ಚುನಾವಣಾ ವಿಶ್ಲೇಷಣೆ: ಭಾಗ- 2 ಮತವಿಭಜನೆ ಮತ್ತು ರಾಜಕೀಯ ಅನಿವಾರ್ಯತೆ

1
2457

ಏ. ಕೆ. ಕುಕ್ಕಿಲ

ಮುಸ್ಲಿಂ ಓಟನ್ನೇ ಅವಲಂಬಿಸಿರುವ ಮತ್ತು ಸಮುದಾಯ ರಾಜಕಾರಣ ಮಾಡುತ್ತಿರುವ ಪಕ್ಷಗಳಲ್ಲಿ ಅಸಾದುದ್ದೀನ್ ಓವೈಸಿಯವರ ಎಂಐಎಂ ಮೊದಲಿನದ್ದೂ ಅಲ್ಲ, ಕೊನೆಯದ್ದಾಗುವ ಸಾಧ್ಯತೆಯೂ ಇಲ್ಲ. ಇದೊಂದು ರಾಷ್ಟ್ರೀಯ ಟ್ರೆಂಡ್. ಕಳೆದ ಬಾರಿಯ ಉತ್ತರ ಪ್ರದೇಶದ ವಿಧಾನ ಸಭಾ ಚುನಾವಣೆಯ ಸಂದರ್ಭದಲ್ಲಿ ಮುಸ್ಲಿಂ ಓಟನ್ನೇ ಅವಲಂಬಿಸಿರುವ ಒಂದಕ್ಕಿಂತ ಹೆಚ್ಚು ಪಕ್ಷಗಳು ಚುನಾವಣಾ ಕಣಕ್ಕೆ ಇಳಿದಿದ್ದುವು. ಇದರಲ್ಲಿ ಆಲ್ ಇಂಡಿಯಾ ಉಲೇಮಾ ಕೌನ್ಸಿಲ್, ಎಂಐಎಂ ಮತ್ತು ಪೀಸ್ ಪಾರ್ಟಿ ಮುಖ್ಯವಾದವು. ಇದರಲ್ಲಿ ಪೀಸ್ ಪಾರ್ಟಿಯೊಂದೇ 150 ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಓವೈಸಿಯ ಎಂಐಎಂ 38 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ನಿಲ್ಲಿಸಿತ್ತು. ಹಾಗಂತ, ಚುನಾವಣಾ ರಾಜಕೀಯವನ್ನು ಈ ಪಕ್ಷಗಳು ಗಂಭೀರವಾಗಿ ಪರಿಗಣಿಸಿದ್ದುವೋ ಎಂಬ ಬಗ್ಗೆ ಖಂಡಿತ ಸಂದೇಹ ಇದೆ. ಈ ಚುನಾವಣೆಯಲ್ಲಿ ಅವು ಪಡೆದ ಶೇಕಡಾವಾರು ಮತ ( ಪೀಸ್ ಪಾರ್ಟಿ- ೦.೦3% ಮತ್ತು ಎಂಐಎಂ- ೦.2% )ಮತ್ತು ಆ ಬಳಿಕ ಒಂದು ರಾಜಕೀಯ ಪಕ್ಷವಾಗಿ ಅವು ತೋರಬೇಕಾದ ವರ್ತನೆ ಹಾಗೂ ತೋರುತ್ತಿರುವ ವರ್ತನೆಯನ್ನು ಪರಿಗಣಿಸಿದರೆ, ಈ ಸಂದೇಹಕ್ಕೆ ಇನ್ನಷ್ಟ ಬಲ ಬರುತ್ತದೆ.
ಚುನಾವಣಾ ರಾಜಕೀಯ ಅನ್ನುವುದು ಜೂಜು ಅಲ್ಲ. ಅದು ವ್ಯವಸ್ಥಿತ ಕಾರ್ಯತಂತ್ರ, ರೂಪು- ರೇಷೆ, ಚಿಂತನ- ಮಂಥನವನ್ನು ಬಯಸುವ ರಂಗಸ್ಥಳ. ಇಂಥ ಕಣಕ್ಕೆ ಇಳಿಯುವಾಗ, ಪೂರ್ವಭಾವಿ ತಯಾರಿಗಳನ್ನು ನಡೆಸಬೇಕಾಗುತ್ತದೆ. ಒಂದು ಕ್ಷೇತ್ರದಲ್ಲಿ ಅಭ್ಯರ್ಥಿಗಳನ್ನು ನಿಲ್ಲಿಸುವುದರಿಂದ ತನಗಾಗುವ ಲಾಭ- ನಷ್ಟ ಮತ್ತು ಇತರರಿಗಾಗುವ ಲಾಭ- ನಷ್ಟಗಳ ಬಗ್ಗೆ ಒಂದು ಪಕ್ಷ ಯೋಚಿಸಬೇಕಾಗುತ್ತದೆ. ಹಾಗಂತ, ಚುನಾವಣೆಯಲ್ಲಿ ಸ್ಪರ್ಧಿಸುವ ಎಲ್ಲ ಪಕ್ಷಗಳೂ ಗೆಲ್ಲುವ ವಿಶ್ವಾಸ ಹೊಂದಿರುತ್ತವೆ ಎಂದಲ್ಲ. ಹಾಗೆ ವಾದಿಸುವವರಿಗೆ ರಾಜಕೀಯ ಗೊತ್ತಿಲ್ಲ ಎಂದೇ ಅರ್ಥ. ಚುನಾವಣೆಗೆ ಸಂಬಂಧಿಸಿ ಪ್ರತಿಯೊಂದು ಪಕ್ಷವೂ ಆಂತರಿಕ ಸಮೀಕ್ಷೆಯೊಂದನ್ನು ನಡೆಸಿರುತ್ತದೆ. ತನ್ನ ಅಭ್ಯರ್ಥಿ ಪಡಕೊಳ್ಳಬಹುದಾದ ಮತದ ಅಂದಾಜು ಲೆಕ್ಕಾಚಾರ ಮಾಡಿರುತ್ತದೆ. ಮಾತ್ರವಲ್ಲ, ತನ್ನ ಸ್ಪರ್ಧೆಯಿಂದ ಯಾವ ಸಮುದಾಯದ ಎಷ್ಟು ಮತಗಳು ತನ್ನ ಅಭ್ಯರ್ಥಿಗೆ ಬೀಳಬಹುದು ಮತ್ತು ತಾನು ಸ್ಪರ್ಧಿಸದೇ ಹೋದರೆ ಆ ಮತಗಳು ಯಾವ ಪಕ್ಷದ ಅಭ್ಯರ್ಥಿಗೆ ಸೇರಬಹುದು ಎಂಬ ಲೆಕ್ಕಾಚಾರವೂ ನಡೆದಿರುತ್ತದೆ. ಒಂದು ಕ್ಷೇತ್ರದ ಮತದಾರರಲ್ಲಿ ಹೆಣ್ಣು ಎಷ್ಟು, ಗಂಡು ಎಷ್ಟು, ಇವರಲ್ಲಿ ಯುವ ಮತದಾರರ ಸಂಖ್ಯೆ ಎಷ್ಟು ಮತ್ತು ಯಾವ ಕ್ಷೇತ್ರದಲ್ಲಿ ಯಾವ ವಿಷಯಗಳಿಗೆ ಒತ್ತು ಕೊಡಬೇಕು ಇತ್ಯಾದಿಗಳೆಲ್ಲ ಅವಲೋಕನಕ್ಕೆ ಒಳಪಟ್ಟಿರುತ್ತದೆ. ಹಾಗಂತ, ಸೋಲು ಖಚಿತವೆಂದು ಗೊತ್ತಿದ್ದೂ ಪಕ್ಷಗಳು ಅಭ್ಯರ್ಥಿಗಳನ್ನು ನಿಲ್ಲಿಸುವುದೇಕೆ ಎಂಬ ಪ್ರಶ್ನೆಯಿದೆ. ಇದಕ್ಕಿರುವ ಹಲವು ಕಾರಣಗಳಲ್ಲಿ ಒಂದು ಪ್ರಮುಖ ಕಾರಣ ಏನೆಂದರೆ,
ರಾಜಕೀಯ ಪಕ್ಷವಾಗಿ ಚುನಾವಣಾ ಮಂಡಳಿಯಿಂದ ಅಂಗೀಕೃತವಾಗಬೇಕಾದ ಅನಿವಾರ್ಯತೆ ಇರುವುದು.
2017 ಮೇ ವರೆಗಿನ ಮಾಹಿತಿ ಪ್ರಕಾರ, ಚುನಾವಣಾ ಮಂಡಳಿಯಲ್ಲಿ ನೋಂದಣಿ ಮಾಡಿಕೊಂಡಿರುವ ರಾಜಕೀಯ ಪಕ್ಷಗಳ ಒಟ್ಟು ಸಂಖ್ಯೆ 1841. ಇದರಲ್ಲಿ 7 ರಾಷ್ಟ್ರೀಯ ಪಕ್ಷಗಳು. 49 ರಾಜ್ಯ ಮಟ್ಟದ ಪಕ್ಷಗಳು ಮತ್ತು 1785- ರಾಜಕೀಯ ಪಕ್ಷವಾಗಿ ಅಂಗೀಕೃತಗೊಳ್ಳದ ಆದರೆ ನೋಂದಣಿಯಾಗಿರುವ ಪಕ್ಷಗಳು. ಒಂದು ಪಕ್ಷವನ್ನು ರಾಷ್ಟ್ರೀಯ ಪಕ್ಷವೆಂದು ಚುನಾವಣಾ ಮಂಡಳಿ ಅಂಗೀಕರಿಸಬೇಕಾದರೆ, ಸಾಮಾನ್ಯವಾಗಿ ಮೂರು ಶರತ್ತುಗಳಲ್ಲಿ ಒಂದನ್ನಾದರೂ ಅದು ಪಾಲಿಸಿರಬೇಕಾಗುತ್ತದೆ.


1. ಮೂರು ಬೇರೆ ಬೇರೆ ರಾಜ್ಯಗಳಲ್ಲಿ 2% ಲೋಕಸಭಾ ಸ್ಥಾನಗಳನ್ನು ಪಡೆದಿರಬೇಕು. 2014ರ ಲೋಕಸಭಾ ಚುನಾವಣೆಗೆ ಸಂಬಂಧಿಸಿ ಹೇಳುವುದಾದರೆ, ಕನಿಷ್ಠ 11 ಸ್ಥಾನಗಳನ್ನು ಪಡೆದಿರಬೇಕು.
2. ಲೋಕಸಭಾ ಚುನಾವಣೆ ಅಥವಾ ನಾಲ್ಕು ವಿಧಾನಸಭಾ ಚುನಾವಣೆಗಳಲ್ಲಿ ಕನಿಷ್ಠ 6% ಮತವನ್ನು ಪಡೆದಿರಬೇಕು ಮತ್ತು 4 ಲೋಕಸಭಾ ಸ್ಥಾನಗಳನ್ನು ಪಡೆದಿರಬೇಕು.
3. ನಾಲ್ಕು ಅಥವಾ ಅದಕ್ಕಿಂತ ಹೆಚ್ಚು ರಾಜ್ಯಗಳಲ್ಲಿ ಅಂಗೀಕೃತಗೊಂಡಿರಬೇಕು.
ಈ ದೇಶದಲ್ಲಿ ಈ ಷರತ್ತನ್ನು ಪೂರ್ತಿಗೊಳಿಸಿದ ರಾಜಕೀಯ ಪಕ್ಷಗಳು ಬರೇ 7.
1. ತೃಣಮೂಲ ಕಾಂಗ್ರೆಸ್ 2. ಬಿಎಸ್ಪಿ 3. ಬಿಜೆಪಿ 4. ಸಿಪಿಐ 5. ಸಿಪಿಐ ಮಾರ್ಕ್ಸಿಸ್ಟ್ 6. ಕಾಂಗ್ರೆಸ್ 7. ಎನ್ ಸಿಪಿ
ಇನ್ನು, ಒಂದು ಪಕ್ಷವು ರಾಜ್ಯ ಮಟ್ಟದ ರಾಜಕೀಯ ಪಕ್ಷವಾಗಿ ಅಂಗೀಕೃತಗೊಳ್ಳಬೇಕಾದರೆ ಈ ಕೆಳಗಿನ ಮೂರು ಶರತ್ತುಗಳಲ್ಲಿ ಒಂದನ್ನಾದರೂ ಪೂರ್ತಿಗೊಳಿಸಿರಬೇಕಾಗುತ್ತದೆ.
1. ಒಟ್ಟು ಸ್ಥಾನಗಳಲ್ಲಿ 3% ಮತವನ್ನು ಪಡೆದಿರಬೇಕು ಅಥವಾ ವಿಧಾನ ಸಭೆಯಲ್ಲಿ ಕನಿಷ್ಠ 3 ಸ್ಥಾನಗಳನ್ನು ಪಡೆದಿರಬೇಕು.
2. ಲೋಕಸಭಾ ಅಥವಾ ವಿಧಾನ ಸಭಾ ಚುನಾವಣೆಯಲ್ಲಿ 6% ಮತ ಪಡೆದಿರಬೇಕು ಮತ್ತು ಒಂದು ಲೋಕಸಭಾ ಸ್ಥಾನವನ್ನು ಹಾಗೂ 2 ವಿಧಾನಸಭಾ ಸ್ಥಾನಗಳನ್ನು ಗಳಿಸಿರಬೇಕು.
3. ಒಟ್ಟು ಮತದಾನದಲ್ಲಿ 8% ಮತವನ್ನು ಪಡೆದಿರಬೇಕು ಮತ್ತು ಯಾವುದೇ ರಾಜ್ಯದಲ್ಲಿ ಒಂದು ವಿಧಾನಸಭಾ ಸ್ಥಾನವನ್ನು ಪಡೆದಿರಬೇಕು.
ಈ ಷರತ್ತನ್ನು ಪೂರ್ತಿಗೊಳಿಸಿ ರಾಜ್ಯ ಪಕ್ಷಗಳಾಗಿ ಅಂಗೀಕೃತಗೊಂಡ ಪಕ್ಷಗ ಸಂಖ್ಯೆ 49. ಓವೈಸಿಯವರ ಎಂಐಎಂ, ಬದ್ರುದ್ದೀನ್ ಅಜ್ಮಲ್ ರ AIUDF, ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಮೊದಲಾದುವು ಇದರಲ್ಲಿ ಸೇರಿವೆ. ಇನ್ನು, ಉಳಿದಿರುವುದೆಲ್ಲವೂ ಚುನಾವಣಾ ಮಂಡಳಿಯಲ್ಲಿ ನೋಂದಣಿಯಾಗಿರುವ ಆದರೆ ರಾಜ್ಯ ಅಥವಾ ರಾಷ್ಟ್ರೀಯ ಪಕ್ಷವಾಗಿ ಅಂಗೀಕೃತಗೊಳ್ಳದ ಪಕ್ಷಗಳಾಗಿವೆ. ಉತ್ತರಪ್ರದೇಶದ ಮುಹಮ್ಮದ್ ಅಯ್ಯುಬ್ ಅವರ ಪೀಸ್ ಪಾರ್ಟಿ, ಮಹಾರಾಷ್ಟ್ರದ ಹಾಜಿ ಮಸ್ತಾನ್ ಮಿರ್ಜಾ ಅವರ ಭಾರತೀಯ ಮೈನಾರಿಟಿ ಸುರಕ್ಷಾ ಮಹಾಸಂಘ, ತಮಿಳುನಾಡಿನ ಎಂ. ಹೆಚ್. ಜವಾಹಿರುಲ್ಲಾ ಅವರ ಮಣಿತಣಿಯೆ ಮಕ್ಕಳ ಕಾಚಿ, ಬಿಹಾರದ ಮಾಜಿ ಮುಖ್ಯಮಂತ್ರಿ ಜಿತನ್ ರಾಮ್ ಮಾಂಜಿ ಅವರ ಹಿಂದುಸ್ತಾನ್ ಅವಾಮ್ ಮೋರ್ಚಾ, ನಟ ಪವನ್ ಕಲ್ಯಾಣ್ ಅವರ ಜನಸೇನಾ ಪಾರ್ಟಿ, ಎ. ಸಯೀದ್ ಅವರ ಎಸ್ ಡಿಪಿಐ ಮತ್ತು ಎಸ್ ಕ್ಯು ಆರ್ ಇಲ್ಯಾಸ್ ಅವರ ಡಬ್ಲ್ಯೂಪಿಐ… ಮುಂತಾದುವೂ ಸೇರಿ ಸುಮಾರು 1785 ಪಕ್ಷಗಳು ಈ ಪಟ್ಟಿಯಲ್ಲಿವೆ.
ಇಲ್ಲಿ ನೀಡಲಾದ ವಿವರಗಳು ಒಂದು ಅಂಶವನ್ನು ಬಹಳ ಚೆನ್ನಾಗಿ ಸ್ಪಷ್ಟಪಡಿಸುತ್ತವೆ. ಅದೇನೆಂದರೆ, ರಾಜಕೀಯ ಪಕ್ಷವಾಗಿ ನೋಂದಾಯಿಸಿದ ಬಳಿಕ ಚುನಾವಣೆಯಲ್ಲಿ ಸ್ಪರ್ಧಿಸಬೇಕಾದುದು ಅನಿವಾರ್ಯ. ಮತ ವಿಭಜನೆಯಾಗುತ್ತೋ, ಕೋಮುವಾದಿ, ಭ್ರಷ್ಟಾಚಾರಿ, ಸಮಯ ಸಾಧಕರು ಆರಿಸಿ ಬರುತ್ತಾರೋ ಎಂದು ಲೆಕ್ಕ ಹಾಕುತ್ತಾ ಕುಳಿತರೆ, ಪಕ್ಷ ಬೆಳೆಯಲು ಸಾಧ್ಯವಿಲ್ಲ. ಬೆಳೆಯದಿದ್ದರೆ ಚುನಾವಣಾ ಮಂಡಳಿಯಿಂದ ಅಂಗೀಕೃತಗೊಳ್ಳಲೂ ಸಾಧ್ಯವಿಲ್ಲ. ರಾಜ್ಯ ಪಕ್ಷವಾಗಿ ಅಂಗೀಕೃತಗೊಂಡ ಪಕ್ಷಕ್ಕೆ ರಾಷ್ಟ್ರ ಪಕ್ಷವಾಗಿ ಅಂಗೀಕೃತಗೊಳ್ಳುವ ಉಮೇದು ಇರುತ್ತದೆ. ಓವೈಸಿಯವರ ಪಕ್ಷವು ಕರ್ನಾಟಕ, ಅಸ್ಸಾಮ್, ಉತ್ತರಪ್ರದೇಶದಲ್ಲಿ ಸ್ಪರ್ಧಿಸಿರುವುದನ್ನು ಈ ಹಿನ್ನೆಲೆಯಲ್ಲೇ ನೋಡಬೇಕು. ಅವರಿಗೆ ತನ್ನ ಪಕ್ಷವನ್ನು ರಾಷ್ಟ್ರೀಯ ಪಕ್ಷವಾಗಿ ಮಾರ್ಪಡಿಸಿಕೊಳ್ಳುವ ಉದ್ದೇಶ ಇದೆ. ಮತ ವಿಭಜನೆ, ಅಪಾತ್ರರ ಗೆಲುವು ಇತ್ಯಾದಿ ಜನಸಾಮಾನ್ಯರ ವಾದಗಳನ್ನೆಲ್ಲ ಅವರು ಇಂಥ ಕಾರಣಕ್ಕಾಗಿ ನಿರ್ಲಕ್ಷಿಸಬೇಕಾಗುತ್ತದೆ ಮತ್ತು ಅಂತ ವಾದಗಳಿಗೆ ಪ್ರತಿ ಉತ್ತರವನ್ನು ತಯಾರಿಸಬೇಕಾಗುತ್ತದೆ. ಜನಸಾಮಾನ್ಯರಿಗೆ ಇಷ್ಟವಾಗದ ಆದರೆ ರಾಜಕೀಯ ಪಕ್ಷಗಳ ಪಾಲಿಗೆ ಅಗತ್ಯವಾಗಿರುವ ಸಂಗತಿ ಇದು. ಆದ್ದರಿಂದಲೇ, ರಾಜಕೀಯ ಪಕ್ಷಗಳ ವಾದಕ್ಕೂ ಜನಸಾಮಾನ್ಯರ ಭಾವನಾತ್ಮಕ ವಾದಕ್ಕೂ ನಡುವೆ ತಿಕ್ಕಾಟಗಳು ನಡೆಯುವುದು.
(ಉಳಿದದ್ದು ಭಾಗ 3ರಲ್ಲಿ)

1 COMMENT

  1. Owaisis MIM party never contested elections in karnataka and Assam….. Don’t give wrong information

Comments are closed.