ಮಂಗಳೂರು| ಜಾಮಿಯಾ ಇಸ್ಲಾಮಿಯಾ (ಇಸ್ಲಾಮಿ ವಿದ್ಯಾಲಯ) – ವಾರ್ಷಿಕೋತ್ಸವ

0
450

ಸನ್ಮಾರ್ಗ ವಾರ್ತೆ

ದಿನಾಂಕ 23-6-2023 ಶುಕ್ರವಾರ ಸಂಜೆ 5ಗಂಟೆಗೆ ಬೋಳಾರ ಇಸ್ಲಾಮಿಕ್ ಸೆಂಟರ್ ನಲ್ಲಿ ಜಾಮಿಯಾ ಇಸ್ಲಾಮಿಯಾ ಮಂಗಳೂರು ಇದರ ಪ್ರಥಮ ವಾರ್ಷಿಕೋತ್ಸವವು ಬೋಳಾರ ಎಜುಕೇಷನ್ ಎಂಡ್ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷರಾದ ಎಸ್. ಏ. ಖಲೀಲ್ ರವರ ಅಧ್ಯಕ್ಷತೆಯಲ್ಲಿ ಜರಗಿತು.

ಸಂಸ್ಥೆಯ ಮುಖ್ಯ ಉಪನ್ಯಾಸಕರಾದ ಮೌಲಾನ ಇಕ್ರಾಮುಲ್ ಹಕ್ ಅತಿಥಿಗಳನ್ನು ಸ್ವಾಗತಿಸಿ ಸಂಸ್ಥೆಯ ಉದ್ದೇಶಗಳನ್ನು ಸಭಿಕರ ಮುಂದಿಟ್ಟರು.

ಮುಖ್ಯ ಅತಿಥಿ ಯಾಗಿ ಆಗಮಿಸಿದ ನಗರದ ಸುಪ್ರಸಿದ್ಧ ಡಾ. ಮುಹಮ್ಮದ್ ಇಸ್ಮಾಯಿಲ್ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಿದರು. ನಂತರ ಅತಿಥಿ ಭಾಷಣ ಮಾಡುತ್ತಾ ಶಿಕ್ಷಣದ ಮಹತ್ವವನ್ನು ಇಸ್ಲಾಮಿ ಇತಿಹಾಸದ ಬೆಳಕಿನಲ್ಲಿ ವಿವರಿಸಿದರು.

ವಿವಿಧ ಭಾಷೆಗಳಲ್ಲಿ ವಿದ್ಯಾರ್ಥಿಗಳ ಭಾಷಣ, PPT presentation ಕಾರ್ಯಕ್ರಮಗಳು ಅವರ ಪ್ರತಿಭೆಗಳಿಗೆ ಕನ್ನಡಿಯಾಗಿದ್ದವು.

ಜಾಮಿಯಾದ ನಿರ್ದೇಶಕರಾದ ಮೌಲಾನ ಶುಐಬ್ ಹುಸೇನಿ ನದ್ವಿಯವರು ಸಮಾಜಕ್ಕೆ ಮಾರ್ಗದರ್ಶಕ ರಾಗಬಲ್ಲ , ಆಧುನಿಕ ಶಿಕ್ಷಣದಲ್ಲಿಯೂ ಪದವೀಧರರಾಗಿರುವ, ಬಹು ಭಾಷಾ, ಇಸ್ಲಾಮಿ ವಿದ್ವಾಂಸರು ಇಂದಿನ ಸಮಾಜಕ್ಕೆ ಅತ್ಯಗತ್ಯವಾಗಿದ್ದು ಜಾಮಿಯಾ ಈ ಅಗತ್ಯವನ್ನು ಪೂರೈಸಲು ಶ್ರಮಿಸುತ್ತಿದೆ, ಪೋಷಕರು ತಮ್ಮ ಮಕ್ಕಳನ್ನು ಇಲ್ಲಿ ಸೇರಿಸುವ ಮೂಲಕ ಇಹ ಪರಗಳ ಯಶಸ್ಸನ್ನು ನಿರೀಕ್ಷಿಸಬಹುದು ಎಂದು ತಿಳಿಸಿದರು. ಅಧ್ಯಕ್ಷೀಯ ಭಾಷಣ ಮಾಡಿದ ಎಸ್ ಏ ಖಲೀಲ್ ಅವರು ಎರಡೂ ವಿಧದ ವಿದ್ಯಾಭ್ಯಾಸದ ಸಂಗಮಕ್ಕೆ ಅವಕಾಶ ನೀಡುವ ಈ ವಿದ್ಯಾಲಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ಮಕ್ಕಳನ್ನು ಸೇರಿಸಿ ಪ್ರಯೋಜನವನ್ನು ಪಡೆಯುವ ಮೂಲಕ ಈ ಸಂಸ್ಥೆಗೆ ತಮ್ಮ ಸಹಕಾರವನ್ನು ನೀಡಬೇಕು ಎಂದು ಕೋರಿದರು.

ಜಾಮಿಯಾ ವಿದ್ಯಾರ್ಥಿಯ ಕುರ್ ಆನ್ ಪಠಣದೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಜಾಮಿಯಾದ ಇನ್ನೋರ್ವ ಉಪನ್ಯಾಸಕ ಮೌಲಾನ ರಿಯಾಝುಲ್ ಹಕ್ ಧನ್ಯವಾದ ಸಮರ್ಪಿಸುತ್ತಾ ಬೋಳಾರ ಇಸ್ಲಾಮಿಕ್ ಸೆಂಟರ್ ತನ್ನ ವೈವಿಧ್ಯಮಯ ಚಟುವಟಿಕೆಗಳ ಮೂಲಕ ಮುಸ್ಲಿಮರ ಶೈಕ್ಷಣಿಕ, ತರಬೇತಿಯ ಕೇಂದ್ರವಾಗಿ ಬೆಳೆಯುತ್ತಿದ್ದು ಸಮುದಾಯಕ್ಕೆ ಮಾದರಿಯಾಗಿದೆ ಎಂದರು.