: ಸಲೀಮ್ ಬೋಳಂಗಡಿ
ಮಂಗಳೂರು: ಮಂಗಳೂರಿನ ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣವು ದೇಶದ ಅತ್ಯಂತ ಸ್ವಚ್ಚ ವಿಮಾನ ನಿಲ್ದಾಣ ಪ್ರಶಸ್ತಿಗೆ ಬಾಜನವಾಗಿದೆ. ಏರ್ ಪೋರ್ಟ್ ಅಥೋರಿಟಿ ಆಫ್ ಇಂಡಿಯಾವು ದೇಶದ 53 ವಿಮಾನ ನಿಲ್ದಾಣದ ಕುರಿತು ಸರ್ವೆ ನಡೆಸಿದಾಗ ಮಂಗಳೂರು ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣವು ಅತ್ಯಂತ ಸ್ವಚ್ಚ ವಿಮಾನ ನಿಲ್ದಾಣವಾಗಿ ಆಯ್ಕೆಗೊಂಡಿದೆ.
ವಿಮಾನ ನಿಲ್ದಾಣದ ಪಾರ್ಕಿಂಗ್ ವ್ಯವಸ್ಥೆ, ಶೌಚಾಲಯ, ವ್ಯಾಪಾರಿ ಮಳಿಗೆಗಳು, ಪ್ರದೇಶ, ವಿಮಾನ ನಿಲ್ದಾಣದ ರಸ್ತೆ, ಕ್ಲಸ್ಟರ್ ಲಾಂಚ್ ಮುಂತಾದವುಗಳನ್ನು ಪರಿಶೀಲಿಸಿದಾಗ ಇದು ಬೆಳಕಿಗೆ ಬಂತು. ಈ ಪ್ರಶಸ್ತಿಯನ್ನು ಮಂಗಳೂರು ವಿಮಾನ ನಿಲ್ದಾಣದ ನಿರ್ದೇಶಕ ವಿ.ವಿ. ರಾವ್ ಸ್ವೀಕರಿಸಿದರು.
ಸ್ವಚ್ಚ ವ್ಯವಸ್ಥೆಗೆ ಪ್ರಶಸ್ತಿ ಬಂದಿರುವುದು ಸ್ವಾಗತಾರ್ಹ. ಆದರೆ ಮಂಗಳೂರು ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣದ ಕೆಲ ಅಧಿಕಾರಿಗಳ ವರ್ತನೆಗಳ ಬಗ್ಗೆ ವ್ಯಾಪಕ ದೂರು ಕೇಳಿಬರುತ್ತಿದೆ. ಅನಗತ್ಯ ಕಿರುಕುಳ, ಮಿತಿ ಮೀರಿದ ತಪಾಸಣೆ, ಪ್ರಯಾಣಿಕರನ್ನು ಅಪರಾಧಿಗಳ ತರಹ ನಡೆಸಿಕೊಳ್ಳುವುದರ ಕುರಿತು ಮಾದ್ಯಮಗಳಲ್ಲಿ ಅನೇಕ ವರದಿಗಳು ಬಂದಿರುವುದನ್ನು ಇಲ್ಲಿ ಸ್ಮರಿಸಬಹುದು. ವಿಮಾನ ನಿಲ್ದಾಣದ ಹೆಸರಿಗೆ ಚ್ಯುತಿ ತರುವಂತಹ ಉದ್ಯೋಗಿಗಳಿದ್ದರೆ ಅವರು ತಮ್ಮ ನಡವಳಿಕೆಗಳಲ್ಲಿ ಈಗಲಾದರೂ ಬದಲಾವಣೆ ತರಬೇಕಾಗಿದೆ. ಅಂದರೆ ತಪಾಸಣೆ ಮಾಡಬಾರದೆಂದಲ್ಲ. ಮಾಡಬೇಕು. ಅದು ಅಗತ್ಯ ಕೂಡಾ. ಆದರೆ ಅದನ್ನು ಕಾನೂನು ಬದ್ದವಾಗಿ ನಿರ್ವಹಿಸಲಿ. ಪೂರ್ವಾಗ್ರಹ ಪೀಡಿತ ಭಾವನೆಯಿಂದ ಮುಕ್ತರಾಗಿ ಹೃದಯ ಸ್ವಚ್ಚತೆ ಪಾಲಿಸಿದರೆ ಸ್ವಚ್ಚತೆಗೆ ಸಿಕ್ಕ ಪುರಸ್ಕಾರವು ಹೆಚ್ಚು ಅರ್ಥವತ್ತಾಗುತ್ತದೆಯೆಂಬ ವಾಸ್ತವವನ್ನು ನಿಲ್ದಾಣದ ಅಧಿಕಾರಿಗಳು ಅರಿತು ಕೊಳ್ಳಬೇಕು. ಈ ಅವಕಾಶವನ್ನು ಅಧಿಕಾರಿಗಳು ಸದುಪಯೋಗ ಪಡಿಸಬೇಕಾದ ಅಗತ್ಯವಿದೆ. ಏನಿದ್ದರೂ ಇನ್ನು ಮುಂದೆ ಬೆಂಗಳೂರು ಅಥವಾ ಕಲ್ಲಿಕೋಟೆ ವಿಮಾನ ನಿಲ್ದಾಣ ಎಂದು ಏದುಸಿರು ಬಿಡುವವರ ಉದಾಹರಣೆಗಳು ದಾರಾಳ ಇವೆ. ಅದರ ಸಂಖ್ಯೆಯಲ್ಲಿ ಕಡಿಮೆಯಾಗಲಿ. ಇಂತಹ ರಾಷ್ಟ್ರ ಮಟ್ಟದ ಪುರಸ್ಕಾರ ಪಡೆದ ನಮ್ಮ ವಿಮಾನ ನಿಲ್ದಾಣವು ಇನ್ನೂ ಸ್ವಚ್ಚತೆಯೊಂದಿಗೆ ಕಂಗೊಳಿಸಬೇಕು. ಈ ವಿಮಾನ ನಿಲ್ದಾಣದ ಸ್ವಚ್ಚತೆಯ ಮೇಲ್ನೋಟ ವಹಿಸಿದ ದುರ್ಗಾ ಫೆಸಿಲಿಟಿ ಮ್ಯಾನೇಜ್ಮೆಂಟ್ ಸರ್ವೀಸ್ ಪ್ರೈವೇಟ್ ಲಿಮಿಟೆಡ್ ಅಭಿನಂದನಾರ್ಹವಾಗಿದೆ.












