ಮಾಜಿ ಉನ್ನತ ಶಿಕ್ಷಣ ಸಚಿವ, ಸಜ್ಜನ ರಾಜಕಾರಣಿ, ಮುಸ್ಲಿಮ್ ಸಮುದಾಯದ ಸಾಮಾಜಿಕ ಮತ್ತು ರಾಜಕೀಯ ಧ್ವನಿಯಾಗಿದ್ದ ಬಿ.ಎ. ಮೊಹಿದೀನ್ (81) ಅವರು ಜುಲೈ 10 ರಂದು ಮುಂಜಾನೆ ನಿಧನವಾದ ವಾರ್ತೆ ಮತ್ತು ಅವರ ಸಾಧನೆ, ಸೇವೆ, ಚಿಂತನೆಗಳ ಬಗ್ಗೆ ಮಾಧ್ಯಮಗಳಲ್ಲಿ ಈಗಾಗಲೇ ಸಾಕಷ್ಟು ವರದಿಗಳು ಪ್ರಕಟವಾಗಿವೆ. ದ.ಕ. ಜಿಲ್ಲೆಯಲ್ಲಿ ಮುಸ್ಲಿಮ್ ಸಮುದಾಯದ ಒಡೆತನದ ಶಿಕ್ಷಣ ಸಂಸ್ಥೆಗಳ ಸ್ಥಾಪನೆಯಲ್ಲಿ ಅವರ ಕೊಡುಗೆ ಅಪಾರವಾದುದು. ದ.ಕ. ಜಿಲ್ಲೆಯ ಬಜ್ಪೆ ಯಲ್ಲಿ ಜನನ. ಬಿಎಸ್ಸಿ ಪದವೀಧರರಾದ ಅವರು ಹೊಟೇಲ್ ಉದ್ಯಮದಲ್ಲಿ ತೊಡಗಿಸಿಕೊಂಡು 1978 ರಲ್ಲಿ ದ.ಕ. ಜಿಲ್ಲೆಯ ಬಂಟ್ವಾಳ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಶಾಸಕರಾಗಿ ಆರಿಸಿ ಬಂದರು. 1995-99ರ ವರೆಗೆ ಜೆ.ಎಚ್. ಪಟೇಲ್ ಸಂಪುಟ ದಲ್ಲಿ ಸಣ್ಣ ಕೈಗಾರಿಕೆ ಮತ್ತು ಉನ್ನತ ಶಿಕ್ಷಣ ಸಚಿವರಾಗಿ ಕಾರ್ಯ ನಿರ್ವಹಿಸಿದರು. ಬ್ಯಾರಿ ಭಾಷೆಯ ಮಾನ್ಯತೆಗೆ ಮತ್ತು ಬ್ಯಾರಿ ಅಕಾಡಮಿಗೆ ಶ್ರಮಿಸಿದ್ದರು. ಅವರು ಪತ್ನಿ, ಇಬ್ಬರು ಪುತ್ರರು ಮತ್ತು ಇಬ್ಬರು ಪುತ್ರಿಯರ ಸಹಿತ ಅಪಾರ ಬಂಧು-ಮಿತ್ರಾದಿಗಳನ್ನು ಅಗಲಿದ್ದಾರೆ. ಅವರಿಗೆ ಅಲ್ಲಾಹನು ಮಗ್ಫಿರತ್ ಮತ್ತು ಮರ್ಹಮತ್ ನೀಡಿ ಅನುಗ್ರಹಿಸಲಿ.
ಅವರ ಆತ್ಮಕಥನ `ನನ್ನೊಳಗಿನ ನಾನು’ ಇದೇ ಜುಲೈ 20 ರಂದು ಸಂಜೆ 4 ಗಂಟೆಗೆ ಮಂಗಳೂರಿನ ಪುರಭವನದಲ್ಲಿ ಬಿಡುಗಡೆಗೊಳ್ಳಲಿದ್ದು, ಆ ಆತ್ಮಕಥನದಿಂದ ಆಯ್ದ ಒಂದು ಭಾಗವನ್ನು ಇಲ್ಲಿ ನೀಡುತ್ತಿದ್ದೇವೆ. ಈ ಆತ್ಮಕಥನವನ್ನು ಸಾಹಿತಿಗಳಾದ ಮುಹಮ್ಮದ್ ಕುಳಾಯಿ ಮತ್ತು ಬಿ.ಎ. ಮುಹಮ್ಮದಲಿಯವರು ನಿರೂಪಿಸಿದ್ದಾರೆ. – ಸಂಪಾದಕ
ಇಲ್ಲಿ ಒಂದು ವಿಷಯವನ್ನು ನಾನು ಹೇಳಲೇ ಬೇಕು. ನಾನು ಯಾವತ್ತೂ ರಾಜಕಾರಣಿಯಾಗ ಬೇಕೆಂದು ಕನಸು ಕಂಡವನಲ್ಲ. ನನ್ನ ಕುಟುಂಬದಲ್ಲಿ ಯಾರೂ ರಾಜಕಾರಣಿಗಳಿಲ್ಲ. ನನಗೆ ಇಂಜಿನಿಯರ್ ಆಗಬೇಕೆಂದು ಆಸೆ ಇತ್ತು. ನನ್ನನ್ನು ಓದಿಸಿದ ನನ್ನ ತಂದೆಗೆ ನಾನೊಬ್ಬ ದೊಡ್ಡ ಆಫೀಸರ್ ಆಗಬೇಕೆಂಬ ಕನಸಿತ್ತು. ದೇವರಾಜ ಅರಸು, ರಾಮ ಕೃಷ್ಣ ಹೆಗಡೆ ಮತ್ತು ಜೆ.ಎಚ್.ಪಟೇಲ್ ಅವರಂತಹ ಮಹಾನ್ ನಾಯಕರು ನನ್ನನ್ನು ಗುರುತಿಸಿ ರಾಜಕೀಯ ಸ್ಥಾನಮಾನ, ಅಧಿಕಾರ ಕೊಡದೆ ಹೋಗಿದ್ದಿದ್ದರೆ ಇಂದು ಈ ಬಿ.ಎ. ಮೊಹಿದೀನ್ ಯಾರು ಎಂದು ಯಾರಿಗೂ ಗೊತ್ತಿರುತ್ತಿರಲಿಲ್ಲ. ನನ್ನ ಪರಿಚಯವೇ ಯಾರಿಗೂ ಇರುತ್ತಿರಲಿಲ್ಲ. ಒಬ್ಬ ಸಾಮಾನ್ಯನಲ್ಲಿ ಸಾಮಾನ್ಯನಾಗಿ ನಾನು ಮುಗಿದು ಹೋಗುತ್ತಿದ್ದೆ. ನಾನು ರಾಜಕೀಯವನ್ನು ಅರಸಿ ಹೋಗಿಲ್ಲ. ರಾಜಕಾರಣಿಗಳ ಬೆನ್ನು ಹಿಡಿದವನಲ್ಲ. ಅಧಿಕಾರ ಬೇಕು ಎಂದು ಯಾವತ್ತೂ ಹಂಬಲಿ ಸಿದವನಲ್ಲ. ಬದಲಾಗಿ ರಾಜಕೀಯವೇ ನನ್ನನ್ನು ನನಗೆ ಇಷ್ಟವಿಲ್ಲ ದಿದ್ದರೂ ಕೈ ಹಿಡಿದು ಎಳೆದುಕೊಂಡು ಹೋಗಿ ಈ ಸ್ಥಾನದಲ್ಲಿ ತಂದು ನಿಲ್ಲಿಸಿದೆ ಎಂಬುದು ಸತ್ಯ.
ನನ್ನ ರಾಜಕೀಯ ಬದುಕಿಗೆ ಆದರ್ಶವಾಗಿದ್ದವರು ಇಸ್ಲಾಮಿನ ನಾಲ್ಕು ಖಲೀಫರುಗಳಾದ ಅಬೂಬಕರ್ ಸಿದ್ದೀಕ್(ರ), ಉಮರ್ ಖತ್ತಾಬ್ (ರ), ಉಸ್ಮಾನ್(ರ) ಮತ್ತು ಅಲಿ ಇಬ್ನು ಅಬೂ ತಾಲಿಬ್(ರ). ಇವರ ಚರಿತ್ರೆಯೇ ನನಗೆ ಸ್ಫೂರ್ತಿ. ಇವರಾರು ಸ್ಥಿತಿವಂತರಾಗಿರಲಿಲ್ಲ. ತಮ್ಮದೆಲ್ಲವನ್ನೂ ಸಮಾಜಕ್ಕೆ ಧಾರೆ ಎರೆದ ಮಹಾನ್ ವ್ಯಕ್ತಿಗಳಾಗಿದ್ದರು. ಇವರು ಪ್ರಾಮಾಣಿಕರಾಗಿದ್ದರು. ನ್ಯಾಯ ಪಾಲಿಸುವವರಾಗಿದ್ದರು. ಕೆಡುಕು, ಭ್ರಷ್ಟಾಚಾರಗಳನ್ನು ಕಂಡರೆ ಕೆಂಡವಾಗುತ್ತಿದ್ದರು. ಅಂತಹವರಿಗೆ ಗರಿಷ್ಠ ಶಿಕ್ಷೆ ವಿಧಿಸು ತ್ತಿದ್ದರು. ಉಮರ್ ಖತ್ತಾಬ್ ಅವರ ಆಡಳಿತ ಕಾಲದಲ್ಲಿ ಒಬ್ಬ ಹಾಲು ಖರೀದಿಸುವವನು ಹಾಲು ಮಾರಾಟಗಾರನಲ್ಲಿ “ನೀನು ಹಾಲಿಗೆ ನೀರು ಬೆರೆಸದೆ ತುಂಬಾ ಒಳ್ಳೆಯ ಹಾಲನ್ನು ಕೊಡುತ್ತಿರುವೆ. ಇದಕ್ಕೆ ಕಾರಣವೇನು?” ಎಂದು ಕೇಳಿದನಂತೆ. ಆಗ ಹಾಲು ಮಾರುವವನು ಹೆದರಿ “ಅಯ್ಯೋ, ಹಾಗೇನಾದರೂ ನಾನು ಹಾಲಿಗೆ ನೀರು ಬೆರೆಸಿದರೆ, ಅದು ಖಲೀಫರಿಗೆ ಗೊತ್ತಾಗಿ ಬಿಟ್ಟರೆ ನನ್ನ ಕತೆ ಮುಗಿದಂತೆಯೇ. ಹಾಲಿಗೆ ನೀರು ಬೆರೆಸುವುದು ಬಿಡಿ; ಅಂತಹ ಯೋಚನೆ ಮಾಡುವುದು ಕೂಡಾ ಈ ನಾಡಿನಲ್ಲಿ ಯಾರಿಗೂ ಸಾಧ್ಯವಿಲ್ಲ” ಎಂದನಂತೆ.
ಖಲೀಫಾ ಅವರುಗಳು ಸಾರ್ವಜನಿಕ ಹಣದಿಂದ ಸ್ವಂತಕ್ಕೆ ಎಂದು ಒಂದು ಪೈಸೆ ಕೂಡಾ ಉಪಯೋಗಿಸಿದವರಲ್ಲ. ಭ್ರಷ್ಟಾ ಚಾರ ಎಂಬ ಶಬ್ದವೇ ಅವರ ಆಡಳಿತದಲ್ಲಿ, ಬದುಕಲ್ಲಿ ಇರಲಿಲ್ಲ. ಅವರೆಲ್ಲ ಸರಳವಾದ ಆದರ್ಶ ಬದುಕನ್ನು ಬದುಕಿದವರು. ಯಾವೊಬ್ಬ ಪ್ರಜೆಗೂ ಅನ್ಯಾಯವಾಗದಂತೆ ನೋಡಿಕೊಂಡವರು. ಅವರೆಲ್ಲ ಮರಣ ಹೊಂದುವಾಗ ಅವರಲ್ಲಿ ಉಳಿತಾಯದ ಹಣ, ಆಸ್ತಿ ಎಂದು ಏನೂ ಇರಲಿಲ್ಲ.
ದುರಂತ ಎಂದರೆ ಈ ನಾಲ್ವರು ಖಲೀಫಾಗಳು ಆಡಳಿತ ನಡೆಸಿದ ಅರೇಭಿಯಾದಲ್ಲೂ ಇಂದು ಭ್ರಷ್ಟಾಚಾರ ತಾಂಡವ ವಾಡುತ್ತಿದೆ. ಜಗತ್ತಿಗೆ ಆದರ್ಶ, ಮಾದರಿಯಾಗಬೇಕಾಗಿದ್ದ ಅರಬ್ ರಾಷ್ಟ್ರಗಳು ಇಂದು ಪತನದತ್ತ ಸಾಗುತ್ತಿವೆ. ಮಕ್ಕಳು, ಮಹಿಳೆಯರು, ಅಮಾಯಕರ ಮೇಲೆ ಬಾಂಬುಗಳ ಸುರಿಮಳೆಯಾಗುತ್ತಿವೆ. ಒಂದು ರಾಷ್ಟ್ರವನ್ನು ಮುಗಿಸಲು
ಇನ್ನೊಂದು ಅರಬ್ ರಾಷ್ಟ್ರ ಟೊಂಕಕಟ್ಟಿ ನಿಂತಿದೆ. ಪ್ರವಾದಿಗಳು ನಡೆದಾಡಿದ ನೆಲದಲ್ಲಿ ರಕ್ತದೋಕುಳಿ ಹರಿಯುತ್ತಿದೆ. ಈ ನಾಲ್ವರು ಖಲೀಫಾಗಳ ಮರಣಾನಂತರ ಈ ಜಗತ್ತಿನಲ್ಲಿ ಎಲ್ಲೂ ಅವರು ನಡೆಸಿದಂತಹ ಆಡಳಿತ ನೆಲೆ ನಿಲ್ಲಲೇ ಇಲ್ಲ.
ವಂಶಾಡಳಿತ ಇಸ್ಲಾಮಿಗೆ ಸಂಪೂರ್ಣ ವಿರುದ್ಧವಾದುದಾಗಿದೆ. ಅಂತಹ ಒಂದು ಕಲ್ಪನೆ ಕೂಡಾ ಇಸ್ಲಾಮಿನಲ್ಲಿಲ್ಲ. ವಂಶಾಡಳಿತದ ವಿರುದ್ಧ ಅಂದು ಕರ್ಬಲಾ ಯುದ್ಧವೇ ನಡೆದಿತ್ತು. ಆದರೆ ಇಂದು ಅರೇಬಿಯಾ ದಲ್ಲಿ ಇಸ್ಲಾಮಿಗೆ ವಿರುದ್ಧವಾದಂತಹ ವಂಶಾಡಳಿತವಿದೆ. ಅರಬ್ ಜಗತ್ತಿನ ಅರಾಜಕತೆಗೆ ಇದೂ ಒಂದು ಕಾರಣ ವಾಗಿದೆ. `ಪ್ರಜಾಪ್ರಭುತ್ವ’ ದೇಶವಾದ ಭಾರತದಲ್ಲೂ ಇಂದು ನಾನು, ನನ್ನ ಮಗ, ನನ್ನ ಅ ಳಿಯ, ನನ್ನ ಮಗಳು, ನನ್ನ ಮೊಮ್ಮಗ ಹೀಗೆ ಎಲ್ಲರೂ ಅಧಿಕಾರಕ್ಕೆ ಬರಬೇಕು ಎಂಬ ಪ್ರಜಾತಂತ್ರಕ್ಕೆ ವಿರೋಧವಾದಂತಹ ಅನೀತಿ ಜಾರಿಗೆ ಬರುತ್ತಿದೆ. ಇದು `ಪ್ರಜಾಪ್ರಭುತ್ವ’ದ ಒಂದು ದೊಡ್ಡ ದುರಂತವಾಗಿದೆ.












