ಜೀ ಟಿ.ವಿ. ಮತ್ತೆ ಸುದ್ದಿಯಲ್ಲಿ. ಭಾರತದ ಮುಸ್ಲಿಂ ಮಹಿಳೆಯರ ಶಟಲ್ ಕಾಕ್ ಬುರ್ಖಾವನ್ನು ತಾಲಿಬಾನೀಕರಣ ಎಂದು ವಿಶ್ಲೇಷಿಸಿದ ನಿರೂಪಕ….

0
1484

ನ್ಯೂಸ್ ಡೆಸ್ಕ್

ಭಾರತದ ಇತಿಹಾಸ ಮತ್ತು ಸಂಸ್ಕೃತಿಯ ಸಂಪೂರ್ಣ ಅಜ್ಞಾನವನ್ನು ಪ್ರದರ್ಶಿಸುತ್ತಿರುವ ಜೀ ಟಿವಿ ಸುದ್ದಿ ನಿರೂಪಕ ಸುಧೀರ್ ಚೌಧರಿ ಭಾರತೀಯ ಮುಸ್ಲಿಂ ಮಹಿಳೆಯರ ಶಟಲ್ ಕಾಕ್ ಬುರ್ಖಾವನ್ನು ಮೂಲಭೂತವಾದಿತ್ವ ಎಂದು ನಿರೂಪಿಸುವುದರ ಮೂಲಕ ಮುಸ್ಲಿಂ ಮಹಿಳೆಯರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಪಶ್ಚಿಮ ಉತ್ತರ ಪ್ರದೇಶದ ಕೈರಾನ ಪಟ್ಟಣದ ಲೋಕಸಭಾ ಚುನಾವಣೆ ಮುಗಿದ ಬಳಿಕ ಹಲವಾರು ಇ. ವಿ. ಎಂ. ಗಳು ದೋಷಪೂರಿತವಾಗಿವೆ ಎಂದು ವರದಿಯಾಗಿವೆ. ಅದೇ ಸಂಜೆ ಜೀ ಟಿ. ವಿ. ನಿರೂಪಕ ಸುಧೀರ್ ಚೌಧರಿ ಅವರ ಪ್ರೈಮ್ ಟೈಮ್ ಶೋ ದಲ್ಲಿ ಮುಸ್ಲಿಂ ಮಹಿಳೆಯರ ಬುರ್ಖಾ ಧಾರಣೆಯ ಬಗ್ಗೆ ಅಸಂಬದ್ಧ ಹಾಗೂ ಕುತರ್ಕ ವ್ಯಾಖ್ಯಾನ ಮಾಡಿದ್ದಾರೆ.
“ಕೈರಾನದಲ್ಲಿ ಶಟಲ್ ಕಾಕ್ ಬುರ್ಖಾದ ಆಗಮನದ ವಿಶ್ಲೇಷಣೆ” ಎಂಬ ಶೀರ್ಷಿಕೆಯ ಈ ಕಾರ್ಯಕ್ರಮದಲ್ಲಿ ಚೌಧರಿ ವಹಾಬಿಸಂನ ಸಿದ್ಧಾಂತವನ್ನು ಪ್ರಚಾರ ಮಾಡಲು ಮುಸ್ಲಿಮರು ಮೂಲಭೂತವಾದಿಗಳಾಗಿದ್ದಾರೆ ಎಂದು ಹೇಳಿದ್ದಾರೆ. ಅವರ ತಪ್ಪು ವಿಶ್ಲೇಷಣೆ ಹಾಗೂ ಆಧಾರವಿಲ್ಲದ ಆರೋಪಗಳಿಂದಾಗಿ ಮುಸ್ಲಿಂ ಮಹಿಳೆಯರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಶಟ್ಲ್ ಕಾಕ್ ಬುರ್ಖಾ ಮತ್ತು ಭಾರತೀಯ ಮುಸ್ಲಿಂ ಮಹಿಳೆಯರ ತಾಲಿಬಾನೀಕರಣ ಎಂಬುವುದರ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಸಮುದಾಯದ ಮಹಿಳೆಯರು ಕೋಮುಪಕ್ಷಪಾತ ಮತ್ತು ಸುಳ್ಳಿನ ವರದಿಗಾಗಿ ಅವರನ್ನು ದೂಷಿಸಿದ್ದಾರೆ.
ಚೌಧರಿಯವರ ಕಾರ್ಯಕ್ರಮದಲ್ಲಿ ಅವರು ಸಂದರ್ಶಿಸಿದ ಮಹಿಳೆಯರಿಂದಲೇ ವಿರೋಧವನ್ನು ಎದುರಿಸಿದೆ. ಮಾತನಾಡಿದ ಮಹಿಳೆಯರು ಶಟ್ಲ್ ಕಾಕ್ ಬುರ್ಖಾ ಮತ್ತು ಯಾವುದೇ ಸಿದ್ಧಾಂತದ ನಡುವಿನ ಸಂಭಂದವನ್ನು ತಿರಸ್ಕರಿಸಿದರು . ಚಾನೆಲ್ ಅನೈತಿಕ, ಸುಳ್ಳು, ಮತ್ತು ಸಾಮುದಾಯಿಕ ಪಕ್ಷಪಾತದ ವರದಿಗಳಲ್ಲಿ ತೊಡಗಿಸಿಕೊಂಡಿದೆ ಎಂದು ದೂರಿದರು.