ಪ್ರಧಾನಿಯವರೇ, ವೃದ್ಧ ಸಮೀವುದ್ದೀನ್ ರ ಗಡ್ಡ ಹಿಡಿದೆಳೆದು ಥಳಿಸಿದವರನ್ನು ಎಚ್ಚರಿಸಲು ನಿಮ್ಮ ಮನ್ ಕಿ ಬಾತ್ ನಲ್ಲಿ ಒಂದು ಸೆಕೆಂಡನ್ನಾದರೂ ಮೀಸಲಿಡುವಿರೆ?

0
1683

ನ್ಯೂಸ್ ಡೆಸ್ಕ್

ಆದಿತ್ಯವಾರ ಪ್ರಸಾರವಾದ 45 ನೇ ಮನ್ ಕೀ ಬಾತ್ ಎಪಿಸೋಡ್ ನಲ್ಲಿ ಗುರುನಾನಕ್ ಮತ್ತು ಸಂತ ಕಬೀರ್ ದಾಸರನ್ನು ಸ್ಮರಿಸಿಕೊಂಡ ಪ್ರಧಾನಿ ನರೇಂದ್ರ ಮೋದಿಯವರು ಈ ಮಹಾತ್ಮರು ಸಾರಿದ ಅಹಿಂಸೆ, ತ್ಯಾಗ, ಶಾಂತಿಯ ಸಂದೇಶವನ್ನು ಅನುಸರಿಸಿ ಬದುಕಿ ಎಂದು ಕರೆಕೊಟ್ಟರು. ಆದರೆ, ಈ ಭಾಷಣದ ಆರಂಭದಿಂದ ಕೊನೆವರೆಗೂ ತಪ್ಪಿಯೂ ಅವರು ಗೋವು ಮತ್ತು ಮಾಂಸದ ಹೆಸರಲ್ಲಿ ಆಗುತ್ತಿರುವ ಥಳಿತ ಮತ್ತು ಹತ್ಯೆಯ ಬಗ್ಗೆ ಒಂದು ಮಾತನ್ನೂ ಆಡಲಿಲ್ಲ.
ಇವರ ಭಾಷಣದ ಬಳಿಕದ ಮೂರು ದಿನಗಳೊಳಗೆ ಉತ್ತರ ಪ್ರದೇಶ, ಝಾರ್ಖಂಡ್ ಗಳಲ್ಲಿ ಮೂರು ಭೀಕರ ಥಳಿತ ಪ್ರಕರಣಗಳು ನಡೆದಿದ್ದು, ನಾಲ್ಕು ಮಂದಿ ಹತರಾದರು. ಎರಡು ವರ್ಷಗಳ ಹಿಂದೆ ಉನಾ ಥಳಿತಕ್ಕೆ ಪ್ರಧಾನಿಯವರು ಪ್ರತಿಕ್ರಿಯಿಸಿದ್ದನ್ನು ಬಿಟ್ಟರೆ, ಉಳಿದಂತೆ ಆ ಬಳಿಕ ಈ ದೇಶದಲ್ಲಿ ಮುಸ್ಲಿಮರ ವಿರುದ್ಧ ನಡೆದ ಅನೇಕಾರು ಥಳಿತ ಪ್ರಕರಣಗಳಿಗೆ ಸಂಬಂಧಿಸಿ ಒಂದಕ್ಕೂ ಅವರು ಪ್ರತಿಕ್ರಿಯಿಸಿಲ್ಲ.
ಜೂನ್ 18 ರಂದು ಅಂದರೆ ಸೋಮವಾರ ಉತ್ತರ ಪ್ರದೇಶದ ಹಾಪುರ್ ನಲ್ಲಿ ಇಬ್ಬರು ಮುಸ್ಲಿಮರನ್ನು ಕ್ರೂರವಾಗಿ ಥಳಿಸಲಾಯಿತು ಮತ್ತು ಅದರಲ್ಲಿ ಕಾಸಿಂ ಎಂಬವರು ಸಾವಿಗೀಡಾದರೆ ಇನ್ನೊಬ್ಬರು 65 ವರ್ಷದ ಸಮೀವುದ್ದೀನ್ ತೀವ್ರವಾಗಿ ಗಾಯಗೊಂಡರು. ಈ ಘಟನೆಗೆ ಸಂಬಂಧಿಸಿ ಒಂದು ನಿಮಿಷದ ವೀಡಿಯೊವೂ ವೈರಲ್ ಆಗಿದೆ. ವೃದ್ಧ ಸಮೀವುದ್ದೀನ್ ರ ಗಡ್ಡ ಹಿಡಿದೆಳೆದು, ಅವರ ಕಪಾಳಕ್ಕೆ ಹದಿಹರೆಯದ ಯುವಕರು ಹೊಡೆಯುತ್ತಿರುವುದು ವೀಡಿಯೋದಲ್ಲಿ ಸ್ಪಷ್ಟವಾಗಿ ಕಾಣಸಿಗುತ್ತದೆ. ಅಲ್ಲದೆ, ನೀನು ಮತ್ತು ಕಾಸಿಂ ಗೋಮಾಂಸ ಕೊಂಡೊಯ್ಯುತ್ತಿದ್ದೀರೆಂದು ಒಪ್ಪಿಕೊಳ್ಳಿ ಎಂದು ಗುಂಪು ಬಲವಂತಪಡಿಸುತ್ತದೆ. ಅವರ ಗಡ್ಡ ಹಿಡಿದೆಳೆದದ್ದಲ್ಲದೆ ಥಳಿಸಿದ ಕಾರಣದಿಂದ ಶರೀರದ ವಿವಿಧ ಭಾಗಗಳಿಂದ ರಕ್ತ ಹರಿದಿರುವುದೂ ವಿಡಿಯೋದಲ್ಲಿ ಕಾಣಸಿಗುತ್ತದೆ.
ಮರುದಿನ ( ಮಂಗಳವಾರ, ಜೂನ್ 19) ಝಾರ್ಖಂಡ್ ನ ರಾಮ್ ಘರ್ ನಲ್ಲಿ ತ್ವಹೀದ್ ಅನ್ಸಾರಿ ಎಂಬವರು ಅನುಮಾನಾಸ್ಪದ ರೀತಿಯಲ್ಲಿ ಸಾವಿಗೀಡಾದರು. ಮಾಂಸವನ್ನು ಬೈಕಲ್ಲಿ ಕೊಂಡೊಯ್ಯುತ್ತಿದ್ದ ಅವರನ್ನು ಥಳಿಸಿ ಬಳಿಕ ಸುಟ್ಟು ಕೊಲ್ಲಲಾಗಿದೆ ಎಂಬ ವರದಿಗಳಿವೆ. ಇದಕ್ಕಿಂತ ಒಂದು ವಾರದ ಹಿಂದೆ ಜೂನ್ 13 ರಂದು ಮೂವತ್ತರ ಹರೆಯದ ಇಬ್ಬರು ಮುಸ್ಲಿಂ ಯುವಕರನ್ನು ಝಾರ್ಖಂಡ್ ನ ಗೊದ್ದ ಜಿಲ್ಲೆಯಲ್ಲಿ ಗೋವು ಕಳ್ಳತನದ ಆರೋಪದಲ್ಲಿ ಗುಂಪು ಥಳಿಸಿ ತೀವ್ರವಾಗಿ ಗಾಯಗೊಳಿಸಿತ್ತು. ಆದರೆ, ನಿರ್ದಿಷ್ಟ ಸಮುದಾಯವೊಂದರ ಮೇಲೆ ನಡೆಯುತ್ತಿರುವ ಈ ನಿರಂತರ ಥಳಿತಗಳ ಬಗ್ಗೆ ಪ್ರಧಾನಿ ಮೋದಿಯವರು ತಮ್ಮ ಮನ್ ಕಿ ಬಾತ್ ನಲ್ಲಿ ಮಾತಾಡುತ್ತಲೇ ಇಲ್ಲ. ಮನ್ ಕಿ ಬಾತ್ ನ ತನ್ನ45 ನೇ ಸರಣಿಯಲ್ಲಿ ಅವರು ಭಾರತೀಯ ಕ್ರಿಕೆಟಿಗರ ಬಗ್ಗೆ, ಯೋಗ ದಿನದ ಬಗ್ಗೆ, ವೈದ್ಯರ ದಿನದ ಬಗ್ಗೆ, ಕಬೀರ್, ಗುರುನಾನಕ್, ಪ್ರಕಾಶ್ ಪರ್ವ್, ಜಲಿಯನ್ ವಾಲಾ ಬಾಗ್, ಶ್ಯಾಮ್ ಪ್ರಸಾದ್ ಮುಖರ್ಜಿ..ಮುಂತಾದವರ ಬಗ್ಗೆ ವಿಸ್ತೃತವಾಗಿ ಮಾತಾಡಿದರೂ ಈ ದೇಶದಲ್ಲಿ ಧರ್ಮದ ಆಧಾರದಲ್ಲಿ ನಡೆಯುತ್ತಿರುವ ಭೀಕರ ಥಳಿತಗಳ ಬಗ್ಗೆ ಒಂದು ಶಬ್ದವನ್ನೂ ಎತ್ತಿಲ್ಲ. ಯಾಕೆ ಹೀಗೆ?
ಈ ಥಳಿತಗಳು ಪ್ರಧಾನಿಯವರ ಬಯಕೆಯೇ? ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಎಂಬ ನೀತಿಯೊಳಗೆ ಮುಸ್ಲಿಮರು ಒಳಪಡುವುದಿಲ್ಲವೇ? ಕಾನೂನು ಕೈಗೆತ್ತಿಕೊಳ್ಳದಂತೆ ಜನರನ್ನು ಎಚ್ಚರಿಸಲು ಮತ್ತು ಅಂಥವರಿಗೆ ಕಠಿಣ ಶಿಕ್ಷೆ ವಿಧಿಸಲು ಪೂರಕವಾಗಿ ಕ್ರಮ ಕೈಗೊಳ್ಳುವಂತೆ ಸೂಚಿಸಲು ಅವರಿಂದ ಸಾಧ್ಯವಿಲ್ಲವೇ?