಿತು.
ಜನರು ಬೀದಿಗಿಳಿದರು. ಮುಖ್ಯಮಂತ್ರಿ ಮುಫ್ತಿ ಮುಹಮ್ಮದ್ ಸಈದ್‍ರ ಅಂತಿಮ ಸಂಸ್ಕಾರದಲ್ಲಿ ಭಾಗವಹಿಸಿದ್ದಕ್ಕಿಂತ ಎಷ್ಟೋ ಪಟ್ಟು ಹೆಚ್ಚು ಮಂದಿ ವಾನಿಯ ಮೃತದೇಹ ದಫನದ ಸಮಯದಲ್ಲಿ ಹಾಜರಿದ್ದರು. ಮಯ್ಯತ್ ನಮಾಝ್ ಅರ್ಥಾತ್ ಜನಾಝ ನಮಾಝ್‍ಗೆ ಕಾಶ್ಮೀರದ ವಿವಿಧ ನಗರಗಳಿಂದ ಜನರು ಒಟ್ಟುಗೂಡಿದ್ದರು. ಕಾಶ್ಮೀರದ ನೈಜ ಚಿತ್ರವನ್ನು ಇದು ಕಟ್ಟಿಕೊಟ್ಟಿತ್ತು. ಇದನ್ನು ಮನಗಾಣದ ಭದ್ರತಾ ಪಡೆಗಳು ಮತ್ತು ಸೈನಿಕಾಧಿಕಾರಿಗಳು ನೀಡುವ ವರದಿಯಾಧಾರದಲ್ಲಿ ಕಾಶ್ಮೀರವನ್ನು ನಿರ್ವಹಿಸಲು ಕೇಂದ್ರ ಸರಕಾರ ಯಾವಾಗಲೂ ಮುಂದಾಗಿದೆ. ಇದೊಂದು ಅಸಂಬದ್ಧವೇ ಆಗಿದೆ. ಈಗ ಕಾಶ್ಮೀರದ ಬೀದಿಗಳು ಹಿಂದೆಂದಿಲ್ಲದಷ್ಟು ಕಲುಷಿತವಾಗಿವೆ. ಹಿಂದಿಗಿಂತ ಈಗ ಪ್ರತ್ಯೇಕತಾವಾದಿ ಆಂದೋಲನಗಳಲ್ಲಿ ಸಂಬಂಧ ಇರಿಸಿಕೊಳ್ಳುವ ಯುವಕರ ಸಂಖ್ಯೆ ಅಧಿಕವಾಗಿದೆ ಎನ್ನಲಾಗುತ್ತಿದೆ.
ಜೂನ್ 14ರಂದು ಪ್ರಮುಖ ಪತ್ರಕರ್ತ ಶುಜಾಅತ್ ಬುಖಾರಿ ಗುಂಡೇಟಿಗೆ ಬಲಿಯಾದರು. ಅವರು ಸಾಯುವುದಕ್ಕಿಂತ ಒಂದು ವಾರ ಹಿಂದೆ ಟ್ವಿಟರ್‍ನಲ್ಲಿ ಬರೆದಿದ್ದುದು ಹೀಗೆ: ಕಾಶ್ಮೀರಿ ಯುವಕರು ಸಾಯುವ ಭೀತಿ ಕಳಕೊಳ್ಳುತ್ತಿದ್ದಾರೆ. ಇದು ಯಾಕೆ ಎಂಬುದನ್ನು ಅಧಿಕಾರಿಗಳು ಅರ್ಥ ಮಾಡಿಕೊಳ್ಳಬೇಕು.” ಆದರೆ ಒಮ್ಮೆಯೂ ಇದನ್ನು ಅರ್ಥಮಾಡಿಕೊಳ್ಳಲು ವ್ಯವಸ್ಥೆಯಿಂದ ಯತ್ನಿಸಲಾಗಿಲ್ಲ. ಅವರು ತೋಳುಬಲದಲ್ಲಿ ಮಾತ್ರ ವಿಶ್ವಾಸ ಇರಿಸಿಕೊಂಡವರು. ಆದ್ದರಿಂದಲೇ ಅಲ್ಲಿ ಏಳು ಲಕ್ಷ ಸೈನಿಕರನ್ನು ವಿನ್ಯಾಸಗೊಳಿಸಲಾಗಿದೆ. ಈಗಿನ ಕಣಿವೆಯ ಸೈನಿಕ ಸಾಂಧ್ರತೆಯ ಅನುಪಾತ ನೋಡುವುದಾದರೆ ಜಗತ್ತಿನಲ್ಲೇ ಅತಿಹೆಚ್ಚು ಸೈನಿಕ ಉಪಸ್ಥಿತಿ ಕಾಶ್ಮೀರದಲ್ಲಿದೆ. ಗರಿಷ್ಠ 300 ಭಯೋತ್ಪಾದಕರು ಮಾತ್ರ ಕಾಶ್ಮೀರದಲ್ಲಿದ್ದಾರೆ ಎನ್ನಲಾಗುತ್ತಿದೆ. ಇಷ್ಟು ಮಂದಿಯನ್ನು ಎದುರಿಸಲು ಏಳು ಲಕ್ಷ ಸೈನಿಕರೇ? ಬದಲಾಗುತ್ತಾ ಬಂದ ಸರಕಾರಗಳು ಕಾಶ್ಮೀರ ಜನತೆಯನ್ನು ಒಟ್ಟಾರೆ ಶತ್ರುಗಳನ್ನಾಗಿಸಿವೆ. ಅಥವಾ ಶತ್ರುಗಳಂತೆ ಅವರೊಂದಿಗೆ ವ್ಯವಹರಿಸಿದೆ ಎನ್ನಬಹುದು. ಅಲ್ಲಿ ಯಾವ ಪಾರ್ಟಿ ಅಧಿಕಾರಕ್ಕೆ ಬಂದರೂ ಸೈನಿಕಾಡಳಿತವೇ ನಡೆಯುತ್ತದೆ. ಕೋವಿಯ ಬಲದಲ್ಲಿ ಮಾತ್ರ ಕಾಶ್ಮೀರ ಸಮಸ್ಯೆ ಬಗೆಹರಿಸಬಹುದು ಎಂದು ನಂಬಿಕೊಂಡಿದ್ದಾರೆ.
ಅಲ್ಲಿ ರಾಷ್ಟ್ರಪತಿ ಆಡಳಿತ ಬಂದಾಗ ಏನು ಸಂಭವಿಸುತ್ತದೆ ಎನ್ನುವುದನ್ನು ಊಹಿಸಬಹುದಾಗಿದೆ. ಅಂದರೆ ಕಾಶ್ಮೀರ ಪುನಃ ಸಂಘರ್ಷ ಅಥವಾ ಘರ್ಷಣೆಯಿಂದ ಕಲುಷಿತವಾಗಲಿದೆ ಎಂಬ ರೀತಿಯಲ್ಲಿ ಈಗಿನ ವಿದ್ಯಮಾನಗಳಿವೆ.
ಇಷ್ಟೇ ಅಲ್ಲ, ಯಾವ ನ್ಯಾಯ ಹೇಳಿದರೂ ಸಮರ್ಥಿಸಿಕೊಂಡರೂ 2019ರ ಲೋಕಸಭಾ ಚುನಾವಣೆಯನ್ನು ಪರಿಗಣಿಸಿ ಬಿಜೆಪಿ ಮುಫ್ತಿ, ಸರಕಾರದಿಂದ ಹೊರ ನಡೆದಿದೆ. ಒಂದು ರಾಜ್ಯದ ಭವಿಷ್ಯ ಮತ್ತು ಶಾಂತಿ ಇದಕ್ಕೆ ಕಾರಣವಲ್ಲ. ಕಾಶ್ಮೀರದಲ್ಲಿ ಘರ್ಷಣೆಯನ್ನು ಉಚ್ಛ್ರಾಯಕ್ಕೆ ತಂದು ದೇಶಾದ್ಯಂತ ಪ್ರಚಾರ ನಡೆಸಿ ಚುನಾವಣೆಯನ್ನು ಎದುರಿಸುವ ಹುನ್ನಾರ ಬಿಜೆಪಿಗೆ ಇದೆಯೇ? ಹಾಗಿದ್ದರೆ ಕಾಶ್ಮೀರದಲ್ಲಿ ಅಲ್ಲಿನ ಜನರು ಅವರ ಶಾಂತ ಬದುಕನ್ನು ಕಳಕೊಳ್ಳುತ್ತಿದ್ದಾರೆ. ಉನ್ಮಾದ ರಾಜಕೀಯ ಅವರ ಮಾನವಹಕ್ಕುಗಳನ್ನು ಬಲಿಪಡೆಯಲಿದೆಯೇ? ಹಾಗಿದ್ದರೆ ಜನರ ಕಷ್ಟವನ್ನು ಭಯೋತ್ಪಾದನೆಗೆ ಜೋಡಿಸಿ ಸಮಸ್ಯೆ ಇನ್ನಷ್ಟು ಬಿಗಡಾಯಿಸುವ ಸ್ಥಿತಿ ಬರಲಿದೆ ಎಂದಾಯಿತು. ಹಾಗೆಲ್ಲ ಆದರೆ ಮೊದಲ ಹುತಾತ್ಮ ಮಾನವ ಹಕ್ಕುಗಳಾಗಲಿದೆ. ಪ್ರಜಾಪ್ರಭುತ್ವ ಆಗಲಿದೆ. ಆದರೆ ಈ ಅವಸ್ಥೆಯನ್ನು ನೇರಾನೇರವಾಗಿ ಹೇಳುವುದು ಇಂದಿನ ಪರಿಸ್ಥಿತಿಯಲ್ಲಿ ಹೆಚ್ಚು ಅಪಾಯಕಾರಿ. ಪ್ರಜಾಪ್ರಭುತ್ವವಾದಿಗಳ ಈ ಸಾಹಸಕ್ಕೆ ಇಳಿಯಬೇಕಾಗುತ್ತದೆ. ಅದಕ್ಕೆ ಅವರು ಇಳಿದಾರೇ? ಕಾಲದೊಂದಿಗೆ ಕಾಯೋಣ.