ಯಡಿಯೂರಪ್ಪ ಮುಖದಿಂದ ಮಾಯವಾದ ನಗು: ಸೈನಿಕರಿಲ್ಲದೆ ಯುದ್ಧಭೂಮಿಯಲ್ಲಿ ಏಕಾಂಗಿಯಾದ ದಂಡನಾಯಕ

0
3019

ನ್ಯೂಸ್ ಡೆಸ್ಕ್

ಕರ್ನಾಟಕದ ರಾಜ್ಯಪಾಲ ವಾಜು ಭಾಯಿ ವಾಲಾ ತೆಗೆದುಕೊಂಡ ನಿರ್ಧಾರವು ಮುಂದಿನ ದಿನಗಳಲ್ಲಿ ಬಹುದೊಡ್ಡ ರಾಜಕೀಯ ಬದಲಾವಣೆಗೆ ಕಾರಣವಾಗಲಿದೆಯೇ ಅನ್ನುವ ಅನುಮಾನವೊಂದಕ್ಕೆ ದಾರಿ ತೆರೆದಿದೆ. 21 ರಾಜ್ಯಗಳಲ್ಲಿ ಬಿಜೆಪಿ ಅಧಿಕಾರ ಹಿಡಿದಿರುವುದು ಸ್ವಂತ ಬಲದಿಂದಲ್ಲ. ಹಣ ಮತ್ತು ಶಕ್ತಿ ಬಲದಿಂದ. ಗೋವಾ, ಮಣಿಪುರ, ಮೇಘಾಲಯ, ಬಿಹಾರ ಮುಂತಾದ ಎಲ್ಲ ರಾಜ್ಯಗಳಲ್ಲೂ ಕರ್ನಾಟಕದ ಈಗಿನ ಮಾದರಿಯನ್ನೇ ಅಳವಡಿಸುವುದಾದರೆ, ಬಿಜೆಪಿ ಇವತ್ತು ಯಾವ ಸ್ಥಿಯಲ್ಲಿರುತ್ತಿತ್ತೋ ಹೇಳಲಾಗದು. ಆ ಕುರಿತಾದ ಚರ್ಚೆಯೊಂದಕ್ಕೆ ಇದೀಗ ಕರ್ನಾಟಕದ ಬೆಳವಣಿಗೆ ಅವಕಾಶವನ್ನು ಒದಗಿಸಿಕೊಟ್ಟಿದೆ. ಸುಪ್ರೀಂ ಕೋರ್ಟಿನ ತ್ರಿಸದಸ್ಯ ಪೀಠವು ಬಹುಮತ ಸಾಬೀತಿಗೆ ಇಪ್ಪತ್ತನಾಲ್ಕು ಗಂಟೆ ನೀಡಿರುವುದು ಮತ್ತು ಗೋವಾ ಸಹಿತ ಇತರ ರಾಜ್ಯಗಳ ಬಗ್ಗೆ ಕಾಂಗ್ರೆಸ್ ನ ವಾದವನ್ನು ಆಲಿಸಲು ಮನಸ್ಸು ಮಾಡಿರುವುದು ಅಂತಿಮವಾಗಿ ರಾಜಕೀಯ ಪಲ್ಲಟಕ್ಕೆ ಮತ್ತು ಬಿಜೆಪಿಯ ವರ್ಚಸ್ಸಿಗೆ ಭಾರೀ ಮಟ್ಟದಲ್ಲಿ ಹಾನಿ ತರುವುದಕ್ಕೆ ಸಾಧ್ಯವಿದೆ ಎಂದು ಹೇಳಲಾಗುತ್ತಿದೆ.
ಕರ್ನಾಟಕದಲ್ಲಿ ರಾಜ್ಯಪಾಲರ ನಿರ್ಧಾರದ ಬಗ್ಗೆ ಜೇತ್ಮಲಾನಿ, ಪ್ರಶಾಂತ್ ಭೂಷಣ್, ಸಂಜಯ್ ಹೆಗ್ಡೆ, ಅಮರ್ ತೇಶ್, ಸಿದ್, ಪ್ರಶಾಂತ್ ಉಮ್ರಾವ್ ಮುಂತಾದ ಪ್ರಮುಖ ವಕೀಲರುಗಳು ವಿರೋಧ ವ್ಯಕ್ತಪಡಿಸಿದ್ದಾರೆ. ವಿಶ್ವಾಸ ಮತ ಯಾಚನೆಯ ಮೊದಲು ಆಂಗ್ಲೋ ಇಂಡಿಯನ್ ಸದಸ್ಯರ ನೇಮಕ ಮಾಡದಂತೆ, ರಹಸ್ಯ ಮತದಾನಕ್ಕೆ ಅವಕಾಶ ಇಲ್ಲದಂತೆ ಮತ್ತು ಬಿಜೆಪಿ ಬೇಡಿಕೆಯಂತೆ ವಿಶ್ವಾಸ ಮತ ಯಾಚನೆಯ ಅವಧಿಯನ್ನು ಸೋಮವಾರದವರೆಗೆ ವಿಸ್ತರಿಸಲು ಒಪ್ಪಿಕೊಳ್ಳದೆ ಇರುವ ಸುಪ್ರೀಂ ಪೀಠದ ನಿಲುವು ಈ ಬೆಳವಣಿಗೆಯನ್ನು ಅದೆಷ್ಟು ಗಂಭೀರವಾಗಿ ಪೀಠ ನೋಡಿದೆ ಅನ್ನುವುದನ್ನು ತಿಳಿಸುತ್ತದೆ. ಯಡಿಯೂರಪ್ಪರನ್ನು ಪ್ರಮಾಣ ವಚನ ಮಾಡದಂತೆ ತಡೆಯಲು ವಿರೋಧ ಪಕ್ಷಗಳಿಗೆ ಸಾಧ್ಯವಾಗದೆ ಹೋಗಿರಬಹುದು. ಆದರೆ, ಆ ಬಳಿಕದ ಬೆಳವಣಿಗೆಗಳು ಸಂಪೂರ್ಣವಾಗಿ ಬಿಜೆಪಿಗೆ ವಿರುದ್ಧವಾಗಿದ್ದು, ಇವತ್ತು ಯಡಿಯೂರಪ್ಪರ ಮುಖಭಾವವೇ ಅದನ್ನು ಸ್ಪಷ್ಟಪಡಿಸುತ್ತದೆ. ಮುಖ್ಯವಾಗಿ ಪ್ರಮುಖ ಐ ಏ ಯಸ್, ಐ ಪಿ ಯಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡುವಂಥ ನಿರ್ಧಾರಗಳಿಗೂ ಸುಪ್ರೀಂ ತಡೆ ವಿಧಿಸಿರುವುದು ಬಿಜೆಪಿಯ ಹಿನ್ನಡೆಗೆ ಇನ್ನಷ್ಟು ಹೊಡೆತ ನೀಡಿದೆ. ಸಧ್ಯ ಯಡಿಯೂರಪ್ಪ ಯಾವ ಸೈನಿಕನೂ ಜೊತೆಗಿಲ್ಲದೇ ಯುದ್ಧ ಭೂಮಿಯಲ್ಲಿ ಏಕಾಂಗಿಯಾಗಿರುವ ದಂಡನಾಯಕ. ಬಹುಶಃ, ಮುಖಭಂಗವಾದೀತು ಅನ್ನುವ ಭಯದಿಂದಲೇ ಮೋದಿ ಮತ್ತು ಅಮಿತ್ ಶಾ ಪ್ರಮಾಣವಚನ ಸಮಾರಂಭಕ್ಕೆ ಗೈರಾಗಿರಬಹುದೆಂಬ ಮಾತುಗಳು ಈಗ ನಿಚ್ಚಳವಾಗುತ್ತಿದೆ. ಯಡಿಯೂರಪ್ಪರಿಗೆ ಅಧಿಕಾರ ಕೊಟ್ಟಂತೆ ಮಾಡಿ ಕಿತ್ತುಕೊಳ್ಳುವ ಮತ್ತು ಅವಮಾನಕರ ರೀತಿಯಲ್ಲಿ ಅವರನ್ನು ಕೆಳಗಿಳಿಸುವ ಸಂಚನ್ನು ಬಿಜೆಪಿಯ ಉನ್ನತ ಮಂಡಳಿ ತೆಗೆದುಕೊಂಡಿತ್ತೇ ಅನ್ನುವ ಪ್ರಶ್ನೆಯೂ ಈಗ ಉದ್ಭವಿಸಿದೆ.