ಬಿಜೆಪಿಯ ಕಾಶ್ಮೀರಿ ವೈಫಲ್ಯಕ್ಕೆ ಅಜಿತ್ ದೋವಲ್ ಮತ್ತು ದಿನೇಶ್ವರ್ ಶರ್ಮಾರ ಕಾರ್ಯತಂತ್ರ ಕಾರಣವೇ? ಬಿಜೆಪಿ ಎಡವಿದ್ದೆಲ್ಲಿ?

0
1125

ರಶೀದ್

ಕಾಶ್ಮೀರದಲ್ಲಿ 250 ರಿಂದ 300 ರಷ್ಟು ಉಗ್ರವಾದಿಗಳು ಸಕ್ರಿಯರಾಗಿದ್ದು ಅವರನ್ನು ಮುಗಿಸಿದರೆ ಸಮಸ್ಯೆ ಪರಿಹಾರವಾಗಿ ಬಿಡಬಹುದು ಎಂಬ ಅಜಿತ್ ದೋವಲ್ ಅವರ ಚಿಂತಕ ಚಾವಡಿಯ ಮಾತನ್ನು ನಂಬಿ ಅದರಂತೆ ಕೇಂದ್ರ ಸರಕಾರ ಕಾರ್ಯಾಚರಣೆಗೆ ಇಳಿದುದು ಜಮ್ಮು ಕಾಶ್ಮೀರದ ಈಗಿನ ಸ್ಥಿತಿಗೆ ಕಾರಣವೇ? ಕಾಶ್ಮೀರಿಗಳನ್ನು ಕೊಲ್ಲುವುದು ಪಾಕಿಸ್ತಾನಕ್ಕೆ ಕೊಡುವ ಸೂಕ್ತ ತಿರುಗೇಟಾಗಬಹುದೆಂದು ಕೇಂದ್ರ ಸರಕಾರಕ್ಕೆ ತಿಳಿಸಿಕೊಟ್ಟರು ಯಾರು? 2016 ಜುಲೈಯಿಂದ ಒಂದು ರಾಜ್ಯದ ಮಂದಿ ಕಲ್ಲು ಹಿಡಿದು ಬೀದಿಯಲ್ಲಿರುವಾಗ ಮತ್ತು ಯುಪಿಎ ಸರಕಾರದ ಹತ್ತು ವರ್ಷಗಳ ಆಡಳಿತ ಕಾಲದಲ್ಲಿ ನಡೆದಿರುವುದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಕೇವಲ ಕಳೆದ ನಾಲ್ಕು ವರ್ಷಗಳ ಆಡಳಿತದಲ್ಲಿ ನಾಗರಿಕ ಮತ್ತು ಸೈನಿಕ ಸಾವು- ನೋವುಗಳಾಗಿರುವಾಗ ಇದನ್ನು ಬರಿಯ ಪಾಕ್ ಪ್ರೇಮ ಮತ್ತು ಪಾಕ್ ಕುಮ್ಮಕ್ಕು ಎಂದು ತಳ್ಳಿ ಹಾಕುವುದು ಪರಿಹಾರವಾದೀತೇ? ಮೃದುವಾದಿಯೆಂದು ಗುರುತಿಸಿಕೊಂಡಿದ್ದ ಉಪಮುಖ್ಯಮಂತ್ರಿ ನಿರ್ಮಲ್ ಕುಮಾರ್ ಸಿಂಗ್ ರನ್ನು ಕಿತ್ತು ಹಾಕಿ ತೀವ್ರ ಜನಾಂಗೀಯವಾದಿ ಎಂದು ಗುರುತಿಸಿಕೊಂಡಿರುವ ಕವೀಂದರ್ ಗುಪ್ತಾರನ್ನು ಉಪಮುಖ್ಯಮಂತ್ರಿಯಾಗಿ ಬಿಜೆಪಿ ನೇಮಿಸಿದ್ದು ಯಾವ ಉದ್ದೇಶದಿಂದ? ಮಾಜಿ ಗುಪ್ತಚರ ಮುಖ್ಯಸ್ಥರಾಗಿರುವ ಮತ್ತು ತಮ್ಮ ಅವಧಿಯಲ್ಲಿ ಮಾನವಹಕ್ಕು ಉಲ್ಲಂಘನೆಯ ಆರೋಪ ಹೊತ್ತಿರುವ ದಿನೇಶ್ವರ್ ಶರ್ಮಾರನ್ನು ಕೇಂದ್ರ ಸರಕಾರವು ಮಧ್ಯಸ್ಥಿಕೆದಾರನನ್ನಾಗಿ ನೇಮಿಸಿದ್ದು ಬಹುದೊಡ್ಡ ತಪ್ಪು ಹೆಜ್ಜೆಯೆಂದೇ ಹೇಳಬೇಕು. ಹುರ್ರಿಯತ್ ಕಾನ್ಫರೆನ್ಸಿನ ಮೃದು ಮತ್ತು ತೀವ್ರವಾದಿ ಗುಂಪಿನ ಯಾವ ನಾಯಕರೂ ಇವರೊಂದಿಗೆ ಮಾತುಕತೆಗೆ ಮುಂದಾಗಲಿಲ್ಲ. ಕಥುವಾ ಪ್ರಕರಣದಲ್ಲಿ ಬಿಜೆಪಿಯ ಪಾತ್ರ ಅತ್ಯಂತ ಪಕ್ಷಪಾತಿಯಾಗಿತ್ತು.
ಕಳೆದ ನಾಲ್ಕು ವರ್ಷಗಳಲ್ಲಿ ಕಾಶ್ಮೀರಕ್ಕೆ ತೋಳುಬಲವನ್ನೇ ಆಡಳಿತ ನೀತಿಯಾಗಿ ನೀಡಿದ ಕೇಂದ್ರ ಸರಕಾರವು ಇದೀಗ ತಪ್ಪುಗಳನ್ನೆಲ್ಲ ಕಾಶ್ಮೀರಿಗಳ ಮೇಲೆ ಹೊರಿಸಿ ತಾನು ಪ್ರಾಮಾಣಿಕನಂತೆ ತೋರಿಸಿಕೊಳ್ಳಲು ಪ್ರಯತ್ನಿಸುತ್ತಿರುವುದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಕಾಶ್ಮೀರಕ್ಕೆ ಸಂಬಂಧಿಸಿ ಅದರ ಕಾರ್ಯ ನೀತಿ ಅತ್ಯಂತ ಪೂರ್ವಗ್ರಹದಿಂದ ಕೂಡಿತ್ತು. ನೋಟು ನಿಷೇಧದ ನಂತರ ಸರಕಾರ ನೀಡಿದ ಹೇಳಿಕೆಯೇ ಇದಕ್ಕೆ ಉತ್ತಮ ನಿದರ್ಶನ. ಕಾಶ್ಮೀರಿಗಳು ಹಣದ ಆಸೆಯಿಂದ ಕೈಯಲ್ಲಿ ಕಲ್ಲೆತ್ತಿಕೊಳ್ಳುತ್ತಿದ್ದಾರೆ ಎಂಬ ಅದರ ಹೇಳಿಕೆಯೇ ಕಾಶ್ಮೀರಿಗಳನ್ನು ಅದು ಹೇಗೆ ಪರಿಗಣಿಸಿತ್ತು ಅನ್ನುವುದಕ್ಕೆ ನಿದರ್ಶನ. ನರೇಂದ್ರ ಮೋದಿಯವರ ನಾಲ್ಕು ವರ್ಷಗಳ ಆಡಳಿತದಲ್ಲಿ ಕಾಶ್ಮೀರವು ಬಹುದೊಡ್ಡ ಸೋಲು.