ನ್ಯೂಸ್ ಚಾನೆಲ್ ಗಳ ಪ್ರೈಮ್ ಟೈಮ್ ಚರ್ಚೆಗೆ ಛೀಮಾರಿ ಹಾಕಿದ ರಾಜ್ ದೀಪ್ ಸರ್ದೇಸಾಯಿ

0
2649

ಖ್ಯಾತ ಪತ್ರಕರ್ತ ಮತ್ತು ಇಂಡಿಯಾ ಟುಡೇ ಚಾನೆಲ್ ನ ಸಂಪಾದಕೀಯ ಮಂಡಳಿಯ ಸಲಹೆಕಾರ ರಾಜ್ ದೀಪ್ ಸರ್ದೇಸಾಯಿ ಯವರು ನಿನ್ನೆ ಮಾಡಿರುವ ಟ್ವೀಟ್ ಸಾಕಷ್ಟು ಚರ್ಚೆಗೆ ಗ್ರಾಸ ಒದಗಿಸಿದೆ. ಮೂರು ಸಾವಿರಕ್ಕಿಂತಲೂ ಅಧಿಕ ಮಂದಿ ಅವರ ಟ್ವೀಟ್ ಅನ್ನು ರೀ ಟ್ವೀಟ್ ಮಾಡಿದ್ದಾರೆ. ಇಂಗ್ಲಿಷ್ ನ್ಯೂಸ್ ಚಾನೆಲ್ ಗಳು ಹೇಗೆ ಅಗಂಭೀರ ವಿಷಯವನ್ನು ಗಂಭೀರವೆಂಬಂತೆ ಬಿಂಬಿಸಿ ಪ್ರಧಾನಿ ಮೋದಿ ಪರ ಡಂಗುರ ಸಾರಬಹುದು ಎಂಬುದನ್ನು ಸೂಕ್ಷ್ಮವಾಗಿ ಅವರು ವಿವರಿಸಿದ್ದಾರೆ. 2019 ರಲ್ಲಿ ಜಾತ್ಯತೀತ ಸರಕಾರ ಆರಿಸಿ ಬರುವಂತೆ ಪ್ರಾರ್ಥಿಸಿ ಎಂದು ದೆಹಲಿಯ ಕ್ರೈಸ್ತ ಧರ್ಮಗುರುವೊಬ್ಬರು ಕ್ರೈಸ್ತರಿಗೆ ನೀಡಿದ ಕರೆಯನ್ನು ಎತ್ತಿಕೊಂಡು ಚಾನೆಲ್ ಗಳು ಗಂಭೀರ ಚರ್ಚೆ ನಡೆಸಿರುವುದನ್ನು ಪ್ರಶ್ನಿಸಿ ಅವರು ಟ್ವೀಟ್ ಮಾಡಿದ್ದರು. ಆ ಟ್ವೀಟ್ ಇಲ್ಲಿದೆ.

ತಮಿಳುನಾಡಿನ ತೂತ್ತುಕುಡಿಯಲ್ಲಿ ಹನ್ನೊಂದು ಮಂದಿ ಪ್ರತಿಭಟನಾಕಾರರ ಹತ್ಯೆಯಾಗಿರುವಾಗ, ಮಾರಣಾಂತಿಕ ವೈರಸ್ ಒಂದು ಹತ್ತು ಮಂದಿಯನ್ನು ಬಲಿ ಪಡೆದಿರುವಾಗ ಮತ್ತು ಮುಂಬೈ ಯಲ್ಲಿ ಪೆಟ್ರೋಲ್ ಬೆಲೆ 84 ರೂಪಾಯಿಗೆ ಏರಿರುವಾಗ ಮುಖ್ಯವಾಹಿನಿಯ ಟಿವಿ ಚಾನೆಲ್ ಗಳ ಪ್ರೈಮ್ ಟೈಮ್ ನ್ಯೂಸ್ ಯಾವುದು ಗೊತ್ತೇ? ಅವುಗಳ ಪಾಲಿಗೆ ಎನಿಮಿ ನಂಬರ್ ಒನ್ ಯಾರು ಗೊತ್ತೇ? ಕಾಥೋಲಿಕ್ ಧರ್ಮಗುರು! ಗುಡ್ ನೈಟ್, ಶುಭರಾತ್ರಿ.