ಗಾಂಧೀಜಿ ನೆನಪಾಗಲಿಲ್ಲ….

0
2513

ಈ ದೇಶ ಕಂಡ ಇಬ್ಬರು ಮಹನೀಯರನ್ನು ಮಾನ್ಯ ಪ್ರಧಾನಿ ಮೋದಿಯವರು ಮತ್ತೊಮ್ಮೆ ನೆನಪಿಸಿಕೊಂಡಿದ್ದಾರೆ. ಕರ್ನಾಟಕ ಚುನಾವಣೆ ಹಿನ್ನೆಲೆಯಲ್ಲಿ ನಾಡಿನ ಮಹನೀಯರ ನೆನಪಾಗುತ್ತಿದೆ, ಆದರೆ ಮಹದಾಯಿ ನೆನಪಾಗುತ್ತಿಲ್ಲ ಎಂದರೆ ತಪ್ಪಾಗಲಾರದು. ಹಾಗೇನೆ ಕಾಂಗ್ರೆಸ್ ವಿರುದ್ಧ ಹರಿಹಾಯುವಾಗ ಗಾಂಧೀಜಿ ಕೂಡಾ ನೆನಪಾಗಿದ್ದಾರೆ. ಕಾಂಗ್ರೆಸ್ ಮುಕ್ತ ಭಾರತ ಗಾಂಧೀಜಿಯವರ ಆಶಯವಾಗಿತ್ತು ಎಂದು ಅವರು ಈ ಸಂದರ್ಭದಲ್ಲಿ ಹೇಳಿದ್ದಾರೆ.
ಹಲವಾರು ಮಂದಿ ಸೇರಿ ನಡೆಸುವ ಕಾಂಗ್ರೆಸ್ ಎಂಬ ಸಂಘಟನೆ ಬಗ್ಗೆ ಗಾಂಧೀಜಿಯವರ ವೈಯುಕ್ತಿಕ ಅಭಿಪ್ರಾಯವೇನಿತ್ತು ಎಂಬುವುದರ ಬಗ್ಗೆ ಚರ್ಚೆಯನ್ನು ಸದ್ಯಕ್ಕೆ ಕಾಂಗ್ರೆಸ್’ನವರು ನಡೆಸಲಿ. ಆದರೆ ಆದರ್ಶ ಸಮಾಜಕ್ಕೆ /ದೇಶಕ್ಕೆ ಸಂಬಂಧಿಸಿದಂತೆ ಗಾಂಧೀಜಿಯವರು ಇನ್ನೂ ಹಲವು ಪ್ರಮುಖ ಆಶಯಗಳನ್ನು ಹೊಂದಿದ್ದರು.
ಸಂಸತ್ತಿನಲ್ಲಿ ದೇಶದ ಪ್ರಧಾನಿಯೊಬ್ಬರಿಂದ 130 ಕೋಟಿ ಜನರು ನಿರೀಕ್ಷಿಸಿದ್ದು ರಾಜಕೀಯ ಭಾಷಣವಲ್ಲ. ಬದಲಾಗಿ ಗಾಂಧೀಯವರ ಮದ್ಯಮುಕ್ತ, ಅಸಮಾನತೆ ಮುಕ್ತ, ದ್ವೇಷಮುಕ್ತ ಜಾತ್ಯತೀತ ಭಾರತದಂತಹ ಆಶಯಗಳನ್ನು ನನಸಾಗಿಸಲು ಸರ್ಕಾರ ಯಾವ ಬದ್ಧತೆ ತೋರಿದೆ ಎಂಬುಬುದನ್ನು.
ದಲಿತರ ಮೇಲೆ ದೌರ್ಜನ್ಯ ನಡೆಯುತ್ತಲೇ ಇವೆ. ಅಲ್ಪಸಂಖ್ಯಾತರ ದ್ವೇಷಪೂರಿತ ಭಾಷಣಗಳು, ಅವರ ವಿರುದ್ಧ ದಾಳಿಗಳು ನಡೆಯುತ್ತಲೇ ಇವೆ. ರೋಹಿತ್ ವೆಮುಲಾ, ತಮ್ಮ ತವರು ರಾಜ್ಯದಲ್ಲಿ ದಲಿತರ ವಿರುದ್ಧ ನಡೆಯುವ ಹಿಂಸೆ, ಇತ್ತೀಚೆಗೆ ಕೋರೆಗಾಂವ್ ಭೀಮಾವರೆಗೆ ನಡೆಯುತ್ತಿರುವ ದಲಿತವಿರೋಧಿ ಹಿಂಸೆಗಳ ಸಂದರ್ಭದಲ್ಲಿ ಅವರಿಗೆ ಗಾಂಧೀಜೀ ನೆನಪಾಗಲ್ಲ….
2017 ಮೇನಲ್ಲಿ ಉತ್ತರ ಪ್ರದೇಶದ ಸಹರನ್’ಪುರದ ಶಬ್ಬೀರ್ ಪುರದಲ್ಲಿ ಮಹಾರಾಣಾ ಪ್ರತಾಪ್ ರ್ಯಾಲಿ ಸಂದರ್ಭದಲ್ಲಿ ಠಾಕೂರ ಸಮುದಾಯದವರು ದಲಿತರ ವಿರುದ್ಧ ಹಿಂಸೆ ನಡೆಸಿ, 50 ದಲಿತರ ಮನೆಗಳನ್ನು ಸುಟ್ಟು ಭಸ್ಮ ಮಾಡಿದಾಗ, ಗಾಂಧೀಜಿ ನೆನಪಾಗಲಿಲ್ಲ.
ಅದೇ ತಿಂಗಳು, ಮಧ್ಯಪ್ರದೇಶದ ಡೇರಿ ಗ್ರಾಮದಲ್ಲಿ ತನ್ನ ಮದುವೆ ಸಮಾರಂಭಕ್ಕೆ ಅಲಂಕೃತ ಕಾರನ್ನು ಬಳಸಿದ್ದಾನೆಂಬ ಕಾರಣಕ್ಕೆ ‘ಮೇಲ್ಜಾತಿ’ ಮಂದಿ ಪ್ರಕಾಶ್ ಬನ್ಸಾಲ್ ಎಂಬ ಯುವಕನನ್ನು ನಿರ್ದಯವಾಗಿ ಥಳಿಸುವಾಗಲೂ ಗಾಂಧೀಜೀ ನೆನಪಾಗಲಿಲ್ಲ…
ತಮ್ಮ ತವರು ರಾಜ್ಯದಲ್ಲೇ, ಮೀಸೆಯನ್ನು ಬಿಟ್ಟಿದ್ದಾರೆ ಎಂಬ ಕಾರಣಕ್ಕೆ ಇಬ್ಬರು ದಲಿತ ಯುವಕರನ್ನು ಮೇಲ್ಜಾತಿಯವರು ಥಳಿಸಿದಾಗಲೂ ಗಾಂಧೀಜಿ ನೆನಪಾಗಲಿಲ್ಲ….
ತಮ್ಮ ಆಡಳಿತಾವಧಿಯಲ್ಲಿ ದಲಿತರ ಮೇಲೆ (ವರದಿಯಾದ) ಹಿಂಸೆಯ ಪ್ರಕರಣಗಳು ಹೆಚ್ಚಾಗಿವೆ ಎಂದು ಎನ್.ಸಿ.ಆರ್.ಬಿ. ಡೇಟಾ ಹೇಳುತ್ತದೆ. 2015ರಲ್ಲಿ 38670 ರಷ್ಟಿದ್ದ ಪ್ರಕರಣಗಳು 2016ರಲ್ಲಿ 40801ಕ್ಕೇರಿವೆ. ಆ ಡೇಟಾಗಳನ್ನು ಕೇಳುವಾಗ ಗಾಂಧೀಜಿ ನೆನಪಾಗಲಿಲ್ಲ…
ಗಾಂಧೀಜಿ ಹಾಗೂ ಅವರ ಆಶಯಗಳ ಬಗ್ಗೆ ಈ ‘ಸೆಲೆಕ್ಟಿವ್ ಪ್ರೇಮ’ವನ್ನು ಯಾವ ರೀತಿ ಅರ್ಥೈಸಲಿ… ‘ಹೇ ರಾಮ್!’

ಅನಾಮಿಕ ಉಡುಪಿ